ಇಡ್ಲಿ ಎಂದರೆ ಅದು ಬಹಳ ಆರೋಗ್ಯಕರ ತಿಂಡಿ. ಆದರೆ, ಈ ಬೀದಿ ಬದಿ ಆಹಾರ ಮಾರಾಟಗಾರ ಇಡ್ಲಿಯನ್ನು ಡೆಡ್ಲಿಯಾಗಿಸೋಕೆ ಎಷ್ಟೆಲ್ಲ ಕಸರತ್ತು ಮಾಡುತ್ತಾನೆ ಎಂಬುದನ್ನು ನೋಡಿ ನೆಟ್ಟಿಗರು ಸುಸ್ತು ಬಡಿದು ಹೋಗಿದ್ದಾರೆ!
ಇಡ್ಲಿಯೊಂದನ್ನು ಕೊಲೆ ಮಾಡೋದು ಹೇಗೆಂದು ಈ ರಸ್ತೆ ಬದಿ ಅಂಗಡಿಯ ನಳ ಮಹಾರಾಜನಿಗೆ ಬಹಳ ಚೆನ್ನಾಗಿ ಗೊತ್ತಿದೆ. ಆತ ಇಡ್ಲಿಯಿಂದ ಮಾಡಿದ ಹೊಸ ರೆಸಿಪಿಯನ್ನು ನೋಡಿದ ನೆಟ್ಟಿಗರು 'ಓಂ ಶಾಂತಿ ಇಡ್ಲಿ', 'ಆರ್‌ಐಪಿ ಇಡ್ಲಿ' ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ಇಡ್ಲಿಯೊಂದು ತಾಳುವ ಹೊಸ ಅವತಾರ. ಆ ಅವತಾರಕ್ಕಾಗಿ ಅದು ಮಾಡಿಕೊಳ್ಳುವ ಟನ್‌ಗಟ್ಟಲೇ ಮೇಕಪ್! ಹೌದು, ಈಗೀಗಂತೂ ಫೇಮಸ್ ಆಗಲೆಂದು, ರೀಲ್ಸ್ ವೈರಲ್ ಆಗಲೆಂದೂ ಎಲ್ಲರೂ ತಮ್ಮತಮ್ಮದೇ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಅಂತೆಯೇ ಈ 'ಬಾಣಸಿಗ' ಕೂಡಾ ಇಡ್ಲಿಯೊಂದಿಗೆ ಡೆಡ್ಲಿ ಪ್ರಯೋಗ ನಡೆಸಿದ್ದಾನೆ.
undefined
ಆತ ತಟ್ಟೆ ಇಡ್ಲಿಯೊಂದನ್ನು ತೆಗೆದುಕೊಂಡು ಎರಡು ಭಾಗ ಮಾಡಿ ಕಾವಲಿ ಮೇಲೆ ಹರಡಿ ತುಪ್ಪ ಹಾಕುವಾಗ- ಓಹ್ ಇದು ನಮಗೆ ತಿಳಿದೇ ಇದೆ. ಸಖತ್ ಟೇಸ್ಟಿಯಾಗಿರುತ್ತೆ ಈ ರೀತಿ ತಿನ್ನೋದು ಎನಿಸದೆ ಇರದು. ಆದರೆ ಮುಂದೆ ಇರೋದು ಮಜಾ. ಆತ ಅಷ್ಟಕ್ಕೇ ನಿಲ್ಲಿಸದೆ, ಅದರ ಮೇಲೆ ಕಾಯಿ ಚಟ್ನಿ ಹಾಕುತ್ತಾನೆ, ಇನ್ನೊಂಚೂರು ಬಣ್ಣ ಇರಲಿ ಅಂತನೋ ಏನೋ ಟೊಮ್ಯಾಟೋ ಚಟ್ನಿಯನ್ನೂ ಹಾಕುತ್ತಾನೆ. ಮೇಲಿಂದ ಚಟ್ನಿ ಪುಡಿಯನ್ನೂ ಉದುರಿಸುತ್ತಾನೆ. ಇಲ್ಲಿಯವರೆಗಿನ ಇಡ್ಲಿ ಅವತಾರದ ರುಚಿಯನ್ನು ಒಂದು ಮಟ್ಟಿಗೆ ನೀವು ಊಹಿಸಬಹುದು. ಚೆನ್ನಾಗಿಯೇ ಇರುತ್ತದೆ ಎಂದುಕೊಳ್ಳಬಹುದು. ಆದರೆ, ಆತ ಅಷ್ಟಕ್ಕೇ ನಿಲ್ಲಿಸೋಲ್ಲ. ಮೇಲಿನಿಂದ ಎಳ್ಳು ಉದುರಿಸುತ್ತಾನೆ, ಅರಿಶಿನ ಹಾಕಿ ಮಯೋನೀಸ್ ಸಾಸ್ ಪಿಚಕಾರಿಯಾಗಿ ಇಡ್ಲಿ ಮೇಲೆ ಕೂರುತ್ತದೆ. ಅದರ ಮೇಲೆ 'ಸ್ಪೆಶಲ್ ಸಾಸ್', ಸಿಜ್ವಾನ್ ಸಾಸ್ ಹಾಕಿ ನೀಟಾಗಿ ಹರಡುತ್ತಾನೆ.
