
ಮನೆಯಲ್ಲಿ ಉತ್ತರ ಭಾರತೀಯರ ಜನಪ್ರಿಯ ರೆಸಿಪಿಯಾಗಿರುವ ಅಚಾರಿ(ಅಚಾರ್ ಅಂದ್ರೆ ಉಪ್ಪಿನಕಾಯಿ) ಚಿಕನ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ರೆಸಿಪಿ
ನಿಮಗೆ ಚಿಕನ್‌ನ ವಿಭಿನ್ನ ರೆಸಿಪಿಗಳನ್ನು ಸವಿಯಲು ಇಷ್ಟವಿದ್ದರೆ ಈ ಬಾರಿ ಅಚ್ಚಾರಿ ಚಿಕನ್ ಮಾಡಿ ನೋಡಬಹುದು. ಚಿಕನ್‌ಗೆ ಉಪ್ಪಿನಕಾಯಿ ಮಸಾಲೆಯ ರುಚಿ ಸೇರಿದಾಗ ಅದರ ರುಚಿ ಮತ್ತಷ್ಟು ವಿಶೇಷವಾಗಿರುತ್ತೆ. ಇನ್ನು ಒಂದು ವಿಶೇಷ ಎಂದ್ರೆ ಇದನ್ನು ಮಾಡಲು ಹೆಚ್ಚು ಪದಾರ್ಥಗಳೂ ಬೇಕಾಗಿಲ್ಲ. ಮನೆಯಲ್ಲಿರುವ ಸಾಮಾನ್ಯ ಮಸಾಲೆಗಳಿಂದಲೇ ಅಚಾರಿ ಚಿಕನ್ ತಯಾರಿಸಬಹುದು.
ಈ ಚಿಕನ್ ಅನ್ನು ರೊಟ್ಟಿ, ನಾನ್, ಪರೋಟಾ ಜೊತೆ ತಿನ್ನೋಕೆ ಬೆಸ್ಟ್. ಇದ್ಯಾವುದೂ ಇಲ್ಲದಿದ್ರೂ ಅನ್ನದ ಜೊತೆ ಸವಿಯಬಹುದು. ಮನೆಯಲ್ಲಿ ರೆಸ್ಟೋರೆಂಟ್ ಶೈಲಿಯ ರುಚಿ ಬೇಕಿದ್ದರೆ ಈ ಸುಲಭ ರೆಸಿಪಿಯನ್ನು ಭಾನುವಾರವಾದ ಇಂದೇ ಪ್ರಯತ್ನಿಸಿ ನೋಡಿ!
ಸುಮಾರು 500 ಗ್ರಾಂ ಚಿಕನ್, 2 ದೊಡ್ಡ ಚಮಚ ಸಾಸಿವೆ ಎಣ್ಣೆ, 1 ಈರುಳ್ಳಿ, 2 ಟೊಮೆಟೊ, 2-3 ಹಸಿರು ಮೆಣಸಿನಕಾಯಿ ಹಾಗೂ ಸ್ವಲ್ಪ ಶುಂಠಿ-ಬೆಳ್ಳುಳ್ಳಿ ಬೇಕಾಗುತ್ತದೆ.
ಮಸಾಲೆಗಾಗಿ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಮತ್ತು ಸ್ವಲ್ಪ ಗರಂ ಮಸಾಲೆ ತೆಗೆದುಕೊಳ್ಳಿ. ಅಚ್ಚಾರಿ ರುಚಿಗಾಗಿ ಸೋಂಪು, ಸಾಸಿವೆ, ಮೆಂತ್ಯೆ, ಕಾಳುಜೀರಿಗೆ, ಜೀರಿಗೆ ಬಳಸಬಹುದು. ರುಚಿ ಹೆಚ್ಚಿಸಲು ಬೇಕಿದ್ದರೆ ಸ್ವಲ್ಪ ನಿಂಬೆ ರಸ ಅಥವಾ ಮಾವಿನಕಾಯಿ ಪುಡಿ ಕೂಡ ಸೇರಿಸಬಹುದು.
