ಇಲ್ಲಿದೆ ತಮಿಳುನಾಡಿನ ಫೇಮಸ್ 'ಅಂಬೂರ್ ಚಿಕನ್ ಬಿರಿಯಾನಿ' ಸೀಕ್ರೆಟ್.. ಕುಕ್ಕರ್‌ನಲ್ಲಿ ಮನೆಯಲ್ಲೇ ಮಾಡಿ ನೋಡಿ

Published : Sep 19, 2026, 04:04 PM IST
Ambur Biryani

ಸಾರಾಂಶ

Ambur Biryani: ಬಿರಿಯಾನಿ ಪ್ರಿಯರಿಗೆ ಸದಾ ನೆನಪಾಗುವ ಹೆಸರು ಅಂಬೂರ್ ಬಿರಿಯಾನಿ. ಜೀರಿಗೆ ಸಾಂಬಾ ಅಕ್ಕಿಯ ಸುವಾಸನೆ ಮತ್ತು ಕೆಂಪು ಒಣಮೆಣಸಿನಕಾಯಿ ಪೇಸ್ಟ್‌ನ ಜಾದೂ ಇರುವ ಈ ತಮಿಳುನಾಡಿನ ಸಾಂಪ್ರದಾಯಿಕ ಅಂಬೂರ್ ಚಿಕನ್ ಬಿರಿಯಾನಿಯನ್ನು ರೆಸ್ಟೋರೆಂಟ್ ಶೈಲಿಯಲ್ಲಿ, ಮನೆಯಲ್ಲೇ ಕುಕ್ಕರ್ ಬಳಸಿ ಸುಲಭವಾಗಿ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ರೆಸಿಪಿ.

ಬಿರಿಯಾನಿ ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಹೈದರಾಬಾದ್ ದಮ್ ಬಿರಿಯಾನಿ. ಆದರೆ ದಕ್ಷಿಣ ಭಾರತದಲ್ಲಿ ಹೈದರಾಬಾದ್ ಬಿರಿಯಾನಿಗೆ ಪೈಪೋಟಿ ನೀಡುವ ಏಕೈಕ ಬಿರಿಯಾನಿ ಎಂದರೆ ಅದು ತಮಿಳುನಾಡಿನ ಪ್ರಸಿದ್ಧ ‘ಅಂಬೂರ್ ಚಿಕನ್ ಬಿರಿಯಾನಿ’ (Ambur Chicken Biryani). ಮದುವೆ ಸಮಾರಂಭಗಳು ಮತ್ತು ಪ್ರಸಿದ್ಧ ಹೋಟೆಲ್‌ಗಳಲ್ಲಿ ದೊರೆಯುವ ಈ ಬಿರಿಯಾನಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ.

ಅಂಬೂರ್ ಬಿರಿಯಾನಿಯ ಅಸಲಿ ರಹಸ್ಯ ಅಡಗಿರುವುದು ಅದರಲ್ಲಿ ಬಳಸುವ ಜೀರಿಗೆ ಸಾಂಬಾ ಅಕ್ಕಿ (Jeera Samba Rice) ಮತ್ತು ಒಣಮೆಣಸಿನಕಾಯಿ ಪೇಸ್ಟ್‌ನಲ್ಲಿ! ಯಾವುದೇ ಕೃತಕ ಬಣ್ಣ ಅಥವಾ ಮಸಾಲೆಯ ಪುಡಿಗಳಿಲ್ಲದೆ, ನೈಸರ್ಗಿಕವಾಗಿ ಈ ಅದ್ಭುತ ರುಚಿಯ ಅಂಬೂರ್ ಬಿರಿಯಾನಿಯನ್ನು ಮನೆಯಲ್ಲೇ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು

ಜೀರಿಗೆ ಸಾಂಬಾ ಅಕ್ಕಿ – 1 ಕಪ್
ಚಿಕನ್ – ಅರ್ಧ ಕೆ.ಜಿ
ಗಟ್ಟಿ ಮೊಸರು – 2 ಚಮಚ
ಈರುಳ್ಳಿ – 2 (ಉದ್ದಕ್ಕೆ ಹೆಚ್ಚಿದ್ದು)
ಟೊಮ್ಯಾಟೊ – 2 (ಚಿಕ್ಕದಾಗಿ ಹೆಚ್ಚಿದ್ದು)
ಒಣ ಮೆಣಸಿನಕಾಯಿ (ಬ್ಯಾಡಗಿ) – 10
ಶುಂಠಿ ಪೇಸ್ಟ್ – 1 ಚಮಚ
ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅಡುಗೆ ಎಣ್ಣೆ – 3 ಚಮಚ
ಶುದ್ಧ ತುಪ್ಪ – 1 ಚಮಚ
ನಿಂಬೆಹಣ್ಣು – ಅರ್ಧ ಹೋಳು
ಚಕ್ಕೆ – 2 ಇಂಚು, ಲವಂಗ – 2, ಏಲಕ್ಕಿ – 2, ಪಲಾವ್ ಎಲೆ – 2
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು – ತಲಾ ಒಂದು ಹಿಡಿ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ಸರಳ ವಿಧಾನ

ನೆನೆಸಿಡಿ
*ಜೀರಿಗೆ ಸಾಂಬಾ ಅಕ್ಕಿ (Jeera Samba Rice)ಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ.
*ಅಂಬೂರ್ ಬಿರಿಯಾನಿಯ ಸೀಕ್ರೆಟ್: 10 ಒಣಮೆಣಸಿನಕಾಯಿಗಳನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ನಂತರ ಮಿಕ್ಸಿ ಜಾರ್‌ಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ಕೆಂಪು ಪೇಸ್ಟ್ ಮಾಡಿಟ್ಟುಕೊಳ್ಳಿ. (ಇದೇ ಬಿರಿಯಾನಿಗೆ ಅಸಲಿ ಕೆಂಪು ಬಣ್ಣ ಮತ್ತು ಹದವಾದ ಖಾರ ನೀಡುತ್ತದೆ).

