ನಿಂಬೆ ಬೆಲೆ ಏರಿಕೆಯಾಯ್ತು ಅಂತ ತಲೆ ಕೆಡಿಸ್ಕೋಬೇಡಿ, ಪರ್ಯಾಯವಾಗಿ ಅಡುಗೆಯಲ್ಲಿ ಇದನ್ನು ಬಳಸಿ

By Suvarna News  |  First Published Apr 14, 2022, 4:01 PM IST

ನಿಂಬೆ (Lemon) ಬೆಲೆ ಅದ್ಯಾವ ಪರಿ ಹೆಚ್ಚಾಗಿದೆಯೆಂದರೆ ಬೇಸಿಗೆ ಆದ್ರೂ ನಿಂಬೆಯ ಜ್ಯೂಸ್ (Juice) ಮಾತ್ರ ಕುಡಿಯೋದು ಬೇಡ ಅಂತಿದ್ದಾರೆ ಜನ್ರು. ನಿಂಬೆ ಹಾಕಿ ಮಾಡುವ ರೆಸಿಪಿ (Recipe)ಗಳನ್ನಂತೂ ಸ್ಪಲ್ಪ ದಿನಕ್ಕೆ ಮರೆತೇ ಬಿಡ್ಬೇಕೇನೂ ಅಂತಿದ್ದಾರೆ ಹಲವ್ರು. ಆದ್ರೆ ನೀವು ಹಾಗೆ ಮಾಡ್ಬೇಕಿಲ್ಲ. ನಿಂಬೆಯ ಬದಲಿಯಾಗಿ ಅಡುಗೆ (Cooking)ಯಲ್ಲಿ ಬೇರೇನು ಬಳಸ್ಬೋದು ನಾವ್ ಹೇಳ್ತೀವಿ.


ಈರುಳ್ಳಿ, ಬೆಳ್ಳುಳ್ಳಿ ಮತ್ತು ಟೊಮೇಟೊ ನಂತರ ಈ ಬಾರಿ ಹಣದುಬ್ಬರವು ನಿಂಬೆ (Lemon)ಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇತ್ತೀಚಿನ ವರದಿಗಳ ಪ್ರಕಾರ, ನಿಂಬೆಹಣ್ಣಿನ ಬೆಲೆ ಕಿಲೋಗ್ರಾಂಗೆ 350 ರೂ. ನಷ್ಟು ಏರಿಕೆಯಾಗಿದೆ. ಗುಜರಾತ್‌ನಲ್ಲಿ ಕೆಜಿಗೆ 200 ರೂ.ನಂತೆ ಮಾರಾಟವಾಗುತ್ತಿದೆ. ಹೆಚ್ಚುತ್ತಿರುವ ಇಂಧನ ಬೆಲೆಯೇ ನಿಂಬೆ ದರ ಏರಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಬೇಸಿಗೆಯಲ್ಲಿ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚಿನ ಬೇಡಿಕೆ ನಿಂಬೆ ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ. ಈ ಬಾರಿ ನಿಂಬೆ ಬೆಳೆ ಉತ್ಪಾದನೆ ಕಡಿಮೆಯಾಗಿದ್ದು, ರಂಜಾನ್ ಮತ್ತು ತಾಪಮಾನ ಏರಿಕೆಯಿಂದಾಗಿ ಬೇಡಿಕೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ದರಗಳ ಏರಿಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಂಬೆ ಜ್ಯೂಸ್, ನಿಂಬೆ ಉಪ್ಪಿನಕಾಯಿ ಮತ್ತು ಇತರ ರೆಸಿಪಿ (Recipe) ಗಳನ್ನು ಮಾಡಿಸ ಸವಿಯುವುದು ಕಷ್ಟ. ಹೀಗಾಗಿ ನಿಂಬೆ ರಸಕ್ಕೆ ಪರ್ಯಾಯ (Alternative)ವಾಗಿ ಬೇರೆನು ಬಳಸ್ಬೋದು ನಾವ್ ಹೇಳ್ತೀವಿ.

