
Momos History: ಇಂದು ಸ್ಟ್ರೀಟ್ ಫುಡ್ ಲೋಕದಲ್ಲಿ ಮೊಮೊಸ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ವಿಶೇಷವಾಗಿ ದೆಹಲಿ, ಕೋಲ್ಕತ್ತಾ, ಡಾರ್ಜಿಲಿಂಗ್, ಮೆಕ್ಲಿಯೋಡ್ ಗಂಜ್ ಸೇರಿದಂತೆ ಹಲವು ನಗರಗಳಲ್ಲಿ ಮೊಮೊಸ್ ಜನಪ್ರಿಯತೆ ಹೆಚ್ಚಾಗಿದೆ. ಈ ನಗರಗಳಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಪ್ರಸಿದ್ಧ ಮೊಮೊಸ್ ರುಚಿ ನೋಡಲು ಮರೆಯುವುದಿಲ್ಲ. ಕರ್ನಾಟಕದಲ್ಲೂ ಇದರ ಕ್ರೇಜ್ ಏನೂ ಕಮ್ಮಿ ಇಲ್ಲ. ಆದರೆ ಖಾರವಾದ ಚಟ್ನಿಯೊಂದಿಗೆ ಸವಿಯುವ ಈ ಮೊಮೊಸ್ ಮೊದಲ ಬಾರಿಗೆ ಹೇಗೆ ತಯಾರಾಯಿತು ಎಂದು ಎಂದಾದರೂ ಯೋಚಿಸಿದ್ದೀರಾ? ಇಲ್ಲದಿದ್ದರೆ ಇಂದು ಈ ಜನಪ್ರಿಯ ತಿಂಡಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳೋಣ.
ಮೊಮೊಸ್ ಇತಿಹಾಸ ಸುಮಾರು 600 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇದರ ಬೇರುಗಳು ಟಿಬೆಟ್ ಮತ್ತು ನೇಪಾಳಕ್ಕೆ ಸಂಬಂಧಿಸಿವೆ. ಇಂದು ನಾವು ರುಚಿಗಾಗಿ ಮೊಮೊಸ್ ತಿನ್ನುತ್ತೇವೆ. ಆದರೆ ಹಿಂದೆ ಇದು ಹೊಟ್ಟೆ ತುಂಬಿಸುವ ಮತ್ತು ದೇಹಕ್ಕೆ ಶಕ್ತಿ ನೀಡುವ ಆಹಾರವಾಗಿತ್ತು. 14 ಮತ್ತು 15ನೇ ಶತಮಾನಗಳಲ್ಲಿ ಟಿಬೆಟ್ನಲ್ಲಿ ವಿಪರೀತ ಚಳಿ ಇರುತ್ತಿತ್ತು. ಇಂತಹ ವಾತಾವರಣದಲ್ಲಿ ದೇಹಕ್ಕೆ ಉಷ್ಣತೆ ನೀಡುವ ಜೊತೆಗೆ ದೀರ್ಘಕಾಲ ಹಸಿವಾಗದಂತೆ ನೋಡಿಕೊಳ್ಳುವ ಆಹಾರದ ಅಗತ್ಯವಿತ್ತು. ಆ ಕಾರಣಕ್ಕೆ ಮೈದಾದಿಂದ ತೆಳುವಾದ ಹಿಟ್ಟಿನ ಪದರವನ್ನು ತಯಾರಿಸಿ, ಅದರೊಳಗೆ ಮಾಂಸವನ್ನು ತುಂಬಿ ಆವಿಯಲ್ಲಿ ಬೇಯಿಸಿ ತಿನ್ನಲು ಆರಂಭಿಸಲಾಯಿತು ಎನ್ನಲಾಗುತ್ತದೆ. ಆ ಕಾಲದಲ್ಲಿ ಟಿಬೆಟಿಯನ್ನರು ಇದನ್ನು ಮೊಮೊಸ್ ಎಂದು ಕರೆಯುತ್ತಿರಲಿಲ್ಲ. ಬದಲಿಗೆ 'ಮೊಗ್-ಮೊಗ್' (Mog-Mog) ಎಂದು ಕರೆಯುತ್ತಿದ್ದರು.
