ಮುದ್ದೆ, ಚಪಾತಿ, ಅನ್ನಕ್ಕೆ ಹೇಳಿಮಾಡಿಸಿದ ನಾಟಿ ಸ್ಟೈಲ್ ಮಟನ್ ಚಾಪ್ಸ್.. ಕುಕ್ಕರ್‌ನಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ

Published : Sep 26, 2026, 08:23 PM IST
Mutton chops recipe kannada

ಸಾರಾಂಶ

Mutton chops recipe kannada: ಯಾವಾಗಲೂ ಒಂದೇ ತರಹದ ಮಟನ್ ಸಾಂಬಾರ್ ತಿಂದು ಬೇಜಾರಾಗಿದ್ದರೆ, ಮಿಲಿಟರಿ ಹೋಟೆಲ್ ಸ್ಟೈಲ್‌ನಲ್ಲಿ ಘಮಘಮಿಸುವ ‘ನಾಟಿ ಸ್ಟೈಲ್ ಮಟನ್ ಚಾಪ್ಸ್’ ಒಮ್ಮೆ ಟ್ರೈ ಮಾಡಿ ನೋಡಿ. ರಾಗಿ ಮುದ್ದೆ, ಬಿಸಿ ಅನ್ನ, ಚಪಾತಿ ಅಥವಾ ದೋಸೆಗೆ ಹೇಳಿಮಾಡಿಸಿದ, ಬಾಯಲ್ಲಿ ನೀರೂರಿಸುವ ಈ ಚಾಪ್ಸ್ ಅನ್ನು ಕುಕ್ಕರ್‌ನಲ್ಲೇ ಅತೀ ಸುಲಭವಾಗಿ ಮಾಡುವ ಸರಳ ವಿಧಾನ ಇಲ್ಲಿದೆ.

ನಾನ್‌ವೆಜ್ ಪ್ರಿಯರ ಮನೆಯಲ್ಲಿ ಭಾನುವಾರ ಬಂತೆಂದರೆ ಮಟನ್ ಸಾಂಬಾರ್ ಅಥವಾ ಗ್ರೇವಿ ಇರಲೇಬೇಕು. ಆದರೆ, ಪ್ರತಿ ಬಾರಿಯೂ ಒಂದೇ ಶೈಲಿಯ ಮಟನ್ ಸಾಂಬಾರ್ ತಿಂದು ನಾಲಿಗೆಗೆ ರುಚಿ ಬದಲಾವಣೆ ಬೇಕೆನಿಸಿದರೆ, ಹಳ್ಳಿ ಶೈಲಿಯ ಅಥವಾ ಮಿಲಿಟರಿ ಹೋಟೆಲ್ ರುಚಿಯ ‘ನಾಟಿ ಸ್ಟೈಲ್ ಮಟನ್ ಚಾಪ್ಸ್’ (Nati Style Mutton Chops) ಅತ್ಯುತ್ತಮ ಆಯ್ಕೆ. ಬಿಸಿಬಿಸಿ ರಾಗಿ ಮುದ್ದೆ, ಅನ್ನ, ಚಪಾತಿ, ಇಡ್ಲಿ ಹಾಗೂ ದೋಸೆಗೂ ಸೂಪರ್ ಕಾಂಬಿನೇಷನ್ ಆಗಿರುವ ಈ ಚಾಪ್ಸ್ ಅನ್ನು ಕುಕ್ಕರ್‌ನಲ್ಲೇ ಅತೀ ಸುಲಭವಾಗಿ ಹೇಗೆ ಮಾಡುವುದು ಎಂಬ ವಿವರ ಇಲ್ಲಿದೆ.

