ರುಚಿ ರುಚಿಯಾದ ಹಬ್ಬದ ಅಡುಗೆ ನೀವೂ ಟ್ರೈ ಮಾಡಿ

By Suvarna News  |  First Published Aug 12, 2021, 2:14 PM IST

ನಾಗರ ಪಂಚಮಿ ಹಬ್ಬದಿಂದ ಸಾಲು ಸಾಲು ಹಬ್ಬಗಳು ಶುರುವಾಗಿದೆ. ಈ ಹಬ್ಬಗಳಂದು ಮಾಡುವ ಅಡುಗೆಯೂ ಬಹಳ ವಿಶೇಷ. ಅಂಥಾ ಕೆಲವು ವಿಶೇಷ ಅಡುಗೆಗಳ ವಿವರ ಇಲ್ಲಿದೆ.


1. ಅಳ್ಳಿಟ್ಟು

ನಾಗರಪಂಚಮಿ ಹಬ್ಬಕ್ಕೆ ಅಳ್ಳಿಟ್ಟು ಮಾಡೋದು ಬಹಳ ಫೇಮಸ್‌. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗೆ ಅಳ್ಳಿಟ್ಟು ಇಲ್ಲದ ನಾಗರಪಂಚಮಿಯನ್ನು ಊಹಿಸೋದೂ ಸಾಧ್ಯವಿಲ್ಲ. ಅಂಥಾ ಅಳಿಟ್ಟು ಮಾಡೋದನ್ನು ಇಲ್ಲಿ ನೋಡಬಹುದು. 

Tap to resize

Latest Videos

ಬೇಕಾಗುವ ಸಾಮಗ್ರಿಗಳು

ಜೋಳದ ಅರಳು – 1 ಕಪ್‌, ಗೋದಿ ಹಿಟ್ಟು – 1 ಕಪ್‌, ಬೆಲ್ಲದ ಪುಡಿ – 1 ಕಪ್‌, ತುಪ್ಪ – 2-3 ಚಮಚ, ಅಕ್ಕಿ – 1 ಚಮಚ, ಗಸಗಸೆ – 1/4 ಸ್ಪೂನ್‌, ಏಲಕ್ಕಿ, ಲವಂಗ, ಚಿಟಿಕೆ ಜಾಯಿಕಾಯಿ ಪುಡಿ, ನೀರು 2 ಕಪ್‌, 

ಮಾಡುವ ವಿಧಾನ

ಮೊದಲು ಸುಮಾರು ಒಂದು ಚಮಚದಷ್ಟು ಅಕ್ಕಿಯನ್ನು ಹುರಿಯಿರಿ. ಹದವಾಗಿ ಹುರಿದ ಬಳಿಕ ತೆಗೆದು ಪಕ್ಕಕ್ಕಿಡಿ. ಅದು ತಣ್ಣಗಾಗಲಿ. ಈಗ ಜೋಳದ ಅರಳು, ಹುರಿದಿಟ್ಟ ಅಕ್ಕಿ ಸೇರಿಸಿ ಮಿಕ್ಸರ್‌ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಮತ್ತೆ ಗೋಧಿ ಹಿಟ್ಟು, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಿರಿ. ಚೆನ್ನಾಗಿ ಘಮ ಬರುತ್ತೆ. ಈ ಸ್ವಲ್ಪ ನೀರು ಕಾಯಿಸಿ, ಆ ನೀರಿಗೆ ಬೆಲ್ಲದ ಪುಡಿ ಹಾಕಿ ಬೆಲ್ಲ ಕರಗಿಸಿ. ಹುರಿದ ಅರಳು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ತಿರುವಿ.

