ಒಂದು ಚಮಚ ಕಡಲೆಕಾಯಿ ಪುಡಿ, ಕೋಟಿ ಮೌಲ್ಯದ ಬಿಸಿನೆಸ್; ಸ್ಟಾರ್ಟ್‌ಅಪ್‌ನ ಹೊಸ ಪ್ರಯೋಗ

Published : Aug 19, 2026, 10:39 AM IST
peanut protein pune startup plant based nutrition

ಸಾರಾಂಶ

ಕಡಲೆಕಾಯಿ ಎಂದರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು ಸ್ನ್ಯಾಕ್ಸ್ ಅಥವಾ ಅಡುಗೆಯಲ್ಲಿ ಬಳಸುವ ಪದಾರ್ಥ. ಆದರೆ ಇದೇ ಕಡಲೆಕಾಯಿಯನ್ನು ಆಧುನಿಕ ಆಹಾರ ತಂತ್ರಜ್ಞಾನದ ಮೂಲಕ ಶಕ್ತಿಯುತ ಪ್ರೋಟೀನ್ ಮೂಲವನ್ನಾಗಿ ಪರಿವರ್ತಿಸಿ, ತನ್ನದೇ ಆದ ಗುರುತು ಮೂಡಿಸುತ್ತಿದೆ.

ಕಡಲೆಕಾಯಿ ಎಂದರೆ ಸಾಮಾನ್ಯವಾಗಿ ನಮಗೆ ನೆನಪಾಗುವುದು ಸ್ನ್ಯಾಕ್ಸ್ ಅಥವಾ ಅಡುಗೆಯಲ್ಲಿ ಬಳಸುವ ಪದಾರ್ಥ. ಆದರೆ ಇದೇ ಕಡಲೆಕಾಯಿಯನ್ನು ಆಧುನಿಕ ಆಹಾರ ತಂತ್ರಜ್ಞಾನದ ಮೂಲಕ ಶಕ್ತಿಯುತ ಪ್ರೋಟೀನ್ ಮೂಲವನ್ನಾಗಿ ಪರಿವರ್ತಿಸಿ, ಪುಣೆಯ ಸ್ಟಾರ್ಟ್‌ಅಪ್‌ವೊಂದು ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿದೆ. ನ್ಯೂಟ್ರಾಸ್ಯುಟಿಕಲ್ ಮತ್ತು ಔಷಧೀಯ ಪದಾರ್ಥಗಳ ವಲಯದಲ್ಲಿ ಅನುಭವ ಹೊಂದಿರುವ ಕೆವಿನ್ ಪರೇಖ್ ಮತ್ತು ಆಶಿಶ್ ಕೊರ್ಡೆ ಅವರು 2018ರಲ್ಲಿ ಸ್ಥಾಪಿಸಿದ ಪ್ರೋಯಾನ್ (Proeon), ಸಸ್ಯ ಆಧಾರಿತ ಪ್ರೋಟೀನ್‌ಗಳ ಅಭಿವೃದ್ಧಿಯ ಮೇಲೆ ಗಮನಹರಿಸಿದೆ.

ಒಂದು ಲೋಟ ನೀರು, ಒಂದು ಚಮಚ ಕಡಲೆಕಾಯಿ ಪ್ರೋಟೀನ್

ಕೆವಿನ್ ಪರೇಖ್ ಅವರ ದಿನಚರಿಯಲ್ಲೇ ಕಡಲೆಕಾಯಿ ಪ್ರೋಟೀನ್ ಪುಡಿ ಪ್ರಮುಖ ಸ್ಥಾನ ಪಡೆದಿದೆ. ಒಂದು ಲೋಟ ನೀರಿಗೆ ಒಂದು ಚಮಚ ಕಡಲೆಕಾಯಿ ಪ್ರೋಟೀನ್ ಪುಡಿ ಬೆರೆಸಿ ಸೇವಿಸುವುದು ಅವರ ದಿನಚರಿಯ ಭಾಗವಾಗಿದೆ. ಆದರೆ ಇದು ಕೇವಲ ವೈಯಕ್ತಿಕ ಆಹಾರ ಪದ್ಧತಿಯಲ್ಲ. ಪ್ರಾಣಿ ಮೂಲದ ಪ್ರೋಟೀನ್‌ಗೆ ಸಸ್ಯ ಆಧಾರಿತ ಪರ್ಯಾಯಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ದೊಡ್ಡ ಉದ್ದೇಶದ ಭಾಗವಾಗಿದೆ.

ಮಾಂಸ, ಮೊಟ್ಟೆ ಮೇಲೆ ಹೆಚ್ಚುತ್ತಿರುವ ಅವಲಂಬನೆಗೆ ಪರ್ಯಾಯವೇನು?