ಬೇಕಾಗುವ ಪ್ರಮುಖ ಸಾಮಗ್ರಿಗಳು

ಮಟನ್: 1 ಕೆಜಿ (ಸ್ವಚ್ಛಗೊಳಿಸಿ ನೀರಿಲ್ಲದಂತೆ ಹಿಂಡಿ ಇಟ್ಟುಕೊಂಡಿದ್ದು)

ಮಟನ್ ಬೇಯಿಸಲು
ಎಣ್ಣೆ: 2 ಚಮಚ
ಈರುಳ್ಳಿ: 1 (ಸಣ್ಣದು)
ಅರಿಶಿನ ಪುಡಿ: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು

ಮಸಾಲೆ ಹುರಿಯಲು
ಎಣ್ಣೆ: 2 ಚಮಚ
ಈರುಳ್ಳಿ: 4 (ಮಧ್ಯಮ ಗಾತ್ರದ್ದು)
ಬೆಳ್ಳುಳ್ಳಿ: 3 ಗೆಡ್ಡೆ
ಶುಂಠಿ: 3 ಇಂಚು
ಹಸಿಮೆಣಸಿನಕಾಯಿ: 8 ರಿಂದ 9
ಕಾಳುಮೆಣಸು: 1 ಚಮಚ
ಗಸಗಸೆ: 1 ಚಮಚ
ಹುರಿಗಡಲೆ: 1 ಚಮಚ (ಗ್ರೇವಿ ಗಟ್ಟಿಯಾಗಲು)
ಚಕ್ಕೆ: ಸ್ವಲ್ಪ
ಲವಂಗ: ಸ್ವಲ್ಪ
ಏಲಕ್ಕಿ: 1
ತೆಂಗಿನಕಾಯಿ ತುರಿ: ಅರ್ಧ ಕಪ್
ಕೊತ್ತಂಬರಿ ಸೊಪ್ಪು: 1 ಹಿಡಿ
ಪುದೀನಾ ಸೊಪ್ಪು: 1 ಹಿಡಿ

ಮಾಡುವ ಸರಳ ವಿಧಾನ

70% ಮಟನ್ ಬೇಯಿಸಿಕೊಳ್ಳಿ.(ಮಟನ್ ಪೂರ್ತಿ ಬೇಯಬಾರದು)
ಮೊದಲು ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ.
ಎಣ್ಣೆ ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಚಿಟಿಕೆ ಅರಿಶಿನ ಪುಡಿ ಹಾಕಿ ಬಾಡಿಸಿ.
ಬಳಿಕ ಸ್ವಚ್ಛವಾಗಿ ತೊಳೆದು ನೀರಿಲ್ಲದಂತೆ ಹಿಂಡಿ ಇಟ್ಟುಕೊಂಡ ಮಟನ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 3-4 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಮಟನ್ ನೀರು ಬಿಟ್ಟುಕೊಂಡ ನಂತರ, ಅದು ಬೇಯಲು ಅಗತ್ಯವಿರುವಷ್ಟು ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ 3 ವಿಶಲ್ ಕೂಗಿಸಿಕೊಳ್ಳಿ.
ಮಟನ್ ಪೂರ್ತಿ ಬೇಯಬಾರದು, ಸುಮಾರು ಶೇ. 70 ರಷ್ಟು ಮಾತ್ರ ಬೆಂದಿರಬೇಕು.

ಘಮಘಮಿಸುವ ಹಸಿರು ಮಸಾಲೆ ತಯಾರಿ

ಮಟನ್ ಬೇಯುವಷ್ಟರಲ್ಲಿ ಇನ್ನೊಂದು ಪಾತ್ರೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಕಾಳುಮೆಣಸನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
ಈರುಳ್ಳಿ ಅರ್ಧ ಬೆಂದ ಮೇಲೆ ಗಸಗಸೆ, ಹುರಿಗಡಲೆ, ಚಕ್ಕೆ, ಲವಂಗ ಹಾಗೂ ಏಲಕ್ಕಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
ಒಲೆ ಆಫ್ ಮಾಡುವ ಕೊನೆಯ ಹಂತದಲ್ಲಿ ತೆಂಗಿನಕಾಯಿ ತುರಿ, ಒಂದು ಹಿಡಿ ಕೊತ್ತಂಬರಿ ಸೊಪ್ಪು ಮತ್ತು ಒಂದು ಹಿಡಿ ಪುದೀನಾ ಸೊಪ್ಪು ಹಾಕಿ ಲಘುವಾಗಿ ಬಾಡಿಸಿ. (ಪುದೀನಾ ಮತ್ತು ಕೊತ್ತಂಬರಿ ಕೊಂಚ ಹೆಚ್ಚಿದ್ದರೆ ಚಾಪ್ಸ್ ರುಚಿ ಮತ್ತು ಬಣ್ಣ ಅತ್ಯುತ್ತಮವಾಗಿರುತ್ತದೆ).
ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಹದವಾಗಿ ನುಣ್ಣಗೆ ರುಬ್ಬಿಕೊಳ್ಳಿ.

