ಲಾಕ್‌ಡೌನ್ ಸಂದರ್ಭದಲ್ಲಿ ಜನರು ಗೂಗಲ್‌ನಲ್ಲಿ ಅತಿ ಹೆಚ್ಚಾಗಿ ಹುಡುಕಿದ್ದು ಯಾವೆಲ್ಲ ರೆಸಿಪಿಗಳನ್ನು ಗೊತ್ತಾ? ಆ ಟಾಪ್ 10 ರೆಸಿಪಿಗಳು ಯಾವುವು ಇಲ್ಲಿವೆ ನೋಡಿ
ಅಂಗಡಿಮುಂಗಟ್ಟುಗಳು, ಹೋಟೆಲ್‌ಗಳೆಲ್ಲ ಮುಚ್ಚಿದ್ದ ಕಳೆದ ಕೆಲ ದಿನಗಳಲ್ಲಿ ಭಾರತೀಯರೆಲ್ಲ ನಾಲಿಗೆ ರುಚಿ ತಣಿಸಲು ತಾವೇ ಸ್ವತಃ ಮಾಸ್ಟರ್ ಶೆಫ್ ಹ್ಯಾಟ್ ಧರಿಸಿ ಅಡುಗೆ ಕೋಣೆಗೆ ಕಾಲಿರಿಸಿದ್ದು ಗೊತ್ತೇ ಇದೆ. ಜೀವನದ ಇಷ್ಟು ವರ್ಷಗಳಲ್ಲಿ ಮಾಡದ ರೆಸಿಪಿಗಳನ್ನೆಲ್ಲ ಮಾಡಿ ಸ್ಟೇಟಸ್‌ಗೆ ಹಾಕಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಯುವಕಯುವತಿಯರು. ಐಸ್ ಕ್ರೀಂ, ಕೇಕ್, ಸ್ಟ್ರೀಟ್ ಫುಡ್, ಚಾಟ್ಸ್ ಎಲ್ಲವೂ ಮನೆಯಲ್ಲೇ ತಯಾರಾಗುತ್ತಿವೆ.
ಹೀಗೆ ಹೊಸ ರುಚಿಗಳನ್ನು ತಯಾರಿಸಲು ರೆಸಿಪಿಗಾಗಿ ಗೂಗಲನ್ನು ನೋಡುವವರು ಹಲವರು. ಗೂಗಲ್ ಟ್ರೆಂಡ್ಸ್ ರಿಪೋರ್ಟ್ ನೋಡಿದರೆ ಹಿಂದೆಂದೂ ಇಲ್ಲದಷ್ಟು ರೆಸಿಪಿ ಸಂಬಂಧಿ ಹುಡುಕಾಟ ಇದೇ ಮೊದಲ ಬಾರಿಗೆ ದಾಖಲಾಗಿದೆ. ಅದರಲ್ಲೂ ಭಾನುವಾರ- ಏಪ್ರಿಲ್ 19ರಂದು ದಾಕಲೆ ಮಟ್ಟದ ರೆಸಿಪಿ ಹುಡುಕಾಟ ಭಾರತದಲ್ಲಿ ನಡೆದಿದೆಯಂತೆ.
ಹೀಗೆ ಜನರು ಗೂಗಲ್‌ನಲ್ಲಿ ಅತಿ ಹೆಚ್ಚಾಗಿ ಹುಡುಕಿದ್ದು ಯಾವೆಲ್ಲ ರೆಸಿಪಿಗಳನ್ನು ಗೊತ್ತಾ? ಆ ಟಾಪ್ 10 ರೆಸಿಪಿಗಳು ಯಾವುವು ಇಲ್ಲಿವೆ ನೋಡಿ.
1. ಡಾಲ್ಗೋನಾ ಕಾಫಿ
ಇತ್ತೀಚೆಗೆ ಸೋಷ್ಯಲ್ ಮೀಡಿಯಾದಲ್ಲೂ ಸೆನ್ಸೇಶನ್ ಮಾಡಿ ಡಾಲ್ಗೋನಾ ಕಾಫಿ ಮಾಡದವನೇ ಪಾಪಿ ಎಂಬಂತಾಗಿ ಹೋಗಿತ್ತು. ಎಲ್ಲರೂ ತಾವು ಮಾಡಿದ ಡಾಲ್ಗೋನಾ ಕಾಫಿಯ ಫೋಟೋ ಹಾಕುವವರೇ. ಹೀಗೆ ಫೋಟೋ ಹಾಕಲೆಂದೇ ಡಾಲ್ಗೋನಾ ಟ್ರೈ ಮಾಡಿದವರು ಹಲವರು. ಈ ಕೊರಿಯನ್ ಡ್ರಿಂಕನ್ನು ಭಾರತೀಯರು ಎಷ್ಟು ಹುಡುಕಾಡಿದ್ದಾರೆಂದರೆ, ಲಾಕ್‌ಡೌನ್ ಸಂದರ್ಭದಲ್ಲಿ ಇದರ ರೆಸಿಪಿ ಹುಡುಕಾಟದ ಸಂಖ್ಯೆ ಉಳಿದೆಲ್ಲ ಸಂದರ್ಭಗಳಿಗಿಂತ ಶೇ.5000ದಷ್ಟು ಏರಿಕೆ ಕಂಡಿತ್ತು.
