ಬಹುತೇಕರು ಶ್ರಾವಣ ಮಾಸದಲ್ಲಿ ಮಾಂಸಾಹಾರದಿಂದ ದೂರವಿರುವುದರಿಂದ ಬಾಯಿಗೆ ರುಚಿಯಾದ ಬಿರಿಯಾನಿ ಅಥವಾ ಮಟನ್ ಪಲಾವ್ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಅಂತಹ ಸಮಯದಲ್ಲಿ ಮಾಂಸಾಹಾರಕ್ಕೆ ಸರಿಸಮನಾದ ರುಚಿ ನೀಡುವ, ಆರೋಗ್ಯಕ್ಕೂ ಉತ್ತಮವಾದ 'ವೈಟ್ ನುಗ್ಗೆಕಾಯಿ ಪುಲಾವ್' ಒಂದೊಳ್ಳೆ ಆಯ್ಕೆ. ನುಗ್ಗೆಕಾಯಿಯಲ್ಲಿರುವ ವಿಶೇಷ ಸ್ವಾದ ಈ ಪಲಾವ್‌ನ ರುಚಿಯನ್ನು ಹೆಚ್ಚಿಸುತ್ತದೆ. ಇದನ್ನು ಮಾಡುವ ಸರಳ ವಿಧಾನ ಇಲ್ಲಿದೆ..
ನುಗ್ಗೆಕಾಯಿ 4-5
ಅಕ್ಕಿ (ಕನಿಷ್ಠ 2 ಕಪ್ ಅರ್ಧ ಗಂಟೆ ನೆನೆಸಿದ್ದು)
ಈರುಳ್ಳಿ 2
ಟೊಮೆಟೊ 1
ಹಸಿಮೆಣಸಿನಕಾಯಿ 4-5
ಶುಂಠಿ-ಬೆಳ್ಳುಳ್ಳಿ ಸ್ವಲ್ಪ
ಚಕ್ಕೆ, ಲವಂಗ, ಏಲಕ್ಕಿ, ಮೊಸರು, ಬಿರಿಯಾನಿ ಪೌಡರ್, ಕೊತ್ತಂಬರಿ ಸೊಪ್ಪು, ಪುದೀನಾ, ನಿಂಬೆ ಹಣ್ಣು, ಗೋಡಂಬಿ, ಎಣ್ಣೆ ಮತ್ತು ತುಪ್ಪ.
*ಮೊದಲಿಗೆ ಒಂದು ಮಿಕ್ಸಿ ಜಾರ್‌ಗೆ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಮತ್ತು ಲವಂಗ ಸ್ವಲ್ಪ ನೀರು ಹಾಕಿ ನಯವಾದ ಪೇಸ್ಟ್ ಮಾಡಿ ಸೈಡ್‌ನಲ್ಲಿ ಇಟ್ಟುಕೊಳ್ಳಿ. ಇದು ಪಲಾವ್‌ನ ಮಸಾಲೆಗೆ ಮುಖ್ಯ ಆಧಾರ.
*ನಂತರ ಕುಕ್ಕರ್‌ನಲ್ಲಿ ಎಣ್ಣೆ ಮತ್ತು ತುಪ್ಪವನ್ನು ಸಮಪ್ರಮಾಣದಲ್ಲಿ ಹಾಕಿ ಕಾಯಿಸಿ. ಅದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗದಂತಹ ಹೋಲ್ ಸ್ಪೈಸಸ್ ಹಾಕಿ, ನಂತರ ಉದ್ದಕ್ಕೆ ಹೆಚ್ಚಿದ ಎರಡು ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ ಕೆಂಪಗಾದ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪನ್ನು ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದಕ್ಕೆ ಒಂದು ಟೊಮೆಟೊ ಹಾಕಿ ಅದು ಸಾಫ್ಟ್ ಆಗುವವರೆಗೆ ಬೇಯಿಸಿ.
