ಡ್ರೈಫ್ರೂಟ್ಸ್ ಪಟ್ಟಿಯಲ್ಲಿ ಗೋಡಂಬಿ ಮೊದಲಿದೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಜನರು ದುಬಾರಿ ಬೆಲೆ ನೀಡಿ ಗೋಡಂಬಿಯನ್ನು ಖರೀದಿ ಮಾಡ್ತಾರೆ. ಆದ್ರೆ ಕಡಿಮೆ ಬೆಲೆಗೆ ಸಿಗುವ ಶೇಂಗಾ, ಇದಕ್ಕಿಂತ ಆರೋಗ್ಯಕರ ಎಂಬುದು ನಿಮಗೆ ಗೊತ್ತಾ?
ಗೋಡಂಬಿ (cashew) ಆಕಾಶವಾದ್ರೆ, ಕಡಲೆಕಾಯಿ (peanuts) ಭೂಮಿ. ಒಂದು ಪ್ಯಾಕೆಟ್ ಗೋಡಂಬಿ ತಂದು, ಅದನ್ನು ಕದ್ದುಮುಚ್ಚಿ ಖೀರ್, ಕೇಸರಿಬಾತ್ ಗೆ ಹಾಕುವ ಸಮಯ ಈಗಿಲ್ಲ ಅಂದ್ರೂ ಗೋಡಂಬಿ ಸಾಮಾನ್ಯರಿಗೆ ಸುಲಭವಾಗಿ ಸಿಗುವಂತಹದ್ದಲ್ಲ. ಒಂದು ಕೆ.ಜಿ ಗೋಡಂಬಿ ಬೆಲೆ 800 ರೂಪಾಯಿ ಮೇಲಿದೆ. ಅದೇ ಬಡವರ ಬಾದಾಮಿ ಎಂದೇ ಪ್ರಸಿದ್ಧಿ ಪಡೆದಿರುವ ಶೇಂಗಾ ಬೆಲೆ 100 ರೂಪಾಯಿ ಒಳಗಿದೆ.
ಬೆಲೆ ಹೆಚ್ಚಿದೆ ಅಂದ್ರೆ ಅದು ಒಳ್ಳೆ ಕ್ವಾಲಿಟಿಯದ್ದು, ಆರೋಗ್ಯ (Health)ಕ್ಕೆ ಹೆಚ್ಚು ಪ್ರಯೋಜನಕಾರಿ ಅಂತ ಜನರು ಭಾವಿಸ್ತಾರೆ. ಆದ್ರೆ ಕಡಲೆಕಾಯಿ ವಿಷ್ಯದಲ್ಲಿ ನಿಮ್ಮ ನಂಬಿಕೆ ಸುಳ್ಳು. ಅವಲಕ್ಕಿ ಒಗ್ಗರಣೆ ಮೊದಲು ನಾಲ್ಕೈದು ಹಸಿ ಶೇಂಗಾ ನಿಮ್ಮ ಬಾಯಿಗೆ ಹೋದ್ರೆ ಟೆನ್ಷನ್ ಬೇಡ. ನಿಮ್ಮ ಆರೋಗ್ಯ ವೃದ್ಧಿಸೋಕೆ ಗೋಡಂಬಿಯನ್ನೇ ತಿನ್ನಬೇಕು ಎನ್ನುವ ರೂಲ್ಸ್ ಇಲ್ಲ. ಕೆಲ ತಜ್ಞರು, ಗೋಡಂಬಿ ಬೇಡ, ಶೇಂಗಾ ತಿನ್ನಿ ಅಂತ ಸಲಹೆ ನೀಡ್ತಾರೆ. ಅದಕ್ಕೆ ಕಾರಣ ಇದೆ.
undefined
ಬೆಳಗ್ಗೆ ತಿಂಡಿಗೆ ಓಟ್ಸ್ ಜೊತೆ ಹಾಲು ಕುಡಿದ್ರೆ ಆರೋಗ್ಯಕ್ಕೆ ಓಕೇನಾ?
ನೀವಂದ್ಕೊಂಡಂಗೆ ಗೋಡಂಬಿ ಹಾಗೂ ಶೇಂಗಾ ಮಧ್ಯೆ ಹೆಚ್ಚಿನ ವ್ಯತ್ಯಾಸವೇನಿಲ್ಲ. ಬೆಲೆ ದುಬಾರಿ ಅನ್ನೋದು ಬಿಟ್ರೆ, ಶೇಂಗಾ, ಗೋಡಂಬಿಗೆ ಸಮವಾಗಿ ತೂಗುತ್ತೆ. ಗೋಡಂಬಿ ಹಾಗೂ ಕಡಲೆಕಾಯಿ ಎರಡೂ ಸಮನಾದ ಕ್ಯಾಲೊರಿಗಳನ್ನು ಹೊಂದಿದೆ. ಪ್ರೋಟೀನ್ ಮತ್ತು ಕಾರ್ಬ್ ಮೌಲ್ಯಗಳಲ್ಲಿ ಭಿನ್ನವಾಗಿವೆ. 28 ಗ್ರಾಂ ಗೋಡಂಬಿಯಲ್ಲಿ, 188ರಷ್ಟು ಕ್ಯಾಲೋರಿ, 5 ಗ್ರಾಂ ಪ್ರೋಟೀನ್, 15 ಗ್ರಾಂ ಕೊಬ್ಬು, 11 ಗ್ರಾಂ ಕಾರ್ಬ್, 1 ಗ್ರಾಂ ಫೈಬರ್ ಇದ್ರೆ ಅದೇ ಶೇಂಗಾದಲ್ಲಿ 189ರಷ್ಟು ಕ್ಯಾಲೋರಿ,9 ಗ್ರಾಂ ಪ್ರೋಟೀನ್, 14 ಗ್ರಾಂ ಕೊಬ್ಬು, 5.3 ಗ್ರಾಂ ಕಾರ್ಬ್ ಮತ್ತು 3 ಗ್ರಾಂ ಫೈಬರ್ ಇರುತ್ತದೆ. ರೇಟ್ ಬಿಟ್ಟರೆ ಈ ಎರಡರ ಮಧ್ಯೆ ಹೆಚ್ಚು ವ್ಯತ್ಯಾಸ ಕಾಣಿಸ್ತಿಲ್ಲ.
