
ಭಾರತೀಯರ ನೆಚ್ಚಿನ ಉಪಹಾರಗಳಲ್ಲಿ ದೋಸೆಗೆ ಪ್ರಮುಖ ಸ್ಥಾನವಿದೆ. ಬಿಸಿಬಿಸಿಯಾದ ದೋಸೆಯನ್ನು ಕೈಯಿಂದ ಹರಿದು, ಚಟ್ನಿ ಅಥವಾ ಸಾಂಬಾರ್‌ನಲ್ಲಿ ಅದ್ದಿ ತಿನ್ನುವ ಮಜವೇ ಬೇರೆ. ಆದರೆ, ದೋಸೆಯನ್ನು ಫೋರ್ಕ್ (Fork) ಮತ್ತು ಚಮಚ (Spoon) ಬಳಸಿ ತಿನ್ನಬೇಕು ಎಂದು ಬೋಧಿಸುವ ಶಿಷ್ಟಾಚಾರದ ವೀಡಿಯೊವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ ಭಾರತೀಯರು ಆಹಾರವನ್ನು ಕೈಯಿಂದ ಏಕೆ ತಿನ್ನುತ್ತಾರೆ ಎಂದು ಮತ್ತೊಮ್ಮೆ ತಿಳಿ ಹೇಳಲಾಗಿದೆ.
ವೈರಲ್ ಆದ ವೀಡಿಯೊದಲ್ಲಿ, ಶಿಷ್ಟಾಚಾರ ಬೋಧಿಸಿದ್ದಾನೆ ಟೇಬಲ್ ಮುಂದೆ ಕುಳಿತು, ತಮ್ಮ ಮುಂದಿರುವ ದೋಸೆಯನ್ನು ಫೋರ್ಕ್ ಮತ್ತು ಚಮಚದ ಸಹಾಯದಿಂದ ಮಡಚಿ, ಸಣ್ಣ ತುಂಡುಗಳಾಗಿ ಕತ್ತರಿಸಿ ತಿನ್ನುವ ವಿಧಾನವನ್ನು ತೋರಿಸುತ್ತಾನೆ.
ಮತ್ತೊಂದು ವೀಡಿಯೊದಲ್ಲಿ, ಅವರು ವೈದ್ಯರ ತಂಡವೊಂದಕ್ಕೆ ಕಟ್ಲರಿ (Cutlery) ಬಳಸಿ ದೋಸೆ ತಿನ್ನುವುದು ಹೇಗೆ ಎಂದು ತರಬೇತಿ ನೀಡುತ್ತಿರುವುದು ಕಂಡುಬರುತ್ತದೆ. "ವೈದ್ಯರಿಗಾಗಿ ನಡೆಸಿದ ಈ ದೋಸೆ ಶಿಷ್ಟಾಚಾರದ ತರಬೇತಿಯಲ್ಲಿ, ಪ್ರತಿಯೊಂದು ತುತ್ತನ್ನೂ ಅಚ್ಚುಕಟ್ಟಾಗಿ, ಆತ್ಮವಿಶ್ವಾಸದಿಂದ ಮತ್ತು ಆಕರ್ಷಕವಾಗಿ ಆನಂದಿಸುವ ಕಲೆಯನ್ನು ಕಲಿಸುತ್ತಿದ್ದೇವೆ. ನಿಜವಾದ ವೃತ್ತಿಪರತೆ ಕೇವಲ ಕೆಲಸದ ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ, ಊಟದ ಮೇಜಿನ ಮೇಲೆಯೂ ಪ್ರತಿಫಲಿಸಬೇಕು," ಎಂದು ಆತ ವೀಡಿಯೊದ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾನೆ.
