ಹವಾಮಾನ ಬದಲಾಗುತ್ತಲೇ ಇದೆ. ಏನಾದರೂ ಹಗುರವಾದ, ಬಾಯಿಗೆ ರುಚಿ ಎನಿಸುವ ತಿಂಡಿ ತಿನ್ನಬೇಕೆನಿಸಿದರೆ ಮಸಾಲ ದೋಸೆ ಟ್ರೈ ಮಾಡಿ. ಹೋಟೆಲ್‌ನಲ್ಲಿ ಸಿಗುವಂತೆಯೇ ಕಾಗದದಂತೆ ತೆಳುವಾದ ಮತ್ತು ಗರಿಗರಿಯಾದ ದೋಸೆಯನ್ನು ಮನೆಯಲ್ಲೇ ತಯಾರಿಸಲು ದೋಸೆ ತಜ್ಞರೊಬ್ಬರು ಕೆಲವು ರಹಸ್ಯ ಟಿಪ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಸರಿಯಾದ ಹಿಟ್ಟು, ಹಂಚಿನ ತಾಪಮಾನ ಮತ್ತು ಮಸಾಲೆಗಳ ಸಮತೋಲನವೇ ಈ ರುಚಿಯ ಗುಟ್ಟು.
ಹೋಟೆಲ್ ಶೈಲಿಯ ದೋಸೆ ಮಾಡಲು ಸರಿಯಾದ ಹಿಟ್ಟು ತಯಾರಿಸುವುದು ಬಹಳ ಮುಖ್ಯ. ಮೊದಲು ಅಕ್ಕಿಯನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ ನುಣ್ಣಗೆ ರುಬ್ಬಿಕೊಳ್ಳಬೇಕು. ತಜ್ಞರ ಪ್ರಕಾರ, ಹಿಟ್ಟಿಗೆ ಈ ಎರಡು ಪದಾರ್ಥಗಳನ್ನು ಬೆರೆಸುವುದು ಅಸಲಿ ರಹಸ್ಯ.
ರವೆ (Semolina/Suji): ಹಿಟ್ಟಿಗೆ ಅಲ್ಪ ಪ್ರಮಾಣದ ರವೆಯನ್ನು ಬೆರೆಸುವುದರಿಂದ ದೋಸೆ ಹೋಟೆಲ್‌ನಲ್ಲಿ ಸಿಗುವಂತೆ ಅತೀ ಹೆಚ್ಚು ಗರಿಗರಿಯಾಗಿ (Crispy) ಬರುತ್ತದೆ. ದೋಸೆ ಹಾಕುವ 20 ನಿಮಿಷ ಮೊದಲು ರವೆ ಸೇರಿಸಿ ಕಲಕಿ. ಹಿಟ್ಟು ಸ್ವಲ್ಪ ಗಟ್ಟಿಯಾದರೆ ತಕ್ಕಮಟ್ಟಿಗೆ ಸ್ವಲ್ಪ ನೀರು ಸೇರಿಸಿ ಹದ ಮಾಡಿಕೊಳ್ಳಿ.
ಸಕ್ಕರೆ (Sugar): ಸುಮಾರು 100 ದೋಸೆಗಳ ಹಿಟ್ಟಿಗೆ 100 ಗ್ರಾಂನಷ್ಟು ಸಕ್ಕರೆ ಬಳಸಲಾಗುತ್ತದೆ. ಇದು ದೋಸೆಗೆ ಅದ್ಭುತವಾದ ಕೆಂಪು-ಕಂದು ಬಣ್ಣವನ್ನು (Golden Brown) ನೀಡುತ್ತದೆ ಮತ್ತು ರುಚಿಯನ್ನು ಸಮತೋಲನಗೊಳಿಸುತ್ತದೆ. ದೋಸೆ ಹಾಕುವ ಮೊದಲು 5 ರಿಂದ 10 ನಿಮಿಷಗಳ ಮೊದಲು ಉಪ್ಪು ಮತ್ತು ಸಕ್ಕರೆ ಸೇರಿಸಿ ದೋಸೆ ಹಾಕಿ.
