ಮನೇಲಿ ಫ್ರಿಡ್ಜ್ (Fridge) ಇಲ್ಲ. ಡೈಲಿ ಹೋಗಿ ತರಕಾರಿ (Vegetables) ತರೋಣ ಅಂದ್ರೆ ಟೈಮಿಲ್ಲ. ರಜೆಯಿದ್ದಾಗ ವಾರಕ್ಕಾಗುವಷ್ಟು ತರಕಾರಿ ತಂದಿಡೋಣ ಅಂದ್ರೆ ಹಾಳಾಗುತ್ತೆ. ಹೀಗಾದ್ರೆ ಏನ್ಮಾಡೋದಪ್ಪಾ ಅಂತ ಯೋಚ್ನೆ ಮಾಡ್ತಿದ್ದೀರಾ. ಡೋಂಟ್ ವರಿ, ಫ್ರಿಜ್ ಇಲ್ಲದೆಯೇ ತರಕಾರಿ, ಹಣ್ಣುಗಳನ್ನು ಫ್ರೆಶ್ ಆಗಿಡ್ಬೋದು.
ಅಡುಗೆ ಮನೆ, ಹಣ್ಣು, ತರಕಾರಿಗಳಿಲ್ಲದೆ ಪೂರ್ಣವಾಗುವುದಿಲ್ಲ. ಅಗತ್ಯವಿದೆಯೋ ಇಲ್ವೋ, ರಾಶಿ ರಾಶಿ ಹಣ್ಣು, ತರಕಾರಿಗಳನ್ನು ತಂದಿಡುವುದು ಗೃಹಿಣಿಯರ ಅಭ್ಯಾಸ. ಫ್ರಿಡ್ಜ್ (Fridge)ನಲ್ಲಿ ಶೇಖರಿಸಿಡುವ ಕಾರಣ ಹಾಳಾಗುತ್ತೆ ಅನ್ನೋ ಭಯವೂ ಇಲ್ಲ. ಹಾಗಂತ ತರಕಾರಿ, ಹಣ್ಣುಗಳನ್ನು ಫ್ರೆಶ್ ಆಗಿಡಲು ಫ್ರಿಡ್ಜೇ ಆಗಬೇಕೆಂದಿಲ್ಲ. ಇದಲ್ಲದೆಯೂ ಬೇರೆ ಹಲವು ಉಪಾಯಗಳಿವೆ. ಹಾಗಿದ್ರೆ, ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೆ ಅಥವಾ ದಿಢೀರ್ ಆಗಿ ಫ್ರಿಡ್ಜ್ ಹಾಳಾಗಿ ಹೋದರೆ ಏನು ಮಾಡಬೇಕು ? ರೆಫ್ರಿಜರೇಟರ್ ಇಲ್ಲದೆಯೂ ತರಕಾರಿಗಳು (Vegetables) ಮತ್ತು ಹಣ್ಣು (Fruits)ಗಳನ್ನು ತಾಜಾವಾಗಿಡುವುದು ಹೇಗೆ ?
ತಾಜಾ ತರಕಾರಿಗಳನ್ನು ಖರೀದಿಸಿ
ತರಕಾರಿಗಳು ಎಷ್ಟು ಸಮಯದ ಕಾಲ ತಾಜಾವಾಗಿರುತ್ತದೆ ಎಂಬುದು, ನೀವು ಎಲ್ಲಿಂದ, ಎಂಥಹಾ ತರಕಾರಿಗಳನ್ನು ಖರೀದಿಸುತ್ತೀರಿ ಎಂಬುದರ ಮೇಲೆ ಅವಲಂಬನೆಯಾಗಿರುತ್ತದೆ. ಹೀಗಾಗಿ ಯಾವಾಗಲೂ ತರಕಾರಿ ಖರೀದಿಸುವಾಗ ಅದು ತಾಜಾವಾಗಿದೆಯೇ ಎಂಬುದನ್ನು ಮತ್ತೆ ಮತ್ತೆ ಪರಿಶೀಲಿಸಿಕೊಳ್ಳಿ. ರಂಧ್ರಗಳಿರುವ, ಗೀರು ಬಿದ್ದ, ಇನ್ನೇನು ಹಾಳಾಗುವ ಹಂತದಲ್ಲಿರುವ ತರಕಾರಿ, ಹಣ್ಣನ್ನು ಖರೀದಿಸಬೇಡಿ. ಸೂಪರ್ ಮಾರ್ಕೆಟ್‌ನಲ್ಲಿ ಹಣ್ಣು, ತರಕಾರಿಗಳನ್ನು ಖರೀದಿಸುವುದರ ಬದಲು ರೈತರ ಮಾರುಕಟ್ಟೆಗಳಿಂದ ಖರೀದಿಸಿ. ಇದು ಹೆಚ್ಚು ತಾಜಾವಾಗಿರುತ್ತದೆ.
