ಸಿಹಿ ತಿನ್ನುವುದಕ್ಕೆ ಸಮಯ ಬೇಕೇ. ಇವತ್ತೇ ಪುರುಸೊತ್ತಿದ್ದರೆ ಪಾಯಸ ಮಾಡಿ ತಿನ್ನಬಹುದು. ಇಲ್ಲಿ ಪಾಯಸ ಮಾಡುವ ಐದು ವಿಧಾನಗಳಿವೆ. ನಿಮ್ಮಿಷ್ಟ, ನಿಮ್ಮ ಪಾಯಸ.
ಶಾಮಿಗೆ ಪಾಯಸ
ಮನಯಲ್ಲಿ ರವೆಯಲ್ಲಿ ಕೈ ಶಾಮಿಗೆ ಮಾಡುತ್ತಾರೆ. ಅದರಲ್ಲಿ ಪಾಯಸ ರುಚಿ ಆಗುತ್ತೆ. ಕೈಯಲ್ಲಿ ಮಾಡುವುದಕ್ಕೆ ಬರದವರು ಅಂಗಡಿಯಿಂದ ಶಾಮಿಗೆ ತಂದು ಪ್ಯಾಕೆಟ್‌ನಿಂದ ತೆಗೆದು ಸುಮಾರಾಗಿ ಪುಡಿ ಮಾಡಿ 1 ಪಾವು ಆಗುವುದರ ಅಳತೆಗೆ ಶಾಮಿಗೆ 1 ಭಾಗ ಮಾಡಿಕೊಂಡು 2 ಚಮಚ ಒಳ್ಳೆ ತುಪ್ಪ ಬಿಟ್ಟು, ಬಾಂಡ್ಲಿಯಲ್ಲಿ ಕರಿದು ಬಾದಾಮಿ, ಗೋಡಂಬಿ ಹುರಿದು ಈ ಪರಿಮಳ ಏಲಕ್ಕಿ, ಕೇಸರಿ ಮಾತ್ರ ಹಾಕಿ ಕುದಿಸಿ. ಆರಿದ ಮೇಲೆ 1 ಲೀಟರ್ ಹಾಲು ಸೇರಿಸಬೇಕು. ಶಾಮಿಗೆ ಗೋಧಿ ಹಿಟ್ಟಿನಲ್ಲಿ ಮಾಡುವುದರಿಂದ ಬೇಗ ಬೇಯುತ್ತೆ. ಅರ್ಧ ಸೇರು ಸಕ್ಕರೆ ಹಾಕಬೇಕು.
ಗಸಗಸೆ ಪಾಯಸ
ಬಿಸಿ ನೀರಿನಲ್ಲಿ 1 ಪಾವು ಗಸಗಸೆಯನ್ನು ನೆನೆಸಿ, 1 ಹಿಡಿ ಅಕ್ಕಿ, 1 ತೆಂಗಿನಕಾಯಿ, ವಾಸನೆಗೆ ಅರ್ಧದಲ್ಲಿ ಆರ್ಧ ಬಟ್ಟು ಕೊಬ್ರಿ, ತುರಿದುಕೊಂಡು ಗಸಗಸೆ ನೆನೆಸಿದ ನೀರನ್ನು ಬಿಟ್ಟುಕೊಂಡು ತಿರುವಿ ಸಾಲದೆ ಹೋದರೆ ಬೇರೆ ನೀರು ಹಾಕಿಕೊಂಡು ರುಬ್ಬಿ, 2 ಅಚ್ಚು ಬೆಲ್ಲ ಮತ್ತು 3 ಲೋಟ ನೀರನ್ನು ಪಾತ್ರೆಯೊಂದರಲ್ಲಿ ಹಾಕಿ ಕುದಿಸಬೇಕು. ಬೆಲ್ಲ ಕರಗಿದ ಮೇಲೆ ಈ ರುಬ್ಬಿದ ಗಸಗಸೆಯನ್ನು ಹಾಕಿ ಕಲಸುತ್ತಾ ಉಕ್ಕದಂತೆ ನೋಡಿಕೊಂಡು ಚೆನ್ನಾಗಿ ಕುದಿದ ಮೇಲೆ ಕೆಳಕ್ಕೆ ಇಡಬೇಕು. ಇದೇ ಗಸಗಸೆ ಪಾಯಸ.
ಅಕ್ಕಿ ಪಾಯಸ
1 ಚಟಾಕು ಅಕ್ಕಿ ನೆನೆಸಿ, 1 ಹೋಳು ತೆಂಗಿನಕಾಯಿ ಹಾಕಿ ಚೆನ್ನಾಗಿ ರುಬ್ಬಿ. 11/4 ಅಚ್ಚು ಬೆಲ್ಲ ಕುಟ್ಟಿಬೇರೆ ಪಾತ್ರೆಗೆ 2 ಪಾವು ನೀರು ಹಾಕಿ ಬೆಲ್ಲ ಕುದಿಸಿದ ಮೇಲೆ ಈ ರುಬ್ಬಿದ್ದನ್ನೇ ಹಾಕಿ ಚೆನ್ನಾಗಿ ಕೈ ಬಿಡದೆ ಕಲಕುತ್ತಾ ಇರಬೇಕು. ಇಲ್ಲದಿದ್ದರೆ ಗಂಟು ಗಂಟಾಗುತ್ತೆ. ಚೆನ್ನಾಗಿ ಕುದಿದ ಮೇಲೆ ಏಲಕ್ಕಿ ಪುಡಿ ಹಾಕಿ ಇಡಬೇಕು.