ದೋಸೆ ಹಂಚನ್ನು ಮೊದಲು ಚೆನ್ನಾಗಿ ಕಾಯಿಸಬೇಕು. ಹಂಚಿನ ಮೇಲೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಹಚ್ಚಿ, ನಂತರ ದೋಸೆ ಹಿಟ್ಟನ್ನು ಹಾಕಿ ವೃತ್ತಾಕಾರವಾಗಿ ತೆಳುವಾಗಿ ಹರಡಬೇಕು.
ದೋಸೆ ಬೇಯುವಾಗ ಅದರ ಮೇಲೆ ಒಂದು ಚಮಚ ದೇಸಿ ತುಪ್ಪವನ್ನು ಹಾಕುವುದರಿಂದ ಅದರ ರುಚಿ ಮತ್ತು ಘಮ ದ್ವಿಗುಣಗೊಳ್ಳುತ್ತದೆ.
ದೋಸೆ ಪೂರ್ತಿ ಬೆಂದ ನಂತರ, ಮಧ್ಯದಲ್ಲಿ ಅರಿಶಿನ, ಜೀರಿಗೆ ಪುಡಿ ಮತ್ತು ಮಸಾಲೆಗಳಿಂದ ತಯಾರಿಸಿದ ಆಲೂಗಡ್ಡೆ ಪಲ್ಯವನ್ನು ಇಡಿ.
ನಿಮಗೆ 'ಸ್ಪೆಷಲ್ ಮಸಾಲ ದೋಸೆ' ಬೇಕೆಂದರೆ, ಆಲೂಗಡ್ಡೆ ಮಸಾಲೆಯ ಮೇಲೆ ಸ್ವಲ್ಪ ಹುರಿದ ಪನೀರ್ ತುಂಡುಗಳನ್ನು ಸೇರಿಸಬಹುದು. ಕೊನೆಯಲ್ಲಿ ಹಸಿ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿದರೆ ಹೋಟೆಲ್ ಫೀಲ್ ಬರುತ್ತದೆ.
ಗರಿಗರಿಯಾದ ಈ ಮಸಾಲ ದೋಸೆಯನ್ನು ತಾಜಾ ತೆಂಗಿನಕಾಯಿ ಚಟ್ನಿ, ಈರುಳ್ಳಿ ಮತ್ತು ಉಪ್ಪಿನಕಾಯಿಯೊಂದಿಗೆ ಬಡಿಸಿದರೆ ರುಚಿ ಅಮೋಘವಾಗಿರುತ್ತದೆ. ಹೋಟೆಲ್ ದೋಸೆ ಮತ್ತು ಮನೆಯ ದೋಸೆಗಿರುವ ಮುಖ್ಯ ವ್ಯತ್ಯಾಸವೇ ಹಿಟ್ಟಿನ ಹದ ಮತ್ತು ಹಂಚಿನ ಉಷ್ಣತೆ. ಈ ಟಿಪ್ಸ್ ಅನುಸರಿಸಿದರೆ ನೀವು ಮನೆಯಲ್ಲೇ ರೆಸ್ಟೋರೆಂಟ್ ಗುಣಮಟ್ಟದ ದೋಸೆ ತಯಾರಿಸಬಹುದು.
*ಅಕ್ಕಿ ಮತ್ತು ಉದ್ದಿನಬೇಳೆ ನೆನೆಸುವಾಗ ಅದಕ್ಕೆ ಒಂದು ಟೀಸ್ಪೂನ್ ಮೆಂತ್ಯ ಕಾಳುಗಳನ್ನು ಸೇರಿಸಿ. ಮೆಂತ್ಯವು ದೋಸೆಗೆ ಒಳ್ಳೆಯ ಸುವಾಸನೆ ನೀಡುವುದಲ್ಲದೆ, ದೋಸೆ ಹಂಚಿನಿಂದ ಸುಲಭವಾಗಿ ಏಳಲು ಮತ್ತು ದೋಸೆಗೆ ಸುಂದರವಾದ ಕೆಂಪು ಬಣ್ಣ ಬರಲು ಸಹಾಯ ಮಾಡುತ್ತದೆ.