ಜನರು ತಮ್ಮ ಪ್ರೋಟೀನ್ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಮಾಂಸ ಮತ್ತು ಮೊಟ್ಟೆಗಳನ್ನು ಸೇವಿಸುತ್ತಾರೆ. ಆ ಪ್ರಾಣಿಗಳಿಗೆ ಆಹಾರ ನೀಡಲು ಬೆಳೆಗಳನ್ನು ಬೆಳೆಯಬೇಕಾಗುತ್ತದೆ. ಅದಕ್ಕೆ ಬೇಕಾಗುವ ಭೂಮಿ ಮತ್ತು ನೀರಿನ ಪ್ರಮಾಣವೂ ಅಗಾಧವಾಗಿದೆ. ಜಾಗತಿಕ ಜನಸಂಖ್ಯೆ 10 ಶತಕೋಟಿಗೆ ತಲುಪುವ ವೇಳೆಗೆ ಎಲ್ಲರಿಗೂ ಆಹಾರ ನೀಡಲು ಒಂದಕ್ಕಿಂತ ಹೆಚ್ಚು ಭೂಮಿಯೇ ಬೇಕಾಗಬಹುದು ಎಂದು ಕೆವಿನ್ ಪರೇಖ್ ಹೇಳಿದ್ದಾರೆ.

40 ಬೆಳೆಗಳ ಮೇಲೆ ಸಂಶೋಧನೆ

ಸಸ್ಯ ಆಧಾರಿತ ಪ್ರೋಟೀನ್ ಅಭಿವೃದ್ಧಿ ಅಷ್ಟು ಸುಲಭವಾಗಿರಲಿಲ್ಲ. ಗ್ರಾಹಕರು ರುಚಿ, ಪೌಷ್ಟಿಕಾಂಶ ಅಥವಾ ಕೈಗೆಟುಕುವ ಬೆಲೆಯಲ್ಲಿ ರಾಜಿ ಮಾಡಿಕೊಳ್ಳದಂತಹ ಉತ್ಪನ್ನವನ್ನು ತಯಾರಿಸುವುದು ಪ್ರೋಯಾನ್ ತಂಡದ ಪ್ರಮುಖ ಗುರಿಯಾಗಿತ್ತು. ಇದಕ್ಕಾಗಿ ಸಂಸ್ಥಾಪಕರು, ವಿಜ್ಞಾನಿಗಳು ಮತ್ತು ಸಂಶೋಧಕರು ಭಾರತಕ್ಕೆ ಸ್ಥಳೀಯವಾದ ಸುಮಾರು 40 ಬಗೆಯ ಬೆಳೆಗಳ ಮೇಲೆ ಅಧ್ಯಯನ ನಡೆಸಿದರು. ಧಾನ್ಯಗಳು, ರಾಗಿಗಳು, ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ಮುಖ್ಯವಾಗಿ ನಾಲ್ಕು ಮಾನದಂಡಗಳ ಮೇಲೆ ಪರಿಶೀಲಿಸಲಾಯಿತು.

ಪೌಷ್ಟಿಕಾಂಶ

ರುಚಿ ಮತ್ತು ಇತರ ಸಂವೇದನಾ ಗುಣಲಕ್ಷಣಗಳು

ಆಹಾರದಲ್ಲಿ ಬಳಸುವ ಕಾರ್ಯಕ್ಷಮತೆ

ಪೂರೈಕೆ ಸರಪಳಿ ಲಭ್ಯತೆ

ಮೈಸೂರು ಲ್ಯಾಬ್‌ನಲ್ಲಿ ನಡೆದ ಸಂಶೋಧನೆ

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (CFTRI) ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಿದ ತಂಡ, ಹೆಸರುಕಾಳು ಮತ್ತು ಕಡಲೆಕಾಯಿ ಸೇರಿದಂತೆ ಕೆಲವು ಬೆಳೆಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿಕೊಂಡಿತು. ಅಂತಿಮವಾಗಿ ಪ್ರಮುಖ ಉತ್ಪನ್ನವಾಗಿ Proeon Peanut 80 ಎಂಬ ಕಡಲೆಕಾಯಿ ಪ್ರೋಟೀನ್ ಅಭಿವೃದ್ಧಿಪಡಿಸಲಾಯಿತು. ಇದು ಸುಮಾರು 80% ಶುದ್ಧ ಪ್ರೋಟೀನ್ ಹೊಂದಿರುವ ಪ್ರೋಟೀನ್ ಐಸೋಲೇಟ್ ಆಗಿದ್ದು, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿದೆ. ಸುಲಭವಾಗಿ ಜೀರ್ಣವಾಗುವ ಗುಣ ಮತ್ತು ಆಹಾರ ಉತ್ಪನ್ನಗಳಲ್ಲಿ ಬಳಸಲು ಸೂಕ್ತವಾದ ಸಂವೇದನಾ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಸ್ಥೆ ಹೇಳಿದೆ.

