ಅಡುಗೆ ಏನ್ ಮಾಡ್ಬೇಕು ಅನ್ನೋ ಟೆನ್ಷನ್ ಬಿಡಿ : ದಿನಕ್ಕೊಂದು ತರಕಾರಿ ಮಜ್ಜಿಗೆ ಹುಳಿ ಮಾಡಿ

By Roopa Hegde  |  First Published Sep 4, 2024, 3:13 PM IST

ಹಿಂಗು, ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಎನ್ನುವ ಮಾತಿದೆ. ಆದ್ರೆ ನಾವ್ ಹೇಳೋ ಅಡುಗೆಗೆ, ಇವೆರಡ ಜೊತೆ ಮಜ್ಜಿಗೆ, ಸ್ವಲ್ಪ ತರಕಾರಿ ಬೇಕಾಗುತ್ತದೆ. ದಿನಾ ಅದೇ ಸಾರು, ಸಾಂಬಾರ್ ಬೋರ್ ಆಗಿದೆ ಎನ್ನುವವರು ಸುಲಭವಾಗಿ ಮಾಡುವ ಮಜ್ಜಿಗೆ ಹುಳಿ ಟ್ರೈ ಮಾಡ್ಬಹುದು. 


ಚಳಿಗಾಲ (winter) ಇರಲಿ ಇಲ್ಲ ಮಳೆಗಾಲ (rainy) ಇರಲಿ ಆರೋಗ್ಯಕ್ಕೆ ಉತ್ತಮ, ಸುಲಭವಾಗಿ ಮಾಡಬಹುದಾದ ಪದಾರ್ಥಗಳಲ್ಲಿ ಮಜ್ಜಿಗೆ ಹುಳಿ (majjige huli ) ಕೂಡ ಒಂದು. ಅನೇಕ ತರಕಾರಿಗಳಿಂದ ಈ ಮಜ್ಜಿಗೆ ಹುಳಿ ಮಾಡ್ಬಹುದು. ಮಜ್ಜಿಗೆ ಜೊತೆ ತರಕಾರಿ (vegetable) ಇದ್ರೆ ಸಾಕು. ಅನ್ನಕ್ಕೆ ಅದೇ ಸಾಂಬಾರ್, ಗೊಜ್ಜು ತಿಂದು ಬೋರ್ ಆಗಿದೆ ಎನ್ನುವವರು ಮಜ್ಜಿಗೆ ಹುಳಿ ಟ್ರೈ ಮಾಡ್ಬಹುದು. ನಾವಿಂದು ದಕ್ಷಿಣ ಭಾರತದ ಪ್ರಸಿದ್ಧ ಪಾಕವಿಧಾನಗಳಲ್ಲಿ ಒಂದಾದ ಮಜ್ಜಿಗೆ ಹುಳಿಯನ್ನು ನಾಲ್ಕು ತರಕಾರಿಯಲ್ಲಿ ಮಾಡೋದು ಹೇಗೆ ಅಂತ ಹೇಳ್ತೇವೆ. 

ಬಿಳಿ ಬೂದುಗುಂಬಳಕಾಯಿ ಮಜ್ಜಿಗೆ ಹುಳಿ (White Gray Pumpkin ajjige huli) 

