ಬಾರತೀಯ ಸಂಸ್ಕೃತಿಯಲ್ಲಿ ಉಪ್ಪಿನಕಾಯಿ (Pickle)ಗೆ ಹೆಚ್ಚಿನ ಮಹತ್ವವಿದೆ. ಊಟಕ್ಕೆ ಕುಳಿತಾಗ ಉಪ್ಪು (Salt), ಉಪ್ಪಿನಕಾಯಿಯನ್ನು ಮೊದಲಿಗೆ ಬಡಿಸಿಬಿಡುತ್ತಾರೆ. ಹೆಚ್ಚು ಉಪ್ಪಿನಕಾಯಿ ತಿನ್ಬೇಡ ಅಂತ ಹಿರಿಯರೇನೋ ಬಯ್ತಾರೆ. ಆದರೆ, ಉಪ್ಪಿನಕಾಯಿಯಲ್ಲಿಯೂ ಹಲವು ಆರೋಗ್ಯ (Health)ಕರ ಗುಣಗಳಿವೆ ಅನ್ನೋದು ನಿಮಗೆ ಗೊತ್ತಾ ?
ಊಟ ಮಾಡುವಾಗ ಎಷ್ಟೇ ಬಗೆಯ ಸಾರು, ಸಾಂಬಾರು, ಪಲ್ಯ ಮಾಡಿದರೂ ಉಪ್ಪಿನಕಾಯಿ ಬಾಟಲ್ ಅಂತೂ ಪಕ್ಕಕ್ಕೆ ಇರಲೇಬೇಕು. ಹಬ್ಬ, ಹರಿದಿನ, ಯಾವುದೇ ಸಮಾರಂಭವಿರಲಿ ಎಷ್ಟೇ ತರಹೇವಾರಿ ಅಡುಗೆಯನ್ನು ಮಾಡಲಿ, ಉಪ್ಪಿನಕಾಯಿಯಿಲ್ಲದೆ ಮಾತ್ರ ಎಂಥಹಾ ಭೂರಿ ಭೋಜನವೂ ಸಂಪೂರ್ಣವಾಗುವುದಿಲ್ಲ. ಉಪ್ಪಿನಕಾಯಿಯನ್ನು ನಾಲಗೆಗೆ ತಾಗಿಸಿ ನಂತರ ಇತರ ಭಕ್ಷ್ಯಗಳ ರುಚಿ ಸವಿಯುವುದು ಹಲವರ ವಾಡಿಕೆ. ಬಾಯಿಗೆ ರುಚಿಯಾಗಿರೋ ಉಪ್ಪಿನಕಾಯಿ ಆರೋಗ್ಯಕ್ಕೂ ಉಪಕಾರಿ ಅನ್ನೋದು ನಿಮಗೆ ಗೊತ್ತಾ ? ಉಪ್ಪಿನಕಾಯಿಯಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಕಾರಣ ಇದನ್ನು ಹಿತಮಿತವಾಗಿ ಸೇವಿಸಬೇಕು ಎಂದು ಹಲವರು ಸಲಹೆ ನೀಡುತ್ತಾರೆ. ಇಲ್ಲದಿದ್ದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಅದು ನಿಜ ಕೂಡಾ ಹೌದು. ಉಪ್ಪಿನಕಾಯಿಯನ್ನು ಹೆಚ್ಚೆಚ್ಚು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಸತತವಾಗಿ ಉಪ್ಪಿನಕಾಯಿ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಬಹುದು.