ಫ್ರೈ ಮಾಡಿ
ಸ್ಟವ್ ಮೇಲೆ ದಪ್ಪ ತಳದ ಕುಕ್ಕರ್ ಇಟ್ಟು ಎಣ್ಣೆ ಮತ್ತು ತುಪ್ಪ ಕಾಯಿಸಿ.
ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ ಹುರಿಯಿರಿ. ನಂತರ ಮೊದಲು ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ."
ನಂತರ ಈರುಳ್ಳಿ ಮತ್ತು ಸ್ವಲ್ಪ ಉಪ್ಪು ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ."
ಈಗ ಶುಂಠಿ ಪೇಸ್ಟ್ ಮತ್ತು ಟೊಮ್ಯಾಟೊ ಹಾಕಿ ಮೆತ್ತಗಾಗುವವರೆಗೆ ಎಣ್ಣೆಯಲ್ಲಿ ಬೇಯಿಸಿ.
ಇದಕ್ಕೆ ಪುದೀನಾ, ಕೊತ್ತಂಬರಿ ಸೊಪ್ಪು ಮತ್ತು ನಾವು ರುಬ್ಬಿಟ್ಟುಕೊಂಡ ಒಣಮೆಣಸಿನಕಾಯಿ ಪೇಸ್ಟ್ ಸೇರಿಸಿ ಎಣ್ಣೆ ತೇಲುವವರೆಗೆ 2 ನಿಮಿಷ ಹುರಿಯಿರಿ.
ಈಗ ತೊಳೆದ ಚಿಕನ್, ಮೊಸರು ಮತ್ತು ನಿಂಬೆರಸ ಹಿಂಡಿ ಮಸಾಲೆ ಚಿಕನ್‌ಗೆ ಹಿಡಿಯುವಂತೆ ಚೆನ್ನಾಗಿ ಬೆರೆಸಿ. ನಂತರ 1 ಕಪ್ ನೀರು ಸುರಿದು ಕುಕ್ಕರ್ ಮುಚ್ಚಳವನ್ನು ಸುಮ್ಮನೆ ಮುಚ್ಚಿ ಮಧ್ಯಮ ಉರಿಯಲ್ಲಿ ಚಿಕನ್ ಅನ್ನು ಮುಕ್ಕಾಲು ಭಾಗ ಬೇಯಲು ಬಿಡಿ.

ದಮ್ ಕಟ್ಟಿ
ಮತ್ತೊಂದು ಒಲೆಯ ಮೇಲೆ ಪಾತ್ರೆಯಲ್ಲಿ ನೀರು ಕಾಯಿಸಿ, ಸ್ವಲ್ಪ ಉಪ್ಪು ಮತ್ತು ನೆನೆಸಿದ ಅಕ್ಕಿ ಹಾಕಿ ಕೇವಲ 2 ನಿಮಿಷ (ಅರ್ಧ ಭಾಗ - 50%) ಮಾತ್ರ ಬೇಯಿಸಿ, ತಕ್ಷಣ ಗಂಜಿ ಬಸಿದು ಅಕ್ಕಿಯನ್ನು ಪ್ರತ್ಯೇಕಿಸಿ.
ಈಗ ಕುಕ್ಕರ್‌ನಲ್ಲಿ ಬೇಯುತ್ತಿರುವ ಚಿಕನ್ ಗ್ರೇವಿ ಮೇಲೆ ಈ ಅರ್ಧ ಬೆಂದ ಅಕ್ಕಿಯನ್ನು ಸಮಾನವಾಗಿ ಹರಡಿ.
ಕುಕ್ಕರ್ ಮುಚ್ಚಳ ಮುಚ್ಚಿ (ವಿಸಿಲ್ ಹಾಕಿ), ಉರಿಯನ್ನು ಸಂಪೂರ್ಣ ಸಿಮ್ (ಲೋ ಫ್ಲೇಮ್) ಮಾಡಿ 10 ನಿಮಿಷ ದಮ್ (Dum) ಕಟ್ಟಿ ಗ್ಯಾಸ್ ಆಫ್ ಮಾಡಿ.
ಕುಕ್ಕರ್‌ನ ಪ್ರೆಷರ್ ತಾನಾಗಿಯೇ ಪೂರ್ತಿ ಇಳಿಯುವವರೆಗೂ ಮುಚ್ಚಳ ತೆಗೆಯಬೇಡಿ.

ಕುಕ್ಕರ್ ಮುಚ್ಚಳ ತೆಗೆದ ತಕ್ಷಣ ಇಡೀ ಮನೆ ಘಮಘಮಿಸುವ, ಬಾಯಲ್ಲಿ ನೀರೂರಿಸುವ ಅಸಲಿ ಅಂಬೂರ್ ಚಿಕನ್ ಬಿರಿಯಾನಿ ರೆಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್ ಬಾಗಿಲಿಗೆ ಒಂದು ಪೇಪರ್ ಸಿಕ್ಕಿಸಿ ಸಾಕು.. ಫ್ರೀಜರ್‌ನಲ್ಲಿ ಐಸ್ ಕಟ್ಟೋ ಸಮಸ್ಯೆಗೆ ಸಿಗುತ್ತೆ ಪರಿಹಾರ
ಮಸಾಲೆ ರುಬ್ಬದೇ 10 ನಿಮಿಷದಲ್ಲಿ ಮಾಡಿ ಹೋಟೆಲ್ ಶೈಲಿಯ ರುಚಿಯಾದ ಚಿಕನ್ ಗ್ರೇವಿ!