ಪ್ರತಿದಿನ ಅದೇ ಚಪಾತಿ, ರೊಟ್ಟಿ ತಿಂದು ಬೇಜಾರಾಗಿದ್ದರೆ ಪೇಪರ್‌ನಂತೆ ತೆಳುವಾಗಿ, ಹತ್ತಿಯಂತೆ ಮೃದುವಾಗಿ ಬರುವ ಅಕ್ಕಿ ಹಿಟ್ಟಿನ ಸಪ್ಪೆ ಹೋಳಿಗೆ ಅಂದರೆ ಸಾಫ್ಟ್ ಅಕ್ಕಿ ರೊಟ್ಟಿ ಮತ್ತು ಹಳ್ಳಿ ಶೈಲಿಯ ಹುರುಳಿಕಾಳು ಚಟ್ನಿ ಮಾಡುವ ಸುಲಭ ವಿಧಾನ ಇಲ್ಲಿದೆ..
ಅಕ್ಕಿ ಹಿಟ್ಟಿನ ಹೂರಣಕ್ಕೆ
ಅಕ್ಕಿ ಹಿಟ್ಟು – 2 ಕಪ್
ನೀರು – 3 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಹೊರ ಕಣಕಕ್ಕೆ
ಮೈದಾ ಹಿಟ್ಟು – 1½ ಕಪ್ (ಮೈದಾ ಹಿಟ್ಟು ಕಡಿಮೆ ಇರಲಿ. ಅಕ್ಕಿ ಹಿಟ್ಟಿನ ಉಂಡೆಯ ಕಾಲು ಭಾಗದಷ್ಟು ಮಾತ್ರ ಮೈದಾ ಹಿಟ್ಟು ಬಳಸಬೇಕು. ಇದರಿಂದ ರೊಟ್ಟಿ ಪೇಪರ್‌ನಂತೆ ತೆಳುವಾಗಿ ಲಟ್ಟಿಸಲು ಸಾಧ್ಯವಾಗುತ್ತದೆ)
ಉಪ್ಪು – ಚಿಟಿಕೆ
ಎಣ್ಣೆ – 1 ರಿಂದ 2 ಚಮಚ
ನೀರು – ಹಿಟ್ಟು ಕಲಸಲು ಬೇಕಾದಷ್ಟು
ಹುರುಳಿಕಾಳು – 50 ಗ್ರಾಂ (ಚೆನ್ನಾಗಿ ಹುರಿದದ್ದು)
ಒಣಮೆಣಸಿನಕಾಯಿ – 3 (ಹುರಿದದ್ದು)
ತೆಂಗಿನಕಾಯಿ ತುರಿ – ½ ಕಪ್
ಬೆಳ್ಳುಳ್ಳಿ – 6 ರಿಂದ 7 ಎಸಳು
ಜೀರಿಗೆ – ¼ ಚಮಚ
ಕಾಳುಮೆಣಸು – 10 ಕಾಳು
ಹುಣಸೆಹಣ್ಣು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಹಂತ 1: ಅಕ್ಕಿ ಹಿಟ್ಟು ಬೇಯಿಸಿಕೊಳ್ಳಿ
ಒಲೆಯ ಮೇಲೆ ಪಾತ್ರೆ ಇಟ್ಟು 3 ಕಪ್ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಿ.
ನೀರು ಕುದಿಯಲು ಆರಂಭಿಸಿದಾಗ, 2 ಕಪ್ ಅಕ್ಕಿ ಹಿಟ್ಟು ಸೇರಿಸಿ ಗಂಟಾಗದಂತೆ ಚೆನ್ನಾಗಿ ಮಿಕ್ಸ್ ಮಾಡಿ.
ತಕ್ಷಣ ಗ್ಯಾಸ್ ಆಫ್ ಮಾಡಿ, ಪಾತ್ರೆ ಮುಚ್ಚಿ 3-4 ನಿಮಿಷ ಬಿಡಿ (ಹಿಟ್ಟು ಹಬೆಯಲ್ಲೇ ಚೆನ್ನಾಗಿ ಅರಳಿ ಸಾಫ್ಟ್ ಆಗುತ್ತದೆ). ನಂತರ ತಣ್ಣಗಾಗಲು ಬಿಡಿ.
ಹಂತ 2: ಮೈದಾ ಹಿಟ್ಟು ಕಲಿಸಿಕೊಳ್ಳಿ
ಒಂದು ಪಾತ್ರೆಗೆ ಮೈದಾ ಹಿಟ್ಟು, ಚಿಟಿಕೆ ಉಪ್ಪು ಹಾಕಿ, ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಒಬ್ಬಟ್ಟಿನ ಹಿಟ್ಟಿನಂತೆ (ಸಾಫ್ಟ್ ಆಗಿ) ಕಲಸಿಕೊಳ್ಳಿ.
