ಬೇಸಿಗೆ ಬಿಸಿ ತಣಿಸುವ ಬಸಳೆ ತಂಬುಳಿ,ಮಾವಿನಕಾಯಿ ನೀರುಗೊಜ್ಜು ಸೇರಿದಂತೆ 5 ರೆಸಿಪಿಗಳು!

By Kannadaprabha News  |  First Published Apr 4, 2021, 4:08 PM IST

ಬಿರುಬೇಸಿಗೆ ಕಾಲಿಟ್ಟಿದೆ. ಬಿಸಿಲು ಸುಡುತ್ತಿದೆ. ಇಂಥಾ ಹೊತ್ತಲ್ಲಿ ಸರಿಯಾಗಿ ನಾಲಿಗೆಗೂ-ಹೊಟ್ಟೆಗೂ ತಂಪನ್ನೀಯುವ ಪಾನೀಯ ಮತ್ತು ಅಡಿಗೆಗಳನ್ನು ಮಾಡಿಕೊಳ್ಳುವುದು ಜಾಣತನ. ತುಂಬ ಸರಳವೂ ಮತ್ತು ರುಚಿಕರವೂ ಆದ ಮನೆರುಚಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.


ಪ್ರಭಾ ಭಟ್‌

1. ಬಸಳೆ ತಂಬುಳಿ

Tap to resize

Latest Videos

undefined

ಸಾಮಾಗ್ರಿ: ಬಸಳೆ ಎಲೆಗಳು 6-7, 1/4 ಕಪ್‌ ಕಾಯಿ ತುರಿ, 1/2 ಚಮಚ ಜೀರಿಗೆ, 1 ಕಪ್‌ ಮಜ್ಜಿಗೆ, 1/2 ಚಮಚ ಎಣ್ಣೆ, ಉಪ್ಪು

ವಿಧಾನ: ಸಣ್ಣ ಬಾಣಲೆಯಲ್ಲಿ ಎಣ್ಣೆ, ಜೀರಿಗೆ ಮತ್ತು ತೊಳೆದಿಟ್ಟಬಸಳೆ ಸೊಪ್ಪನ್ನು ಹಾಕಿ ಬಾಡಿಸಿಕೊಳ್ಳಿ. ಕಾಯಿತುರಿ ಮತ್ತು ಬಾಡಿಸಿದ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ರುಚಿಗೆ ತಕ್ಕಷ್ಟುಉಪ್ಪು ಬೆರೆಸಿರಿ. ಬೇಕಾದಲ್ಲಿ ಜೀರಿಗೆ ಒಗ್ಗರಣೆ ಹಾಕಬಹುದು.

ಸೂಚನೆ: ಬಸಳೆ ಸೊಪ್ಪಿನ ಬದಲು ಸಾಂಬಾರ್‌ ಸೊಪ್ಪು, ನುಗ್ಗೆ ಸೊಪ್ಪು, ಒಂದೆಲಗ(ಬ್ರಾಹ್ಮಿ)ದ ಎಲೆಗಳನ್ನು ಬಳಸಬಹುದು.

ಫಟಾಫಟ್ ಕರಿಬೇವಿನ ತಂಬುಳಿ ಮಾಡುವುದು ಸುಲಭ; ಆರೋಗ್ಯಕ್ಕೂ ಒಳ್ಳೆಯದು: ಇಲ್ಲಿದೆ ನೋಡಿ ರೆಸಿಪಿ ...

2. ಮಜ್ಜಿಗೆ ಹುಲ್ಲಿನ ತಂಪು ಪೇಯ

ಸಾಮಗ್ರಿ: ಮಜ್ಜಿಗೆ ಹುಲ್ಲು (ಲೆಮನ್‌ ಗ್ರಾಸ್‌)-1/4 ಕಪ್‌, ಮಜ್ಜಿಗೆ-2 ಕಪ್‌, ಶುಂಠಿ, ಕಾಳುಮೆಣಸಿನ ಪುಡಿ ಖಾರಬೇಕಾದಷ್ಟು, ಉಪ್ಪು ರುಚಿಗೆ

ವಿಧಾನ: ಶುಂಠಿ ಮತ್ತು ಮಜ್ಜಿಗೆ ಹುಲ್ಲಿಗೆ ಸ್ವಲ್ಪ ನೀರನ್ನು ಸೇರಿಸಿ ಆದಷ್ಟುನುಣ್ಣಗೆ ರುಬ್ಬಿ ನಂತರ ಸೋಸಿ ರಸ ತೆಗೆದು ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಿ. ಖಾರ ಬೇಕಾದಷ್ಟುಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟುಉಪ್ಪು ಬೆರೆಸಿದರೆ ತಂಪಾದ ಮಜ್ಜಿಗೆ ಹುಲ್ಲಿನ ಪೇಯ ಸವಿಯಲು ಸಿದ್ಧ.

ಸೂಚನೆ: ಈ ಪೇಯವು ಜೀರ್ಣಕಾರಕವಾಗಿಯೂ ಬಳಸಲ್ಪಡುತ್ತದೆ.

