
ಭಾರತೀಯ ಪಾಕ ಪದ್ಧತಿಯಲ್ಲಿ ಸಿಹಿ ತಿಂಡಿಗಳಿಗೆ ವಿಶೇಷ ಸ್ಥಾನವಿದೆ. ಹಬ್ಬಗಳಲ್ಲಿ ದೇವರಿಗೆ ನೈವೇದ್ಯ ಕೊಡುವುದರಿಂದ ಮೊದಲಾಗಿ ಪ್ರತಿಯೊಂದು ಶುಭ ಕಾರ್ಯಗಳಲ್ಲೂ ಸಿಹಿ ಇದ್ದೇ ಇರುತ್ತದೆ. ಚಿಕ್ಕ ಮಕ್ಕಳು ಖಾರದ ತಿಂಡಿಗಳನ್ನು ತಿನ್ನದೇ ಇದ್ದರೂ ಸಿಹಿಯನ್ನು ಇಷ್ಟಪಟ್ಟ ತಿನ್ನುತ್ತಾರೆ.
ಮನೆಯಲ್ಲಿ ಮಗು ಜನಿಸಿದಾಗ, ಮನೆ ಮಂದಿಗೆ ಕೆಲಸ ಸಿಕ್ಕಾಗ ಅಥವಾ ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸಿದಾಗ ಹೀಗೆ ಇನ್ನೂ ಅನೇಕ ಸಂತೋಷದ ಕ್ಷಣಗಳಲ್ಲಿ ಬಾಯಿ ಸಿಹಿ (Sweet) ಮಾಡಿಕೊಳ್ಳುವ ಪದ್ಧತಿ ನಮ್ಮಲ್ಲಿ ಮೊದಲಿನಿಂದಲೂ ರೂಢಿಯಲ್ಲಿದೆ. ಸಂತೋಷ (Happiness) ದ ಕ್ಷಣಗಳಲ್ಲಿ ಹಾಗೂ ಶುಭ ಸಂದರ್ಭಗಳನ್ನು ಸಿಹಿ ತಿನ್ನುವುದರ ಮೂಲಕ ಆಚರಿಸುವುದು ನಮ್ಮ ಸಂಸ್ಕೃತಿಯಾಗಿದೆ. ಮನೆಗೆ ಬರುವ ಅತಿಥಿಗಳು ಕೂಡ ಸಿಹಿಯನ್ನು ತೆಗೆದುಕೊಂಡುಬರುತ್ತಾರೆ. ಇನ್ನು ದೀಪಾವಳಿ, ಹೊಸ ವರ್ಷಾಚರಣೆ ಮುಂತಾದ ವಿಶೇಷ ದಿನಗಳಲ್ಲಂತೂ ಎಲ್ಲರೂ ಪರಸ್ಪರ ಸಿಹಿ ಹಂಚಿಕೊಳ್ಳುತ್ತಾರೆ.
ಮೆಕ್‌ಡೊನಾಲ್ಡ್, ಕೆಎಫ್‌ಸಿಗೂ ಮೊದಲೇ ಭಾರತೀಯರಿಗೆ ಬರ್ಗರ್, ಪಿಜ್ಜಾ, ಐಸ್‌ಕ್ರೀಮ್ ಪರಿಚಯಿಸಿದವ್ರು ಇವ್ರೇ!
ಸಿಹಿ ತಿನಿಸುಗಳಲ್ಲೂ ಅನೇಕ ವಿಧಗಳಿವೆ. ಅದರಲ್ಲೂ ಭಾರತದಲ್ಲಂತೂ ಒಂದು ಪ್ರದೇಶಕ್ಕಿಂತ ಇನ್ನೊಂದು ಪ್ರದೇಶದ ಸಿಹಿಗಳು ಭಿನ್ನವಾಗಿರುತ್ತದೆ. ಒಂದೊಂದು ಕಡೆ ಒಂದೊಂದು ಸಿಹಿ ತಿಂಡಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಎಲ್ಲರೂ ಎಲ್ಲ ಬಗೆಯ ಸಿಹಿ ತಿಂಡಿಗಳನ್ನು ಇಷ್ಟಪಡುವುದಿಲ್ಲ. ಒಬ್ಬೊಬ್ಬರು ಒಂದೊಂದು ಬಗೆಯ ಸಿಹಿಯನ್ನು ಇಷ್ಟಪಡುತ್ತಾರೆ. ಆದರೆ ಕಾಜು ಕಟ್ಲಿಯನ್ನು ಇಷ್ಟಪಡದೇ ಇರುವವರು ತೀರ ವಿರಳ. ಏಕೆಂದರೆ ಅದರ ರುಚಿಯೇ ಅಂಥದ್ದು. ಎಲ್ಲರೂ ಇಷ್ಟಪಟ್ಟು ತಿನ್ನುವ ಈ ಕಾಜು ಕಟ್ಲಿ (Kaju Katli ) ಭಾರತದಲ್ಲಿ ಹೇಗೆ ಆರಂಭವಾಯ್ತು ಅನ್ನೋದನ್ನ ನಾವು ತಿಳಿಸ್ತೇವೆ.
