Children Health: ಬೇಸಿಗೆಯಲ್ಲಿ ಮಕ್ಕಳ ಶಕ್ತಿ ಹೆಚ್ಚಿಸುತ್ತೆ ಈ ಆಹಾರ

By Suvarna NewsFirst Published Mar 2, 2022, 6:36 PM IST
Highlights

ಸಾಮಾನ್ಯವಾಗಿ ದೊಡ್ಡವರು ಬಾಯಾರಿಕೆಯಾಗ್ತಿದ್ದಂತೆ ನೀರು ಕುಡಿತೇವೆ. ಆದ್ರೆ ಆಟ,ಪಾಠದ ಭರದಲ್ಲಿ ಮಕ್ಕಳಿಗೆ ಬಾಯಾರಿಕೆಯಾಗಿದ್ದೇ ತಿಳಿಯುವುದಿಲ್ಲ. ಸರಿಯಾದ ಆಹಾರ, ನೀರು ದೇಹ ಸೇರದೆ ಸಮಸ್ಯೆ ಶುರುವಾಗುತ್ತದೆ. ಬೇಸಿಗೆಯಲ್ಲಿ ಮಕ್ಕಳು ಅನಾರೋಗ್ಯಕ್ಕೊಳಗಾಗಬಾರದು ಅಂದ್ರೆ ಅವರ ಡಯಟ್ ಬದಲಿಸಿ.
 

ಶಿವರಾತ್ರಿ (Shivaratri) ಮುಗೀತು,ಬೇಸಿಗೆ (Summer) ಶುರುವಾಯ್ತು. ಆರಂಭದಲ್ಲಿಯೇ ಬಿಸಿಲ ಧಗೆ ಜೋರಾಗಿದೆ. ಮಧ್ಯಾಹ್ನದ ವೇಳೆ ಮನೆ (Home)ಯಿಂದ ಹೊರಗೆ ಬರಲು ಸಾಧ್ಯವಾಗ್ತಿಲ್ಲ. ಮನೆಯೊಳಗೆ ಬಿಸಿಯ ಝಳ ಹೆಚ್ಚಾಗ್ತಿದೆ. ಬೇಸಿಗೆಯಲ್ಲಿ ದೊಡ್ಡವರು ಮಾತ್ರವಲ್ಲ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕು. ಶಾಲೆಗೆ ಹೋಗುವುದ್ರಿಂದ ಹಿಡಿದು ಪಾರ್ಕ್,ಟ್ಯೂಷನ್ ಹೀಗೆ ದಿನದ ಅನೇಕ ಸಮಯ ಮಕ್ಕಳು ಬಿಸಿಲಿನಲ್ಲಿರುತ್ತಾರೆ. ಬಿಸಿಲು ತಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಮಕ್ಕಳು ಬೇಗ ದಣಿಯುತ್ತಾರೆ. ಬೆವರಿನ ಮೂಲಕ ದೇಹದಲ್ಲಿರುವ ನೀರಿನ ಅಂಶ ಹೊರಗೆ ಹೋಗುತ್ತದೆ. ಇದ್ರಿಂದ ಸುಸ್ತು ಅವರನ್ನು ಕಾಡುತ್ತದೆ.

ಮಕ್ಕಳು ಸದಾ ಚಟುವಟಿಕೆಯಿಂದಿರುತ್ತಾರೆ. ಶಾಲೆ,ಪಾಠ,ಮನೆ,ಆಟ ಹೀಗೆ ಅನೇಕ ಕೆಲಸಗಳಲ್ಲಿ ಬ್ಯುಸಿಯಾಗಿರುವ ಮಕ್ಕಳಿಗೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಬೇಸಿಗೆ ಬಿಸಿ ಅವರ ಉತ್ಸಾಹವನ್ನು ಕುಗ್ಗಿಸಬಾರದು. ಮಕ್ಕಳಿಗೆ ನಿರ್ಜಲೀಕರಣದ ಅಪಾಯ ಕಾಡದಂತೆ ನೋಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸದಾ ಲವಲವಿಕೆಯಿಂದಿರಲು ನೆರವಾಗುವಂತಹ ಆಹಾರವನ್ನು ಮಕ್ಕಳಿಗೆ ನೀಡಬೇಕಾಗುತ್ತದೆ.  ಎಲ್ಲ ಋತುವಿನಲ್ಲೂ ಒಂದೇ ರೀತಿಯ ಆಹಾರವನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಋತು ಬದಲಾದಂತೆ ಮಕ್ಕಳ ಆಹಾರ ಪದ್ಧತಿ ಹಾಗೂ ಆಹಾರ ಸೇವಿಸುವ ಸಮಯದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ಮಕ್ಕಳಿಗೆ ಯಾವ ಆಹಾರ ನೀಡಬೇಕು ಎಂಬುದನ್ನು ಇಂದು ಹೇಳ್ತೇವೆ.

