ಒಂಚೂರು ಬೇಯಿಸದೆ ರುಚಿಕರ ಚೀಸ್ ಕೇಕ್ ಮಾಡೋದನ್ನ ತೋರಿಸಿದ ಅಜ್ಜಿ ವಿಡಿಯೋ ವೈರಲ್

Published : Jun 28, 2025, 05:50 PM ISTUpdated : Jun 28, 2025, 05:51 PM IST
cake

ಸಾರಾಂಶ

ನೀವು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ ಮತ್ತು ಆರೋಗ್ಯಕರ, ಸುಲಭ ಹಾಗೂ ದೇಸಿ ಹೀಗೆ ಏನನ್ನಾದರೂ ಮಾಡಲು ಪ್ರಯತ್ನಿಸಲು ಬಯಸಿದರೆ ಅಜ್ಜಿ ಹೇಳಿಕೊಟ್ಟಿರುವ ಚೀಸ್‌ಕೇಕ್ ಮಾಡಲು ಪ್ರಯತ್ನಿಸಿ.  

ದಾದಿಕಿರಾಸೊಯ್ ಎಂದು ಕರೆಯಲ್ಪಡುವ ಮುದ್ದಾದ ಅಜ್ಜಿಯೊಬ್ಬರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಇಂಟ್ರೆಸ್ಟಿಂಗ್ ಆದ, ಸುಲಭವಾದ, ಬೇಯಿಸದೆ ಚೀಸ್‌ಕೇಕ್ ಮಾಡುವ ರೆಸಿಪಿ ಶೇರ್ ಮಾಡಿದ್ದು, ಸದ್ಯ ಇದು ನೆಟ್ಟಿಗರ ಮನ ಗೆದ್ದಿದೆ. ಈ ರೆಸಿಪಿಯ ವಿಶೇಷತೆಯೆಂದರೆ ಇದನ್ನು ಬೇಯಿಸುವ ಹಾಗಿಲ್ಲ, ಓವನ್ ಬೇಕಿಲ್ಲ, ದುಬಾರಿ ಪದಾರ್ಥಗಳಂತೂ ಬೇಡ್ವೇ ಬೇಡ..ಆದರೂ ಇದು ನೋಡಲು ತುಂಬಾ ಆಕರ್ಷಕವಾಗಿದೆ. ರುಚಿಯಲ್ಲೂ ಅಷ್ಟೇ ಎಂಬುದನ್ನು ವಿಡಿಯೋ ನೋಡಿದರೆ ಹೇಳಬಹುದು. ಹಾಗಾದರೆ ಬನ್ನಿ, ಅಜ್ಜಿ ಹೇಳಿಕೊಟ್ಟಿರುವ ಈ ಸಿಂಪಲ್, ಸುಲಭವಾದ ಸಿಹಿಭಕ್ಷ್ಯ ಮಾಡುವುದು ಹೇಗೆಂದು ನೋಡೋಣ.

ಚೀಸ್‌ಕೇಕ್ ತಯಾರಿಸುವುದು ಹೇಗೆ?
ಈ ಚೀಸ್‌ಕೇಕ್ ಅನ್ನು ಮೂರು ಪದರಗಳಲ್ಲಿ ತಯಾರಿಸಲಾಗುತ್ತದೆ. ವಿಡಿಯೋದಲ್ಲಿ ತೋರಿಸಿರುವ ಹಾಗೆ ಮೊದಲನೇ ಬೇಸ್‌ನಲ್ಲಿ ಪುಡಿಮಾಡಿದ ಡೈಜೆಸ್ಟಿವ್ ಬಿಸ್ಕತ್ತುಗಳು, ಸ್ವಲ್ಪ ತುಪ್ಪ ಅಥವಾ ಬೆಣ್ಣೆಯೊಂದಿಗೆ ಬೆರೆಸಿ ಘನ ಪದರವನ್ನು ರೂಪಿಸಲಾಗುತ್ತದೆ. ಇದನ್ನು ಒಂದು ಬಟ್ಟಲು ಅಥವಾ ಅಚ್ಚಿನಲ್ಲಿ ಒತ್ತಿ ಚೆನ್ನಾಗಿ ಹೊಂದಿಸಲಾಗುತ್ತದೆ. ಈ ಪದರವು ಚೀಸ್‌ಕೇಕ್‌ಗೆ ಬಲವಾದ ಅಡಿಪಾಯವನ್ನು ನೀಡುತ್ತದೆ. ಮುಂದೆ ನೀವು ಅಗಿಯುವಾಗ ಸೌಮ್ಯವಾಗಿರುತ್ತದೆ.

ಎರಡನೇ ಪದರವೂ ಬಹಳ ಮುಖ್ಯ. ಅಂದರೆ ಕ್ರೀಮ್ ಪದರ. ಇದನ್ನು ಮನೆಯಲ್ಲಿ ತಯಾರಿಸಿದ ಪನೀರ್, ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ನಯವಾದ ಮಿಶ್ರಣವನ್ನು ತಯಾರಿಸಿಕೊಳ್ಳಲಾಗುತ್ತದೆ (ಈ ಪದರವು ಯಾವುದೇ ಕೆಮಿಕಲ್ ಅಥವಾ ಕ್ರೀಮ್ ಚೀಸ್ ಇಲ್ಲದೆ ತುಂಬಾ ಆರೋಗ್ಯಕರ ಮತ್ತು ದೇಸಿ ಸ್ಪರ್ಶವನ್ನು ಹೊಂದಿದೆ). ಈಗಾಗಲೇ ಮಾಡಿಕೊಂಡ ಬಿಸ್ಕತ್ ಬೇಸ್‌ನ ಮೇಲೆ ರುಬ್ಬಿಕೊಂಡ ನಯವಾದ ಮಿಶ್ರಣವನ್ನು ಚೆನ್ನಾಗಿ ಹರಡಬೇಕು. ಪನೀರ್ ಮತ್ತು ಮೊಸರಿನ ಈ ಕಾಂಬಿನೇಶನ್ ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.