25ಕ್ಕೂ ಹೆಚ್ಚು ಜಾಗತಿಕ ಬ್ರ್ಯಾಂಡ್‌ಗಳಿಗೆ ಪ್ರೋಟೀನ್

ಪ್ರೋಯಾನ್‌ನ ಬೆಳವಣಿಗೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಮಧ್ಯಮ ಗಾತ್ರದ ಕಂಪನಿಗಳು ಹಾಗೂ ದೊಡ್ಡ ಬಹುರಾಷ್ಟ್ರೀಯ ಆಹಾರ ಸಂಸ್ಥೆಗಳವರೆಗೆ ಜಾಗತಿಕವಾಗಿ 25ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಪ್ರೋಯಾನ್‌ನ ಪ್ರೋಟೀನ್ ಪದಾರ್ಥಗಳನ್ನು ಬಳಸುತ್ತಿವೆ. ಈ ಪದಾರ್ಥಗಳನ್ನು ಬಳಸಿಕೊಂಡು ಭಾರತ, ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ವಿವಿಧ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಅವುಗಳಲ್ಲಿ:

ಪ್ರೋಟೀನ್ ಬಾರ್‌ಗಳು

ಹೈ-ಪ್ರೋಟೀನ್ ಹಿಟ್ಟು

ಪ್ರೋಟೀನ್ ಪೌಡರ್‌ಗಳು

ಕುಕೀಸ್

ವಿವಿಧ ಸ್ನ್ಯಾಕ್ಸ್‌ಗಳು ಮುಖ್ಯವಾಗಿವೆ.

ಗುಜರಾತ್‌ನ ಕಡಲೆಕಾಯಿ.. ಪುಣೆಯಲ್ಲಿ ಜಾಗತಿಕ ಉತ್ಪನ್ನ

ಭಾರತ ವಿಶ್ವದ ಪ್ರಮುಖ ಕಡಲೆಕಾಯಿ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಹೀಗಾಗಿ ಪ್ರೋಯಾನ್ ತನ್ನ ಪ್ರಮುಖ ಕಚ್ಚಾ ವಸ್ತುವಾದ ಕಡಲೆಕಾಯಿಯನ್ನು ಗುಜರಾತ್‌ನಿಂದ ಪಡೆಯುತ್ತಿದೆ. ಸಂಸ್ಥೆಯ ತಂಡ ಪ್ರಸ್ತುತ ಪುಣೆಯ ವೆಂಚರ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪುಣೆಯ ಹೊರವಲಯದಲ್ಲಿ ಎರಡು ಉತ್ಪಾದನಾ ಘಟಕಗಳಿದ್ದು, ಅಲ್ಲಿಯೇ ಕಡಲೆಕಾಯಿ ಪ್ರೋಟೀನ್ ತಯಾರಿಸಲಾಗುತ್ತಿದೆ. ಪ್ರಸ್ತುತ ಈ ಘಟಕಗಳಲ್ಲಿ ಪ್ರತಿ ತಿಂಗಳು ಸುಮಾರು 150ರಿಂದ 200 ಮೆಟ್ರಿಕ್ ಟನ್ ಪ್ರೋಟೀನ್ ಐಸೋಲೇಟ್‌ಗಳು ಮತ್ತು ಕಾನ್ಸಂಟ್ರೇಟ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಇದರ ಜೊತೆಗೆ ಮತ್ತಷ್ಟು 500 ಮೆಟ್ರಿಕ್ ಟನ್‌ಗಳ ಮಾಸಿಕ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಕೂಡ ನಡೆಯುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುದ್ದೆ ಪ್ರಿಯರಿಗಾಗಿ ಇಲ್ಲಿದೆ ಸ್ಪೆಷಲ್ ಮಸೊಪ್ಪು ಸಾರು ಮಾಡುವ ವಿಧಾನ.. ಕೇವಲ 10 ನಿಮಿಷದಲ್ಲಿ ರೆಡಿ
ಡಾಕ್ಟರ್‌ಗಳಿಗೂ ದೋಸೆ ತಿನ್ನೋದು ಹೇಗೆ ಅಂತ ಹೇಳಿಕೊಟ್ಟ ಆಸಾಮಿ: ಫೋರ್ಕ್ ಬೇಡ, ಕೈಯೇ ಮೇಲು ಅಂದ್ರು ನೆಟ್ಟಿಗರು!