ಹೂಕೋಸು (Cauliflower) ನೀವು ಸಾಮಾನ್ಯವಾಗಿ ಯಾವ ಬಣ್ಣದಲ್ಲಿ ನೋಡಿರ್ತೀರಾ. ಬಿಳಿ ಬಣ್ಣದಲ್ಲಿ ಅಲ್ವಾ. ಆದ್ರೆ ನಿಮಗೆ ಗೊತ್ತಾ ಹೂಕೋಸು ಇತರ ಕೆಲವು ಬಣ್ಣದಲ್ಲೂ ಸಿಗುತ್ತೆ. ಹಸಿರು (Green), ಹಳದಿ (Yellow), ಕೇಸರಿ ಬಣ್ಣದಲ್ಲಿಯೂ ಹೂಕೋಸು ಸಿಗುತ್ತೆ ಅಂದ್ರೆ ನೀವು ನಂಬ್ತೀರಾ ?
ಎಲೆಕೋಸು ಕುಟುಂಬಕ್ಕೆ ಸೇರಿದ ಹೂಕೋಸು (Cauliflower) ಏಷ್ಯಾದಲ್ಲಿ ಹೆಚ್ಚಾಗಿ ಬೆಳೆಯುವ ಪ್ರಮುಖ ತರಕಾರಿಗಳಲ್ಲಿ ಒಂದಾಗಿದೆ. ಇದನ್ನು ಮೊದಲು ಟರ್ಕಿಯಲ್ಲಿ ಕಾಡು ಎಲೆಕೋಸಿನಿಂದ ಬೆಳೆಸಲಾಯಿತು. ಈ ತರಕಾರಿ (Vegetable) ಯುರೋಪ್‌ನಲ್ಲಿ 16ನೇ ಶತಮಾನದಲ್ಲಿ ಜನಪ್ರಿಯವಾಯಿತು. 20ನೇ ಶತಮಾನದ ಆರಂಭದಲ್ಲಿ ಅಮೇರಿಕಾದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಯಿತು. ಪ್ರಸ್ತುತ, ಈ ತರಕಾರಿಯನ್ನು ಅಮೇರಿಕಾ ಫ್ರಾನ್ಸ್, ಇಟಲಿ, ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಬೆಳೆಯಲಾಗುತ್ತದೆ.
ಹೂಕೋಸುಗಳನ್ನು ಪೋಷಕಾಂಶಗಳ ಪ್ರಮಾಣ ಹೆಚ್ಚಿದೆ ಅನ್ನೋ ಕಾರಣಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ. ಪಲ್ಯ. ಪಕೋಡಾ, ಸ್ನ್ಯಾಕ್ಸ್ ಮೊದಲಾದವುಗಳನ್ನು ತಯಾರಿಸಲು ಹೂಕೋಸನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಹೂಕೋಸು ಬಿಳಿ ಬಣ್ಣದಲ್ಲಿ ಲಭ್ಯವಿರುವುದನ್ನು ನೋಡಬಹುದು. ಆದರೆ ಬಿಳಿ ಬಣ್ಣದಲ್ಲಿ ಮಾತ್ರವಲ್ಲ ಬೇರೆ ಹಲವು ಬಣ್ಣಗಳಲ್ಲಿಯೂ ಹೂಕೋಸು ಲಭ್ಯವಾಗುತ್ತದೆ. ಹಸಿರು, ನೇರಳೆ, ಕಿತ್ತಳೆ ಹೀಗೆ ಹಲವು ಬಣ್ಣದಲ್ಲಿ ಹೂಕೋಸು ಲಭ್ಯವಾಗುತ್ತದೆ. ಆದರೆ ಈ ಬಣ್ಣ ಬಣ್ಣದ ಹೂಕೋಸುಗಳನ್ನು ಬೆಳೆಯಲು ಆರಂಭಿಸಿದ್ದು ಎಲ್ಲಿ ? ಇವುಗಳ ವಿಶೇಷತೆಯೇನು ಎಂಬುದನ್ನು ತಿಳಿಯೋಣ.