ಆದರೆ, ಚಳಿಗಾಲದಲ್ಲಿ ಉಪ್ಪಿನಕಾಯಿ ಸೇವನೆ ಬೆಸ್ಟ್ ಎನ್ನುತ್ತಾರೆ ಆಹಾರತಜ್ಞರು. ಪೌಷ್ಟಿಕತಜ್ಞ ರುಜುತಾ ದಿವೇಕರ್, ಚಳಿಗಾಲದಲ್ಲಿ ಪ್ರಮುಖ ಆಹಾರದದ ಜತೆಗೆ ಉಪ್ಪಿನಕಾಯಿಯನ್ನು ಸವಿಯುವುದು ಅತ್ಯುತ್ತಮ ಎಂದು ಹೇಳುತ್ತಾರೆ. ದೇಶದಾದ್ಯಂತ ಮಕರ ಸಂಕ್ರಾಂತಿ, ಲೋಹ್ರಿ ಮತ್ತು ಪೊಂಗಲ್‌ನಂತಹ ಸುಗ್ಗಿಯ ಹಬ್ಬಗಳ ಸಮಯ. ಇನ್ನೂ ಸಾಕಷ್ಟು ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಹಬ್ಬಗಳ ಸಂದರ್ಭದಲ್ಲಿ ಸಿಹಿ, ಹುಳಿ, ಖಾರ ಎಂದು ರುಚಿ ರುಚಿಯಾದ ಅಡುಗೆ ಮಾಡುವುದು ಸಾಮಾನ್ಯ. ಆದರೆ, ಈ ಸಂದರ್ಭದಲ್ಲಿ ಉಪ್ಪಿನಕಾಯಿಯೂ ಅಡುಗೆಮನೆಯಲ್ಲಿರಲಿ ಎಂದು ರುಜುತಾ ದಿವೇಕರ್ ಸಲಹೆ ನೀಡುತ್ತಾರೆ.
ಉಪ್ಪಿನಕಾಯಿ ಜ್ಯೂಸ್ ಬಗ್ಗೆ ಕೇಳಿದ್ದೀರಾ?ಆರೋಗ್ಯ ಸಮಸ್ಯೆಗಿದು ರಾಮಬಾಣ
ಈ ಕುರಿತು ಇನ್‌ಸ್ಟಾಗ್ರಾಮ್ (Instagram) ಪೋಸ್ಟ್ ಮಾಡಿರುವ ಅವರು ‘ಉತ್ತರ ಭಾರತದ ಕಠಿಣ ಪರಿಶ್ರಮಿ ಕೃಷಿಕರು ತಮ್ಮ ಚಳಿಗಾಲದ ತರಕಾರಿಗಳನ್ನು ಕೊಯ್ಲು ಮಾಡಿದರು ಮತ್ತು ತಮ್ಮ ಆಹಾರದಲ್ಲಿ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ಚಳಿಗಾಲದ ಉಪ್ಪಿನಕಾಯಿ (Pickle)ಗಳಾಗಿ ಪರಿವರ್ತಿಸಿದರು’ ಎಂದು ಬರೆದಿದ್ದಾರೆ. ಇದರ ಜತೆಯಲ್ಲಿಯೇ ಚಳಿಗಾಲದಲ್ಲಿ ಉಪ್ಪಿನಕಾಯಿ ಸೇವನೆಯಿಂದಾಗುವ ಪ್ರಯೋಜನದ ಬಗ್ಗೆ ಅವರು ವಿವರಿಸಿದ್ದಾರೆ.
ಚಳಿಗಾಲ (Winter)ದಲ್ಲಿ ಉಪ್ಪಿನಕಾಯಿ ಸೇವನೆ ಮುಖ್ಯವಾಗಿ ದೇಹವನ್ನು ಬೆಚ್ಚಗಿರುವಂತೆ ನೋಡಿಕೊಳ್ಳುತ್ತದೆ. ಉಪ್ಪಿನಕಾಯಿಯಲ್ಲಿರುವ ಮಸಾಲೆ ಅಂಶಗಳು ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ. ಉಪ್ಪಿನಕಾಯಿ ಸೇವನೆ ಚರ್ಮ ಮತ್ತು ಕರುಳಿನ ಸಮಸ್ಯೆಗಳನ್ನು ಸರಿಪಡಿಸಲು ಉತ್ತಮವಾಗಿವೆ. ಅಲ್ಲದೆ, ಕೀಲು ನೋವುಗಳನ್ನು ಸಹ ಪಿಕಲ್ ಸೇವನೆ ಗುಣಪಡಿಸಬಹುದು. ಉಪ್ಪಿನಕಾಯಿ, ಚಳಿಗಾಲದಲ್ಲಿ ಉಸಿರಾಟದ ಅಸ್ವಸ್ಥತೆಗಳ ವಿರುದ್ಧ ಸಾಂಪ್ರದಾಯಿಕ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿಯೇ ರುಜುತಾ ದಿವೇಕರ್ ಚಳಿಗಾಲದಲ್ಲಿ ಉಪ್ಪಿನಕಾಯಿಯನ್ನು ಹೆಚ್ಚಾಗಿ ಬಳುಸವಂತೆ ಸಲಹೆ ನೀಡುತ್ತಾರೆ.