ಚಿಕನ್ ಅನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಅದಕ್ಕೆ ಮೊಸರು, ಅರಿಶಿನ, ಖಾರದ ಪುಡಿ, ಉಪ್ಪು, ಸ್ವಲ್ಪ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ. ನಂತರ ಇದನ್ನು ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೇ ಇಡಿ. ಸಮಯವಿದ್ದರೆ 1-2 ಗಂಟೆಗಳ ಕಾಲ ಇಟ್ಟರೆ ಬೆಸ್ಟ್. ಇದರಿಂದ ಮಸಾಲೆ ಚಿಕನ್‌ಗೆ ಚೆನ್ನಾಗಿ ಸೇರಿಕೊಳ್ಳುತ್ತದೆ.
ಈಗ ಒಂದು ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ, ಸಾಸಿವೆ, ಸೋಂಪು, ಮೆಂತ್ಯೆ ಮತ್ತು ಕಾಳುಜೀರಿಗೆ ಹಾಕಿ ಸ್ವಲ್ಪ ಹುರಿಯಿರಿ.
ಮಸಾಲೆಗಳನ್ನು ಹೆಚ್ಚು ಹೊತ್ತು ಹುರಿಯಬೇಡಿ. ಹೆಚ್ಚು ಹುರಿದರೆ ಮೆಂತ್ಯೆ ಕಹಿಯಾಗಬಹುದು. ನಂತರ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ. ನಂತರ ಟೊಮೆಟೊ ಸೇರಿಸಿ ಮಸಾಲೆ ಮೃದುವಾಗಿ, ಎಣ್ಣೆ ಬಿಡುವವರೆಗೆ ಬೇಯಿಸಿ.
ಮಸಾಲೆ ಸಿದ್ಧವಾದ ನಂತರ ಅದಕ್ಕೆ ಚಿಕನ್ ಹಾಕಿ. ಮೊದಲಿಗೆ ಹೆಚ್ಚಿನ ಉರಿಯಲ್ಲಿ ಕೆಲವು ನಿಮಿಷ ಚೆನ್ನಾಗಿ ಹುರಿಯಿರಿ. ನಂತರ ಉರಿಯನ್ನು ಕಡಿಮೆ ಮಾಡಿಕೊಂಡು ಚಿಕನ್ ಅನ್ನು ಮಸಾಲೆಯೊಂದಿಗೆ ಬೇಯಲು ಬಿಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ ಬಾಣಲೆಯನ್ನು ಮುಚ್ಚಿ ಬೇಯಿಸಿ. ಚಿಕನ್ ಕೆಳಗೆ ಅಂಟಿಕೊಳ್ಳದಂತೆ ಆಗಾಗ ಕಲಕುತ್ತಿರಿ. ಇದರಿಂದ ಮಸಾಲೆಯೂ ಚಿಕನ್‌ಗೆ ಚೆನ್ನಾಗಿ ಸೇರಿಕೊಳ್ಳುತ್ತದೆ.
ಚಿಕನ್ ಚೆನ್ನಾಗಿ ಬೆಂದು ಮಸಾಲೆ ಗಟ್ಟಿಯಾದ ಬಳಿಕ ಸ್ವಲ್ಪ ಗರಂ ಮಸಾಲೆ, ಉಪ್ಪಿನಕಾಯಿ ಪುಡಿ ಅಥವಾ ನಿಂಬೆ ರಸ ಹಾಕಬಹುದು. ಕೊನೆಯಲ್ಲಿ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ. ಈಗ ಬಿಸಿಬಿಸಿಯಾದ ಅಚ್ಚಾರಿ ಚಿಕನ್ ಸಿದ್ಧ. ಇದನ್ನು ರೊಟ್ಟಿ, ನಾನ್, ಪರೋಟಾ ಅಥವಾ ಅನ್ನದ ಜೊತೆ ಸವಿಯಬಹುದು. ಸಾಸಿವೆ ಎಣ್ಣೆ ಮತ್ತು ಉಪ್ಪಿನಕಾಯಿ ಮಸಾಲೆಗಳ ಸುವಾಸನೆ ಈ ಚಿಕನ್‌ಗೆ ವಿಶೇಷ ರುಚಿಯನ್ನು ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.