ರೆಸಿಪಿ - ಮನೆಯಲ್ಲೇ ಮಾಡಬಹುದು ಹೊಟೇಲ್ ಸ್ಟೈಲ್‌ನ ಟೇಸ್ಟಿ ತಂದೂರಿ ಗೋಬಿ!
ಹಸಿರು ಹೂಕೋಸು
ಈ ಹೂಕೋಸು ಕೋಸುಗಡ್ಡೆ ಮತ್ತು ಹೂಕೋಸುಗಳ ನಡುವಿನ ವಿವಿಧ ಪ್ರಭೇದಗಳಲ್ಲಿ ಬರುವುದರಿಂದ ಇದನ್ನು 'ಬ್ರೊಕೊಫ್ಲವರ್' ಎಂದೂ ಕರೆಯಲಾಗುತ್ತದೆ. ಬಿಳಿ ಹೂಕೋಸಿಗೆ ಹೋಲಿಸಿದರೆ, ಇದು ಸಿಹಿ ರುಚಿಯನ್ನು ಹೊಂದಿರುತ್ತದೆ. ಈ ಹೂಕೋಸು ಬ್ರೊಕೊಲಿಯನ್ನು ಹೋಲುತ್ತದೆ ಮತ್ತು ತಿನ್ನಲು ರುಚಿಯಾಗಿರುತ್ತದೆ. ವೋರ್ಡಾ, ಅಲ್ವೆರ್ಡಾ, ಗ್ರೀನ್ ಗಾಡೆಸ್, ವೆರೋನಿಕಾ ಮತ್ತು ಮಿನಾರೆಟ್ ಈ ಹೂಕೋಸಿನ ಇತರ ಕೆಲವು ಪ್ರಭೇದಗಳಾಗಿವೆ. ಅಧ್ಯಯನದ ಪ್ರಕಾರ, ಈ ಹೂಕೋಸು ಅಮೇರಿಕಾ ಮತ್ತು ಯೂರೋಪ್‌ನಲ್ಲಿ 1990ರ ದಶಕದ ಆರಂಭದಿಂದಲೂ ಇದೆ.
ಕೇಸರಿ ಹೂಕೋಸು
ಕೇಸರಿ ಹೂಕೋಸನ್ನು ಚೆಡ್ಡಾರ್ ಹೂಕೋಸು ಎಂದು ಸಹ ಕರೆಯುತ್ತಾರೆ, ಇದು ಹೈಬ್ರಿಡೈಸ್ಡ್ ವಿಧವಾಗಿದೆ. ಇದು ಪ್ರಕಾಶಮಾನವಾದ ಕೇಸರಿ ಬಣ್ಣವನ್ನು ಹೊಂದಿರುತ್ತದೆ. ಬೀಟಾ-ಕ್ಯಾರೋಟಿನ್ ಎಂದು ಕರೆಯಲ್ಪಡುವ ಹೆಚ್ಚಿನ ಕೇಸರಿವರ್ಣದ್ರವ್ಯವನ್ನು ಒಳಗೊಂಡಿರುತ್ತದೆ. ಇದರಲ್ಲಿ ವಿಟಮಿನ್ ಎ ಅಂಶ ಹೇರಳವಾಗಿ ಕಂಡು ಬರುತ್ತದೆ. ಕೇಸರಿ ಬಣ್ಣದ ಹೂಕೋಸುಗಳನ್ನು ಏಕಕಾಲದಲ್ಲಿ ಕೊಯ್ಲು ಮಾಡುವ ಬದಲು ವಿವಿಧ ಸಮಯಗಳಲ್ಲಿ ಕೊಯ್ಲು ಮಾಡಬಹುದು. ಹೀಗಾಗಿ ಕೇಸರಿ ಹೂಕೋಸು ಎಲ್ಲಾ ಕಾಲದಲ್ಲಿಯೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
Kitchen Tips: ಮನೇಲಿ ಫ್ರಿಡ್ಜ್ ಇಲ್ವಾ ? ಪರ್ವಾಗಿಲ್ಲ ಹೀಗಿಟ್ರೂ ಹಣ್ಣು, ತರಕಾರಿ ಫ್ರೆಶ್ ಆಗಿರುತ್ತೆ