ದೋಸೆಗೆ ಫೋರ್ಕ್ ಮತ್ತು ಚಮಚ ಬಳಸುವುದು ಹೆಚ್ಚು ನೈರ್ಮಲ್ಯ ಹಾಗೂ ಸೊಗಸಾದ ಅನುಭವವನ್ನು ನೀಡುತ್ತದೆ ಎಂದು ಬೋಧಕ ಪ್ರತಿಪಾದಿಸಿದ್ದಾರೆ. "ಫೋರ್ಕ್ ಮತ್ತು ಚಮಚ ಬಳಸಿ ದೋಸೆ ತಿನ್ನುವುದರಿಂದ ಊಟವು ಹೆಚ್ಚು ಶುಚಿಯಾಗಿರುತ್ತದೆ. ಪ್ರತಿ ತುತ್ತನ್ನೂ ರಾಜಮನೆತನದ ಸೊಬಗಿನಿಂದ ಆನಂದಿಸಬಹುದು. ಉತ್ತಮ ಶಿಷ್ಟಾಚಾರ ಎಂಬುದು ಹೊಸ ಪ್ರವೃತ್ತಿಯಲ್ಲ, ಅದು ಕಾಲಾತೀತ ಸಂಪ್ರದಾಯ," ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಈ ವೀಡಿಯೊ ಹರಡುತ್ತಿದ್ದಂತೆ, ಹೆಚ್ಚಿನ ನೆಟ್ಟಿಗರು ಈ ವಿಧಾನವನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ. ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಕೈಯಿಂದಲೇ ತಿನ್ನಬೇಕು, ಶಿಷ್ಟಾಚಾರದ ಹೆಸರಿನಲ್ಲಿ ಸಂಸ್ಕೃತಿಯನ್ನು ಹಾಳುಮಾಡಬೇಡಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ನಾನು ಎಷ್ಟೇ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್‌ಗೆ ಹೋದರೂ ನನ್ನಿಷ್ಟದಂತೆ ತಿನ್ನುತ್ತೇನೆ. ಭಾರತೀಯ ಹೋಟೆಲ್‌ಗಳು ತಮ್ಮದೇ ದೇಶದ ಪಾಕಪದ್ಧತಿಯನ್ನು ಬಡಿಸುವಾಗಲೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಿಸುವುದನ್ನು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ತಾಂತ್ರಿಕ ತಪ್ಪನ್ನು ಎತ್ತಿಹಿಡಿದು, ಒಂದೇ ಸಮಯದಲ್ಲಿ ಫೋರ್ಕ್ ಮತ್ತು ಚಮಚ ಹಿಡಿಯುವುದೇ ತಪ್ಪು ಶಿಷ್ಟಾಚಾರ. ಕಟ್ಲರಿ ಬಳಸುವುದಾದರೆ ಫೋರ್ಕ್ ಮತ್ತು ಚಾಕು ಬಳಸುವುದು ಸರಿಯಾದ ಶೈಲಿ. ಆದರೆ ದೋಸೆ ಅಥವಾ ಇಡ್ಲಿ ತಿನ್ನಲು ಇವೆರಡನ್ನೂ ಬದಿಗಿಟ್ಟು ಕೈ ಬಳಸುವುದೇ ಸೂಕ್ತ ಎಂದು ಸಲಹೆ ನೀಡಿದ್ದಾರೆ.
"ಭಾರತೀಯ ಆಹಾರವನ್ನು ಭಾರತೀಯ ಶೈಲಿಯಲ್ಲೇ ತಿನ್ನಿ" ಹಾಗೂ "ನಮಗೆ ಈ ರೀತಿ ದೋಸೆ ತಿನ್ನಲು ಖಂಡಿತ ಸಾಧ್ಯವಿಲ್ಲ" ಎಂದು ಇನ್ನು ಹಲವರು ಹಾಸ್ಯ ಮತ್ತು ಆಕ್ರೋಶದ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಕೆಲವರು ನೀನು ತಿನ್ನುತ್ತಿರುವ, ಹೇಳಿ ಕೊಡುತ್ತಿರುವ ರೀತಿಯೇ ತಪ್ಪಿದೆ. ಯಾರೂ ಕೂಡ ಆಹಾರವನ್ನು ಎಡದ ಕೈನಲ್ಲಿ ತಿನ್ನುವುದಿಲ್ಲ. ಆಹಾರವನ್ನು ದೇವರಿಗೆ ಹೋಲಿಸುತ್ತೇವೆ. ಕೈನಲ್ಲಿ ತಿನ್ನುವುದೇ ಶ್ರೇಷ್ಠ ಮತ್ತು ಆರೋಗ್ಯಕರ ಎಂದು ಬರೆದಿದ್ದಾರೆ.
ಕೈಯಿಂದ ಆಹಾರ ಸೇವಿಸಿದರೆ ಅದರಲ್ಲಿ ಆರೋಗ್ಯ, ವಿಜ್ಞಾನ ಹಾಗೂ ಸಂಸ್ಕೃತಿ ಅಡಗಿದೆ. ಬೆರಳುಗಳಿಂದ ಸ್ಪರ್ಶಿಸುವುದರಿಂದ ಆಹಾರದ ಉಷ್ಣತೆ ತಿಳಿದು ಜೀರ್ಣಕ್ರಿಯೆ ಚುರುಕಾಗುತ್ತದೆ. ಅಲ್ಲದೆ, ಇದು ಮನಸ್ಸು ಮತ್ತು ಆಹಾರದ ನಡುವೆ ಉತ್ತಮ ನಂಟನ್ನು ಬೆಸೆಯುತ್ತದೆ. ಸ್ಪರ್ಶ, ರುಚಿ, ನೋಟ ಹೀಗೆ ಎಲ್ಲಾ ಇಂದ್ರಿಯಗಳು ಒಟ್ಟಾಗಿ ಊಟದ ಅನುಭವವನ್ನು ಹೆಚ್ಚಿಸುತ್ತವೆ. ಜೊತೆಗೆ ಅನ್ನವನ್ನು ದೇವರೆಂದು ಭಾವಿಸಿ ಗೌರವದಿಂದ ಕೈಯಿಂದ ಸೇವಿಸಲಾಗುತ್ತದೆ.
ಒಟ್ಟಾರೆಯಾಗಿ, ಆಹಾರ ಸೇವನೆಯಲ್ಲಿ 'ಆಧುನಿಕ ಶಿಷ್ಟಾಚಾರ' ಮತ್ತು 'ಸಾಂಪ್ರದಾಯಿಕ ಶೈಲಿ'ಯ ನಡುವಿನ ಈ ಚರ್ಚೆ ಈಗ ಜಾಲತಾಣಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.