ಉದ್ದು, ಅಕ್ಕಿ ನೆನೆಸುವ ಅಗತ್ಯವಿಲ್ಲದೆ ಕೇವಲ 5 ನಿಮಿಷದಲ್ಲಿ ದೋಸೆ ತಯಾರಿಸಲು ಇನ್‌ಸ್ಟಂಟ್ ದೋಸಾ ಮಿಕ್ಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ತರಿತರಿಯಾಗಿ ರುಬ್ಬಿ ಮಾಡುವ ಈ ಪುಡಿಯನ್ನು ಆರು ತಿಂಗಳವರೆಗೆ ಕೆಡದಂತೆ ಶೇಖರಿಸಿಡಬಹುದು.
ದಕ್ಷಿಣ ಭಾರತೀಯರ ಫೆವರೆಟ್ ದೋಸೆ ಈಗ ಎಲ್ಲಾ ಕಡೆ ಫೇಮಸ್. ಆದರೆ, ಸಾಮಾನ್ಯವಾಗಿ ದೋಸೆ ಮಾಡುವಾಗ, ಹಿಂದಿನ ದಿನವೇ ಉದ್ದು, ಅಕ್ಕಿ, ಬೇಳೆ-ಕಾಳು... ಹೀಗೆ ವಿಭಿನ್ನ ದೋಸೆಗಳಿಗೆ ಏನೇನು ಬೇಕೋ ಅವನ್ನೆಲ್ಲಾ ನೆನೆ ಹಾಕಿ ಇಡಬೇಕು. ಆದರೆ ಇದು ಇನ್ಸ್ಟೆಂಟ್ ಯುಗ ಅಲ್ವಾ? ಅದರಲ್ಲಿಯೂ ಕಚೇರಿಗೆ ಹೋಗುವ ಮಹಿಳೆಯರಿಗೆ ಸಂಜೆ ಬಂದು ಇದನ್ನೆಲ್ಲಾ ಮಾಡಿ ಅದನ್ನು ರುಬ್ಬಿ ಇಡುವಷ್ಟು ಪುರುಸೊತ್ತು ಕೂಡ ಇರಲ್ಲ. ಇದೇ ಕಾರಣಕ್ಕೆ ಮನೆಯಲ್ಲಿಯೇ ಸುಲಭದಲ್ಲಿ ದೋಸೆ ಹಿಟ್ಟನ್ನು ಅರ್ಥಾತ್ ದೋಸಾ ಮಿಕ್ಸ್ ರೆಡಿ ಮಾಡಿ ಇಟ್ಟುಕೊಳ್ಳಬಹುದು. ರವೆಯ ರೂಪದಲ್ಲಿ ಇರುವ ದೋಸಾ ಮಿಕ್ಸ್ ಆರು ತಿಂಗಳವರೆಗೆ ಕೆಡದೇ ಇಡಬಹುದು. ಹೊರಗಡೆ ಮೂರು ತಿಂಗಳವರೆಗೆ, ಫ್ರಿಜ್ನಲ್ಲಿ ಆದ್ರೆ ಆರು ತಿಂಗಳು ಫ್ರೆಷ್ ಆಗಿಯೇ ಇಡಬಹುದು. ದೋಸೆ ತಿನ್ನಬೇಕು ಎನ್ನಿಸಿದರೆ ಐದೇ ನಿಮಿಷದಲ್ಲಿ ರೆಡಿ ಮಾಡಿಕೊಳ್ಳಬಹುದು.
ಹಾಗಿದ್ರೆ ಅದನ್ನು ಹೇಗೆ ಮಾಡಬೇಕು ಎನ್ನೋದನ್ನು ನೋಡೋಣ ಬನ್ನಿ. chef_mohan_tips ಇನ್ಸ್ಟಾಗ್ರಾಮ್ನಲ್ಲಿ ಷೆಫ್ ಹೇಳಿಕೊಟ್ಟ ಟಿಪ್ಸ್ ಇಲ್ಲಿದೆ. 3 ಭಾಗ ಅಕ್ಕಿ, 1 ಭಾಗ ಉದ್ದಿನ ಬೇಳೆ ಪ್ರಮಾಣದಲ್ಲಿಯೇ ಇದನ್ನು ಮಾಡಬೇಕು.