Tap to resize

Latest Videos

undefined

ಬಿಳಿ ಬೂದಗುಂಬಳಕಾಯಿ ಮಜ್ಜಿಗೆಹುಳಿ ಮಾಡಲು ಬೇಕಾಗುವ ಪದಾರ್ಥ : 
•    ಬಿಳಿ ಬೂದುಗುಂಬಳ - ಕಾಲು ಕೆಜಿ
•    ಗಟ್ಟಿ ಮೊಸರು - ಕಾಲು ಲೀಟರ್ 
•    ಹಸಿ ಮೆಣಸಿನ ಕಾಯಿ - ಮೂರರಿಂದ ನಾಲ್ಕು 
•    ಒಗ್ಗರಣೆಗೆ ಕರಿಬೇವು 
•    ಕೊತ್ತಂಬರಿ ಸೊಪ್ಪು - ಅರ್ಥ ಕಪ್
•    ತೆಂಗಿನ ತುರಿ - ಅರ್ಥ ಕಪ್ 
•    ಜಿರಿಗೆ - ಒಂದು ಚಮಚ 
•    ನೆನೆಸಿಟ್ಟ ಕಡಲೆಬೇಳೆ - ಎರಡು ಚಮಚ  
•    ಅರಿಶಿನ - ಕಾಲು ಚಮಚ 
•    ಒಗ್ಗರಣೆಗೆ ಹಿಂಗು, ಸಾಸಿವೆ ಹಾಗೂ ಮೂರು ಒಣಮೆಣಸಿನ ಕಾಯಿ
•    ರುಚಿಗೆ ತಕ್ಕಷ್ಟು ಉಪ್ಪು, ಮೂರು ಚಮಚ ಎಣ್ಣೆ.
ಮಜ್ಜಿಗೆ ಹುಳಿ ಮಾಡುವ ವಿಧಾನ : ಒಂದು ಪಾತ್ರೆಗೆ ನೀರನ್ನು ಹಾಕಿ, ಕತ್ತರಿಸಿದ ಬೂದುಗುಂಬಳಕಾಯಿ,ಕರಿಬೇವು ಮತ್ತು ಅರಿಶಿನ ಮತ್ತು ಉಪ್ಪನ್ನು ಹಾಕಿ ಬೇಯಿಸಿ. ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಜಿರಿಗೆ ಮತ್ತು ಎರಡು ಚಮಚ ಕಡಲೆ ಬೇಳೆ ಮತ್ತು ಹಸಿ ಮೆಣಸನ್ನು ಹಾಕಿಯನ್ನು ಹಾಕಿ ರುಬ್ಬಿಕೊಳ್ಳಿ. ತರಕಾರಿ ಬೆಂದ ನಂತ್ರ ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಮೊಸರಿಗೆ ನೀರು ಬೆರೆಸಿ ಮಜ್ಜಿಗೆ ಮಾಡ್ಕೊಂಡು ಅದನ್ನು ಕುದಿಯುತ್ತಿರುವ ತರಕಾರಿ ಮಿಶ್ರಣಕ್ಕೆ ಬೆರೆಸಿ 5 ನಿಮಿಷ ಕುದಿಸಿ. ಒಂದು ಬಾಣೆಲೆಗೆ ಎಣ್ಣೆ ಹಾಕಿ, ಸಾಸಿವೆ, ಒಣ ಮೆಣಸು ಮತ್ತು ಹಿಂಗು ಹಾಕಿ ಒಗ್ಗರಣೆ ಮಾಡಿ, ಅದನ್ನು ಮಜ್ಜಿಗೆ ಹುಳಿಗೆ ಹಾಕಿ, ಗ್ಯಾಸ್ ಆಫ್ ಮಾಡಿ.

ಸೋರೆಕಾಯಿ ಮಜ್ಜಿಗೆ ಹುಳಿ (Sorekai Majjige Huli)  
ಸೋರೆಕಾಯಿ ಸಾಮಾನುಗಳು: 

•    ಸೊರೆಕಾಯಿ – 1 ಚಿಕ್ಕದು   
•    ಮೆಣಸು – 2
•    ಜೀರಿಗೆ – 1 ಟೀ ಸ್ಪೂನ್
•    ಕೊತ್ತಂಬರಿ ಬೀಜ – 1 ಟೀ ಸ್ಪೂನ್
•    ಕಾಯಿ ತುರಿ – 1/4 ಕಪ್
•    ಮೊಸರು – 1/2 ಲೀಟರ್
•    ಕಡಲೆ ಬೇಳೆ – 1/4 ಕಪ್
•    ಉಪ್ಪು – ಸ್ವಲ್ಪ
•    ತುಪ್ಪ – 1 ಟೇಬಲ್ ಸ್ಪೂನ್
•    ಕರಿಬೇವು – ಐದಾರು ಎಲೆ
ಸೋರೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ: ಚೆನ್ನಾಗಿ ತೊಳೆದು ಕತ್ತರಿಸಿದ ಸೋರೆಕಾಯಿಗೆ ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿ. ತೆಂಗಿನ ತುರಿ,ಮೆಣಸು, ಜೀರಿಗೆ, ಕೊತ್ತಂಬರಿ ಬೀಜ,  ಕಡಲೆ ಬೇಳೆಯನ್ನು ಹಾಕಿ ರುಬ್ಬಿಕೊಳ್ಳಿ. ಬೆಂದ ಸೊರೆಕಾಯಿಗೆ ಈ ಪೇಸ್ಟ್‌ ಹಾಕಿ ಕುದಿಸಿ. ನಂತ್ರ ಮಜ್ಜಿಗೆ ಸೇರಿಸಿ ಕುದಿಸಿ. ತುಪ್ಪ ಮತ್ತು ಕರಿಬೇವಿನ ಒಗ್ಗರಣೆಯನ್ನು ಮಜ್ಜಿಗೆ ಹುಳಿಗೆ ಹಾಕಿ ಸರ್ವ್‌ ಮಾಡಿ

