ಬೆಂಗಳೂರಿನ ಪ್ರಸಿದ್ಧ ಮಿಲಿಟರಿ ಹೋಟೆಲ್ ಶೈಲಿಯ ಮಶ್ರೂಮ್ ದೊನ್ನೆ ಬಿರಿಯಾನಿ ಈಗ ಮನೆಯಲ್ಲೇ ಮಾಡಿ

Published : Sep 18, 2026, 09:41 PM IST
Mushroom donne biryani recipe

ಸಾರಾಂಶ

Mushroom donne biryani recipe: ಸದಾ ಅದೇ ಚಿಕನ್, ಮಟನ್ ಬಿರಿಯಾನಿ ತಿಂದು ಬೋರ್ ಆಗಿದ್ದರೆ, ಈ ಬಾರಿ ನಾನ್‌ವೆಜ್‌ ಮೀರಿಸುವಂತಹ ಟೇಸ್ಟಿ 'ಮಶ್ರೂಮ್ ದೊನ್ನೆ ಬಿರಿಯಾನಿ' ಟ್ರೈ ಮಾಡಿ ನೋಡಿ. ಜೀರಿಗೆ ಸಾಂಬಾ ಅಕ್ಕಿಯ ಸುವಾಸನೆ ಮತ್ತು ಹಸಿರು ಮಸಾಲೆಯ ಘಮವಿರುವ ಈ ಬೆಂಗಳೂರು ಮಿಲಿಟರಿ ಹೋಟೆಲ್ ಶೈಲಿಯ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.

ಬಿರಿಯಾನಿ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಚಿಕನ್ ಅಥವಾ ಮಟನ್ ಬಿರಿಯಾನಿ. ಆದರೆ ಸದಾ ಅದೇ ಮಾಂಸಾಹಾರಿ ಬಿರಿಯಾನಿ ತಿಂದು ಬೋರ್ ಆಗಿದ್ದರೆ ಅಥವಾ ಶುದ್ಧ ಸಸ್ಯಾಹಾರಿಗಳಿಗೆ ನಾನ್‌ವೆಜ್ ಬಿರಿಯಾನಿಯನ್ನೇ ಮೀರಿಸುವಂತಹ ಟೇಸ್ಟ್ ಬೇಕಿದ್ದರೆ ಈ ಬಾರಿ ಘಮಘಮಿಸುವ ‘ಮಶ್ರೂಮ್ ದೊನ್ನೆ ಬಿರಿಯಾನಿ’ (Mushroom Donne Biryani) ಟ್ರೈ ಮಾಡಿ ನೋಡಿ.

ಬೆಂಗಳೂರಿನ ಪ್ರಸಿದ್ಧ ಮಿಲಿಟರಿ ಹೋಟೆಲ್ ಶೈಲಿಯಲ್ಲಿ, ಜೀರಿಗೆ ಸಾಂಬಾ ಅಕ್ಕಿ ಮತ್ತು ಅಣಬೆ (ಮಶ್ರೂಮ್) ಬಳಸಿ ಮಾಡುವ ಈ ಬಿರಿಯಾನಿ ರುಚಿಗೆ ಮಕ್ಕಳು ಮಾತ್ರವಲ್ಲ, ದೊಡ್ಡವರೂ ಫಿದಾ ಆಗುತ್ತಾರೆ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ..

ಬೇಕಾಗುವ ಸಾಮಗ್ರಿಗಳು

ಜೀರಿಗೆ ಸಾಂಬಾ ಅಕ್ಕಿ (Jeera Samba Rice) – 1 ಕಪ್
ಅಣಬೆ (ಮಶ್ರೂಮ್) – 200 ಗ್ರಾಂ
ಗಟ್ಟಿ ಮೊಸರು – ಕಾಲು ಕಪ್
ಅಚ್ಚ ಖಾರದ ಪುಡಿ – ಅರ್ಧ ಚಮಚ
ಅರಿಶಿನ ಪುಡಿ – ಕಾಲು ಚಮಚ
ಧನಿಯಾ ಪುಡಿ – ಅರ್ಧ ಚಮಚ
ಅಡುಗೆ ಎಣ್ಣೆ ಮತ್ತು ತುಪ್ಪ – ತಲಾ 2 ಚಮಚ
ನೀರು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು

ರುಬ್ಬಿಕೊಳ್ಳಲು ಹಸಿರು ಮಸಾಲೆಗೆ

ಲವಂಗ – 2
ಚಕ್ಕೆ – 1 ಇಂಚು
ಕಾಳುಮೆಣಸು – ಕಾಲು ಚಮಚ
ಹಸಿರು ಮೆಣಸಿನಕಾಯಿ – 2 ರಿಂದ 3
ಹೆಚ್ಚಿದ ಈರುಳ್ಳಿ – ಅರ್ಧ ಕಪ್
ಬೆಳ್ಳುಳ್ಳಿ ಎಸಳು – 5 ರಿಂದ 6
ಶುಂಠಿ – ಸಣ್ಣ ತುಂಡು
ಕೊತ್ತಂಬರಿ ಸೊಪ್ಪು – 1 ಕಪ್
ಪುದೀನಾ ಸೊಪ್ಪು – 1 ಕಪ್
ಜೀರಿಗೆ – ಅರ್ಧ ಚಮಚ