Latest Videos

undefined

ಕಿತ್ತಳೆ ರಸ: ಸಲಾಡ್‌ಗಳು ಮತ್ತು ಇತರ ಆಹಾರಗಳಿಗೆ ಡ್ರೆಸ್ಸಿಂಗ್‌ಗಳಿಗಾಗಿ, ನೀವು ಕಿತ್ತಳೆ ರಸವನ್ನು ಆರಿಸಿಕೊಳ್ಳಬಹುದು. ಇದು ನಿಂಬೆ ರಸಕ್ಕಿಂತ ಕಡಿಮೆ ಆಮ್ಲೀಯ ಮತ್ತು ಕಡಿಮೆ ಸಿಹಿಯನ್ನು ಹೊಂದಿದೆ. ಅಲ್ಲದೆ, ಕಿತ್ತಳೆ ರಸದ ಪರಿಮಳವು ಯಾವುದೇ ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ.

ಕಿತ್ತಳೆ ಅಥವಾ ನಿಂಬೆ, ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು

ವಿನೇಗರ್: ವಿನೇಗರ್ (Vinegar) ನಿಂಬೆ ರಸಕ್ಕೆ ಪರಿಪೂರ್ಣ ಬದಲಿಯಾಗಿದ್ದು ಇದನ್ನು ಆಹಾರವನ್ನು ಬೇಯಿಸುವಾಗ, ಅಡುಗೆ ಮಾಡುವಾಗ ಬಳಸಿಕೊಳ್ಳಬಹುದು. ವಿನೇಗರ್ ಬಲವಾದ ಮತ್ತು ಕಟುವಾದ ಪರಿಮಳವನ್ನು ಹೊಂದಿರುವುದರಿಂದ, ನಿಂಬೆ ಪ್ರಮುಖ ಸುವಾಸನೆಗಳಲ್ಲಿ ಒಂದಾಗಿರುವ ಪಾಕವಿಧಾನಗಳಲ್ಲಿ ನಿಂಬೆ ರಸದ ಬದಲಿಗೆ ಇದನ್ನು ಬಳಸಬಾರದು ಎಂದು ತಜ್ಞರು ಸೂಚಿಸುತ್ತಾರೆ.

ಸಿಟ್ರಿಕ್ ಆಮ್ಲ: ಆರೋಗ್ಯ ತಜ್ಞರ ಪ್ರಕಾರ, ಸಿಟ್ರಿಕ್ ಆಮ್ಲವು ಆರೋಗ್ಯಕರ ಪರ್ಯಾಯವಾಗಿದೆ. ಏಕೆಂದರೆ ಇದು ವಿಟಮಿನ್‌ಗಳು (Vitamin) ಮತ್ತು ಉತ್ಕರ್ಷಣ ನಿರೋಧಕಗಳನ್ನು ಅಡುಗೆ ಸಮಯದಲ್ಲಿ ನಾಶವಾಗದಂತೆ ತಡೆಯುತ್ತದೆ. ಹೀಗಾಗಿ ಸಿಟ್ರಿಕ್ ಆಮ್ಲವನ್ನು ನಿಂಬೆ ರಸಕ್ಕೆ ಪರಿಣಾಮಕಾರಿ ಪರ್ಯಾಯವೆಂದು ಪರಿಗಣಿಸಲಾಗುತ್ತದೆ.

ಹುಳಿ ಮೊಸರು: ಮೇಲೋಗರಗಳಿಗೆ ಬಳಸಬಹುದಾದ ಅಗ್ಗದ ಬದಲಿ ಹುಳಿ ಮೊಸರಾಗಿದೆ (Sour Curd). ಇದು ಆಹಾರಕ್ಕೆ ಉತ್ತಮ ಬಣ್ಣವನ್ನು ಸಹ ನೀಡುತ್ತದೆ. 

