
ಹಸಿರು ಬಟಾಣಿ ಕಾಣ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಉಪ್ಪಿರುವ, ಕರಿದ ಹಸಿರು ಬಟಾಣಿ ಈಗ್ಲೂ ಅಲ್ಲೋ ಇಲ್ಲೋ ಮಾರ್ಕೆಟ್ ನಲ್ಲಿ ಸಿಗ್ತಿದೆ. ಟೀ ಜೊತೆ ಇಲ್ಲ ಟೈಂ ಪಾಸ್ ಗೆ ಅನೇಕರು ಹಸಿರು ಬಟಾಣಿ ಬಾಯಾಡಿಸ್ತಾರೆ. ಆದ್ರೆ ಮಾರ್ಕೆಟ್ ನಲ್ಲಿ ಸಿಗುವ ಈ ಹಸಿರು ಬಟಾಣಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬ ಭಯ ಸಾಮಾನ್ಯ. ನೀವು ಮನೆಯಲ್ಲೇ ಏರ್ ಫ್ರೈಯರ್ ಸಹಾಯದಿಂದ ಗರಿಗರಿಯಾದ ಉಪ್ಪಿನ ಬಟಾಣಿ ತಯಾರಿಸ್ಬಹುದು.
2 ಕಪ್ ಫ್ರೋಜನ್ ಹಸಿರು ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು,ಖಾರದ ಪುಡಿ,ಜೀರಿಗೆ ಪುಡಿ,ಸ್ವಲ್ಪ ಎಣ್ಣೆ,ಬೆಳ್ಳುಳ್ಳಿ ಪುಡಿ,ಚಾಟ್ ಮಸಾಲಾ
ಮೊದಲಿಗೆ ಎರಡು ಕಪ್ ಫ್ರೋಜನ್ ಹಸಿರು ಬಟಾಣಿಯನ್ನು ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಕಿ ಸಾಮಾನ್ಯ ನೀರಿನಲ್ಲಿ ಬಟಾಣಿ ಮೃದುವಾಗುವವರೆಗೆ ನೆನೆಸಿಡಿ. ನಂತರ ನೀರನ್ನು ಸಂಪೂರ್ಣವಾಗಿ ಬಸಿದು, ಬಟಾಣಿಯನ್ನು ಸ್ವಚ್ಛವಾದ ಬಟ್ಟೆಯ ಮೇಲೆ ಹರಡಿ ಸ್ವಲ್ಪ ಹೊತ್ತು ಒಣಗಲು ಬಿಡಿ. ಬಟಾಣಿಯಲ್ಲಿ ಹೆಚ್ಚುವರಿ ತೇವಾಂಶ ಉಳಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಈಗ ಏರ್ ಫ್ರೈಯರ್ನ ಟ್ರೇ ಮೇಲೆ ಬಟಾಣಿಯನ್ನು ಒಂದೇ ಪದರದಲ್ಲಿ ಹರಡಿ. ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸ್ಪ್ರೇ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಜೀರಿಗೆ ಪುಡಿ, ಬೆಳ್ಳುಳ್ಳಿ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ. ಎಲ್ಲಾ ಮಸಾಲೆಗಳು ಬಟಾಣಿಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಿಕ್ಸ್ ಮಾಡಿ.
ಇದಾದ ಬಳಿಕ ಏರ್ ಫ್ರೈಯರ್ ಅನ್ನು 190 ಡಿಗ್ರಿ ಸೆಲ್ಸಿಯಸ್ಗೆ ಹೊಂದಿಸಿ. ಸುಮಾರು 20 ನಿಮಿಷಗಳ ಕಾಲ ಏರ್ ಫ್ರೈ ಮಾಡಿ. ಮಧ್ಯದಲ್ಲಿ ಒಮ್ಮೆ ಬಟಾಣಿಯನ್ನು ಕಲಕಿದರೆ ಎಲ್ಲವೂ ಸಮವಾಗಿ ಗರಿಗರಿಯಾಗಲು ಸಹಾಯವಾಗುತ್ತದೆ. ಇದು ಸಂಪೂರ್ಣ ತಣ್ಣಗಾದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಿ. ಮನೆಯಲ್ಲೇ ಮಾಡಿದ, ರುಚಿ ರುಚಿಯಾದ ಉಪ್ಪಿನ ಹಸಿರು ಬಟಾಣಿಯನ್ನು ಯಾವುದೇ ಭಯವಿಲ್ಲದೆ ನೀವು ತಿನ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.