ಬೆಂಡೆಕಾಯಿ ಮಜ್ಜಿಗೆ ಹುಳಿ (okra Majjige Huli)
ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಾನುಗಳು:
•    ಬೇಂಡೆಕಾಯಿ – 10-12
•    ಹಸಿಮೆಣಸು – 3-4
•    ತೆಂಗಿನಕಾಯಿ ತುರಿ – 1/4 ಕಪ್
•    ಜೀರಿಗೆ – 1 ಟೀ ಸ್ಪೂನ್
•    ಉಪ್ಪು – ರುಚಿಗೆ ತಕ್ಕಷ್ಟು
•    ಮೊಸರು – 1/2 ಲೀಟರ್
•    ತುಪ್ಪ – 1 ಟೇಬಲ್ ಸ್ಪೂನ್
•    ಕರಿಬೇವು – ಸ್ವಲ್ಪ
•    ಸಾಸಿವೆ – ಕಾಲು ಚಮಚ 
ಬೆಂಡೆಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ:
ಬೆಂಡೆಕಾಯಿಯನ್ನು ಸಣ್ಣಗೆ ಕತ್ತರಿಸಿ, ಬಿಸಿ ತುಪ್ಪದಲ್ಲಿ ಹುರಿದುಕೊಳ್ಳಿ. ತೆಂಗಿನಕಾಯಿ, ಹಸಿಮೆಣಸು, ಜೀರಿಗೆಯನ್ನು ಹಾಕಿ ರುಬ್ಬಿ, ಪೇಸ್ಟ್ ಸಿದ್ಧಪಡಿಸಿ. ಹುರಿದ ಬೇಂಡೆಕಾಯಿಗೆ ಈ ಪೇಸ್ಟ್ ಬೆರೆಸಿ, ಮೊಸರು ಸೇರಿಸಿ ಕುದಿಸಿ. ತುಪ್ಪಕ್ಕೆ ಕರಿಬೇವು, ಕೆಂಪು ಮೆಣಸಿನಕಾಯಿ, ಸಾಸಿವೆ ಹಾಕಿ ಒಗ್ಗರಣೆ ಮಾಡಿ,ಅದನ್ನು ಮಜ್ಜಿಗೆ ಹುಳಿಗೆ ಹಾಕಿ. 

ಮೆಂತ್ಯೆ ಸೊಪ್ಪಿನ ಮಜ್ಜಿಗೆ ಹುಳಿ (Methi Majjige Huli)
ಮೆಂತ್ಯೆ ಸೊಪ್ಪಿನ ಮಜ್ಜಿಗೆ ಹುಳಿಗೆ ಬೇಕಾಗುವ ಸಾಮಾನುಗಳು :
•    ಮೆಂತ್ಯೆ ಸೊಪ್ಪು – 1 ಕಪ್
•    ಹಸಿಮೆಣಸು – 3
•    ಜೀರಿಗೆ – 1 ಟೀ ಸ್ಪೂನ್
•    ತೆಂಗಿನ ತುರಿ – 1/4 ಕಪ್
•    ಉಪ್ಪು – ಸ್ವಲ್ಪ
•    ಮೊಸರು – 1/2 ಲೀಟರ್
•    ತುಪ್ಪ – 1 ಟೇಬಲ್ ಸ್ಪೂನ್
•    ಕರಿಬೇವು – 1 ಹಸೆ
ಮೆಂತ್ಯೆ ಸೊಪ್ಪಿನ ಮಜ್ಜಿಗೆ ಹುಳಿ ಮಾಡುವ ವಿಧಾನ : ಮೆಂತ್ಯೆ ಸೊಪ್ಪನ್ನು ಸ್ವಚ್ಛಗೊಳಿಸಿಕೊಂಡು ಅದಕ್ಕೆ ಉಪ್ಪು ಹಾಕಿ,ನೀರಿನಲ್ಲಿ ಬೇಯಿಸಿಕೊಳ್ಳಿ.  ಇನ್ನೊಂದು ಕಡೆ ಹಸಿಮೆಣಸು, ಜೀರಿಗೆ, ತೆಂಗಿನಕಾಯಿ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಬೇಯುತ್ತಿರುವ ಮೆಂತ್ಯೆ ಸೊಪ್ಪಿಗೆ ರುಬ್ಬಿದ ಪೇಸ್ಟ್‌ ಹಾಕಿ. ನಂತ್ರ ಮೊಸರನ್ನು ಹಾಕಿ ಚೆನ್ನಾಗಿ ಕುದಿಸಿ. ಐದು ನಿಮಿಷದ ನಂತ್ರ ಗ್ಯಾಸ್‌ ಬಂದ್‌ ಮಾಡಿ. ಒಂದು ಬಾಣಲೆಗೆ ತುಪ್ಪ ಹಾಕಿ, ಅದಕ್ಕೆ ಕರಿಬೇವು ಮತ್ತು ಮೆಣಸಿನ ಕಾಯಿಯನ್ನು ಹಾಕಿ ಒಗ್ಗರಣೆ ಮಾಡಿ, ಅದನ್ನು ಮಜ್ಜಿಗೆ ಹುಳಿಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. 

click me!