ಉಡುಪಿ ಶೈಲಿಯ ಸಾಂಬಾರ್ ಪುಡಿ ಮಾಡೋದು ಹೇಗೆ?

By Web Desk  |  First Published Oct 21, 2019, 12:03 PM IST

ನುಗ್ಗೇಕಾಯಿ, ಬೆಂಡೇಕಾಯಿ, ಕುಂಬಳಕಾಯಿ ಸಾಂಬಾರ್, ಸಾಂಬಾರನ್ನ, ಬೆಂಡೆಕಾಯಿ ಪಲ್ಯ, ಗುಳ್ಳ ಕೊಡೆಲ್ ಏನೇ ಮಾಡುವುದಿರಲಿ, ಮನೆಯಲ್ಲಿ ಸಾಂಬಾರ್ ಪೌಡರ್ ರೆಡಿ ಇದ್ದರೆ ಫಟಾಪಟ್ ಮಾಡಿಬಿಡಬಹುದು. ಅದರಲ್ಲೂ ಉಡುಪಿ ಶೈಲಿಯ ಸಾಂಬಾರು ಪುಡಿಯ ಫ್ಲೇವರ್ ಹಾಗೂ ರುಚಿಯೇ ಬೇರೆ. 


ಪ್ರತಿ ಭಾರತೀಯ ಅಡುಗೆಮನೆಯಲ್ಲಿರುವ ಬಹುಮುಖ್ಯ ಪದಾರ್ಥವೆಂದರೆ ಅದು ಸಾಂಬಾರ್ ಪೌಡರ್. ಅನ್ನಕ್ಕೊಂದೇ ಅಲ್ಲ, ಇಡ್ಲಿ, ದೋಸೆಗೆ ಕೂಡಾ ಸಾಂಬಾರ್ ಸ್ನೇಹ ದೊಡ್ಡದು. ಈ ಸಾಂಬಾರು ಪ್ರತಿ ದಿನ ಪ್ರತಿ ಮನೆಯಲ್ಲಿ ತಯಾರಾಗುತ್ತದೆ. ಆದರೂ ಒಂದು ಮನೆಯಿಂದ ಮತ್ತೊಂದು ಮನೆಯ ಸಾಂಬಾರಿನ ರುಚಿ ಬೇರೆಯೇ ಇರುತ್ತದೆ. ಇದಕ್ಕೆ ಕಾರಣ ಸಾಂಬಾರು ಪುಡಿ. ಸಾಂಬಾರು ಪುಡಿ ತಯಾರಿಕೆಗೂ ಹಲವಾರು ರೆಸಿಪಿಗಳು ದೊರೆಯುತ್ತವೆ. ಅವುಗಳಲ್ಲಿ ಬಹುತೇಕ ಪುಡಿಗಳ ಬೇಸ್ ಆಗಿ ಕೊತ್ತಂಬರಿ, ಜೀರಿಗೆ ಇದ್ದೇ ಇರುತ್ತದೆ. ಮೇಲಾಗಿ ಕೆಲವು ಪ್ರದೇಶಗಳಲ್ಲಿ ಕೊಬ್ಬರಿ ಬಳಸಿದರೆ ಮತ್ತೆ ಕೆಲವೆಡೆ ದಾಲ್ಚೀನಿ, ಸ್ಟೋನ್ ಫ್ಲವರ್ ಮುಂತಾದವನ್ನು ಬಳಸುತ್ತಾರೆ. 

ಭಾನುವಾರದ ಬಾಯಿರುಚಿಗೆ ಬಸಂತಿ ಪುಲಾವ್, ಬ್ರಿಂಜಿ ರೈಸ್!

Tap to resize

Latest Videos

ನಾವಿಂದು ಉಡುಪಿ ಸಾಂಬಾರ್ ಪುಡಿ ಬಗ್ಗೆ ಮಾತನಾಡೋಣ. ಏಕೆಂದರೆ, ದಕ್ಷಿಣ ಭಾರತೀಯರಿಗೆ ಉಡುಪಿ ಸಾಂಬಾರ್ ಪೌಡರ್ ಬಹಳ ಇಷ್ಟ. ಈ ಉಡುಪಿ ಸಾಂಬಾರ್ ಪುಡಿಯನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಹಲವು ಬ್ರಾಂಡ್‌ಗಳ ಸಾಂಬಾರ್ ಪುಡಿ ಸಿಕ್ಕಿದರೂ ಮನೆಯಲ್ಲೇ ತಯಾರಿಸಿದ ಸಾಂಬಾರ್ ಪುಡಿಗೆ ಅದು ಸರಿಸಮನಾಗುವುದಿಲ್ಲ. ಏಕೆಂದರೆ ಅಂಗಡಿಯಲ್ಲಿ ದೊರೆವ ಸಾಂಬಾರ್ ಪುಡಿಗೆ ಕೆಡದಂತಿರಲು ಪ್ರಿಸರ್ವೇಟಿವ್ಸ್ ಬಳಸಲಾಗಿರುತ್ತದೆ. 

ಹಾಗಿದ್ದರೆ ಉಡುಪಿ ಶೈಲಿಯ ಸಾಂಬಾರು ಪುಡಿ ಮಾಡುವುದು ಹೇಗೆ ನೋಡೋಣ.

ಹಬ್ಬದ ದಿನ ಚೆನ್ನಾಗಿ ತಿನ್ನೋ ಮುಂಚೆ ಒಮ್ಮೆ ಯೋಚಿಸಿ!