*ಈಗ ಕತ್ತರಿಸಿಟ್ಟುಕೊಂಡ ನುಗ್ಗೆಕಾಯಿ ತುಂಡುಗಳನ್ನು ಕುಕ್ಕರ್‌ಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕನಿಷ್ಠ 5 ರಿಂದ 6 ನಿಮಿಷಗಳ ಕಾಲ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ. ನುಗ್ಗೆಕಾಯಿ ಎಣ್ಣೆಯಲ್ಲಿ ಎಷ್ಟು ಚೆನ್ನಾಗಿ ಹುರಿಯುತ್ತದೆಯೋ ಅಷ್ಟು ರುಚಿ ಹೆಚ್ಚುತ್ತದೆ. ಆ ಬಳಿಕ ರುಬ್ಬಿಟ್ಟುಕೊಂಡ ಮಸಾಲೆ ಪೇಸ್ಟ್, ಒಂದು ಚಮಚ ಮೊಸರು ಮತ್ತು ಒಂದು ಸ್ಪೂನ್ ಬಿರಿಯಾನಿ ಪೌಡರ್ ಸೇರಿಸಿ. ಮಸಾಲೆಯಿಂದ ಎಣ್ಣೆ ಬಿಟ್ಟುಕೊಳ್ಳುವವರೆಗೆ ಮತ್ತು ಹಸಿ ವಾಸನೆ ಹೋಗುವವರೆಗೆ ಕೈ ಆಡಿಸಿ.
*ಈಗ ಪಲಾವ್ ಅಳತೆಗೆ ತಕ್ಕಷ್ಟು ನೀರು ಸೇರಿಸಿ (ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರು). ನೀರು ಕುದಿಯಲು ಪ್ರಾರಂಭಿಸಿದಾಗ ಅರ್ಧ ಗಂಟೆ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ. ಕೊನೆಯದಾಗಿ ಸ್ವಲ್ಪ ನಿಂಬೆ ರಸ ಹಿಂಡಿ, ಕುಕ್ಕರ್ ಲಿಡ್ ಮುಚ್ಚಿ ಒಂದರಿಂದ ಎರಡು ವಿಶಲ್ ಕೂಗಿಸಿ.
*ಕುಕ್ಕರ್ ಹಬೆ ಇಳಿದ ನಂತರ, ತುಪ್ಪದಲ್ಲಿ ಕೆಂಪಗೆ ಫ್ರೈ ಮಾಡಿರುವ ಗೋಡಂಬಿಯನ್ನು ಮೇಲೆ ಉದುರಿಸಿ ನಿಧಾನವಾಗಿ ಮಿಕ್ಸ್ ಮಾಡಿದರೆ, ಘಮಘಮಿಸುವ ಶ್ರಾವಣ ಮಾಸ ಸ್ಪೆಷಲ್ ನುಗ್ಗೆಕಾಯಿ ಪುಲಾವ್ ಸವಿಯಲು ಸಿದ್ಧ. ಇದನ್ನು ಮೊಸರು ಬಜ್ಜಿಯೊಂದಿಗೆ ಸವಿದರೆ ಅದ್ಭುತವಾಗಿರುತ್ತದೆ.
ನುಗ್ಗೆಕಾಯಿ ಆಯ್ಕೆ: ಪಲಾವ್ ಮಾಡುವಾಗ ತುಂಬಾ ಎಳೆಯ ನುಗ್ಗೆಕಾಯಿ ಬಳಸಬೇಡಿ, ಹಾಗೆಯೇ ಅತಿಯಾಗಿ ಬಲಿತಿದ್ದೂ ಬೇಡ. ಮಧ್ಯಮ ಗಾತ್ರದ (Medium) ನುಗ್ಗೆಕಾಯಿ ಬಳಸಿದರೆ ಅದು ಅಕ್ಕಿಯ ಜೊತೆ ಚೆನ್ನಾಗಿ ಬೆಂದು, ರುಚಿಯನ್ನು ಬಿಡುತ್ತದೆ.