ಮೇಲಿನಿಂದ ಈರುಳ್ಳಿ, ಟೊಮ್ಯಾಟೋ, ದೊಣ್ಣೆ ಮೆಣಸಿನ ಕಾಯಿ ಹಾಕಿ ಚೀಸ್ ಗ್ರೇಟ್ ಮಾಡುತ್ತಾನೆ. ನಂತರ ಬೀಟ್‌ರೂಟ್ ಕ್ಯಾರೆಟ್ ತುರಿದು ಹಾಕಿ ಒಂದು ಮುಷ್ಠಿ ಗಾತ್ರದ 'ಸ್ಪೆಶಲ್ ಬಾಜಿ'ಯನ್ನು ಹಾಕುತ್ತಾನೆ. ಮತ್ತೆ ಚೀಸ್, ಬೀಟ್‌ರೂಟ್, ಕ್ಯಾರೆಟ್ ..ಅದರ ಮೇಲೆ ಧನಿಯಾ ಕೋಸು, ಮತ್ತೆ ಲಿಕ್ವಿಡ್ ಚೀಸ್, ಮಯೋನೀಸ್... ಮೇಲಿಂದ ಇಡ್ಲಿ ಮುಚ್ಚಿ ಮತ್ತೆ ಚೀಸ್ ತುರಿದು ಹಾಕುತ್ತಾನೆ. ಉಫ್! ಈ ರೆಸಿಪಿ ವಿವರಿಸುವಲ್ಲೇ ತಿಂದ ಎರಡು ಎಡ್ಲಿ ಕರಗಿ ಹೋಗಬಹುದು!
ಇದೆಲ್ಲ ಕೇಳುವಾಗ ಬಾಯಲ್ಲಿ ನೀರು ಬಂತಾ ಅಥವಾ..? ಬೇಡ ಬಿಡಿ..
ಈ ವಿಡಿಯೋವನ್ನು 'ಎಕ್ಸ್'ನಲ್ಲಿ ವಿವೇಕ್ ಎಂಬವರು ಶೇರ್ ಮಾಡಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷದ ಹತ್ತಿರ ವೀಕ್ಷಣೆ ಪಡೆದಿದೆ. ಅಲ್ಲದೆ ನೆಟ್ಟಿಗರು ಇದಕ್ಕೆ ಅದ್ಭುತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.. 'ಇದು ಇಡ್ಲಿಯಲ್ಲಿ ಡೆಡ್ಲಿ' ಎಂದು ಒಬ್ಬರು ಹೇಳಿದ್ದರೆ, 'ಚೀಸ್ ಚೀಸ್ ಚೀಸ್.. ಇದನ್ನು ಒಂದು ತಿಂಗಳು ದಿನಾ ಸೇವಿಸಿದರೆ ಹಾರ್ಟ್ ಅಟ್ಯಾಕ್ ಬರಬಹುದು' ಎಂದು ಮತ್ತೊಬ್ಬರು ಹೇಳಿದ್ದಾರೆ.
ಮೂರನೇ ಎಕ್ಸ್ ಬಳಕೆದಾರರು, 'ಈಗ ಇಡ್ಲಿಗೆ ತಾನು ಫಿಜ್ಜಾವೋ, ಬರ್ಗರೋ ಏನೆಂಬ ಸ್ವಪರಿಚಯವೇ ಗೊಂದಲವಾಗಿದೆ' ಎಂದಿದ್ದಾರೆ.
ನೀವೂ ಕೂಡಾ ಈ ಇಡ್ಲಿಯ ಫಿಜ್ಜಾನೋ, ಬರ್ಗರೋ ಹೇಗೆ ಮಾಡೋದು ಇಲ್ಲಿ ನೋಡ್ಬಹುದು. ಆದರೆ, ಕಾರಿಕೊಂಡರೆ ನಾವದಕ್ಕೆ ಹೊಣೆಯಲ್ಲ!
RIP to Idli 😥 🙏 pic.twitter.com/O17deEIYVO
— Vivek (@Vivek_Investor)