ತಯಾರಿ ಸಮಯ: 5 ನಿಮಿಷ
ಕುಕ್ ಟೈಂ: 15 ನಿಮಿಷ
ಕೋರ್ಸ್: ಮಸಾಲೆ
ಸರ್ವಿಂಗ್ಸ್: 1 ಬಾಕ್ಸ್

ಬೇಕಾಗುವ ಸಾಮಗ್ರಿಗಳು: 1 ಕಪ್ ಕೊತ್ತಂಬರಿ ಬೀಜಗಳು, 1/4 ಕಪ್ ಜೀರಿಗೆ, 1 ಚಮಚ ಮೆಂತ್ಯೆ, 1/2 ಕಪ್ ಉದ್ದಿನಬೇಳೆ, 1/4 ಕಪ್ ಕಡ್ಲೆಬೇಳೆ, 15-20 ಕೆಂಪು ಮೆಣಸಿನಕಾಯಿ(ಗುಂಟೂರು ಹಾಗೂ ಬ್ಯಾಡಗಿ ಮಿಕ್ಸ್ ಮಾಡಿ), ಒಂದು ಮುಷ್ಠಿ ಕರಿಬೇವಿನ ಎಲೆಗಳು, 6 ಚಮಚ ಎಣ್ಣೆ, ಚಿಟಿಕೆ ಇಂಗು.

ತಯಾರಿಸುವ ವಿಧಾನ: 

ತಾವರೆಗೊಳದಿ ಅವಿತ ಮಖಾನ ಬಲು ರುಚಿ!

- ದಪ್ಪ ತಳದ ಬಾಣಲೆ ಬಿಸಿ ಮಾಡಿ 4 ಚಮಚ ಎಣ್ಣೆ ಹಾಕಿ. ಅದರಲ್ಲಿ ಕೊತ್ತಂಬರಿ ಬೀಜಗಳನ್ನು ಹಾಕಿ ಚೆನ್ನಾಗಿ ಪರಿಮಳ ಬರುವವರೆಗೆ ಹುರಿಯಿರಿ, ನಂತರ ಅದನ್ನು ಹೊರಗೆ ತೆಗೆದು ತಟ್ಟೆಯ ಮೇಲೆ ಹರಡಿ.

- ಈಗ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಕಡ್ಲೆಬೇಳೆ, ಉದ್ದಿನ ಬೇಳೆ, ಜೀರಿಗೆಯನನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಮೆಂತ್ಯೆ ಸೇರಿಸಿ ಅದು ಬಣ್ಣ ಬದಲಿಸುವವರೆಗೆ ಹುರಿಯಿರಿ. ಒಲೆ ಮೇಲಿಂದ ತೆಗೆದು ತಟ್ಟೆಗೆ ಹಾಕಿಡಿ.

- ಬಾಣಲೆಗೆ ಮತ್ತೆರಡು ಚಮಚ ಎಣ್ಣೆ ಹಾಕಿ ಕೆಂಪು ಮೆಣಸು ಹಾಗೂ ಕರಿಬೇವನ್ನು ಹುರಿಯಿರಿ. 

- ಹೀಗೆ ಹುರಿದ ಎಲ್ಲ ಮಸಾಲೆ ಪದಾರ್ಥಗಳು ತಣ್ಣಗಾಗಲು ಬಿಡಿ.  ತಣ್ಣಗಾದ ಬಳಿದ ಅದಕ್ಕೆ ಸ್ವಲ್ಪ ಇಂಗು ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಪೂರ್ತಿ ತಣ್ಣಗಾಗಿಸಿ ಏರ್‌ಟೈಟ್ ಕಂಟೇನರ್‌ನಲ್ಲಿ ಹಾಕಿಡಿ. ಇದು ಫ್ರಿಡ್ಜ್‌ನಲ್ಲಾದರೆ ಸುಮಾರು 6 ತಿಂಗಳ ಕಾಲ ಚೆನ್ನಾಗಿರುತ್ತದೆ. ಕೋಣೆಯ ತಾಪಮಾನದಲ್ಲಿ 3 ತಿಂಗಳಿಗೆ ಮೋಸವಿಲ್ಲ. 

ಟಿಪ್ಸ್

- ಜಾಸ್ತಿ ಪುಡಿ ಬೇಕೆಂದರೆ ಎಲ್ಲ ಮಸಾಲೆ ಪದಾರ್ಥಗಳನ್ನೂ ಜಾಸ್ತಿ ಮಾಡಿ.

- ನಿಮಗೆ ಸಾಂಬಾರ್ ಹೆಚ್ಚು ಖಾರವಿದ್ದರೆ ಇಷ್ಟವೆಂದರೆ ಅದಕ್ಕೆ ಸರಿಯಾಗಿ ಒಣಮೆಣಸನ್ನು ಹೆಚ್ಚಿಸಿ. 

- ಬ್ಯಾಡಗಿ ಮೆಣಸು ಹಾಗೂ ಗುಂಟೂರ್ ಮೆಣಸನ್ನು ಸೇರಿಸುವುದರಿಂದ ಉತ್ತಮ ಬಣ್ಣ ಹಾಗೂ ಮಸಾಲೆ ಫ್ಲೇವರ್ ಸಿಗುತ್ತದೆ.

- ಡ್ರೈ ಪಲ್ಯ ಮಾಡುವಾಗ ಕೂಡಾ ಈ ಪೌಡರ್ ಬಳಸುವುದರಿಂದ ಪಲ್ಯದ ರುಚಿ ಹೆಚ್ಚುತ್ತದೆ. 

click me!