ಮೃದುವಾಗಿ, ಬಾಯಲ್ಲಿಟ್ಟರೆ ಕರಗುವಂತಿರುವ ಇಡ್ಲಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಆದ್ರೆ ಜನರಿಗೆ ಇಡ್ಲಿ ಅಂದ್ರೆ ಇಷ್ಟೊಂದು ಇಷ್ಟಾಂತ ಗೊತ್ತೇ ಇರ್ಲಿಲ್ಲ ನೋಡಿ. ವಿಶ್ವ ಇಡ್ಲಿ ದಿನದ ಪ್ರಯುಕ್ತ ಸ್ವಿಗ್ಗಿ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಂಡಿದ್ದು, ಎಲ್ಲರನ್ನೂ ಬೆರಗುಗೊಳಿಸಿದೆ.
ಪ್ರತಿ ವರ್ಷ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನವನ್ನು (World Idli Day) ಆಚರಿಸಲಾಗುತ್ತದೆ. ವಿಶ್ವ ಇಡ್ಲಿ ದಿನದ ಪ್ರಯುಕ್ತ ಭಾರತದ ಪ್ರಮುಖ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ, ಆಸಕ್ತಿದಾಯಕ ಅಂಶವೊಂದನ್ನು ಬಹಿರಂಗಪಡಿಸಿದೆ. ಈ ಅಂಕಿ ಅಂಶದ ಪ್ರಕಾರ ಮಾರ್ಚ್ 30,2022 ರಿಂದ ಮಾರ್ಚ್ 25, 2023ರ ವರೆಗಿನ ಅವಧಿಯಲ್ಲಿ ದಕ್ಷಿಣ ಭಾರತದ ನೆಚ್ಚಿನ ಬ್ರೇಕ್ ಫಾಸ್ಟ್ ಇಡ್ಲಿಯನ್ನು ಎಷ್ಟು ಜನ ಸೇವಿಸಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದೆ. ಕಳೆದ 12 ತಿಂಗಳಲ್ಲಿ 3.3 ಕೋಟಿ ಪ್ಲೇಟ್ ಗಳಷ್ಟು ಇಡ್ಲಿಯನ್ನು ಜನರಿಗೆ ತಲುಪಿಸಿದ್ದೇವೆ ಎಂದು ಸ್ವಿಗ್ಗಿ ಹೇಳಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಇಡ್ಲಿ ಕೇವಲ ಜನಪ್ರಿಯ ಉಪಹಾರ (Breakfast) ಮಾತ್ರವಲ್ಲ, ಆರೋಗ್ಯಕರವೂ (Healthy) ಆಗಿದೆ. ಹೀಗಾಗಿ ಇದನ್ನು ಸಾಮಾನ್ಯವಾಗಿ ದಿನನಿತ್ಯದ ಪ್ರಮುಖ ಊಟಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಮಸಾಲಾ ದೋಸೆಯ ನಂತರ ಇಡ್ಲಿ ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರ ವಸ್ತುವಾಗಿದೆ ಎಂದು ಸ್ವಿಗ್ಗಿ ವಿಶ್ಲೇಷಣೆಯಿಂದ ತಿಳಿದುಬಂದಿದೆ.
World Idli Day 2023: ಬಾಯಲ್ಲಿ ನೀರೂರಿಸೋ ಆರೋಗ್ಯಕರ ಇಡ್ಲಿಗೂ ಇದೆ ದೊಡ್ಡ ಇತಿಹಾಸ
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಆರ್ಡರ್
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಆರ್ಡರ್‌ಗಳು ಸ್ವಿಗ್ಗಿಗೆ ಲಭಿಸಿದೆ. ಮುಂಬೈ, ಕೊಯಮತ್ತೂರು, ಪುಣೆ, ವಿಝಾಗ್, ದೆಹಲಿ, ಕೋಲ್ಕತಾ, ಕೊಚ್ಚಿಯಲ್ಲೂ ಇಡ್ಲಿ ಪ್ರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಸ್ವಿಗ್ಗಿಯ ವರದಿಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ 8ರಿಂದ 10 ಗಂಟೆಯ ಅವಧಿಯಲ್ಲಿ ಇಡ್ಲಿಗೆ ಹೆಚ್ಚಿನ ಆರ್ಡರ್‌ಗಳು ಸಿಗುತ್ತವೆ. ಎಲ್ಲಾ ನಗರಗಳಲ್ಲಿ ಸಾದಾ ಇಡ್ಲಿ ಅತ್ಯಂತ ಜನಪ್ರಿಯವಾಗಿದ್ದು. 2 ಪೀಸ್ ಇರುವ ಒಂದು ಪ್ಲೇಟ್ ಇಡ್ಲಿ ಹೆಚ್ಚು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ಹೇಳಿದೆ. ಪ್ಲೇನ್ ಇಡ್ಲಿಗೆ ಬೇಡಿಕೆ ಹೆಚ್ಚು ಎಂದು ವಿಶ್ಲೇಷಣೆಯಿಂದ (Survey) ತಿಳಿದುಬಂದಿದೆ.