ಒಗ್ಗರಣೆಗೆ

ಏಲಕ್ಕಿ, ಮರಾಠಿ ಮೊಗ್ಗು, ಪಲಾವ್ ಎಲೆ
ಉದ್ದಕ್ಕೆ ಹೆಚ್ಚಿದ ಈರುಳ್ಳಿ – ಅರ್ಧ ಕಪ್

ಮಾಡುವ ಸರಳ ವಿಧಾನ

ನೆನೆಯಲು ಬಿಡಿ

*ಜೀರಿಗೆ ಸಾಂಬಾ ಅಕ್ಕಿಯನ್ನು ಎರಡು ಬಾರಿ ತೊಳೆದು, ಕೇವಲ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
*ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.
*ಒಂದು ಬಟ್ಟಲಿನಲ್ಲಿ ಮಶ್ರೂಮ್ ತುಂಡುಗಳು, ಮೊಸರು, ಅರಿಶಿನ, ಖಾರದ ಪುಡಿ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಬೆರೆಸಿ 10 ನಿಮಿಷಗಳ ಕಾಲ ಮ್ಯಾರಿನೇಟ್ (Marinate) ಆಗಲು ಬಿಡಿ.

ಹಸಿರು ಮಸಾಲೆ ಪೇಸ್ಟ್
*ಬಾಣಲೆಯಲ್ಲಿ 1 ಚಮಚ ಎಣ್ಣೆ ಕಾಯಿಸಿ ಲವಂಗ, ಚಕ್ಕೆ, ಕಾಳು ಮೆಣಸು, ಹಸಿಮೆಣಸು, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
*ನಂತರ ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಹಾಕಿ ಕೆಲವೇ ಸೆಕೆಂಡು ಬಾಡಿಸಿ ಗ್ಯಾಸ್ ಆಫ್ ಮಾಡಿ.
*ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಈಗ ಬಿರಿಯಾನಿ ಮಾಡಲು ಶುರು ಮಾಡಿ

*ದಪ್ಪ ತಳದ ಪಾತ್ರೆ ಅಥವಾ ಕುಕ್ಕರ್‌ನಲ್ಲಿ ಎಣ್ಣೆ ಮತ್ತು 1 ಚಮಚ ತುಪ್ಪ ಕಾಯಿಸಿ.
*ಇದಕ್ಕೆ ಪಲಾವ್ ಎಲೆ, ಏಲಕ್ಕಿ, ಮರಾಠಿ ಮೊಗ್ಗು ಹಾಕಿ, ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
*ಈಗ ರುಬ್ಬಿದ ಹಸಿರು ಮಸಾಲೆ ಪೇಸ್ಟ್ ಮತ್ತು ಮ್ಯಾರಿನೇಟ್ ಮಾಡಿದ ಮಶ್ರೂಮ್ ಹಾಕಿ ಎಣ್ಣೆ ಬಿಡುವವರೆಗೆ 2-3 ನಿಮಿಷ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.

ದಮ್ ಕಟ್ಟಿ

*ಇದಕ್ಕೆ 2 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ.
*ನೀರು ಕುದಿಯುತ್ತಿದ್ದಂತೆ, ನೆನೆಸಿದ ಜೀರಿಗೆ ಸಾಂಬಾ ಅಕ್ಕಿ ಹಾಕಿ ಲಘುವಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.
*ನಂತರ ಮುಚ್ಚಳ ತೆಗೆದು ಮೇಲೆ 1 ಚಮಚ ತುಪ್ಪ ಹಾಕಿ ಅಕ್ಕಿ ಮುರಿಯದಂತೆ ನಿಧಾನವಾಗಿ ಕಲಸಿ.
*ಈಗ ಉರಿಯನ್ನು ಸಂಪೂರ್ಣ ಸಿಮ್ (ಲೋ ಫ್ಲೇಮ್) ಮಾಡಿ, ಮುಚ್ಚಳ ಮುಚ್ಚಿ ಅದರ ಮೇಲೆ ತೂಕವಾದ ವಸ್ತುವನ್ನಿಟ್ಟು (ಅಥವಾ ಭಾರವಾದ ನೀರಿನ ಪಾತ್ರೆ ಇಟ್ಟು) 15 ನಿಮಿಷಗಳ ಕಾಲ 'ದಮ್' (Dum) ಕಟ್ಟಿ.

15 ನಿಮಿಷದ ನಂತರ ಗ್ಯಾಸ್ ಆಫ್ ಮಾಡಿ, 10 ನಿಮಿಷ ಹಾಗೆಯೇ ಬಿಟ್ಟು ನಂತರ ತೆರೆಯಿರಿ.

ಘಮಘಮಿಸುವ ಮಿಲಿಟರಿ ಹೋಟೆಲ್ ಸ್ಟೈಲ್ ಮಶ್ರೂಮ್ ದೊನ್ನೆ ಬಿರಿಯಾನಿ ರೆಡಿ! ಇದನ್ನು ಈರುಳ್ಳಿ ರಾಯತಾದೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Gut cleanse foods: ಕರುಳಿನಲ್ಲಿ ಶೇಖರಣೆಯಾದ ಹಳೇ ಕೊಳೆಯನ್ನು ಹೊರಹಾಕುವ 10 ಸೂಪರ್ ಆಹಾರಗಳಿವು!
ಮೊಟ್ಟೆ 100% ಸಸ್ಯಾಹಾರಿಯೇ? ಮೊಟ್ಟೆ ತಿನ್ನುವವರು ಈ ಸತ್ಯ ತಿಳಿದಿರಲೇಬೇಕು