ಬೇಕಾಗುವ ಸಾಮಗ್ರಿಗಳು
200 ಗ್ರಾಂ ಉದ್ದಿನ ಬೆಳೆ
20 ಗ್ರಾಂ ಮೆಂತ್ಯ,
50 ಗ್ರಾಂ ದಪ್ಪ ಅವಲಕ್ಕಿ
600 ಗ್ರಾಂ ದೋಸೆ ಅಕ್ಕಿ
ಮಾಡುವ ವಿಧಾನ ಹೀಗಿದೆ
ಮೊದಲಿಗೆ 200 ಗ್ರಾಂ ಉದ್ದಿನ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ.
ಅದರ ಮೇಲೆ 20 ಗ್ರಾಂ ಮೆಂತ್ಯ (ಗೋಲ್ಡನ್ ಕಲರ್ ಬರುವುದಕ್ಕಾಗಿ) ಹಾಕಿ
ಇದನ್ನು ಒಂದು ಸುತ್ತು ಸುತ್ತಿ. ನುಣ್ಣಗೆ ಆಗಬಾರದು. ತರಿತರಿಯಾಗಿ ಇರಬೇಕು. ಅದನ್ನು ತೆಗೆದು ಇಡಿ.
ಬಳಿಕ 50 ಗ್ರಾಂ ಅವಲಕ್ಕಿ ಮಿಕ್ಸಿಯಲ್ಲಿ ಹಾಕಿ.
600 ಗ್ರಾಂ ಇಡ್ಲಿ ಅಕ್ಕಿ ಸೇರಿಸಿ.
ಈಗಲೂ ನುಣ್ಣಗೆ ರುಬ್ಬಬಾರದು. ಮಿಕ್ಸಿಯ ಜಾರ್ ಬಿಸಿಯಾಗದಂತೆ ನೋಡಿಕೊಳ್ಳಿ. ತರಿತರಿಯಾಗಿ ಎಲ್ಲವನ್ನೂ ಸೇರಿ ರುಬ್ಬಿ. ರವೆಯ ರೀತಿಯಲ್ಲಿ ಇರಬೇಕು, ನುಣ್ಣಗೆ ಆಗಬಾರದು.
ಇದನ್ನು ಏರ್ಟೈಟ್ ಗಾಜಿನ ಬಾಟಲಿಯಲ್ಲಿ ಶೇಖರಿಸಿ ಇಡಿ. ಹೊರಗಡೆ ಇಟ್ಟರೆ ಮೂರು ತಿಂಗಳು, ಫ್ರಿಜ್ನಲ್ಲಿ ಇಟ್ಟರೆ ಆರು ತಿಂಗಳವರೆಗೆ ಇದನ್ನು ಶೇಖರಿಸಬಹುದು.
ದೋಸೆ ತಿನ್ನಬೇಕು ಎನ್ನಿಸಿದಾಗ, 3 ಕಪ್ ಈ ಮಿಕ್ಸಿಂಗ್ ಪೌಡರ್, ಒಂದು ಕಪ್ ಮಜ್ಜಿಗೆ ಮತ್ತು ಅರ್ಧ ಕಪ್ ನೀರು ಹಾಕಿ ಗಂಟು ಇಲ್ಲದಂತೆ ಮಿಕ್ಸ್ ಮಾಡಿ.
ತವೆಯ ಮೇಲೆ ನೀರು ಹಾಕಿ, ಒಣ ಬಟ್ಟೆಯಲ್ಲಿ ಒಂದು ಸಲ ಕೈಯಾಡಿಸಿ. ದೋಸೆ ಹಿಟ್ಟು ಹಾಕಿ, ಮೇಲಿನಿಂದ ಬೆಣ್ಣೆನೋ, ತುಪ್ಪನೋ, ಎಣ್ಣೆನೋ ಹಾಕಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.