2. ಚಿಕನ್ ಮೋಮೋಸ್
ರೆಸ್ಟೋರೆಂಟ್‌ಗಳು ಮುಚ್ಚಿದ್ದರಿಂದ ಚಿಕನ್ ಮೋಮೋಸ್ ಮಿಸ್ ಮಾಡಿಕೊಂಡವರು ಹಲವರು. ಅದಿಲ್ಲದೆ ಬಹಳ ಕಾಲ ಇರಲಾರೆವು ಎಂಬುದನ್ನು ಭಾರತೀಯರು ತೋರಿಸಿಕೊಟ್ಟಿದ್ದಾರೆ. ಗೂಗಲ್ ಸರ್ಚ್‌ನಲ್ಲಿ ಚಿಕನ್ ಮೋಮೋಸ್ ರೆಸಿಪಿ ಹುಡುಕಾಟ 4350 ಪ್ರತಿಶತ ಏರಿಕೆ ಕಂಡಿದೆ.
3. ಮ್ಯಾಂಗೋ ಐಸ್ ಕ್ರೀಂ
ಮಾವಿನ ಹಣ್ಣಿನ ಸೀಸನ್‌ನಲ್ಲಿ ಮಾವಿನ ಹಣ್ಣಿನ ರೆಸಿಪಿಗಳಿಲ್ಲದಿದ್ದರೆ ಹೇಗೆ? ಅದರಲ್ಲೂ ಬೇಸಿಗೆಯ ಧಗೆ ಭಗಭಗ ಎಂದು ಸುಡುವಾಗ ಐಸ್ ಕ್ರೀಂ ತಿನ್ನುವ ಬಯಕೆ ಹತ್ತಿಕ್ಕುವುದಾದರೂ ಹೇಗೆ? ಈ ಎರಡನ್ನೂ ಸೇರಿಸಿ ಮ್ಯಾಂಗೋ ಐಸ್ ಕ್ರೀಂ ಮಾಡಿ ತಿಂದು ಸಮಾಧಾನ ಪಟ್ಟುಕೊಂಡಿದ್ದಾರೆ ಭಾರತೀಯರು. ಮ್ಯಾಂಗೋ ಐಸ್ ಕ್ರೀಂ ರೆಸಿಪಿಯ ಹುಡುಕಾಟ ಕಳೆದ ತಿಂಗಳು ಶೇ. 3250ರಷ್ಟು ಹೆಚ್ಚಾಗಿತ್ತು.
4. ಕೇಕ್
ಲಾಕ್‌ಡೌನ್ ಎಂದ ಮಾತ್ರಕ್ಕೆ ಮನೆಸದಸ್ಯರ ಬರ್ತ್‌ಡೇ, ವಿವಾಹ ವಾರ್ಷಿಕೋತ್ಸವ ಇತ್ಯಾದಿ ವಿಶೇಷ ದಿನಗಳು ನಿಂತು ಹೋಗುವುದಿಲ್ಲವಲ್ಲ... ಅಂಥ ದಿನಗಳಲ್ಲಿ ಕೇಕ್ ಇಲ್ಲದಿದ್ದರೆ ಅದು ವಿಶೇಷವೆನಿಸುವುದಾದರೂ ಹೇಗೆ? ಹೊರಗಿನಿಂದ ಕೇಕ್ ತರಲು ಅವಕಾಶವಿಲ್ಲದ ಈ ದಿನಗಳಲ್ಲಿ ಮನೆಯಲ್ಲೇ ಕೇಕ್ ತಯಾರಿಸಿ ಸಂಭ್ರಮಿಸಿದವರ ಸಂಖ್ಯೆ ಬಹಳ. ಇದಕ್ಕಾಗಿ ಜನರ ಸಹಾಯಕ್ಕೊದಗಿದ್ದು ಮತ್ತದೇ ಗೂಗಲ್.