Kitchen Hacks: ತರಕಾರಿ, ಹಣ್ಣು ಕಟ್ ಮಾಡೋದು ಅಂದ್ರೆ ತಲೆನೋವಾ ? ಇಲ್ಲಿದೆ ಸೂಪರ್ ಐಡಿಯಾ
ಹೆಚ್ಚು ಖರೀದಿಸಬೇಡಿ
ಯಾವತ್ತೂ ಕಡಿಮೆ ಬೆಲೆಗೆ ಸಿಕ್ಕಿತು, ಫ್ರೆಶ್ ಆಗಿತ್ತು ಅನ್ನೋ ಕಾರಣಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಯನ್ನು ಖರೀದಿಸಬೇಡಿ. ಈ ರೀತಿ ತರಕಾರಿ ತರುವುದರಿಂದ ಹೆಚ್ಚು ಬಳಸಲು ಸಾಧ್ಯವಾಗದೆ ತರಕಾರಿ ಬೇಗನೇ ಹಾಳಾಗುತ್ತದೆ. ಮಾತ್ರವಲ್ಲ ಹೆಚ್ಚು ತರಕಾರಿ ತಂದಾಗ ಸ್ಥಳವಿಲ್ಲದೆ ಅದನ್ನು ಒಂದೆಡೆ ರಾಶಿ ಹಾಕಬೇಕಾಗುತ್ತದೆ. ಇದರಿಂದ ತರಕಾರಿ ಬೇಗ ಕೊಳೆಯಲು ಆರಂಭವಾಗುತ್ತದೆ. ಹೀಗಾಗಿ ಅಡುಗೆ ಕೋಣೆಯಲ್ಲಿ ತರಕಾರಿ ಹರಡಲು ಎಷ್ಟು ಜಾಗವಿದೆ ಎಂಬುದನ್ನು ನೋಡಿಕೊಂಡು ಅಗತ್ಯಕ್ಕೆ ತಕ್ಕಂತೆ ಖರೀದಿಸಿ. ತರಕಾರಿಯನ್ನು ದೂರ ದೂರ ಹರಡಿಡುವುದರಿಂದ ಗಾಳಿಯಾಡುವ ಕಾರಣ ಅವು ಬೇಗನೇ ಹಾಳಾಗುವುದಿಲ್ಲ.
ತರಕಾರಿಗಳನ್ನು ಜಾಗರೂಕತೆಯಿಂದ ಕೊಂಡೊಯ್ಯಿರಿ
ತರಕಾರಿ, ಹಣ್ಣುಗಳನ್ನು ಕೊಂಡೊಯ್ಯುವಾಗ ಯಾವಾಗಲೂ ಅದರ ಮೇಲೆ ಅಧಿಕ ಭಾರದ ವಸ್ತುವನ್ನು ಇಡಬೇಡಿ. ಬದಲಾಗಿ ಭಾರದ ವಸ್ತುಗಳನ್ನು ಚೀಲದ ಕೆಳಗಿಟ್ಟು, ಚೀಲದ ಮೇಲೆ ಹಣ್ಣು, ತರಕಾರಿಗಳನ್ನು ಇಡಿ. ತರಕಾರಿಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್ ಚೀಲ ಬಳಸುವುದಕ್ಕಿಂತ ಬಟ್ಟೆ ಚೀಲ ಬಳಸುವುದು ಉತ್ತಮ. ಪ್ಲಾಸ್ಟಿಕ್ ಕವರ್‌ನಲ್ಲಿ ತಂದಾಗ ತರಕಾರಿಗಳು ಬೇಗನೇ ಬಿಸಿಯಾಗಿ ಹಾಳಾಗುವ ಸಾಧ್ಯತೆಯೇ ಹೆಚ್ಚು.
Get Rid of Fruit Flies: ಹಣ್ಣುಗಳಲ್ಲಿ ಕೂರುವ ನೊಣಗಳ ಕಾಟ ತಪ್ಪಿಸಲು ಹೀಗೆ ಮಾಡಿ
ತರಕಾರಿಗಳನ್ನು ತಂದ ಕೂಡಲೇ ತೊಳೆಯಬೇಡಿ
ತರಕಾರಿ ಎಲ್ಲಿ ರಾಶಿ ಹಾಕಿರ್ತಾರೋ, ಎಷ್ಟು ಜನರ ಕೈ ಸೇರಿ ಬಂದಿದ್ಯೋ ಎಂದು ತರಕಾರಿಗಳನ್ನು ತಂದ ಕೂಡಲೇ ತೊಳೆಯಬೇಡಿ. ನೀರು ತಾಗಿದ್ರೆ ತರಕಾರಿ, ಹಣ್ಣುಗಳು ಬೇಗನೇ ಕೊಳೆಯಲು ಆರಂಭವಾಗುತ್ತದೆ. ಹೀಗಾಗಿ ಇವುಗಳನ್ನು ತಿನ್ನಲು ಬಳಸುವ ಮುನ್ನವಷ್ಟೇ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ತರಕಾರಿಗಳನ್ನು ತೊಳೆದರೆ, ಅದನ್ನು ಸಂಗ್ರಹಿಸುವ ಮೊದಲು ಸಂಪೂರ್ಣವಾಗಿ ಒಣಗಿಸಬೇಕು. ಆಗಷ್ಟೇ ಅದು ದೀರ್ಘಕಾಲ ತಾಜಾವಾಗಿರಲು ಸಾಧ್ಯ.
