ಮಳೆ ಬಂದಿದೆ, ಆಟಿ ತಿಂಗಳಲ್ಲಿ ಪತ್ರೊಡೆ ತಿನ್ನದಿದ್ದರೆ ಹೇಗೆ? ಇಲ್ಲಿದೆ ರೆಸಿಪಿ

By Nirupama K S  |  First Published Jul 11, 2023, 4:23 PM IST

ಮಳೆಗಾಲದಲ್ಲಿ ಪತ್ರೊಡೆ ಮಾಡಿ ತಿನ್ನದೇ ಹೋದರೆ ಮಲೆನಾಡಿಗರು ಹಾಗೂ ಕರಾವಳಿ ಮಂದಿಗೆ ತಿಂದಿದ್ದು ಜೀರ್ಣವಾಗೋಲ್ಲ. ಈ ಭಾಗದ ಜನರ ಜೀವನದ ಭಾಗವೇ ಆದ ಈ ಖಾದ್ಯ ಮಾಡೋದು ಹೇಗೆ?


ಹೊರಗಡೆ ಸುಯ್ಯೋ ಅಂತ ಸುರಿಯೋ ಮಳೆ. ಮನೆಯೊಳಗೆ ಕೂತು ಕಾಲ ಕಳೆಯೋದು ಅನಿವಾರ್ಯ. ಜಡ ಬಡಿದಂತಾದ ಮನಸ್ಸಿಗೆ ಮುದ ನೀಡೋದು ವಿವಿಧ ಖಾದ್ಯಗಳು. ಅದರಲ್ಲಿಯೂ ಪತ್ರೊಡೆಯಂಥ ಖಾರದ ಖಾದ್ಯವಿದ್ದರೆ, ಮನಸ್ಸಿಗೂ ಹಿತ, ತಂಡಿ ಬಡಿದ ದೇಹಕ್ಕೂ ಅಗತ್ಯ ಉಷ್ಣಾಂಶ ದೊರೆತು  ಬೆಚ್ಚಗಾಗುತ್ತೆ. ಮರದಲ್ಲಿ ಬಿಟ್ಟ ಮರಗೆಸುವಿನಿಂದ ಮಾಡಿದ ಪತ್ರೊಡೆ ರುಚಿ ಒಂದು ರೀತಿಯಾದರೆ, ನೀರಿನ ಬುಡದಲ್ಲಿ ಸಿಗುವ ಸಾದಾ ಕೆಸುವಿನಿಂದ ಮಾಡಿದ ಖಾದ್ಯದ ಖದರೇ ಬೇರೆ. ಅದರಲ್ಲಿಯೂ ಆಟಿ ತಿಂಗಳಲ್ಲಿ ಇದನ್ನು ಮಾಡದಿದ್ದರೆ ಹೇಗೆ ಹೇಳಿ? ವಿಟಮಿನ್ ಸಿ ಹೇರಳವಾಗಿರುವ ಕೆಸುವಿನಲ್ಲಿ ಕಡಿಮೆ ಫ್ಯಾಟ್ ಇದ್ದು, ಅತ್ಯಧಿಕ ಪ್ರೊಟೀನ್ ಇವೆ. ಆಯುಷ್ ಗುರುತಿಸಿರುವ ಸಾಂಪ್ರಾದಾಯಿಕ ಆಹಾರಗಳಲ್ಲಿ ಇದೂ ಒಂದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇದು, ಮನೆ ಮಂದಿ ಎಲ್ಲರಿಗೂ ಅಚ್ಚುಮೆಚ್ಚಿನ ಖಾದ್ಯವಾಗುತ್ತದೆ. 

ಕಂಡ್ ಕಂಡಲ್ಲಿ ಎಲೆಗಳು ಕೊಳ್ಳಲು ಸಿಗುತ್ತಿದ್ದು, ಮಲೆನಾಡಿನಲ್ಲೇ ತೆಗೆದುಕೊಂಡರೆ ಬಾಯಿ ತುರಿಸೋಲ್ಲ. ಎಲ್ಲೆಲ್ಲೋ ನೀರಿಲ್ಲದ ಜಾಗದಲ್ಲಿ ಬೆಳೆದ ಎಲೆ ಬಾಯಿ ತುರಿಸಬಹುದು. ಇಲ್ ಕೇಳಿ ನಾವು ಪತ್ರೊಡೆ ಮಾಡೋದು ಹೇಗೆ ಹೇಳುತ್ತೇವೆ. 

Tap to resize

Latest Videos

ಏನೇನು ಬೇಕು?
ಕೆಸುವಿನ ಎಲೆ-15, ಅಕ್ಕಿ- 2 ಸಿದ್ದೆ, ಉದ್ದಿನ ಬೇಳೆ-4 ಟೀ ಸ್ಪೂನ್ಸ್, ತೆಂಗಿನಕಾಯಿ ತುರಿ- ಅರ್ಧ ಕಪ್, ಕೊತ್ತಂಬರಿ ಕಾಳು, ಜೀರಿಗೆ-2 ಟೀ ಸ್ಪೂನ್, ಮೆಂತೆ- ಅರ್ಧ ಚಮಚ ಸಾಕು. ಅರಿಶಿಣ-1/4 ಟೀ ಚಮಚವಿರಲಿ, ಬೆಲ್ಲ- ಮೀಡಿಯಂ ಸೈಜಿನ 3 ಉಂಡೆ. ಲಿಂಬೆಹಣ್ಣು ಗಾತ್ರದ ಹುಣಸೆಹುಳಿ, ಕೆಂಪು ಮೆಣಸು-ಒಂದತ್ತು (ತುಂಬಾ ಖಾರ ಬೇಕು ಅಂದ್ರೆ 15 ಹಾಕಿದರೂ ನಡೆಯುತ್ತೆ), ಬಾಳೆ ಎಲೆ- 4, ರುಚಿಗೆ ತಕ್ಕಷ್ಟು ಉಪ್ಪು