ಸ್ವಲ್ಪ ಗಟ್ಟಿಯಾಗುತ್ತಾ ಬಂದ ಹಾಗೆ ಇದು ತಳಬಿಟ್ಟು ಮೇಲಕ್ಕೆ ಏಳತೊಡಗುತ್ತದೆ. ಆಗ ಸ್ಟೌ ಆಫ್‌ ಮಾಡಿ. ಇನ್ನೊಂದು ಕಡೆ ಏಲಕ್ಕಿ, ಲವಂಗ ಮತ್ತು ಗಸಗಸೆ, ಜಾಯಿಕಾಯಿ ಎಲ್ಲ ಸೇರಿಸಿ ಪುಡಿ ಮಾಡಿ ಹಾಕಿ. ಇದನ್ನು ರೆಡಿ ಆಗಿರುವ ಹಿಟ್ಟಿಗೆ ಸೇರಿಸಿ, ಇನ್ನೊಮ್ಮೆ ಬೆರೆಸಿ. ಈಗ ಕೈಗೆ ತುಪ್ಪ ಹಚ್ಚಿ ಬಟ್ಟಲಿನ ಆಕಾರ ಕೊಟ್ಟು ಅಳ್ಳಿಟ್ಟು ಮಾಡಿ. ತಿನ್ನಲು ಬಹಳ ರುಚಿ. ನಾಗರ ಪಂಚಮಿ ಹಬ್ಬದ ದಿನ ಅಳ್ಳಿಟ್ಟು ಸೇವೆ ಬಹಳ ವಿಶೇಷ. ಈ ಅಳ್ಳಿಟ್ಟು ಬಿಸಿ ಬಿಸಿ ತಿನ್ನೋದಕ್ಕೆ ಬಹಳ ರುಚಿ. ಇದನ್ನು ಹಬ್ಬದ ದಿನ ಮಾತ್ರ ಮಾಡಬೇಕು ಅಂತೇನಿಲ್ಲ. ಸಿಹಿ ತಿನ್ನಬೇಕು ಅಂತ ಅನಿಸಿದಾಗ ಮಾಡಿ ತಿನ್ನಬಹುದು. ಅನೇಕ ಧಾನ್ಯಗಳ ಹಿಟ್ಟನ್ನು ಈ ಸಿಹಿತಿಂಡಿಗೆ ಬಳಸುವ ಕಾರಣ ಚೆನ್ನಾದ ರುಚಿಯೂ ಇರುತ್ತದೆ. 

2. ಅರಶಿನ ಎಲೆ ಕಡುಬು

ಇದು ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಬಹಳ ಜನಪ್ರಿಯವಾದ ಅಡುಗೆ. ಹಬ್ಬಗಳಂದು ಅದರಲ್ಲೂ ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಈ ಖಾದ್ಯವನ್ನು ಮಾಡುತ್ತಾರೆ. ಅರಶಿನದ ಘಮದೊಂದಿಗೆ ಬಾಯಿಗೆ ಸಖತ್‌ ರುಚಿ ಅನಿಸೋ ಈ ತಿಂಡಿಯನ್ನು ಬೆಳಗಿನ ಉಪಹಾರಕ್ಕೆ, ಸಂಜೆಯ ತಿಂಡಿಗೆ, ಕೆಲವೊಮ್ಮೆ ರಾತ್ರಿಯ ಊಟದ ಬದಲಿಗೆ ಬಳಸೋದೂ ಇದೆ.

ಅರಶಿನ ಎಲೆಯ ಸತ್ವವನ್ನು ಹೀರಿಕೊಂಡು ತಯಾರಾಗುವ ಈ ಕಡುಬು ಆರೋಗ್ಯಕ್ಕೂ ಬಹಳ ಒಳ್ಳೆಯದು. ತಯಾರಿಕೆ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರೂ, ಆರೋಗ್ಯಕರವಾದ ಸಾಂಪ್ರದಾಯಿಕ ಅಡುಗೆಯೊಂದನ್ನು ಮಾಡಿ ತಿನ್ನುವ ಸಂತೋಷವೇ ಬೇರೆ. 

