ಭಾನುವಾರ ಬಂತೆಂದರೆ ಸಾಕು, ಮಾಂಸಾಹಾರಿಗಳ ಮನೆಯಲ್ಲಿ ಮಟನ್ ಸಾಂಬಾರ್, ಸುಕ್ಕಾ ಅಥವಾ ಬಿರಿಯಾನಿಯ ಘಮಲು ಹರಡುತ್ತದೆ. ಆದರೆ ಮಟನ್ ಅಡುಗೆ ಮಾಡುವಾಗ ಗೃಹಿಣಿಯರಿಗೆ ಅಥವಾ ಅಡುಗೆ ಪ್ರಿಯರಿಗೆ ಎದುರಾಗುವ ಸಾಮಾನ್ಯ ಸಮಸ್ಯೆಯೆಂದರೆ ಎಷ್ಟೇ ವಿಷಲ್ ಕೂಗಿಸಿದರೂ ಕೆಲವೊಮ್ಮೆ ಮಾಂಸ ಸರಿಯಾಗಿ ಬೇಯದೆ ರಬ್ಬರ್‌ನಂತೆ ಗಟ್ಟಿಯಾಗಿರುವುದು. ಊಟ ಮಾಡುವಾಗ ಮಟನ್ ಜಗಿಯಲು ಕಷ್ಟವಾದರೆ ಊಟದ ಮಜವೇ ಹಾಳಾಗುತ್ತದೆ.
ಆದರೆ, ಇನ್ನು ಮುಂದೆ ಗಟ್ಟಿ ಮಟನ್ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮ್ಮ ಮನೆಯ ಅಡುಗೆಮನೆಯಲ್ಲೇ ಇರುವ ಒಂದು ಪುಟ್ಟ ವಸ್ತು ಮಟನ್ ಅನ್ನು ಬೆಣ್ಣೆಯಂತೆ ಮೃದುವಾಗಿ ಬೇಯಿಸುತ್ತದೆ!
ಮಟನ್ ಬೇಯಿಸುವಾಗ ಅದಕ್ಕೆ ಒಂದು ಸ್ವಚ್ಛವಾದ ತೆಂಗಿನ ಚಿಪ್ಪನ್ನು (Coconut Shell) ಹಾಕಿದರೆ ಮಾಂಸ ಕ್ಷಣಾರ್ಧದಲ್ಲಿ ಬೆಣ್ಣೆಯಂತೆ ಹಗುರವಾಗಿ ಬೇಯುತ್ತದೆ ಎಂಬ ಸಿಂಪಲ್ ಟ್ರಿಕ್ ಇದೀಗ ಆಹಾರ ಪ್ರಿಯರ ಗಮನ ಸೆಳೆಯುತ್ತಿದೆ.
ತೆಂಗಿನ ಚಿಪ್ಪಿನ ಒಂದು ಸಣ್ಣ ತುಂಡನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.
ಮಟನ್ ಕುದಿಯುವಾಗ ಅಥವಾ ಕುಕ್ಕರ್‌ನಲ್ಲಿ ಬೇಯಿಸಲು ಇಡುವಾಗ ಈ ತೆಂಗಿನ ಚಿಪ್ಪನ್ನು ಮಾಂಸದ ಜೊತೆಯಲ್ಲೇ ಹಾಕಿ.
ಮಟನ್ ಚೆನ್ನಾಗಿ ಬೆಂದ ನಂತರ, ಬಡಿಸುವ ಮುನ್ನ ಆ ತೆಂಗಿನ ಚಿಪ್ಪನ್ನು ಪಾತ್ರೆಯಿಂದ ಹೊರತೆಗೆಯಲು ಮರೆಯಬೇಡಿ!
ತೆಂಗಿನ ಚಿಪ್ಪಿನಲ್ಲಿರುವ ನೈಸರ್ಗಿಕ ಅಂಶಗಳು ಮತ್ತು ತಾಪಮಾನವನ್ನು ಹಿಡಿದಿಟ್ಟುಕೊಳ್ಳುವ ಗುಣವು ಮಾಂಸದಲ್ಲಿರುವ ಬಿಗಿಯಾದ ನಾರುಗಳನ್ನು (Meat Fibers) ಬೇಗನೆ ಸಡಿಲಗೊಳಿಸಿ, ಮಾಂಸವನ್ನು ಮೃದುವಾಗಿಸಲು (Tenderize) ನೈಸರ್ಗಿಕವಾಗಿ ಸಹಾಯ ಮಾಡುತ್ತದೆ. ಕರಾವಳಿ ಭಾಗದ ಹಳ್ಳಿಗಳಲ್ಲಿ ಇಂದಿಗೂ ಈ ಸಾಂಪ್ರದಾಯಿಕ ವಿಧಾನವನ್ನು ಬಳಸಲಾಗುತ್ತದೆ.