ಯಾವಾಗ್ಲೂ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ಯಾ? ಈ ರೀತಿ ಮಾಡಿ ತಿನ್ನಿ

ಪತ್ರೊಡೆ ಒಗ್ಗರಣೆಗೆ
ಎಣ್ಣೆ -2 ಟೇಬಲ್ ಚಮಚ, ಸಾಸಿವೆ ಮತ್ತು ಉದ್ದಿನಬೇಳೆ, ಕಡಲೆ ಬೇಳೆ - 1 ಟೀ ಚಮಚ, ಕರಿಬೇವು ಒಂದೆರಡು ಎಸಳು, ತೆಂಗಿನ ತುರಿ-1/2 ಕಪ್, ಬೆಲ್ಲ (ರುಚಿಗೆ ತಕ್ಕಷ್ಟು)

ಮಾಡೋದು ಹೇಗೆ?
-ಪಾತ್ರೆಯಲ್ಲಿ ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತೆಯನ್ನು ಸುಮಾರು 3 -4 ಗಂಟೆಗಳ ಕಾಲ ನೆನೆ ಹಾಕಿ.
-ನೆನೆ ಹಾಕಿದ ಅಕ್ಕಿ ಮತ್ತಿತರ ಸಾಮಗ್ರಿಗಳನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸು, ಅರಿಶಿಣ, ಹುಣಸೆಹುಳಿ, ಬೆಲ್ಲ ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿ ಇರಲಿ. 
-ಕೆಸವಿನ ಎಲೆಗಳನ್ನು ಚೆನ್ನಾಗಿ ತೊಳೆದು, ಹಿಂಭಾಗದ ದಂಟು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ.
-ಹೆಚ್ಚಿದ ಕೆಸವಿನ ಎಲೆಗಳನ್ನು ಈಗಾಗಲೇ ರುಬ್ಬಿಕೊಂಡಿರುವ ಮಸಾಲಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಎಣ್ಣೆ ಹಚ್ಚಿದ ತಟ್ಟೆ ಅಥವಾ ಬಾಳೆಲೆ ಮೇಲೆ ಹಾಕಿ, ಮಡಿಸಿದ ಈ ಮಸಾಲೆ ಹಾಕಿದ ಕೆಸುವನ್ನು ಬೇಯಲು ಇಡಿ. ಸ್ವಲ್ಪ ಗಟ್ಟಿಯಾಗೋ ತನಕ ಹಬೆಯಲ್ಲಿ ಚೆನ್ನಾಗಿ ಬೇಯಲಿ. ಇಡ್ಲಿ ಪಾತ್ರೆಯಲ್ಲಿಯೇ ಬೇಕಾದರೂ ಮಾಡಬಹುದು. 
-ಬಾಳೆಎಲೆ ಬಿಡಿಸಿ ಅದರೊಳಗಿರುವ ಪತ್ರೊಡೆ ಕಡುಬನ್ನು ನಿಧಾನಕ್ಕೆ ತೆಗೆದು ಕಟ್ ಮಾಡಿಕೊಳ್ಳಿ. 
-ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಇದಕ್ಕೆ ಈಗಾಗಲೇ ಕತ್ತರಿಸಿರುವ ಕಡುಬಿನ ತುಂಡುಗಳು, ಕಾಯಿತುರಿ ಹಾಗೂ ಬೆಲ್ಲ ಸೇರಿಸಿ ಮಿಕ್ಸ್ ಮಾಡಿದ್ರೆ ಪತ್ರೊಡೆ ರೆಡಿ.

Chicken Recipes: ಜಗತ್ತಿನ ಅತ್ಯುತ್ತಮ ಚಿಕನ್ ರೆಸಿಪಿ ಯಾವುದು ಗೊತ್ತಾ?

ಹೀಗೂ ಮಾಡಬಹುದು:
ಬಾಳೆಎಲೆ ಬದಲು, ಇಡೀ ಕೆಸುವಿನ ಎಲೆಗೇ ಪೂರ್ತಿ ಮಸಾಲೆ ಹಚ್ಚಿ, ಅದರ ಮೇಲೆ ಮತ್ತೊಂದು ಎಲೆ ಇಟ್ಟು ಮಸಾಲೆ ಹಚ್ಚಿ. ಇದೇ ರೀತಿ ಮೂರ್ನಾಲ್ಕು ಎಲೆಗಳನ್ನು ಇಟ್ಟು, ಬಿಡಿಸಿಕೊಳ್ಳದಂತೆ ಸುರುಳಿಯಾಕಾರದಲ್ಲಿ ಮಡಿಸಿಡಿ. ಇದು ಬೇಯಲು ಜಾಸ್ತಿ ಹೊತ್ತು ಬೇಕು. ನಂತರ ಕಟ್ ಮಾಡಿ ಒಗ್ಗರಣೆ ಹಾಕಬಹುದು. ಇಲ್ಲದಿದ್ದರೆ ಕಾವಲಿ ಮೇಲೆಯೇ ಸುಟ್ಟೂ ತಿಂದರೂ ಕೆಲವರಿಗೆ ಇಷ್ಟವಾಗುತ್ತದೆ. 

ಯಾವಾಗ ಪತ್ರೊಡೆ ಮಾಡುತ್ತೀರಾ ಹೇಳಿ? ನಾವೂ ಬರ್ತೀವಿ ತಿನ್ನೋಕೆ.

click me!