3. ಮಾವಿನಕಾಯಿ ನೀರುಗೊಜ್ಜು

ಸಾಮಗ್ರಿ: ಮಾವಿನಕಾಯಿ ಹೋಳುಗಳು 1/4 ಕಪ್‌ (ಜೀರಿಗೆ ಮಾವಿನ ಕಾಯಿಯಾದರೆ ಕೇವಲ ಸೊನೆಯೇ ಸಾಕಾಗುತ್ತದೆ), ಹಸಿಮೆಣನಕಾಯಿ-3 ರಿಂದ 4(ಸಣ್ಣಮೆಣಸು ಲಭ್ಯವಿದ್ದಲ್ಲಿ ಬಳಸಬಹುದು), ನೀರು 2 ಕಪ್‌, ಒಗ್ಗರಣೆಗೆ ಎಣ್ಣೆ, ಸಾಸಿವೆ, ಬೇವಿನ ದಳಗಳು 6-7, ಇಂಗು, ಒಣಮೆಣಸು 2 ಮತ್ತು ಉಪ್ಪು

ರೆಸಿಪಿ - ಕೆಲವೇ ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ವಾಲ್‌ನಟ್‌ ಬರ್ಫಿ! 

ವಿಧಾನ: ಮಾವಿನ ಹೋಳಾದರೆ ಮೆಣಸಿನೊಂದಿಗೆ ರುಬ್ಬಿ ಸೋಸಿ ನೀರಿಗೆ ಬೆರೆಸಿ ಅಥವಾ ಸೊನೆಯಾದರೆ ನೀರಿಗೆ ಸೊನೆಯನ್ನು ಹಿಂಡಿ ಬೆರೆಸಿ. ನಂತರ ರುಚಿಗೆ ತಕ್ಕಷ್ಟುಉಪ್ಪುಹಾಕಿ ಸಾಸಿವೆ, ಬೇವಿನ ದಳಗಳು, ಇಂಗು ಹಾಕಿ ಒಗ್ಗರಣೆ ಕೊಟ್ಟರೆ ಹೆಸರಿಗೆ ತಕ್ಕ ನೀರುಗೊಜ್ಜು ಸವಿಯಲು ಸಿದ್ಧ.

ಸೂಚನೆ: ಈ ನೀರುಗೊಜ್ಜನ್ನು ಪೇಯವಾಗಿಯೂ ಹಾಗೂ ಊಟಕ್ಕೂ ಪದಾರ್ಥವಾಗಿ ಬಳಸಬಹುದು. ಮಾವಿನಹೋಳಲ್ಲದೆ ಅಮಟೆಕಾಯಿ, ನೆಲ್ಲಿಕಾಯಿಗಳಲ್ಲಿಯೂ ಇದನ್ನು ತಯಾರಿಸಬಹುದಾಗಿದೆ.

4. ಹಾಗಲಕಾಯಿ ಸಾಸಿವೆ

ಸಾಮಗ್ರಿ: ಸಣ್ಣಗೆ ಹೆಚ್ಚಿದ ಹಾಗಲಕಾಯಿ ಹೋಳುಗಳು- 1/4 ಕಪ್‌, ಮೊಸರು -2 ಕಪ್‌, ಹಸಿಮೆಣಸು 3-4, ಕಾಯಿ ತುರಿ 1/4 ಕಪ್‌, ಒಗ್ಗರಣೆಗೆ ಸಾಸಿವೆ, ಎಣ್ಣೆ ಇಂಗು, ಬೇವಿನ ದಳಗಳು 5-6, ಉಪ್ಪು ರುಚಿಗೆ ತಕ್ಕಷ್ಟು

ವಿಧಾನ: ಬಾಣಲೆಯಲ್ಲಿ ಎಣ್ಣೆ, ಬೇವಿನ ದಳಗಳು, ಇಂಗು ಸಾಸಿವೆ ಹಾಕಿ ಹೆಚ್ಚಿದ ಹಾಗಲ ಹೋಳುಗಳನ್ನು ಹಾಕಿ ಚೆನ್ನಾಗಿ ಬಾಡಿಸಿ. ಮೆಣಸು ಮತ್ತು ಹುಣಸೆ ಹಣ್ಣು, ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣ ಮತ್ತು ಹುರಿದ ಹೋಳುಗಳನ್ನು ಮೊಸರಿಗೆ ಹಾಕಿ ರುಚಿಗೆ ತಕ್ಕಷ್ಟುಉಪ್ಪು ಹಾಕಿದರೆ ಹಾಗಲಕಾಯಿ ಸಾಸಿವೆ ಸವಿಯಲು ಸಿದ್ಧ. ಅನ್ನಕ್ಕೆ ಒಳ್ಳೆಯ ಕಾಂಬಿನೇಷನ್‌.

ರೆಸಿಪಿ- 6 ತಿಂಗಳವರೆಗೆ ಹಾಳಾಗುವುದಿಲ್ಲ ಈ ಮಟನ್ ಉಪ್ಪಿನಕಾಯಿ! 

5. ಪುನರ್ಪುಳಿ ಸಾರು:

ಸಾಮಗ್ರಿ: ನೆನೆಸಿಟ್ಟು ಸೋಸಿದ ಪುನರ್ಪುಳಿ ನೀರು 2 ಕಪ್‌, ಕಾಳುಮೆಣಸಿನ ಪುಡಿ ಖಾರ ಬೇಕಾದಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಬೇವಿನ ದಳಗಳು, ಇಂಗು

ವಿಧಾನ: ಹುಳಿ ಬಿಟ್ಟಿರುವ ನೀರಿಗೆ ಕಾಳು ಮೆಣಸಿನ ಪುಡಿ, ಉಪ್ಪುಬೆರೆಸಿ ಮೇಲಿ ತಿಳಿಸಿದ ಸಾಮಗ್ರಿಗಳ ಒಗ್ಗರಣೆ ಕೊಟ್ಟರೆ ತಣ್ಣನೆಯ ಪುನರ್ಪುಳಿ ಸಾರು ಸವಿಯಲು ಸಿದ್ಧ. ( ಈ ಸಾರನ್ನು ತಂಪು ಪಾನೀಯವಾಗಿಯೂ ಸೇವಿಸಬಹುದು)

click me!