ಕಾಜು ಕಟ್ಲಿ ಆರಂಭವಾಗಿದ್ದು ಹೀಗೆ : ಇಂದು ಅನೇಕ ಕಡೆಗಳಲ್ಲಿ ಪ್ರಖ್ಯಾತಿ ಪಡೆದಿರುವ ಹಾಗೂ ಬಹುತೇಕ ಎಲ್ಲರ ನೆಚ್ಚಿನ ಸಿಹಿ ತಿಂಡಿಯಾದ ಕಾಜು ಕಟ್ಲಿಯ ಆವಿಷ್ಕಾರ 16ನೇ ಶತಮಾನದಲ್ಲೇ ಆಗಿದೆ. 16ನೇ ಶತಮಾನದಲ್ಲಿ ಮರಾಠ ಸಾಮ್ರಾಜ್ಯದ ರಾಜ ಮನೆತನಕ್ಕೆ ಕೆಲಸ ಮಾಡುವ ಭೀಮರಾವ್ ಎಂಬ ಬಾಣಸಿಗ ಕಾಜು ಕಟ್ಲಿಯನ್ನು ಕಂಡುಹಿಡಿದ ಎನ್ನಲಾಗುತ್ತದೆ. ಭೀಮರಾವ್ ಎನ್ನುವವನಿಗೆ ಮಾರಾಠ ರಾಜಮನೆತನಕ್ಕೆ ಇಷ್ಟವಾಗುವಂತಹ ಯಾವುದಾದರೂ ಸಿಹಿ ತಿಂಡಿಯನ್ನು ಮಾಡಬೇಕೆಂದು ಆದೇಶ ನೀಡಲಾಗಿತ್ತು. ಆಗ ಭೀಮರಾವ್ ಅವರು ಪಾರ್ಸಿಯ ಸಿಹಿ ತಿನಿಸಿನಲ್ಲಿ ಒಂದಾದ ಹಲ್ವಾ - ಎ – ಪಾರ್ಸಿಯ ತರಹದ ಸಿಹಿ ತಿಂಡಿಯನ್ನು ಮಾಡಲು ನಿರ್ಧರಿಸಿದರು. ಆ ಸಿಹಿ ತಿಂಡಿಯಲ್ಲಿ ಬಳಸಲಾದ ಬಾದಾಮಿ ಬದಲಿಗೆ ಭೀಮರಾವ್ ಅವರು ಗೋಡಂಬಿಯನ್ನು ಬಳಸಿ ಹೊಸ ಪ್ರಯೋಗ ಮಾಡಿದರು. ಆಗಲೇ ಕಾಜು ಕಟ್ಲಿಯ ಆವಿಷ್ಕಾರವಾಯಿತು.
ಇನ್ನೊಂದೆಡೆ ಕಾಜು ಕಟ್ಲಿ ಮೊಘಲರ ಕಾಲದಲ್ಲೇ ಆರಂಭವಾಯಿತು ಎಂದು ಕೂಡ ಹೇಳಲಾಗುತ್ತದೆ. ಕಾಜು ಕಟ್ಲಿಯನ್ನು ಮೊದಲು ಜಹಾಂಗೀರನ ಆಳ್ವಿಕೆಯಲ್ಲಿ ತಯಾರಿಸಲಾಯಿತು ಎಂಬ ಕಥೆಯೂ ಇದೆ. ಜಹಾಂಗೀರನು ಸಿಖ ಗುರುಗಳಿಗೆ ಗೌರವ ಸಲ್ಲಿಸಲು ಅರಮನೆಯ ಅಡುಗೆಮನೆಯಲ್ಲಿ ಕಾಜು ಕಟ್ಲಿಯನ್ನು ತಯಾರಿಸುತ್ತಿದ್ದ ಎಂದು ಕೂಡ ಹೇಳಲಾಗುತ್ತದೆ. ಜಹಾಂಗೀರನ ರಾಜಮನೆತನದ ಅಡುಗೆಯವರು ದೀಪಾವಳಿಯ ದಿನದಂದು ಗೋಡಂಬಿ, ಸಕ್ಕರೆ ಮತ್ತು ತುಪ್ಪದಿಂದ ಮಾಡಿದ ಸಿಹಿ ತಿಂಡಿಯನ್ನು ತಯಾರಿಸುತ್ತಿದ್ದರು. ದೀಪಾವಳಿಯ ಸಂದರ್ಭದಲ್ಲಿ ಮಾಡಲಾದ ಈ ಸಿಹಿ ತಿಂಡಿಯನ್ನು ಇತರ ಪ್ರದೇಶಗಳಿಗೆ ವಿತರಿಸಲಾಗಿದ್ದರಿಂದ ಅದು ಎಲ್ಲೆಡೆ ಜನಪ್ರಿಯವಾಯಿತು ಎಂದು ಕೆಲವರು ಹೇಳುತ್ತಾರೆ.
ಮೊಟ್ಟೆ ನಿಜವಾಗಲೂ ಆರೋಗ್ಯಕ್ಕೆ ಒಳ್ಳೇಯದಾ? ಹಳದಿ ಬೆಸ್ಟೋ, ಬಿಳಿಯ ಪಾರ್ಟ್ ಒಳಿತೋ?
ಶತಮಾನಗಳಷ್ಟು ಹಳೆಯದಾದ ಕಾಜು ಕಟ್ಲಿ ಈಗ ಭಾರತದ ಸಾಂಪ್ರದಾಯಿಕ ಸಿಹಿಯಾಗಿದೆ. ಬಹುತೇಕ ಮಂದಿ ಇದನ್ನು ಇಷ್ಟಪಡುತ್ತಾರೆ. ಅನೇಕ ಮಂದಿ ಇದನ್ನು ಮನೆಯಲ್ಲೇ ತಯಾರಿಸಿ ಸವಿಯುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇದ್ದರೂ ಕೂಡ ಮೈದಾ ಹಿಟ್ಟು ಬಳಸಿ ಅಥವಾ ಎಣ್ಣೆಯಲ್ಲಿ ಕರಿದು ಮಾಡುವ ಇತರ ಸಿಹಿ ತಿಂಡಿಗಳಿಗಿಂತ ಇದು ಉತ್ತಮವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.