ನುಗ್ಗೆಕಾಯಿಯನ್ನು ಚುಚ್ಚಿ: ನುಗ್ಗೆಕಾಯಿಯನ್ನು ಕತ್ತರಿಸಿದ ನಂತರ ಒಂದು ಫೋರ್ಕ್ ಅಥವಾ ಚಾಕುವಿನಿಂದ ಲಘುವಾಗಿ ಅಲ್ಲಲ್ಲಿ ಚುಚ್ಚಿ. ಹೀಗೆ ಮಾಡುವುದರಿಂದ ನಾವು ಹಾಕುವ ಮಸಾಲೆ ಮತ್ತು ಉಪ್ಪು ನುಗ್ಗೆಕಾಯಿಯ ಒಳಭಾಗದವರೆಗೂ ಇಳಿಯುತ್ತದೆ.
ಮಸಾಲೆ ಹುರಿಯುವುದು: ನೀವು ರುಬ್ಬಿದ ಹಸಿ ಮಸಾಲೆ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಆಗಬೇಕು. ಮಸಾಲೆಯ ಹಸಿ ವಾಸನೆ ಹೋದರೆ ಮಾತ್ರ ಪಲಾವ್ ಘಮ ಹೆಚ್ಚುತ್ತದೆ. ಮಸಾಲೆಯಿಂದ ಎಣ್ಣೆ ಸೈಡ್‌ನಲ್ಲಿ ಬಿಡಲು ಶುರುವಾದಾಗ ಮಾತ್ರ ನೀರು ಸೇರಿಸಿ.
ಬಿಳಿ ಬಣ್ಣಕ್ಕಾಗಿ (White Pulao): ನಿಮಗೆ ಪಲಾವ್ ಬಿಳಿ ಬಣ್ಣದಲ್ಲಿ ಬೇಕಿದ್ದರೆ ಅರಿಶಿನ ಪುಡಿಯನ್ನು ಬಳಸಬೇಡಿ. ಟೊಮೆಟೊ ಹಾಕಿದರೂ ಕಡಿಮೆ ಪ್ರಮಾಣದಲ್ಲಿ ಹಾಕಿ, ಹಸಿಮೆಣಸಿನಕಾಯಿಯನ್ನು ಮಾತ್ರ ಖಾರಕ್ಕೆ ತಕ್ಕಂತೆ ಬಳಸಿ.
ನಿಂಬೆ ರಸದ ಬಳಕೆ: ಅಕ್ಕಿ ಹಾಕಿದ ಮೇಲೆ ಸ್ವಲ್ಪ ನಿಂಬೆ ರಸ ಸೇರಿಸುವುದರಿಂದ ಅಕ್ಕಿ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ ಮತ್ತು ಪಲಾವ್ ಫ್ರೆಶ್ ಆಗಿ ಕಾಣುತ್ತದೆ.
ನೀರಿನ ಅಳತೆ: ಅಕ್ಕಿಯನ್ನು ಮೊದಲೇ ಅರ್ಧ ಗಂಟೆ ನೆನೆಸಿಟ್ಟಿರುವುದರಿಂದ, ನೀರಿನ ಅಳತೆ ಸರಿಯಾಗಿರಲಿ. ಒಂದು ಕಪ್ ಅಕ್ಕಿಗೆ 1.5 ರಿಂದ 1.75 ಕಪ್ ನೀರು ಸಾಕಾಗುತ್ತದೆ (ಕುಕ್ಕರ್‌ನಲ್ಲಿ ಮಾಡುವಾಗ).
ಕೊನೆಯಲ್ಲಿ ತುಪ್ಪ: ಕುಕ್ಕರ್ ಲಿಡ್ ತೆಗೆದ ನಂತರ ಮೇಲೆ ಒಂದು ಚಮಚ ಹಸಿ ತುಪ್ಪ ಹಾಕಿ ಐದು ನಿಮಿಷ ಬಿಟ್ಟು ನಂತರ ಮಿಕ್ಸ್ ಮಾಡಿ. ಇದು ಪಲಾವ್‌ನ ಪರಿಮಳವನ್ನು ದ್ವಿಗುಣಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.