ಟಾರ್ಟರ್ ಕ್ರೀಮ್: ಇದು ಯಾವುದೇ ಕಿರಾಣಿ ಅಂಗಡಿಯಲ್ಲಿ ಸುಲಭವಾಗಿ ಲಭ್ಯವಿರುವ ಆಮ್ಲೀಯ ಪುಡಿಯಾಗಿದೆ. ನಿಂಬೆ ರಸದ ಬದಲಿಗೆ ಬೇಕಿಂಗ್ ಮತ್ತು ಅಡುಗೆಯಲ್ಲಿಯೂ ಇದನ್ನು ಬಳಸಿಕೊಳ್ಳಬಹುದು. ಇದು ಪುಡಿಯ ರೂಪದಲ್ಲಿರುವುದರಿಂದ, ಅದನ್ನು ದುರ್ಬಲಗೊಳಿಸಲು ಮತ್ತು ಅಡುಗೆಯ ಉದ್ದೇಶಗಳಿಗಾಗಿ ಅದನ್ನು ಪರಿಪೂರ್ಣವಾಗಿಸಲು ನೀವು ನೀರನ್ನು ಸಹ ಸೇರಿಸಿಕೊಳ್ಳಬಹುದು.

Hubballi: ಬೇಸಿಗೆಗೆ ಲಿಂಬು ದರ ಹೆಚ್ಚಳದ ಬಿಸಿ..!

ನಿಂಬೆ ಸಾರ: ಇದು ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುವ ಮತ್ತೊಂದು ಸಿದ್ಧ ಬಳಕೆಯ ಪರ್ಯಾಯವಾಗಿದೆ. ತಾಜಾ ನಿಂಬೆ ರಸದ ಬದಲಿಗೆ 1 ಟೀ ಚಮಚ ನಿಂಬೆ ಎಸೆನ್ಸ್ ಸೇರಿಸಿದರಷ್ಟೇ ಸಾಕು. ಬೇಕಿಂಗ್ ಉದ್ದೇಶಗಳಿಗಾಗಿ ಇದನ್ನು ಹೆಚ್ಚು ಶಿಫಾರಸು ಮಾಡಲಾಗಿದೆ.

ವೈಟ್ ವೈನ್: ಕೇಳುವಾಗ ಸ್ಪಲ್ಪ ವಿಚಿತ್ರವೆನಿಸಬಹುದು. ಆದರೆ ವೈಟ್ ವೈನ್ (White Wine) ನಿಂಬೆಗೆ ಉತ್ತಮ ಪರ್ಯಾಯ ಎಂಬುದರಲ್ಲಿ ಎರಡು ಮಾತಿಲ್ಲ. ನಿಂಬೆ ರಸದ ಬದಲಿಗೆ ಬಿಳಿ ವೈನ್‌ನ್ನು ಬಳಸಿಕೊಳ್ಳಬಹುದು. ಮಾಂಸಾಹಾರ ತಯಾರಿಸುವಾಗ ಇದನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಳಸಿಕೊಳ್ಳಬಹುದು. ಆದರೆ ವೆಜಿಟೇರಿಯನ್ ರೆಸಿಪಿ ತಯಾರಿಯ ಸಂದರ್ಭದಲ್ಲಿ ಇದನ್ನು ಬಳಸಿದರೆ, ಆಹಾರದ ರುಚಿಯನ್ನು ಕೆಡಿಸುವ ಸಾಧ್ಯತೆಯೂ ಇದೆ.

ಅಮಚೂರ್ ಪೌಡರ್‌: ಇದನ್ನು ನಿಂಬೆಗೆ ಪರ್ಯಾಯವಾಗಿ ಈಗಾಗಲೇ ಹಲವರು ಬಳಸುತ್ತಿದ್ದಾರೆ. ನಿಂಬೆಗೆ ಬೆಲೆ ಹೆಚ್ಚಾಗಿರುವ ಸಮಯದಲ್ಲಿ ಚಿತ್ರಾನ್ಯ, ಪಾನಕಗಳನ್ನು ಮಾಡಲು ಅಮಚೂರ್ ಪೌಡರ್‌ನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಇದು ಆಹಾರಕ್ಕೆ ಅಷ್ಟೇನು ರುಚಿ ವ್ಯತ್ಯಾಸವನ್ನು ತರುವುದಿಲ್ಲ.

click me!