ನೇರಳೆ ಹೂಕೋಸು
ನೇರಳೆ ಹೂಕೋಸು ಹೆಚ್ಚಾಗಿ ವಿದೇಶಗಳಲ್ಲಿ ಕಂಡು ಬರುತ್ತದೆ. ನೇರಳೆ, ನೀಲಿ, ಹಸಿರು ಎಲೆಗಳಿಂದ ಆವೃತವಾಗಿರುತ್ತದೆ. ಬಿಳಿ ಹೂಕೋಸುಗಳಿಗೆ ಹೋಲಿಸಿದರೆ, ನೇರಳೆ ಬಣ್ಣದ ಹೂಕೋಸು ಹೆಚ್ಚು ಕೋಮಲವಾಗಿರುತ್ತವೆ. ಈ ಹೂಕೋಸು ವಿಟಮಿನ್ (Vitamin)ಗಳು ಮತ್ತು ಖನಿಜಗಳಿಂದ ತುಂಬಿದೆ. ಗ್ರಾಫಿಟಿ, ಪರ್ಪಲ್ ಕೇಪ್, ಸಿಸಿಲಿಯನ್ ವೈಲೆಟ್ ಮತ್ತು ವೈಲೆಟ್ ಕ್ವೀನ್ ಮೊದಲಾದವು ನೇರಳೆ ಹೂಕೋಸಿನ ಪ್ರಬೇಧಗಳಾಗಿವೆ.
ಬಿಳಿ ಹೂಕೋಸು
ಇದು ತರಕಾರಿ ಮಾರುಕಟ್ಟೆಯಲ್ಲಿ ನೀವು ನೋಡಬಹುದಾದ ಸಾಮಾನ್ಯ ರೀತಿಯ ಹೂಕೋಸುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಬಿಳಿ ಹೂಕೋಸು ಹೇರಳವಾಗಿ ಕಂಡುಬರುತ್ತದೆ. ವೈಟ್ ಕ್ಲೌಡ್ ಮತ್ತು ಅರ್ಲಿ ವೈಟ್ ಹೈಬ್ರಿಡ್ ಸೇರಿದಂತೆ ಬಿಳಿ ಹೂಕೋಸುಗಳಲ್ಲಿ ಹಲವಾರು ವಿಧಗಳಿವೆ, ಆದರೆ ಎಲ್ಲಾ ಬಿಳಿ ಹೂಕೋಸುಗಳು ಮೇಲೆ ಹೂವಿನ ಮೊಗ್ಗುಗಳನ್ನು ಒಳಗೊಂಡಿರುತ್ತವೆ. ಎಲೆಗಳಿಂದ ಆವೃತವಾಗಿರುತ್ತದೆ. ಸ್ನೋಕಿಂಗ್, ವೈಟ್ ಕರೋನಾ ಮತ್ತು ಸ್ನೋ ಕ್ರೌ, ಬಿಳಿ ಹೂಕೋಸಿನ ಇತರ ಕೆಲವು ಪ್ರಭೇದಗಳಾಗಿವೆ.
ಹೂಕೋಸುಗಳೇನೂ ಹಲವು ಬಣ್ಣದಲ್ಲಿವೆ. ಆದರೆ ಭಾರತದಲ್ಲಿ ಸದ್ಯ ಬಿಳಿ ಬಣ್ಣದ ಹೂಕೋಸನ್ನು ಮಾತ್ರ ಅಡುಗೆಯಲ್ಲಿ ಬಳಸಲಾಗುತ್ತಿದೆ. ಕೇಸರಿ, ಹಸಿರು, ನೇರಳೆ ಬಣ್ಣದ ಹೂಕೋಸುಗಳನ್ನು ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಮತ್ತು ಬಳಸಲಾಗುತ್ತದೆ.