ಇದಲ್ಲದೆ ಕೆಲವೊಂದು ಹಣ್ಣು, ತರಕಾರಿಗಳನ್ನು ಜತೆಯಾಗಿ ಇಟ್ಟರೆ, ಅಥವಾ ಫ್ರಿಡ್ಜ್‌ನಲ್ಲಿ ಇಟ್ಟರೆ ಹಾಳಾಗುವ ಸಾಧ್ಯತೆಯೇ ಹೆಚ್ಚು. ಅವು ಯಾವುದೆಂದು ತಿಳಿಯೋಣ.
ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ, ಟೊಮೇಟೊ (Tomato)ಗಳಂತಹ ತರಕಾರಿಗಳು ಫ್ರಿಜ್‌ನಲ್ಲಿಟ್ಟಾಗ ಅವುಗಳ ರುಚಿಯನ್ನು ಕಳೆದುಕೊಳ್ಳುತ್ತವೆ. ಹೀಗಾಗಿ ಇವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಬದಲು ಅವುಗಳನ್ನು ತಂಪಾದ ಸ್ಥಳದಲ್ಲಿ ತೆಗೆದಿಡಿ. ಮಾವಿನ ಹಣ್ಣು, ಬಾಳೆಹಣ್ಣು, ಆವಕಾಡೊ, ಕಿವಿ, ಪೇರಳೆ ಮೊದಲಾದ ಕೆಲವು ಹಣ್ಣುಗಳು ಹಣ್ಣಾಗುವಾಗ ಎಥಿಲೀನ್ ಅನಿಲವನ್ನು ಉತ್ಪತ್ತಿ ಮಾಡುತ್ತವೆ. ಎಥಿಲೀನ್ ಅಂಶ ಸೇಬುಗಳು, ಕೋಸುಗಡ್ಡೆ, ಕ್ಯಾರೆಟ್, ಕಲ್ಲಂಗಡಿ ಮತ್ತು ಸೊಪ್ಪನ್ನು ಅಕಾಲಿಕವಾಗಿ ಹಣ್ಣಾಗಿಸುತ್ತದೆ. ಹೀಗಾಗಿ ಇವುಗಳನ್ನು ಎಂದಿಗೂ ಒಟ್ಟಿಗೆ ಸಂಗ್ರಹಿಸಬೇಡಿ. ಯಾಕೆಂದರೆ ಮೊದಲೇ ಒದ್ದೆಯಾದರೆ ಇದರ ಆರ್ದ್ರತೆಯು ಹಣ್ಣು ಬೇಗನೇ ಮಾಗಲು ಕಾರಣವಾಗುತ್ತದೆ.
ನಿಂಬೆಹಣ್ಣು, ಕಿತ್ತಳೆ, ಟ್ಯಾಂಗರಿನ್ ಮತ್ತು ಲೈಮ್‌ಗಳಂತಹ ಸಿಟ್ರಸ್ ಹಣ್ಣುಗಳು ನಿಮ್ಮ ಇತರ ಹಣ್ಣುಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಅವುಗಳನ್ನು ಇನ್ನೂ ಹೆಚ್ಚು ಕಾಲ ಉಳಿಯಲು ತಂಪಾದ ಡಾರ್ಕ್ ಸ್ಥಳದಲ್ಲಿ ರಂಧ್ರವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿ. ಸೊಪ್ಪು ತರಕಾರಿಗಳು ಬಹಳ ಬೇಗನೆ ಒಣಗುತ್ತವೆ. ಅವುಗಳನ್ನು ತಾಜಾವಾಗಿಡಲು, ಅವುಗಳನ್ನು ಸ್ವಲ್ಪ ಗಾಳಿ ತುಂಬಿದ ಚೀಲಗಳಲ್ಲಿ ಸಂಗ್ರಹಿಸಿ ಮತ್ತು ಅವುಗಳನ್ನು ಬಿಗಿಯಾಗಿ ಮುಚ್ಚಿ.
ಅದೇನೆ ಇರ್ಲಿ, ಮನೇಲಿ ಫ್ರಿಡ್ಜ್ ಇದೆಯೋ ಇಲ್ವೋ ಬೇರೆ ವಿಷ್ಯ. ಆದರೆ ಫ್ರಿಡ್ಜ್‌ನಲ್ಲಿಟ್ಟು ಬಳಸುವ ತರಕಾರಿ, ಹಣ್ಣುಗಳ ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ ಅನ್ನೋದು ನಿಜ. ಹಾಗಾಗಿ ಹಣ್ಣು, ತರಕಾರಿಗಳನ್ನು ಯಾವಾಗಲೂ ತಾಜಾವಾಗಿರುವಾಗಲೇ ಬಳಸಿ.