5. ಸಮೋಸಾ
ಬೀದಿ ಬದಿ ಅಂಗಡಿಗಳು, ಬೇಕರಿ ಕ್ಲೋಸ್ ಆಗಿರುವಾಗ, ಹೊರಗೆ ತಿನ್ನುವ ಭಯ ದುಪ್ಪಟ್ಟಾಗಿರುವಾಗ ಸಮೋಸಾವನ್ನು ಮಿಸ್ ಮಾಡಿಕೊಂಡವರು ಬಹಳ ಮಂದಿ. ಕಡೆಗೆ ತಿನ್ನದೆ ಇರಲಾರದೆ, ಮನೆಯಲ್ಲೇ ಮಾಡಿ ತಿಂದರೆ ಹೇಗೆ ಎಂಬ ಐಡಿಯಾ ಹೊಳೆದಿದ್ದೇ, ಗೂಗಲ್‌ನಲ್ಲಿ ರೆಸಿಪಿ ಹುಡುಕಾಡಿ ಸಮೋಸಾ ತಯಾರಿಸಿದ್ದಾರೆ.
6. ಜಿಲೇಬಿ
ಆಗ ತಾನೇ ತಯಾರಿಸಿದ ಬಿಸಿ ಬಿಸಿ ಜಿಲೇಬಿ ಎಂಥವರಿಗಾದರೂ ಬಾಯಲ್ಲಿ ನೀರೂರಿಸೀತು. ಇದನ್ನು ಯಾವುದರಿಂದ ತಯಾರಿಸುತ್ತಾರೆ ಎಂಬುದು ಕೂಡಾ ಗೊತ್ತಿಲ್ಲದವರೆಲ್ಲ ಲಾಕ್‌ಡೌನ್ ಟೈಮಲ್ಲಿ ಜಿಲೇಬಿ ತಯಾರಿಸಿ ಸಂತಸ ಪಟ್ಟರು.
7. ಧೋಕ್ಲಾ
ಈ ಗುಜರಾತಿ ಉಪಹಾರದ ಮಜವೆಂದರೆ ಇದನ್ನು ದಿನದಸಯಾವ ಹೊತ್ತಿನಲ್ಲಿ ಬೇಕಾದರೂ ತಿನ್ನಬಹುದು. ಆರೋಗ್ಯಕಾರಿ ಕೂಡಾ. ಹಾಗಾಗಿಯೇ ಇದು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ರೆಸಿಪಿಗಳಲ್ಲಿ ಸ್ಥಾನ ಪಡೆದಿದೆ.
8. ಪಾನಿಪುರಿ
ಲಾಕ್‌ಡೌನ್ ಎಂದ ಕೂಡಲೇ ಬಹುತೇಕರು ಮೊದಲು ಮಿಸ್ ಮಾಡಿಕೊಂಡಿದ್ದೇ ಪಾನಿಪೂರಿಯನ್ನು. ಸಂಜೆಯಾದರೆ ಸಾಕು ಪಾನಿಪೂರಿ ತಿನ್ನುವ ಬಯಕೆ ಹೆಚ್ಚಾಗುವುದನ್ನು ತಡೆಯಲಾಗದೆ ಕಡೆಗೆ, ಅದನ್ನು ಮಾಡುವ ವಿಧಾನ ತಡಕಾಡಿ, ಅಂತೂ ಪಾನಿಪುರಿಯನ್ನು ಸವಿದು ಸಮಾಧಾನ ಪಟ್ಟವರನೇಕ.
9. ದೋಸೆ
ಬೆಳಗಿನ ತಿಂಡಿಗೆ ಅತ್ಯುತ್ತಮ ಆಯ್ಕೆ ಎಂದರೆ ದೋಸೆಯೇ. ಮಕ್ಕಳು, ಮೊಮ್ಮಕ್ಕಳೆಲ್ಲ ಮನೆಯಲ್ಲೇ ಇರಬೇಕಾದರೆ ಅದನ್ನು ಮಸಾಲೆ ದೋಸೆಯ ಮಟ್ಟಕ್ಕೇರಿಸಿ ಕಣ್ಣಿಗೂ, ನಾಲಿಗೆಗೂ ಹಿತವಾಗಿಸಲು ಬಹಳಷ್ಟು ತಾಯಂದಿರು ಗೂಗಲ್ ಸಹಾಯ ಪಡೆದಿದ್ದಾರೆ.
10. ಪನೀರ್
ನಗರಗಳಲ್ಲಿ ಪನೀರ್ ಹಾಗೂ ಪನೀರ್ ಸಂಬಂಧಿ ರೆಸಿಪಿಗಳು ಬಹಳ ಜನಪ್ರಿಯ. ಹಾಗಾಗಿಯೇ ಹೊರಗೆ ಏನೂ ಸಿಗುವುದಿಲ್ಲವೆಂದಾಗ ಜನರು ಮನೆಯಲ್ಲೇ ಪನೀರ್ ತಯಾರಿಸುವ ವಿಧಾನ ನೋಡಿ ಮಾಡಿ ನಲಿದಿದ್ದಾರೆ.