ದಕ್ಷಿಣ ಕರ್ನಾಟಕದ ಮನೆಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ‘ಮಸೊಪ್ಪು ಸಾಂಬಾರ್’ ಅಥವಾ ‘ಸೊಪ್ಪಿನ ಸಾಂಬಾರ್’ ಅನ್ನು ಮದುವೆ ಮನೆ ಶೈಲಿಯಲ್ಲಿ ಅತೀ ಸುಲಭವಾಗಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.. ಬಿಸಿ ಬಿಸಿ ರಾಗಿ ಮುದ್ದೆಯೊಂದಿಗೆ ಸವಿಯಲು ಅತ್ಯುತ್ತಮವಾಗಿರುವ ಈ ಸಾಂಬಾರನ್ನು ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದು.
ಮೊದಲು ಒಲೆ ಹಚ್ಚಿ ಪಾತ್ರೆಯನ್ನಿಟ್ಟು, ಒಗ್ಗರಣೆಗೆ ಎರಡರಿಂದ ಮೂರು ಚಮಚ ತುಪ್ಪವನ್ನು ಹಾಕಬೇಕು. ತುಪ್ಪ ಹಾಕುವುದರಿಂದ ಸಾಂಬಾರ್‌ಗೆ ವಿಶೇಷ ರುಚಿ ಮತ್ತು ಘಮ ಬರುತ್ತದೆ (ತುಪ್ಪ ಇಷ್ಟಪಡದವರು ರಿಫೈನ್ಡ್ ಆಯಿಲ್ ಬಳಸಬಹುದು). ತುಪ್ಪ ಕಾದ ನಂತರ ಒಂದು ಚಮಚ ಸಾಸಿವೆ, ಸಾಸಿವೆ ಸಿಡಿದ ಮೇಲೆ ಒಂದು ಚಮಚ ಜೀರಿಗೆ ಹಾಗೂ ಅರ್ಧ ಚಮಚ ಕಾಳುಮೆಣಸನ್ನು ಹಾಕಬೇಕು. ಇದಕ್ಕೆ ಒಣ ಮೆಣಸಿನಕಾಯಿ, ಒಂದು ಮುಷ್ಟಿ ಕರಿಬೇವಿನ ಸೊಪ್ಪು ಮತ್ತು ಸುಮಾರು 50 ಗ್ರಾಂನಷ್ಟು ಹಸಿಮೆಣಸಿನಕಾಯಿಯನ್ನು ಸೀಳಿಕೊಂಡು ಸೇರಿಸಬೇಕು.
ಒಗ್ಗರಣೆ ಫ್ರೈ ಆದ ನಂತರ, ಎರಡು ಈರುಳ್ಳಿ ಮತ್ತು ಎರಡು ಟೊಮೆಟೊವನ್ನು ಗುಂಡಗೆ ಹಚ್ಚಿಕೊಂಡು ಸೇರಿಸಬೇಕು. ಈ ಸಮಯದಲ್ಲಿ ಎರಡು ಉಂಡೆ ಬೆಳ್ಳುಳ್ಳಿಯನ್ನು ಬಿಡಿಸಿ ಹಾಕಬೇಕು (ಈರುಳ್ಳಿ-ಬೆಳ್ಳುಳ್ಳಿ ಬಳಸದವರು ಇದನ್ನು ಸ್ಕಿಪ್ ಮಾಡಬಹುದು). ಇವೆಲ್ಲವನ್ನೂ ಚೆನ್ನಾಗಿ ಫ್ರೈ ಮಾಡಬೇಕು.
