
ಮಹದೇವಪುರ / ವೈಟ್ ಫೀಲ್ಡ್ (ಜ.29): ಸಿಲಿಕಾನ್ ಸಿಟಿಯ ವರ್ತೂರು ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವರ್ತೂರು-ಬಳಗೆರೆ ರಸ್ತೆಯಲ್ಲಿರುವ SS VR ಕನ್ಸ್ಟ್ರಕ್ಷನ್ ಸೈಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಟ್ಟಡದ ಮೇಲ್ಭಾಗಕ್ಕೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಲಿಫ್ಟ್ ದಿಢೀರನೆ ಕುಸಿದು ಈ ಅವಘಡ ಸಂಭವಿಸಿದೆ.
ಈ ಭೀಕರ ದುರಂತದಲ್ಲಿ ಲಿಫ್ಟ್ ಆಪರೇಟರ್ ಸತ್ಯ ಕುಮಾರ್ ಹಾಗೂ ಮೆಕ್ಯಾನಿಕ್ ಮುತ್ತಪ್ಪ ಎಂಬುವವರು ಮೃತಪಟ್ಟಿದ್ದಾರೆ. ಜನವರಿ 28ರಂದು ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಲಿಫ್ಟ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಲಿಫ್ಟ್ ಅಡಿಯಲ್ಲೇ ಸಿಲುಕಿದ ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ, ಈ ಘಟನೆ ನಡೆದ 24 ಗಂಟೆಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಸತ್ಯ ಕುಮಾರ್ ಅವರ ಪತ್ನಿ ಜನವರಿ 29ರಂದು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಿಗೆದಾರ ಸುಧೀರ್ ಹಾಗೂ ಸೈಟ್ ಇಂಜಿನಿಯರ್ ಅವರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮತ್ತು ಅವರ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ನೇರ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೂಲಿ ನಂಬಿ ಬಂದಿದ್ದ ಬಡ ಕಾರ್ಮಿಕರ ಬದುಕು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.
ಪೊಲೀಸ್ ತನಿಖೆ ಚುರುಕು
ದೂರಿನ ಹಿನ್ನೆಲೆಯಲ್ಲಿ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಘಟನೆಗೆ ಕಾರಣ ಏನೆಂಬುದು ವಿಚಾರಣೆ ಬಳಿಕ ತಿಳಿಯಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.