ಮಸಾಲೆ ಬೆರೆಸಿ ಬೇಯಿಸಿ

ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು, ಮೊದಲೇ 70% ಬೆಂದಿರುವ ಮಟನ್‌ಗೆ ರುಬ್ಬಿಟ್ಟುಕೊಂಡ ಹಸಿರು ಮಸಾಲೆಯನ್ನು ಸೇರಿಸಿ.
ಮಿಕ್ಸಿ ಜಾರ್ ತೊಳೆದ ಸ್ವಲ್ಪವೇ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ (ಹೆಚ್ಚು ನೀರು ಹಾಕಿದರೆ ಗ್ರೇವಿ ತೆಳುವಾಗುತ್ತದೆ).
ನಂತರ ಉಪ್ಪಿನ ರುಚಿ ಪರೀಕ್ಷಿಸಿ, ಕುಕ್ಕರ್ ಮುಚ್ಚಳ ಮುಚ್ಚಿ ಮತ್ತೆ 3 ವಿಶಲ್ ಕೂಗಿಸಿ.

ಸವಿಯಲು ಸಿದ್ಧ

ಕುಕ್ಕರ್ ಸಂಪೂರ್ಣವಾಗಿ ತಣ್ಣಗಾದ ಮೇಲೆ ಮುಚ್ಚಳ ತೆಗೆದರೆ ಮೇಲೆಲ್ಲಾ ಎಣ್ಣೆ ತೇಲುವ, ಘಮಘಮಿಸುವ ಹಳ್ಳಿ ಶೈಲಿಯ ನಾಟಿ ಮಟನ್ ಚಾಪ್ಸ್ ರೆಡಿಯಾಗಿರುತ್ತದೆ. ನಿಮಗೆ ಇನ್ನೂ ಗಟ್ಟಿಯಾದ ಗ್ರೇವಿ ಬೇಕಿದ್ದರೆ ಮುಚ್ಚಳ ತೆಗೆದು ಪಾತ್ರೆಯಲ್ಲೇ ಒಂದೆರಡು ನಿಮಿಷ ಕುದಿಸಿಕೊಳ್ಳಬಹುದು.

ವಾರಾಂತ್ಯದಲ್ಲಿ ರಾಗಿ ಮುದ್ದೆ ಅಥವಾ ಬಿಸಿಬಿಸಿ ಚಪಾತಿಯೊಂದಿಗೆ ಈ ನಾಟಿ ಶೈಲಿಯ ಮಟನ್ ಚಾಪ್ಸ್ ಬಡಿಸಿದರೆ ಮನೆಯವರೆಲ್ಲರೂ ಇಷ್ಟಪಟ್ಟು ಸವಿಯುವುದರಲ್ಲಿ ಸಂಶಯವಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Recipe: ಹುಳಿಯಾದ ಇಡ್ಲಿ-ದೋಸೆ ಹಿಟ್ಟಿನಿಂದ ತಯಾರಿಸಿ ರುಚಿಯಾದ ನಾಲ್ಕು ವಿಶೇಷ ತಿಂಡಿ
ಪ್ರತಿದಿನ ಅಡುಗೆಯಲ್ಲಿ 'ಚಕ್ಕೆ' ಬಳಕೆಯಿಂದ ಈ 7 ಅದ್ಭುತ ಲಾಭಗಳು ಸಿಗುತ್ತವೆ!