ಬೇಸಿಗೆಯಲ್ಲಿ ಮಕ್ಕಳ ಡಯಟ್ ಹೀಗಿರಲಿ :

ಕಲ್ಲಂಗಡಿ ಹಣ್ಣು : ಬೇಸಿಗೆ ಬಂತೆಂದ್ರೆ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಾಶಿ ಬಿದ್ದಿರುತ್ತದೆ. ಇದು ತುಂಬಾ ರಸಭರಿತ ಮತ್ತು ಪೌಷ್ಟಿಕ ಹಣ್ಣು. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 92ರಷ್ಟು ನೀರಿನಂಶವಿದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಇದರಲ್ಲಿ ವಿಟಮಿನ್ ಎ ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು, ಚರ್ಮದ ಸೌಂದರ್ಯಕ್ಕೆ ಇದು ಸಹಕಾರಿ.   

ಸೌತೆಕಾಯಿ : ಬಹುತೇಕ ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಬೇಸಿಗೆಯಲ್ಲಿ ಸೌತೆಕಾಯಿಗೆ ಬರವಿಲ್ಲ. ಸೌತೆಕಾಯಿಯನ್ನು ನಾನಾ ರೀತಿಯಲ್ಲಿ ಸೇವನೆ ಮಾಡಬಹುದು. ಸೌತೆಕಾಯಿ ಇಲ್ಲದೆ ಸಲಾಡ್ ಇಲ್ಲ. ಸೌತೆಕಾಯಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಮಕ್ಕಳ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.  ಸೌತೆಕಾಯಿಯನ್ನು ಕತ್ತರಿಸಿ, ಅದರ ಮೇಲೆ ಸ್ವಲ್ಪ ಚಾಟ್ ಮಸಾಲೆಯನ್ನು ಸಿಂಪಡಿಸಿ ಮಗುವಿಗೆ ತಿನ್ನಿಸಿ.

Health Alert: ಈ ಸಮಸ್ಯೆ ಹೊಂದಿರುವ ಜನ ತಪ್ಪಿಯೂ ಬಾದಾಮಿ ಸೇವಿಸಬಾರದು

ಮೊಸರು : ಮೊಸರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಹೊಟ್ಟೆಯನ್ನು ತಂಪಾಗಿಸುತ್ತದೆ. ನಿಮ್ಮ ಮಗುವಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮೊಸರನ್ನು ನೀಡಬಹುದು. ಲಸ್ಸಿ ಅಥವಾ ರೈತಾ ಮಾಡುವ ಮೂಲಕ ಇಲ್ಲವೆ ಮೊಸರನ್ನ ಮಾಡಿ ಮಗುವಿಗೆ ನೀಡಬಹುದು. ಮೊಸರಿನಲ್ಲಿರುವ  ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಮತ್ತು ಇದು ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಮಕ್ಕಳಿಗೆ ಮೊಸರಿನಿಂದ ಕ್ಯಾಲ್ಸಿಯಂ ಸಿಗುತ್ತದೆ. ಇದು ಅವರ ಮೂಳೆಗಳನ್ನು ಬಲಪಡಿಸುತ್ತದೆ.

ಈರುಳ್ಳಿ : ಹಸಿ ಈರುಳ್ಳಿ ದೇಹಕ್ಕೆ ತಂಪು ನೀಡುತ್ತದೆ. ಆದ್ರೆ ಹಸಿ ಈರುಳ್ಳಿಯನ್ನು ಮಕ್ಕಳು ಸೇವಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಬೇರೆ ಬೇರೆ ರೀತಿಯಲ್ಲಿ ನೀವು ಮಕ್ಕಳಿಗೆ ಈರುಳ್ಳಿಯನ್ನು ನೀಡಬಹುದು. ಆಹಾರ ಮೂಲಕ ಮಕ್ಕಳ ದೇಹಕ್ಕೆ ಈರುಳ್ಳಿ ಸೇರುವಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ಈರುಳ್ಳಿ ಸೇವನೆ ತುಂಬಾ ಪ್ರಯೋಜನಕಾರಿ.   

Hair Loss : ತಲೆ ಬೋಳಾಗ್ಬಾರದಂದ್ರೆ ಇದರ ಸೇವನೆ ಕಡಿಮೆ ಮಾಡಿ

ಎಳ ನೀರು : ಎಳ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಪೊಟ್ಯಾಸಿಯಮ್, ಎಲೆಕ್ಟ್ರೋಲೈಟ್‌ಗಳು ಮತ್ತು ದೇಹವನ್ನು ಹೈಡ್ರೇಟ್ ಮತ್ತು ಆರೋಗ್ಯಕರವಾಗಿಡುವ ಅನೇಕ ಪೋಷಕಾಂಶಗಳಿವೆ. ಮಕ್ಕಳು ಎಳ ನೀರನ್ನು ಇಷ್ಟಪಡುತ್ತಾರೆ. ಹಾಗಾಗಿ ಮಕ್ಕಳಿಗೆ ಆರಾಮವಾಗಿ ಎಳ ನೀರು ನೀಡಬಹುದು. ಬೆಳಿಗ್ಗೆ 12 ಗಂಟೆಯೊಳಗೆ ಎಳ ನೀರು ಸೇವನೆ ಹೆಚ್ಚು ಪ್ರಯೋಜನಕಾರಿ. 
 

click me!