
ಹಲಸಿನಕಾಯಿ ಉಪ್ಪಿನಕಾಯಿ ಹೆಸರು ಕೇಳಿದ್ರೆ ಸಾಕು, ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತವೆ. ಅಜ್ಜಿ-ಅಮ್ಮ ಬೇಸಿಗೆಯಲ್ಲಿ ಮಸಾಲೆಭರಿತ ಉಪ್ಪಿನಕಾಯಿ ಮಾಡಿ, ದೊಡ್ಡ ಜಾಡಿಯಲ್ಲಿ ತುಂಬಿಡುತ್ತಿದ್ದ ಕಾಲ ನೆನಪಾಗುತ್ತೆ ಅಲ್ವಾ? ಅದರ ಪರಿಮಳ, ರುಚಿಯೇ ಬೇರೆ. ಅದೇ ಹಳೇ ದೇಸಿ ರುಚಿಯನ್ನು ನೀವು ಮತ್ತೆ ಸವಿಯಬೇಕು ಅನ್ಕೊಂಡಿದ್ರೆ, ಮನೆಯಲ್ಲೇ ಸುಲಭವಾಗಿ ಹಲಸಿನಕಾಯಿ ಉಪ್ಪಿನಕಾಯಿ ಮಾಡಬಹುದು. ಸರಿಯಾದ ಮಸಾಲೆ ಮತ್ತು ಬಿಸಿಲಿನಲ್ಲಿ ಒಣಗಿಸಿದರೆ ಈ ಉಪ್ಪಿನಕಾಯಿ ಹೆಚ್ಚು ದಿನಗಳ ಕಾಲ ರುಚಿಯಾಗಿರುತ್ತದೆ.
ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು
* 500 ಗ್ರಾಂ ಎಳೆ ಹಲಸಿನಕಾಯಿ
* 3 ದೊಡ್ಡ ಚಮಚ ಸಾಸಿವೆ ಎಣ್ಣೆ
* 2 ದೊಡ್ಡ ಚಮಚ ಹಳದಿ ಸಾಸಿವೆ ಪುಡಿ
* 1 ದೊಡ್ಡ ಚಮಚ ಸೋಂಪು (ಬಡೇಸೊಪ್ಪು)
* 1 ಚಿಕ್ಕ ಚಮಚ ಮೆಂತ್ಯ
* 1 ಚಿಕ್ಕ ಚಮಚ ಕಲೋಂಜಿ (ಕಪ್ಪು ಜೀರಿಗೆ)
* 1 ಚಿಕ್ಕ ಚಮಚ ಅರಿಶಿನ ಪುಡಿ
* 1 ದೊಡ್ಡ ಚಮಚ ಖಾರದ ಪುಡಿ
* 1 ಚಿಕ್ಕ ಚಮಚ ಇಂಗು
* 2 ದೊಡ್ಡ ಚಮಚ ಉಪ್ಪು
* 2 ದೊಡ್ಡ ಚಮಚ ನಿಂಬೆರಸ
* 1/2 ಚಿಕ್ಕ ಚಮಚ ಅಜ್ವೈನ್ (ಓಂಕಾಳು)
ಹಂತ 1: ಹಲಸಿನಕಾಯಿ ಸಿದ್ಧಪಡಿಸಿಕೊಳ್ಳಿ
ಮೊದಲು, ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಹಲಸಿನಕಾಯಿ ಸಿಪ್ಪೆ ತೆಗೆಯಿರಿ. ಇದರಿಂದ ಅದರ ಅಂಟು ಕೈಗೆ ತಗಲುವುದಿಲ್ಲ. ನಂತರ, ಹಲಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಬೀಜಗಳನ್ನು ತೆಗೆಯಿರಿ. ಆಮೇಲೆ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಈ ತುಂಡುಗಳನ್ನು 5 ರಿಂದ 7 ನಿಮಿಷಗಳ ಕಾಲ ಸ್ವಲ್ಪ ಬೇಯಿಸಿಕೊಳ್ಳಿ. ಇದರಿಂದ ಅವು ಮೆತ್ತಗಾಗುತ್ತವೆ. ಬಳಿಕ, ನೀರು ಬಸಿದು ಒಣಗಲು ಬಿಡಿ.
ಹಂತ 2: ಮಸಾಲೆ ರೆಡಿ ಮಾಡಿ
ಈಗ, ಒಂದು ಬಾಣಲೆಯಲ್ಲಿ ಮೆಂತ್ಯ ಮತ್ತು ಸೋಂಪನ್ನು ಲಘುವಾಗಿ ಹುರಿದುಕೊಳ್ಳಿ. ತಣ್ಣಗಾದ ಮೇಲೆ, ಇವನ್ನು ತರಿತರಿಯಾಗಿ ಪುಡಿ ಮಾಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಸಾಸಿವೆ ಪುಡಿ, ಅರಿಶಿನ, ಖಾರದ ಪುಡಿ, ಉಪ್ಪು, ಇಂಗು, ಓಂಕಾಳು ಮತ್ತು ಕಲೋಂಜಿ ಹಾಕಿ. ಇದಕ್ಕೆ ಹುರಿದು ಪುಡಿ ಮಾಡಿದ ಮಸಾಲೆಯನ್ನೂ ಸೇರಿಸಿ. ಇದೇ ಮಸಾಲೆ ಉಪ್ಪಿನಕಾಯಿಗೆ ಆ ಸಾಂಪ್ರದಾಯಿಕ ದೇಸಿ ರುಚಿ ಕೊಡೋದು.
