ಮನೆಯಲ್ಲೇ ಮಾಡಿ ಕರ್ನಾಟಕ ಶೈಲಿಯ ಸ್ಟೈಸಿ ದೊನ್ನೆ ಬಿರಿಯಾನಿ... ಮಾಡೋಕೆ ಹೆಚ್ಚು ಸಮಯ ಬೇಕಿಲ್ಲ

Published : Jul 22, 2026, 02:28 PM IST
Donne Biryani

ಸಾರಾಂಶ

How to make Donne Biryani at home: ಕರ್ನಾಟಕದ ಮನೆಮಾತಾಗಿರುವ ದೊನ್ನೆ ಬಿರಿಯಾನಿ ಅಥವಾ ಗ್ರೀನ್ ಚಿಕನ್ ಬಿರಿಯಾನಿ ಈಗ ನಿಮ್ಮ ಮನೆಯಲ್ಲೂ ಮಾಡಿ. ದಿನಾ ತಿನ್ನುವ ಕೆಂಪು ಮಸಾಲೆಯ ಬಿರಿಯಾನಿಗಿಂತ ಭಿನ್ನವಾದ ಮತ್ತು ರುಚಿಕರವಾದ ಈ ಬಿರಿಯಾನಿಯನ್ನು ತಯಾರಿಸುವುದು ಅತ್ಯಂತ ಸುಲಭ. ಹೋಟೆಲ್ ರುಚಿಯನ್ನೇ ಮೀರಿಸುವ ಈ ಸ್ಪೆಷಲ್ ಬಿರಿಯಾನಿ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ.

ನಿಮಗೆಲ್ಲಾ ದಿನಾ ಒಂದೇ ರೀತಿಯ ಕೆಂಪು ಮಸಾಲೆಯ ಬಿರಿಯಾನಿ ತಿಂದು ಬೋರ್ ಆಗಿದೆಯೇ? ಹಾಗಿದ್ದರೆ ಈ ಬಾರಿ ಮನೆಯಲ್ಲಿ ಕರ್ನಾಟಕದ ಸುಪ್ರಸಿದ್ಧ 'ದೊನ್ನೆ ಬಿರಿಯಾನಿ' ಅಥವಾ 'ಗ್ರೀನ್ ಚಿಕನ್ ಬಿರಿಯಾನಿ' ಟ್ರೈ ಮಾಡಿ. ಹಸಿರು ಬಣ್ಣದಲ್ಲಿರುವ ಇದು ನೋಡಲು ಮಾತ್ರ ಆಕರ್ಷಕವಾಗಿದೆ ಅಂದುಕೊಳ್ಳಬೇಡಿ, ಇದು ತಿನ್ನಲು ಸಹ ಅತ್ಯಂತ ರುಚಿಕರವಾಗಿದೆ. ಅಂದಹಾಗೆ ಈ ಬಿರಿಯಾನಿ ಕರ್ನಾಟಕದಾದ್ಯಂತ ಬಹಳ ಫೇಮಸ್. ಇನ್ನು ವಿಶೇಷವೆಂದರೆ ಅಡುಗೆ ಅಷ್ಟಾಗಿ ಬಾರದ ಬ್ಯಾಚುಲರ್ಸ್ ಕೂಡ ಇದನ್ನು ಸುಲಭವಾಗಿ ಮಾಡಬಹುದು. ಮತ್ಯಾಕೆ ತಡ 'ದೊನ್ನೆ ಬಿರಿಯಾನಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ಹಂತ ಹಂತವಾಗಿ ನೋಡೋಣ ಬನ್ನಿ..