ಮೂರನೇ ಮತ್ತು ಕೊನೆಯ ಪದರವು ಚಾಕೊಲೇಟ್ ಆಗಿದೆ. ಇದು ಈ ಚೀಸ್‌ಕೇಕ್‌ಗೆ ಶ್ರೀಮಂತ ಮತ್ತು ಅಂತಿಮ ಸ್ಪರ್ಶ ನೀಡುತ್ತದೆ. ಕರಗಿದ ಡಾರ್ಕ್ ಅಥವಾ ಮಿಲ್ಕ್ ಚಾಕೊಲೇಟ್ ಅನ್ನು ತಾಜಾ ಕ್ರೀಮ್‌ನೊಂದಿಗೆ ಬೆರೆಸಿ ನಯವಾದ ಸಾಸ್ ತಯಾರಿಸಿ. ಇದನ್ನು ಚೀಸ್‌ಕೇಕ್ ಮೇಲೆ ಮೇಲಿನ ಪದರವಾಗಿ ಸುರಿಯಿರಿ. ಈ ಚಾಕೊಲೇಟ್ ಟಾಪಿಂಗ್ ಪ್ರತಿಯೊಬ್ಬ ಚೀಸ್ ಪ್ರಿಯರಿಗೂ ಸಖತ್ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ರಾತ್ರಿಯಿಡೀ ತಣ್ಣಗಾಗಿಸಿ
ಎಲ್ಲಾ ಪದರಗಳು ಸಿದ್ಧವಾದ ನಂತರ, ಈ ಚೀಸ್‌ಕೇಕ್ ಅನ್ನು ಕನಿಷ್ಠ 3-4 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಲಾಗುತ್ತದೆ. ಇದನ್ನು ರಾತ್ರಿಯಿಡೀ ತಣ್ಣಗಾಗಿಸಿದರೆ, ಅದರ ರುಚಿ ಇನ್ನೂ ಉತ್ತಮವಾಗಿರುತ್ತದೆ ಎಂದು ಅಜ್ಜಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ಕೇಕ್ ಮಾಡುವ ವಿಧಾನವು ಬಹಳ ಸುಲಭ ಮಾತ್ರವಲ್ಲ, ಇದರಲ್ಲಿ ಯಾವುದೇ ದುಬಾರಿ ಅಥವಾ ಲಭ್ಯವಿಲ್ಲದ ಪದಾರ್ಥಗಳಂತೂ ಇಲ್ವೆ ಇಲ್ಲ. ಇದನ್ನು ಮಕ್ಕಳು, ವೃದ್ಧರು ಅಥವಾ ಯಾರಾದರೂ ಸುಲಭವಾಗಿ ತಯಾರಿಸಬಹುದು. ನೀವು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ ಮತ್ತು ಆರೋಗ್ಯಕರ, ಸುಲಭ ಮತ್ತು ದೇಸಿ ಹೀಗೆ ಏನನ್ನಾದರೂ ಪ್ರಯತ್ನಿಸಲು ಬಯಸಿದರೆ, ಖಂಡಿತವಾಗಿಯೂ ಅಜ್ಜಿ ಹೇಳಿಕೊಟ್ಟಿರುವ ಬೇಯಿಸದ ಚೀಸ್‌ಕೇಕ್ ಮಾಡಲು ಪ್ರಯತ್ನಿಸಿ. ಅಷ್ಟೇ ಅಲ್ಲ, ಬಹಳ ಪ್ರೀತಿಯಿಂದ ಈಸಿಯಾಗಿ ತಯಾರಿಸಲಾದ ಈ ಸಿಹಿತಿಂಡಿ ಪ್ರತಿ ವಿಶೇಷ ಸಂದರ್ಭವನ್ನು ಸಿಹಿಗೊಳಿಸುತ್ತದೆ.

ಎಲ್ಲಾ ವಿಡಿಯೋಗಳು ವೈರಲ್
ದಾದಿಕಿರಾಸೊಯ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ ತೆಗೆದುನೋಡಿದರೆ ನೀವು ಅಜ್ಜಿ ಮಾಡಿರುವ ಎಲ್ಲಾ ಬಗೆಯ ರೆಸಿಪಿಗಳನ್ನು ಕಾಣಬಹುದು. ಇವು ಸಾಂಪ್ರದಾಯಿಕ ಶೈಲಿಯ ಆಹಾರವಾಗಿದ್ದು, ನಾಲಿಗೆಯ ರುಚಿ ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂದಹಾಗೆ ಅಜ್ಜಿ ಹೇಳಿಕೊಟ್ಟಿರುವ ಎಲ್ಲಾ ರೆಸಿಪಿಗಳು ವೈರಲ್ ಆಗಿರುವುದನ್ನು ನೀವಿಲ್ಲಿ ನೋಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