ರುಚಿಕರವಾದ ಹಾಗೂ ಮೃದುವಾದ ಮಟನ್ ಅಡುಗೆ ಸವಿಯಲು ಆನ್‌ಲೈನ್ ಮಾಂಸ ಮಾರಾಟ ಸಂಸ್ಥೆಯಾದ ಓಎಫ್‌ಸಿ (OFC) ಸೇರಿದಂತೆ ಹಲವು ಬಾಣಸಿಗರು ಈ ದೇಸಿ ಟಿಪ್ಸ್ ಅನ್ನು ಹಂಚಿಕೊಂಡಿದ್ದು, ಮಾಂಸಾಹಾರ ಪ್ರಿಯರು ತಮ್ಮ ಮುಂದಿನ ಅಡುಗೆಯಲ್ಲಿ ಹೀಗೆ ಮಾಡಬಹುದು.
ಹಲವರಿಗೆ "ತೆಂಗಿನ ಚಿಪ್ಪು ಹಾಕಿದರೆ ಸಾರಿನ ರುಚಿ ಅಥವಾ ವಾಸನೆ ಬದಲಾಗುತ್ತಾ?" ಎಂಬ ಅನುಮಾನ ಬರಬಹುದು. ತೆಂಗಿನ ಚಿಪ್ಪನ್ನು ಬಳಸುವುದರಿಂದ ಮಟನ್ ಸಾರಿನ ಮೂಲ ರುಚಿಯಾಗಲಿ ಅಥವಾ ಬಣ್ಣವಾಗಲಿ ಕಿಂಚಿತ್ತೂ ಬದಲಾಗುವುದಿಲ್ಲ. ಆದರೆ, ಚಿಪ್ಪಿನ ಹೊರಗಿನ ನಾರನ್ನು ಸಂಪೂರ್ಣವಾಗಿ ಕೆತ್ತಿ ತೆಗೆದು, ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದ ಮೇಲಷ್ಟೇ ಪಾತ್ರೆಗೆ ಹಾಕಬೇಕು.
ಮಟನ್ ಗಟ್ಟಿಯಾಗಲು ಮಾಡುವ ಅತಿ ದೊಡ್ಡ ತಪ್ಪೆಂದರೆ ಕುದಿಯುವ ಮಾಂಸಕ್ಕೆ ತಣ್ಣೀರು ಸುರಿಯುವುದು. ಆದರೆ ಮಟನ್ ಬೇಯಿಸುವಾಗ ಗ್ರೇವಿಗೆ ಅಥವಾ ಸಾರಿಗೆ ನೀರು ಬೇಕೆನಿಸಿದರೆ, ಯಾವಾಗಲೂ ಬಿಸಿ ನೀರನ್ನು (Hot Water) ಮಾತ್ರ ಸೇರಿಸಬೇಕು. ತಣ್ಣೀರು ಹಾಕಿದರೆ ಮಾಂಸದ ತಾಪಮಾನ ದಿಢೀರ್ ಕುಸಿದು, ಅದು ರಬ್ಬರ್‌ನಂತೆ ಗಟ್ಟಿಯಾಗುತ್ತದೆ.
ಫ್ರೀಜರ್‌ನಲ್ಲಿ ಇಟ್ಟಿದ್ದ ಮಟನ್ ಅನ್ನು ತಕ್ಷಣವೇ ಕುಕ್ಕರ್‌ಗೆ ಹಾಕಿ ಬೇಯಿಸಿದರೆ ಅದು ಎಂದಿಗೂ ಸಾಫ್ಟ್ ಆಗುವುದಿಲ್ಲ. ಅಡುಗೆ ಮಾಡುವ ಕನಿಷ್ಠ 30–40 ನಿಮಿಷಗಳ ಮುಂಚೆಯೇ ಮಾಂಸವನ್ನು ಫ್ರಿಡ್ಜ್‌ನಿಂದ ಹೊರತೆಗೆದು ಸಾಮಾನ್ಯ ತಾಪಮಾನಕ್ಕೆ (Room Temperature) ಬರಲು ಬಿಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.