ಬೇಕಾಗುವ ಪದಾರ್ಥಗಳು

ಚಿಕನ್ (ಮೂಳೆ ಸಮೇತ ಅಥವಾ ಬೋನ್‌ಲೆಸ್): 1 ಕೆಜಿ
ಮೊಸರು: 1/4 ಕಪ್
ಅರಿಶಿನ: 1/2 ಟೀಸ್ಪೂನ್
ಉಪ್ಪು: 1 ಟೀಸ್ಪೂನ್ (ಮ್ಯಾರಿನೇಷನ್‌ಗೆ)
ಪುದೀನಾ ಎಲೆಗಳು: 1/4 ಕಪ್
ಕೊತ್ತಂಬರಿ ಸೊಪ್ಪು: 1/4 ಕಪ್
ಕರಿಬೇವು: 2 ಕಟ್ಟು/ಹಿಡಿ
ಹಸಿಮೆಣಸಿನಕಾಯಿ: 6
ಶುಂಠಿ: 1 ಇಂಚಿನ ತುಂಡು
ಬೆಳ್ಳುಳ್ಳಿ: 2 ಎಸಳು (ಗಾತ್ರಕ್ಕೆ ತಕ್ಕಂತೆ ಹೆಚ್ಚಿಸಬಹುದು)
ಕಸೂರಿ ಮೇಥಿ: 1 ಟೀಸ್ಪೂನ್
ಜೀರಿಗೆ ಸಾಂಬಾ ಅಕ್ಕಿ: 2 ಕಪ್
ತುಪ್ಪ: 3 ಟೇಬಲ್ ಸ್ಪೂನ್
ತೆಂಗಿನ ಎಣ್ಣೆ: 3 ಟೇಬಲ್ ಸ್ಪೂನ್
ಹೆಚ್ಚಿದ ಈರುಳ್ಳಿ: 1/2 ಕಪ್
ಬಿರಿಯಾನಿ ಮಸಾಲಾ ಪುಡಿ: 1 ಟೇಬಲ್ ಸ್ಪೂನ್
ಕರಿ ಮಸಾಲಾ ಪುಡಿ (curry masala powder): 1 ಟೇಬಲ್ ಸ್ಪೂನ್
ಕಾಳುಮೆಣಸಿನ ಪುಡಿ: 1/4 ಟೇಬಲ್ ಸ್ಪೂನ್
ಧನಿಯಾ ಪುಡಿ: 1.5 ಟೇಬಲ್ ಸ್ಪೂನ್
ಬಿಸಿ ನೀರು: 4 ಕಪ್
ನಿಂಬೆ ರಸ: ಅರ್ಧ ಹೋಳು

ಮಸಾಲೆ ಪದಾರ್ಥಗಳು: ಬಿರಿಯಾನಿ ಎಲೆ (1), ಮರಾಠಿ ಮೊಗ್ಗು (2), ಸೋಂಪು (1/2 ಟೀಸ್ಪೂನ್), ಅನಾನಸ್ ಹೂವು (1), ಲವಂಗ (2), ಏಲಕ್ಕಿ (2), ಚಕ್ಕೆ (2 ತುಂಡು)

ತಯಾರಿಸುವ ವಿಧಾನ

*ಮೊದಲು ಜೀರಿಗೆ ಸಾಂಬಾ ಅಕ್ಕಿಯನ್ನು ಚೆನ್ನಾಗಿ ತೊಳೆದು ಕನಿಷ್ಠ 30 ನಿಮಿಷಗಳ ಕಾಲ ನೆನೆಸಿಡಿ.

*ಒಂದು ಪಾತ್ರೆಯಲ್ಲಿ ತೊಳೆದ ಚಿಕನ್ ತುಂಡುಗಳನ್ನು ಹಾಕಿ, ಅದಕ್ಕೆ ಮೊಸರು, ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ ಮ್ಯಾರಿನೇಟ್ ಮಾಡಿ ಇಡಿ.

*ಈಗ ಮಿಕ್ಸಿ ಜಾರ್‌ಗೆ ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಕಸೂರಿ ಮೇತಿ ಹಾಕಿ, ಸ್ವಲ್ಪ ನೀರು ಸೇರಿಸಿ ನಯವಾದ ಹಸಿರು ಪೇಸ್ಟ್ (Green Paste) ತಯಾರಿಸಿಕೊಳ್ಳಿ.

*ಸ್ಟೌವ್ ಆನ್ ಮಾಡಿ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಮತ್ತು ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಬಿರಿಯಾನಿ ಎಲೆ, ಸೋಂಪು, ಏಲಕ್ಕಿ ಸೇರಿದಂತೆ ಎಲ್ಲಾ ಮಸಾಲೆ ಹಾಕಿ ಹುರಿಯಿರಿ.