ತಜ್ಞರ ಪ್ರಕಾರ, ಚಳಿಗಾಲದಲ್ಲಿ ಗೋಡಂಬಿ ಸೇವನೆಗಿಂತ ಶೇಂಗಾ ತಿನ್ನುವುದು ಒಳ್ಳೆಯದು. ಅದು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೆ ಒಳ್ಳೆಯದು. ಕಡಲೆಕಾಯಿಯಲ್ಲಿರುವ ಪ್ರೋಟೀನ್, ಸ್ನಾಯುಗಳ ಬೆಳವಣಿಗೆಗೆ ಸಹಕಾರಿ. ಕಡಲೆಕಾಯಿಯಲ್ಲಿ ಮೊನೊಸ್ಯಾಚುರೇಟೆಡ್ ಕೊಬ್ಬು ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬು ಇದ್ದು, ಇದು ಹೃದಯಕ್ಕೆ ಒಳ್ಳೆಯದು. ಕಡಲೆಕಾಯಿಯಲ್ಲಿ ಈರುವ ಫೈಬರ್ ಮತ್ತು ಪ್ರೋಟೀನ್, ಹಸಿವನ್ನು ನಿಯಂತ್ರಿಸುತ್ತದೆ. ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಕಡಲೆಕಾಯಿಯಲ್ಲಿ ವಿಟಮಿನ್ ಬಿ 3 ಮತ್ತು ರೆಸ್ವೆರಾಟ್ರೊಲ್ ಇದ್ದು, ಇದು ಮೆದುಳನ್ನು ಚುರುಕುಗೊಳಿಸುತ್ತದೆ. ಕಡಲೆಕಾಯಿಯಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಪ್ರೊಟೀನ್ ದೇಹಕ್ಕೆ ತ್ವರಿತ ಶಕ್ತಿ ನೀಡುವುದಲ್ಲದೆ. ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ಶೇಂಗಾದಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳು ಮೂಳೆ ಬಲಪಡಿಸುತ್ತವೆ.
ದಿನಕ್ಕೆ 4-5 ಲೋಟೆ ಕಾಫಿ ಕುಡಿಯೋ ಜನ ನೀವಾ? ಆರೋಗ್ಯಕ್ಕೇನು ಹಾನಿ ನೋಡಿ
ದುಬಾರಿ ಗೋಡಂಬಿ ವಿಲನ್ ಏನಲ್ಲ. ಅದು ಕೂಡ ಸಾಕಷ್ಟು ಆರೋಗ್ಯ ಲಾಭಗಳನ್ನು ಹೊಂದಿದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್ ಹೇರಳವಾಗಿರುವ ಕಾರಣ, ಜೀರ್ಣಕ್ರಿಯೆಗೆ ಉತ್ತಮ. ಇದು ಹೃದಯಕ್ಕೆ ಪ್ರಯೋಜನಕಾರಿ. ಇದು ಮೊನೊಸ್ಯಾಚುರೇಟೆಡ್ ಮತ್ತು ಪಾಲಿಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತದೆ. ಗೋಡಂಬಿ ತಿನ್ನುವುದರಿಂದ ತ್ವಚೆ ಆರೋಗ್ಯವಾಗಿರುವುದಲ್ಲದೆ ಕಾಂತಿಯುತವಾಗುತ್ತದೆ. ಕೂದಲು ಮತ್ತು ಚರ್ಮಕ್ಕೂ ಒಳ್ಳೆಯದು. ಆದ್ರೆ ಗೋಡಂಬಿಯನ್ನು ಮಿತವಾಗಿ ಸೇವನೆ ಮಾಡ್ಬೇಕು. ದಿನಕ್ಕೆ 5 – 10 ಗೋಡಂಬಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
ಶೇಂಗಾದಲ್ಲಿ ವಿಟಮಿನ್ ಪ್ರಮಾಣ ಹೆಚ್ಚಿದ್ದು, ಗೋಡಂಬಿಯಲ್ಲಿ ಕಡಿಮೆ ಇರುತ್ತದೆ. ಎರಡೂ ತಮ್ಮದೇ ಆರೋಗ್ಯ ಲಾಭವನ್ನು ಹೊಂದಿದ್ದರೂ, ನಾವು ಅದನ್ನು ಹೇಗೆ ಸೇವನೆ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಹೆಚ್ಚು ಉಪ್ಪು ಮಿಶ್ರಿತ ಗೋಡಂಬಿ ಅಥವಾ ಶೇಂಗಾ ಸೇವನೆ ಆರೋಗ್ಯಕ್ಕೆ ಹಾನಿಕರ.