ಹಂತ 3: ಹಲಸಿನಕಾಯಿಗೆ ಮಸಾಲೆ ಮಿಕ್ಸ್ ಮಾಡಿ
ಒಣಗಿದ ಹಲಸಿನಕಾಯಿ ತುಂಡುಗಳನ್ನು ಒಂದು ದೊಡ್ಡ ಪಾತ್ರೆಗೆ ಹಾಕಿ, ಸಿದ್ಧಪಡಿಸಿದ ಮಸಾಲೆಯನ್ನು ಚೆನ್ನಾಗಿ ಕಲಸಿ. ಈಗ, ಮೇಲೆ ನಿಂಬೆರಸ ಹಿಂಡಿ. ನಂತರ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ, ತಣ್ಣಗಾದ ಮೇಲೆ ಹಲಸಿನಕಾಯಿ ಮಿಶ್ರಣಕ್ಕೆ ಹಾಕಿ. ಮಸಾಲೆ ಮತ್ತು ಹಲಸಿನಕಾಯಿ ಚೆನ್ನಾಗಿ ಹೊಂದಿಕೊಳ್ಳುವಷ್ಟು ಎಣ್ಣೆ ಇರಬೇಕು. ಎಲ್ಲವನ್ನೂ ಕೈಯಿಂದ ಅಥವಾ ಚಮಚದಿಂದ ಚೆನ್ನಾಗಿ ಮಿಕ್ಸ್ ಮಾಡಿ.
ಹಂತ 4: ಬಿಸಿಲಿನಲ್ಲಿ ಇಡಿ
ಈ ಉಪ್ಪಿನಕಾಯಿಯನ್ನು ಸ್ವಚ್ಛ ಹಾಗೂ ಒಣಗಿದ ಗಾಜಿನ ಜಾಡಿಯಲ್ಲಿ ತುಂಬಿ. ಈ ಜಾಡಿಯನ್ನು 4 ರಿಂದ 5 ದಿನಗಳ ಕಾಲ ಪ್ರತಿದಿನ ಬಿಸಿಲಿನಲ್ಲಿ ಇಡಿ. ಪ್ರತಿದಿನ ಒಣ ಚಮಚ ಬಳಸಿ ಉಪ್ಪಿನಕಾಯಿಯನ್ನು ಒಮ್ಮೆ ಕಲಸಿ. ಇದರಿಂದ ಮಸಾಲೆಗಳು ಸರಿಯಾಗಿ ಬೆರೆಯುತ್ತವೆ. ಬಿಸಿಲು ತಾಗಿದಂತೆ ಹಲಸಿನಕಾಯಿ ಉಪ್ಪಿನಕಾಯಿ ನಿಧಾನವಾಗಿ ಹದವಾಗಿ, ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.
ಉಪ್ಪಿನಕಾಯಿ ಚೆನ್ನಾಗಿ ರೆಡಿಯಾದ ಮೇಲೆ, ಇದನ್ನು ಪರಾಠ, ಬೇಳೆ-ಸಾರು ಅನ್ನ ಅಥವಾ ಚಪಾತಿ ಜೊತೆ ಸವಿಯಿರಿ. ಇದರ ಹುಳಿ-ಖಾರ ರುಚಿ ಊಟದ ಮಜಾವನ್ನು ಡಬಲ್ ಮಾಡುತ್ತದೆ. ನೆನಪಿಡಿ, ಉಪ್ಪಿನಕಾಯಿ ತೆಗೆಯುವಾಗ ಯಾವಾಗಲೂ ಒಣ ಚಮಚವನ್ನೇ ಬಳಸಿ. ಸರಿಯಾದ ರೀತಿಯಲ್ಲಿಟ್ಟರೆ ಈ ಉಪ್ಪಿನಕಾಯಿ ಹಲವು ತಿಂಗಳುಗಳ ಕಾಲ ಕೆಡುವುದಿಲ್ಲ. ಮನೆಯಲ್ಲೇ ಮಾಡಿದ ಹಲಸಿನಕಾಯಿ ಉಪ್ಪಿನಕಾಯಿ ಬರೀ ರುಚಿ ಮಾತ್ರವಲ್ಲ, ಹಳೆಯ ದಿನಗಳ ನೆನಪನ್ನೂ ಮರಳಿ ತರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.