12 ತಿಂಗಳ ಅವಧಿಯಲ್ಲಿ ಇಡ್ಲಿಗಾಗಿ 6 ಲಕ್ಷ ರೂಪಾಯಿ ವೆಚ್ಚ ಮಾಡಿದ ವ್ಯಕ್ತಿ
ಹೆಚ್ಚಿನ ಜನರು ಇಡ್ಲಿ ಆರ್ಡರ್ ಮಾಡಿರುವ ಸಮಯವೆಂದರೆ ಅದು ಬೆಳಗ್ಗೆ 8ರಿಂದ 10ರ ವರೆಗೆ ಎಂದು ಸ್ವಿಗ್ಗಿ ಹೇಳಿದ್ದು, ಹಲವು ನಗರಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಇಡ್ಲಿ ಆರ್ಡರ್ ಮಾಡಿರುವ ಅನೇಕ ಉದಾಹರಣೆಗಳಿವೆ. ಹೈದರಾಬಾದ್ ನ ವ್ಯಕ್ತಿಯೋರ್ವ 12 ತಿಂಗಳ ಅವಧಿಯಲ್ಲಿ ಇಡ್ಲಿಗಳಿಗಾಗಿ 6 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆಂಬುದು ಮತ್ತೊಂದು ಅಚ್ಚರಿಯ ಅಂಶವಾಗಿದೆ. ಇಡ್ಲಿಯ ಆರ್ಡರ್ ಗಳಿಗೆ ನೆಚ್ಚಿನ ರೆಸ್ಟೋರೆಂಟ್ ಗಳ ಟಾಪ್ 5 ರ ಪಟ್ಟಿಯಲ್ಲಿ ಬೆಂಗಳೂರು, ಚೆನ್ನೈಗಳಲ್ಲಿ ಅಡ್ಯಾರ್ ಆನಂದ್ ಭವನ್‌ಗಳಾಗಿವೆ. ಹೈದರಾಬಾದ್ ನಲ್ಲಿ ವರಲಕ್ಷ್ಮಿ ಟಿಫನ್ಸ್, ಉಡುಪೀಸ್ ಉಪಹಾರ್ ಹಾಗೂ ಚೆನ್ನೈ ನಲ್ಲಿ ಸಂಗೀತಾ ವೆಜ್ ರೆಸ್ಟೋರೆಂಟ್ ಗಳಿವೆ ಎಂದು ಸ್ವಿಗ್ಗಿ ಹೇಳಿದೆ.
World Idli Day: ಇಲ್ಲಿವೆ 8 ವಿಧದ ನವೀನ & ಆರೋಗ್ಯಕರ ಇಡ್ಲಿ
ಬೆಂಗಳೂರಿಗರಿಗೆ ರವಾ ಇಡ್ಲಿ ತುಂಬಾ ಇಷ್ಟ
ಇಡ್ಲಿ ಪ್ರಿಯರಿಗೆ ಇಷ್ಟವಾಗುವ ನೆಚ್ಚಿನ ಇಡ್ಲಿಗಳ ಪ್ರಾಂತ್ಯವಾರು ಅಂಕಿ ಅಂಶವನ್ನು ಸ್ವಿಗ್ಗಿ ನೀಡಿದೆ. ಬೆಂಗಳೂರಿಗರು ರವಾ ಇಡ್ಲಿ, ಚೆನ್ನೈನವರು ತುಪ್ಪದ ಪೋಡಿ ಇಡ್ಲಿ, ಹೈದರಾಬಾದಿಗಳು ಕಾರಂ ಪೋಡಿ ತುಪ್ಪದ ಇಡ್ಲಿ, ಮುಂಬೈನವರು ಇಡ್ಲಿ- ವಡಾವನ್ನು ಹೆಚ್ಚಾಗಿ ಆರ್ಡರ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ. ಗ್ರಾಹಕರು (Customers) ತಮ್ಮ ಇಡ್ಲಿಗಳೊಂದಿಗೆ ಸಾಂಬಾರ್, ತೆಂಗಿನಕಾಯಿ ಚಟ್ನಿ, ಮೆದು ವಡೆ, ಸಾಗು, ತುಪ್ಪ, ಕೆಂಪು ಚಟ್ನಿ, ಜೈನ್ ಸಾಂಬಾರ್, ಚಹಾ, ಕಾಫಿ ಮುಂತಾದ ಇತರ ಭಕ್ಷ್ಯಗಳನ್ನು ಆರ್ಡರ್ ಮಾಡುತ್ತಾರೆ ಎಂದು ಸ್ವಿಗ್ಗಿ ತಿಳಿಸಿದೆ.