ಮೇಲೆ 1 ಚಮಚ ಎಣ್ಣೆ ಸವರಿ, ಮುಚ್ಚಳ ಮುಚ್ಚಿ ಅರ್ಧ ಗಂಟೆ (30 ನಿಮಿಷ) ನೆನೆಯಲು ಬಿಡಿ.
ಹಂತ 3: ಹುರುಳಿಕಾಳು ಚಟ್ನಿ ರೆಡಿ
ಮಿಕ್ಸಿ ಜಾರಿಗೆ ಹುರಿದ ಹುರುಳಿಕಾಳು, ಒಣಮೆಣಸಿನಕಾಯಿ, ತೆಂಗಿನತುರಿ, ಬೆಳ್ಳುಳ್ಳಿ, ಜೀರಿಗೆ, ಕಾಳುಮೆಣಸು, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡರೆ ರುಚಿಕರವಾದ ಚಟ್ನಿ ರೆಡಿ (ಇದಕ್ಕೆ ಒಗ್ಗರಣೆ ಅಗತ್ಯವಿಲ್ಲ).
ಹಂತ 4: ರೊಟ್ಟಿ ಲಟ್ಟಿಸುವ ವಿಧಾನ
ತಣ್ಣಗಾದ ಅಕ್ಕಿ ಹಿಟ್ಟನ್ನು ಕೈಯಿಂದ ಚೆನ್ನಾಗಿ ನಾದಿ, ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿ.
ನೆನೆಸಿದ ಮೈದಾ ಹಿಟ್ಟಿನಿಂದ ಅಕ್ಕಿ ಹಿಟ್ಟಿನ ಉಂಡೆಯ ಕಾಲು ಭಾಗದಷ್ಟು (ಚಿಕ್ಕದಾಗಿ) ಉಂಡೆ ತೆಗೆದುಕೊಳ್ಳಿ.
ಮೈದಾ ಹಿಟ್ಟನ್ನು ಸ್ವಲ್ಪ ತಟ್ಟಿ, ಅದರೊಳಗೆ ಅಕ್ಕಿ ಹಿಟ್ಟಿನ ಉಂಡೆಯನ್ನು ಇಟ್ಟು (ಹೋಳಿಗೆ ಮಾಡುವಂತೆ) ಮುಚ್ಚಿ, ಹೆಚ್ಚುವರಿ ಮೈದಾ ಹಿಟ್ಟನ್ನು ತೆಗೆದುಬಿಡಿ.
ಸ್ವಲ್ಪ ಒಣ ಹಿಟ್ಟು (ಅಕ್ಕಿ ಅಥವಾ ಮೈದಾ ಹಿಟ್ಟು) ಉದುರಿಸಿ ಲಟ್ಟಣಿಗೆಯಿಂದ ಚಪಾತಿಗಿಂತಲೂ ತೆಳುವಾಗಿ (ಪೇಪರ್‌ನಂತೆ) ಲಟ್ಟಿಸಿಕೊಳ್ಳಿ. ಇದು ಕಿತ್ತುಹೋಗುವುದಿಲ್ಲ ಮತ್ತು ಅಂಟಿಕೊಳ್ಳುವುದಿಲ್ಲ.
ಹಂತ 5: ಬೇಯಿಸಿ
ಬಿಸಿಯಾದ ಹಂಚಿನ ಮೇಲೆ ರೊಟ್ಟಿಯನ್ನು ಹಾಕಿ, ಮಧ್ಯಮ ಉರಿಯಲ್ಲಿ ಎರಡೂ ಬದಿ ತಿರುಗಿಸಿ ಹಾಕಿ ಬೇಯಿಸಿ.
ರೊಟ್ಟಿ ಪೂರಿಯಂತೆ ಚೆನ್ನಾಗಿ ಉಬ್ಬಿ ಬರುತ್ತದೆ. (ಬೇಕಿದ್ದರೆ ಎಣ್ಣೆ/ತುಪ್ಪ ಸವರಬಹುದು, ಇಲ್ಲದಿದ್ದರೂ ಹಾಗೆಯೇ ಅತ್ಯಂತ ಮೃದುವಾಗಿ ಬರುತ್ತದೆ).
ಈ ರೊಟ್ಟಿಗಳು ಎಷ್ಟು ಸಾಫ್ಟ್ ಆಗಿರುತ್ತವೆ ಎಂದರೆ, ಹಾಟ್‌ಬಾಕ್ಸ್‌ನಲ್ಲಿ ಇಡದಿದ್ದರೂ ದಿನವಿಡೀ ಮೆದುವಾಗಿಯೇ ಇರುತ್ತವೆ. ಇದು ಸಸ್ಯಾಹಾರಿಗಳಿಗೆ ಚಟ್ನಿ ಜೊತೆಗೆ ಹಾಗೂ ಮಾಂಸಾಹಾರಿಗಳಿಗೆ ಚಿಕನ್/ಮಟನ್ ಗ್ರೇವಿ ಜೊತೆ ಸವಿಯಲು ಅತ್ಯುತ್ತಮ ಕಾಂಬಿನೇಷನ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.