ಊಟದ ರುಚಿ ಹೆಚ್ಚಿಸುವ ಈರುಳ್ಳಿ ಉಪ್ಪಿನಕಾಯಿ!
ಉಪ್ಪಿನಕಾಯಿ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಉಪ್ಪಿನಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯ (Health) ಪ್ರಯೋಜನಗಳಿರುವುದು ಅಧ್ಯಯನದಿಂದ ತಿಳಿದುಬಂದಿದೆ, ಅವುಗಳೆಂದರೆ ಉಪ್ಪಿನಕಾಯಿಯಲ್ಲಿರುವ ಬೀಟಾ-ಕ್ಯಾರೋಟಿನ್ ಕೆಲವು ರೀತಿಯ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೀಟಾ-ಕ್ಯಾರೋಟಿನ್ ಹೊಂದಿರುವ ಆಹಾರ (Food)ಗಳನ್ನು ನಿಯಮಿತವಾಗಿ ತಿನ್ನುವುದು 65 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ನೆನಪಿನ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ನೈಸರ್ಗಿಕವಾಗಿ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಪಡೆಯಲು ಬಯಸುವ ಜನರಿಗೆ ಉಪ್ಪಿನಕಾಯಿ ಅತ್ಯುತ್ತಮ ಸಂಪನ್ಮೂಲವಾಗಿದೆ.
ಉಪ್ಪಿನಕಾಯಿ ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಉಪ್ಪಿನಕಾಯಿಯಲ್ಲಿರುವ ಹೆಚ್ಚಿನ ನೀರಿನ ಅಂಶದಿಂದಾಗಿ, ಅವು ಹೆಚ್ಚು ಸಮಯ ಹೊಟ್ಟೆ ತುಂಬಿರುವಂತೆ ಮಾಡಲು ಸಹಾಯ ಮಾಡುತ್ತದೆ. ಉಪ್ಪಿನಕಾಯಿಯಲ್ಲಿ ವಿನೇಗರ್ ಕೂಡ ಇರುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ. ವಿನೇಗರ್ ಜೀರ್ಣಾಂಗ ವ್ಯವಸ್ಥೆಯು ಕಾರ್ಬೋ ಹೈಡ್ರೇಟ್‌ಗಳನ್ನು ಹೀರಿಕೊಳ್ಳುವ ದರವನ್ನು ನಿಧಾನಗೊಳಿಸುತ್ತದೆ. ಇದು ಇನ್ಸುಲಿನ್ ಸ್ಪೈಕ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ., ನಿಮ್ಮ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಹಸಿವನ್ನು ಪ್ರಚೋದಿಸುವ ಇನ್ಸುಲಿನ್ ಡ್ರಾಪ್ ಅನ್ನು ಕಡಿಮೆ ಮಾಡುತ್ತದೆ.
ಇವಿಷ್ಟೇ ಅಲ್ಲದೆ ಉಪ್ಪಿನಕಾಯಿ ವಿಟಮಿನ್ ಎ, ವಿಟಮಿನ್ ಕೆ, ಪೊಟಾಶಿಯಮ್, ಪೋಸ್ಪೊರಸ್‌ನಲ್ಲಿ ಸಮೃದ್ಧವಾಗಿದೆ. ಇದು ದೇಹದ ಒಟ್ಟಾರೆ ಆರೋಗ್ಯವನ್ನು ಸಮತೋಲದಲ್ಲಿಡುತ್ತದೆ. ಉಪ್ಪಿನಕಾಯಿಯ ಕುರಿತು ಇನ್ನೊಂದು ಉತ್ತಮ ವಿಚಾರವೆಂದರೆ ಇದನ್ನು ಚಪಾತಿ, ಪರೋಟಾಗಳು, ಅನ್ನ ಮತ್ತು ಬ್ರೆಡ್ ನೊಂದಿಗೂ ಸವಿಯಬಹುದಾಗಿದೆ. ಹೀಗಾಗಿ ಎಲ್ಲಾ ಕಾಲದಲ್ಲೂ ಉಪ್ಪಿನಕಾಯಿ ನಿಮ್ಮ ತಟ್ಟೆಯಲ್ಲಿರಲಿ.