ಈ ಸಾಂಬಾರಿನ ವಿಶೇಷವೆಂದರೆ ಸೊಪ್ಪುಗಳ ಬಳಕೆ. ಇದರಲ್ಲಿ ದಂಟಿನ ಸೊಪ್ಪು, ಅರಿವೆ ಸೊಪ್ಪು, ಮೆಂತ್ಯ ಸೊಪ್ಪು ಮತ್ತು ಸಬ್ಬಕ್ಕಿ ಸೊಪ್ಪು ಸೇರಿದಂತೆ ಒಟ್ಟು ನಾಲ್ಕು ತರಹದ ಸೊಪ್ಪುಗಳನ್ನು (ಸುಮಾರು 200 ಗ್ರಾಂ) ಐದಾರು ಬಾರಿ ತೊಳೆದು ಬಳಸಲಾಗಿದೆ (ಸೊಪ್ಪಿನಲ್ಲಿ ಮಣ್ಣಿನ ಅಂಶವಿರುವುದರಿಂದ ಅದನ್ನು ಕನಿಷ್ಠ 5 ರಿಂದ 6 ಬಾರಿ ಚೆನ್ನಾಗಿ ತೊಳೆಯಬೇಕು) ಸೊಪ್ಪು ಅತೀ ಹೆಚ್ಚಿದ್ದರೆ ಮಾತ್ರ ಮಸೊಪ್ಪು ರುಚಿಯಾಗಿರುತ್ತದೆ. ಇದಕ್ಕೆ ಪಾಲಕ್ ಸೊಪ್ಪನ್ನೂ ಕೂಡ ಸೇರಿಸಿಕೊಳ್ಳಬಹುದು.
ಸೊಪ್ಪು ಫ್ರೈ ಆದ ಮೇಲೆ, ಮೊದಲೇ ಬೇಯಿಸಿ ಇಟ್ಟುಕೊಂಡಿರುವ 100 ಗ್ರಾಂ ತೊಗರಿಬೇಳೆಯನ್ನು ಇದಕ್ಕೆ ಸೇರಿಸಬೇಕು. ನಂತರ ಹದಕ್ಕೆ ತಕ್ಕಂತೆ ಒಂದು ಗ್ಲಾಸ್ ನೀರು, ಅರ್ಧ ಚಮಚ ಅರಿಶಿಣ, ಒಂದು ನಿಂಬೆಹಣ್ಣು ಗಾತ್ರದ ಹುಣಸೆಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು.
ಸೊಪ್ಪು, ಬೇಳೆ, ಟೊಮೆಟೊ ಎಲ್ಲಾ ಬೆಂದ ನಂತರ ಇದನ್ನು ಮಸಿಯುವ ಕೋಲಿನಿಂದ (ಕೈಯಿಂದ) ಚೆನ್ನಾಗಿ ಮಸಿಯಬೇಕು. ಮಸಿಯುವಾಗ ಉರಿಯನ್ನು ಕಡಿಮೆ ಮಾಡಿಕೊಳ್ಳಬೇಕು. ಹೀಗೆ ಮಸಿಯುವುದರಿಂದಲೇ ಸಾಂಬಾರ್‌ಗೆ ಅಸಲಿ ರುಚಿ ಬರುವುದು. ಕೈಯಲ್ಲಿ ಮಸಿಯಲು ಕಷ್ಟವಾದರೆ ಮಿಕ್ಸಿಯಲ್ಲಿ ಕೇವಲ ಒಂದು ಸುತ್ತು ಆಡಿಸಿಕೊಳ್ಳಬಹುದು. ಈಗ ಘಮಘಮಿಸುವ ಮಸೊಪ್ಪು ಸಾಂಬಾರ್ ಸಿದ್ಧವಾಗುತ್ತದೆ.
ಬಿಸಿ ಬಿಸಿ ಮುದ್ದೆ, ಅದರ ಮೇಲೆ ಎರಡು ಚಮಚ ತುಪ್ಪ ಮತ್ತು ಈ ಮಸೊಪ್ಪು ಸಾಂಬಾರ್ ಸವಿಯುವುದೇ ಒಂದು ಸ್ವರ್ಗ ಸುಖ. ಇದು ಕೇವಲ ನಾಲಗೆಗೆ ರುಚಿ ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.