*ನಂತರ ಈರುಳ್ಳಿ ಚೂರುಗಳನ್ನು ಹಾಕಿ ಅದು ಮೃದುವಾಗುವವರೆಗೆ ಬೇಯಿಸಿ. ಈರುಳ್ಳಿ ಬೆಂದ ನಂತರ ತಯಾರಿಸಿದ ಹಸಿರು ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷ ಹುರಿಯಿರಿ.

*ನಂತರ ಬಿರಿಯಾನಿ ಮಸಾಲಾ, ಕರಿ ಪೌಡರ್ (curry masala powder), ಕಾಳುಮೆಣಸಿನ ಪುಡಿ ಮತ್ತು ಧನಿಯಾ ಪುಡಿ ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.

*ಈಗ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಕಿ. ಕುಕ್ಕರ್ ಮುಚ್ಚಳವನ್ನು ಮೇಲೆ ಹಗುರವಾಗಿ ಇಟ್ಟು ಮೀಡಿಯಂ ಉರಿಯಲ್ಲಿ 10 ನಿಮಿಷ ಬೇಯಿಸಿ. ಮಧ್ಯೆ ಮಧ್ಯೆ ಕಲಕುತ್ತಿರಿ (ಈ ಹಂತದಲ್ಲಿ ನೀರು ಹಾಕಬೇಡಿ).

*ಚಿಕನ್ ಸ್ವಲ್ಪ ಬೆಂದ ನಂತರ, ನೆನೆಸಿದ ಅಕ್ಕಿಯನ್ನು (ನೀರನ್ನು ಬಸಿದು) ಸೇರಿಸಿ. ನಂತರ ಒಂದು ಕಪ್ ಅಕ್ಕಿಗೆ ಎರಡು ಕಪ್ ನಂತೆ 4 ಕಪ್ ಬಿಸಿ ನೀರನ್ನು ಹಾಕಿ ಕಲಕಿ.

*ರುಚಿಗೆ ತಕ್ಕಷ್ಟು ಉಪ್ಪು ಮತ್ತು ನಿಂಬೆ ರಸ ಸೇರಿಸಿ ನೀರು ಕುದಿಯಲು ಬಿಡಿ. ನೀರು ಕುದಿಯುವಾಗ ಕುಕ್ಕರ್ ಮುಚ್ಚಳ ಹಾಕಿ 2 ವಿಶಲ್ ಕೂಗಿಸಿ. ನಂತರ ಉರಿಯನ್ನು ಪೂರ್ತಿ ಕಡಿಮೆ ಮಾಡಿ ಸುಮಾರು 20 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ದಮ್ (Dum) ಮಾಡಿ.

*ಕುಕ್ಕರ್ ಪ್ರೆಶರ್ ಇಳಿಸಿದ ನಂತರ ಮುಚ್ಚಳ ತೆಗೆದರೆ ಘಮಘಮಿಸುವ ಕರ್ನಾಟಕ ಶೈಲಿಯ ದೊನ್ನೆ ಬಿರಿಯಾನಿ ಸಿದ್ಧ!

ಇದನ್ನು ತಣ್ಣನೆಯ ರಾಯಿತಾ ಮತ್ತು ಬೇಯಿಸಿದ ಮೊಟ್ಟೆಯೊಂದಿಗೆ ಬಿಸಿಬಿಸಿಯಾಗಿ ಸವಿಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ತೋಟ, ಎರಡು ಬೆಳೆ, ಡಬಲ್ ಆದಾಯ? ಚಿಕ್ಕಮಗಳೂರು ರೈತರ ಆವಕಾಡೊ ಪ್ರಯೋಗಕ್ಕೆ ಮೋದಿ ಶಹಬ್ಬಾಸ್
Recipe: ಹದವಾಗಿ ಮಸಾಲೆ ಹುರಿದು, ರುಬ್ಬಿ ತಯಾರಿಸಿ ಹೋಟೆಲ್ ಶೈಲಿಯ ಇಡ್ಲಿ ಸಾಂಬಾರ್‌