ಮೊಮೊಸ್ನ ಮೂಲದ ಬಗ್ಗೆ ಒಂದು ಕುತೂಹಲಕಾರಿ ಜನಪದ ಕಥೆಯೂ ಇದೆ. 7ನೇ ಶತಮಾನದಲ್ಲಿ ನೇಪಾಳದ ಲಿಚ್ಛವಿ ರಾಜವಂಶದ ರಾಜಕುಮಾರಿ ಭೃಕುಟಿ ದೇವಿಯ ವಿವಾಹ ಟಿಬೆಟ್ನ ದೊರೆ ಸಾಂಗ್ತ್ಸೆನ್ ಗ್ಯಾಂಪೋ ಅವರೊಂದಿಗೆ ನಡೆಯಿತಂತೆ. ಆಗ ಅವರು ನೇಪಾಳದಿಂದ ಮೊಮೊಸ್ ಮತ್ತು ಬೌದ್ಧ ಧರ್ಮ ಎರಡನ್ನೂ ತಮ್ಮ ಪತಿಯ ಮನೆಗೆ ಕೊಂಡೊಯ್ದರು ಎಂಬ ಪ್ರತೀತಿ ಇದೆ.
ಮತ್ತೊಂದು ಜನಪದ ಕಥೆಯ ಪ್ರಕಾರ, ನೇಪಾಳದ ನೆವಾರಿ ಸಮುದಾಯದ ಜನರು ಚೀನಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಾಂಪ್ರದಾಯಿಕ ಖಾದ್ಯ 'ಮೊಗ್ ಮೊಗ್' ಅವರಿಗೆ ಬಹಳ ಇಷ್ಟವಾಯಿತಂತೆ. ಹೀಗಾಗಿ ಆ ಖಾದ್ಯವನ್ನು ಕಠ್ಮಂಡುವಿಗೆ ಪರಿಚಯಿಸಿದರು ಎಂದು ಹೇಳಲಾಗುತ್ತದೆ.
ದಲೈ ಲಾಮಾ ಜೊತೆ ಭಾರತಕ್ಕೆ ಬಂದ ನಿರಾಶ್ರಿತರು ತಂದ ಮೊಮೊಸ್!
ಟಿಬೆಟ್ನಿಂದ ಭಾರತದಾದ್ಯಂತ ಮೊಮೊಸ್ ತಿಂಡಿಯಾಗಿ ಜನಪ್ರಿಯವಾಗುವ ಪ್ರಯಾಣ 1950ರ ದಶಕದಿಂದ ಆರಂಭವಾಯಿತು ಎಂದು ಹೇಳಲಾಗುತ್ತದೆ. ಟಿಬೆಟ್ನಲ್ಲಿ ರಾಜಕೀಯ ಅಶಾಂತಿ ಉಂಟಾದ ಸಂದರ್ಭದಲ್ಲಿ ದಲೈ ಲಾಮಾ ಅವರೊಂದಿಗೆ ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ಭಾರತಕ್ಕೆ ಬಂದು ನೆಲೆಸಿದರು. ಅವರು ತಮ್ಮೊಂದಿಗೆ ಅಲ್ಲಿನ ಪ್ರಸಿದ್ಧ ಸಣ್ಣ ಡಂಪ್ಲಿಂಗ್ಸ್ ಖಾದ್ಯವನ್ನೂ ತಂದರು.
ಹೀಗೆ ಭಾರತದ ದೊಡ್ಡ ನಗರಗಳ ಬೀದಿಗಳಲ್ಲಿಯೂ ಮೊಮೊಸ್ ಜನಪ್ರಿಯವಾಗತೊಡಗಿತು. ಆರಂಭದಲ್ಲಿ ಆವಿಯಲ್ಲಿ ಬೇಯಿಸಿದ ಮೊಮೊಸ್ ಹೆಚ್ಚು ಪ್ರಸಿದ್ಧವಾಗಿದ್ದರೆ, ನಂತರ ಹುರಿದ ಮೊಮೊಸ್, ತಂದೂರಿ ಮೊಮೊಸ್ ಮತ್ತು ಝೋಲ್ ಮೊಮೊಸ್ ಸೇರಿದಂತೆ ಹಲವು ಬಗೆಯ ಮೊಮೊಸ್ಗಳು ಜನರ ಮೆಚ್ಚುಗೆ ಗಳಿಸಿದವು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.