ಬೇಕಾಗುವ ಸಾಮಾಗ್ರಿಗಳು: 

ದೋಸೆ ಅಕ್ಕಿ- 2 ಲೋಟ, (ಇದಕ್ಕೆ ಮಂಗಳೂರು ರೈಸ್‌ ಅಥವಾ ಕುಚ್ಚಿಲಕ್ಕಿಯನ್ನು ಬಳಸಿದರೂ ಚೆನ್ನಾಗಿರುತ್ತೆ. ಬಣ್ಣ ಕೊಂಚ ಬೇರೆ ಥರ ಇದ್ದರೂ ರುಚಿ ಅದ್ಭುತವಾಗಿರುತ್ತದೆ. ಬೆಲ್ಲ - 1 ಲೋಟ, ಹಸಿ ತೆಂಗಿನಕಾಯಿ ತುರಿ - 1 ಲೋಟ, ಹತ್ತಾರು ಅರಶಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು - ಸ್ವಲ್ಪ

ಮಾಡುವ ವಿಧಾನ:

ಮೊದಲು ಅಕ್ಕಿ ನೆನೆಸಬೇಕು. ಹಿಂದಿನ ದಿನ ರಾತ್ರಿ ಅಕ್ಕಿ ನೆನೆಹಾಕಿದರೆ ಒಳ್ಳೆಯದು. ದೋಸೆ ಅಕ್ಕಿಯಾದರೆ ಮೂರು ಗಂಟೆ ನೆನೆದರೂ ಸಾಕು. ಆದರೆ ಮಂಗಳೂರು ರೈಸ್‌ನಲ್ಲಿ ಈ ತಿಂಡಿ ತಯಾರಿಸೋದಾದರೆ ಹಿಂದಿನ ರಾತ್ರಿ ನೆನೆಸಿಡೋದು ಕಂಪಲ್ಸರಿ. ನೆನೆಸಿಟ್ಟ ಅಕ್ಕಿಯನ್ನು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಕೊನೆಯಲ್ಲಿ ಉಪ್ಪು ಹಾಕಿ ಮತ್ತೊಮ್ಮೆ ರುಬ್ಬಿ. ಇದಕ್ಕೆ ಹೆಚ್ಚು ನೀರು ಹಾಕಬಾರದು. ಆದರೆ ನುಣ್ಣಗೆ ರುಬ್ಬಬೇಕು. ಈಗ ಬೌಲ್‌ನಲ್ಲಿ ತೆಗೆದಿಟ್ಟ ಬೆಲ್ಲವನ್ನು ಹಾಕಿ. ಬೆಲ್ಲದ ಪುಡಿ ಇದ್ದರೆ ಒಳ್ಳೆಯದು. ಇಲ್ಲವಾದರೆ ಬೆಲ್ಲ ತುರಿದು ಹಾಕಿದರೂ ನಡೆಯುತ್ತೆ. ಹೀಗೆ ತುರಿದ ಬೆಲ್ಲಕ್ಕೆ  ಅದಕ್ಕೆ 1 ಕಪ್ ಕಾಯಿತುರಿ ಸೇರಿಸಿ ಮಿಕ್ಸ್ ಮಾಡಿ.

ಈ ಮಿಶ್ರಣಕ್ಕೆ ಹುರಿದ ಕಪ್ಪು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅರಶಿನ ಎಲೆ ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸವರಿ. ದಪ್ಪವಾಗಿ ಬೇಡ ತೆಳ್ಳಗೆ ಹಾಕಬೇಕು. ಇದರ ಮೇಲೆ ಬೆಲ್ಲ, ಕಾಯಿತುರಿಯ ಮಿಶ್ರಣವನ್ನು ಹಾಕಿ ಎಲೆಯನ್ನು ಮಡಚಿ. ನಂತರ ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು 10-15 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿದರೆ ಬಾಯಲ್ಲಿ ನೀರೂರುವ ರುಚಿಯಾದ ಅರಶಿನ ಎಲೆ ಕಡುಬು ರೆಡಿ.

click me!