*ಪ್ರತಿ ದೋಸೆ ಹಾಕುವ ಮೊದಲು ಹಂಚಿನ ಮೇಲೆ ಸ್ವಲ್ಪ ನೀರು ಸಿಂಪಡಿಸಿ ನಂತರ ಬಟ್ಟೆಯಿಂದ ಒರೆಸಿ. ಇದು ಹಂಚಿನ ಅತಿಯಾದ ತಾಪಮಾನವನ್ನು ಕಡಿಮೆ ಮಾಡುತ್ತದೆ, ಇದರಿಂದ ನೀವು ಹಿಟ್ಟನ್ನು ತೆಳುವಾಗಿ ಮತ್ತು ಸಮನಾಗಿ ಹರಡಲು ಸಾಧ್ಯವಾಗುತ್ತದೆ. ಹಂಚು ಅತೀ ಹೆಚ್ಚು ಕಾದಿದ್ದರೆ ಹಿಟ್ಟು ಸೌಟಿಗೆ ಅಂಟಿಕೊಳ್ಳುತ್ತದೆ.
*ನಿಮ್ಮ ದೋಸೆ ಹಂಚಿಗೆ ಅಂಟಿಕೊಳ್ಳುತ್ತಿದ್ದರೆ, ದೋಸೆ ಹಾಕುವ ಮೊದಲು ಅರ್ಧ ಕತ್ತರಿಸಿದ ಈರುಳ್ಳಿಯನ್ನು ಎಣ್ಣೆಯಲ್ಲಿ ಅದ್ದಿ ಹಂಚಿನ ಮೇಲೆ ಚೆನ್ನಾಗಿ ಉಜ್ಜಿ. ಇದು ಹಂಚನ್ನು ನೈಸರ್ಗಿಕವಾಗಿ 'ನಾನ್-ಸ್ಟಿಕ್' ಮಾಡುತ್ತದೆ ಮತ್ತು ದೋಸೆ ಗರಿಗರಿಯಾಗಿ ಬರುತ್ತದೆ.
*ಹಿಟ್ಟನ್ನು ಮಿಕ್ಸಿಯಲ್ಲಿ ರುಬ್ಬುವಾಗ ಅದು ಬಿಸಿಯಾಗಬಾರದು. ಹಿಟ್ಟು ಬಿಸಿಯಾದರೆ ದೋಸೆ ಅಷ್ಟು ಮೃದು ಅಥವಾ ಗರಿಗರಿಯಾಗಿ ಬರುವುದಿಲ್ಲ. ಆದ್ದರಿಂದ ರುಬ್ಬುವಾಗ ಸಾಧ್ಯವಾದಷ್ಟು ತಣ್ಣೀರು ಬಳಸಿ.
*ದೋಸೆ ಹಿಟ್ಟು ಸರಿಯಾಗಿ ಹುದುಗುವುದು (ಕನಿಷ್ಠ 8-10 ಗಂಟೆ) ಬಹಳ ಮುಖ್ಯ. ಚಳಿಗಾಲವಿದ್ದರೆ ಹಿಟ್ಟಿನ ಪಾತ್ರೆಯನ್ನು ಬೆಚ್ಚಗಿನ ಜಾಗದಲ್ಲಿ ಇರಿಸಿ. ಹಿಟ್ಟು ಸರಿಯಾಗಿ ಉಬ್ಬಿ ಬಂದರೆ ದೋಸೆಯಲ್ಲಿ ಸಣ್ಣ ಸಣ್ಣ ರಂಧ್ರಗಳು ಮೂಡಿ, ಹೋಟೆಲ್ ದೋಸೆಯಂತೆ ರುಚಿ ನೀಡುತ್ತದೆ.
ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಮನೆಯ ದೋಸೆಯೂ ಹೋಟೆಲ್ ದೋಸೆಗಿಂತಲೂ ರುಚಿಯಾಗುವುದರಲ್ಲಿ ಸಂಶಯವಿಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.