ಇದು ಸಾಮಾನ್ಯವಾಗಿ ದ್ವಾದಶಿ ಪಾಯಸ ಎನ್ನುತ್ತಾರೆ. ಬೇಗ ಊಟವಾಗಬೇಕಾದ್ದರಿಂದ ಬೇಗನೆ ರುಬ್ಬಿ ಪಾಯಸ ಮಾಡುತ್ತಾರೆ.
ಅಪ್ಪಿ ಪಾಯಸ
ಸಣ್ಣ ರವೆ 1 ಪಾವು, ಅರ್ಧ ಹಿಡಿ ಮೈದಾ, 1 ಟೇಬಲ್ ಸ್ಪೂ್ಪನ್ ತುಪ್ಪ ಹಾಕಿ ಕಲಸಿ, ಪೂರಿ ಹಾಗೆ ಚಪಾತಿ ಮಣೆಯ ಮೇಲೆ ಒತ್ತಿ ಇದಕ್ಕೆ ಮಾತ್ರ ಅರ್ಧ ಪಾವು ಒಳ್ಳೆ ತುಪ್ಪವನ್ನು ಚಿಕ್ಕ ಬಾಂಡ್ಲಿಯೊಂದರಲ್ಲಿ ಹಾಕಿ ಪೂರಿ ಮಾಡಿಕೊಂಡು 1 ಸೇರು ಹಾಲನ್ನು ಚೆನ್ನಾಗಿ ಕಾಯಿಸಿ, 10 ಬಾದಾಮಿ, 1 ಚಟಾಕು ಗೋಡಂಬಿಯನ್ನು ಹುರಿದು ಒರಳಲ್ಲಿ ರುಬ್ಬಿ ಇದನ್ನು ಹಾಲಿಗೆ ಹಾಕಿ ಒಂದು ಚಮಚ ಸಣ್ಣರವೆ ಹುರಿದು ಈ ಹಾಲಿಗೆ ಹಾಕಿ ಕುದಿಸಿ ಕೆಳಕ್ಕೆ ಇಟ್ಟು ಸ್ವಲ್ಪ ಹಾಲು ಆರಿದ ನಂತರ ಮುಕ್ಕಾಲು ಪಾವು ಸಕ್ಕರೆ ಹಾಕಿ ಕಲಸಿ, ಏಲಕ್ಕಿ, ಕೇಸರಿ, 1 ಚಿಟಿಕಿ ಪಚಕರ್ಪೂರ ಎಲ್ಲಾ ಹಾಕಿಟ್ಟುಕೊಂಡು ಸಕ್ಕರೆ ಕರಗಿದ ಮೇಲೆ ಊಟಕ್ಕೆ 20 ನಿಮಿಷ ಮುಂಚಿತವಾಗಿ ಈ ಪೂರಿಯನ್ನು ಈ ಹಾಲಿನಲ್ಲಿ ನೆನೆಸಿ 10 ನಿಮಿಷದ ನಂತರ ತಟ್ಟೆಯಲ್ಲಿ ಗುಂಡಾಗಿ ಜೋಡಿಸಿ ದೇವರಿಗೆ ಬಡಿಸಿ ತಿನ್ನಬೇಕು. ಇದೇ ಅಪ್ಪಿ ಪಾಯಸ, ಈ ಪಾಯಸ ರಾಘವೇಂದ್ರ ಗುರುಗಳವರಿಗೆ ಮಹಾ ಪ್ರೀತಿ ಎನ್ನುತ್ತಾರೆ. ಅಪ್ಪಿ ಪಾಯಸವನ್ನು ಪೂರಿ ಪಾಯಸವೆಂದೂ ಸಹ ಕರೆಯುತ್ತಾರೆ.
ಸೀಮೆ ಅಕ್ಕಿ ಪಾಯಸ
ಒಂದು ಪಾವು ಸೀಮೆ ಅಕ್ಕಿಗೆ ಎರಡೂವರೆ ಪಾವು ನೀರು ಇಟ್ಟು ಪ್ರೆಷರ್ ಕುಕ್ಕರ್‌ನಲ್ಲಿ ಬೇಯಿಸಬೇಕು. ಯಾವಾಗಲೂ ಸೀಮೆ ಅಕ್ಕಿ ಬೆಂದ ಮೇಲೆ ಜಾಸ್ತಿ ಆಗುತ್ತೆ. ನಂತರ ಹಾಲು ಬಿಟ್ಟು, 5 ಬಾದಾಮಿ ಸಿಪ್ಪೆ ತೆಗೆದು, 10 ಗೋಡಂಬಿ ಇವೆರಡನ್ನೂ ಹುರಿದು, ತಿರುವು ಹಾಕಿ ಕುದಿಸಿ ಜಾಯಿಕಾಯಿ 1 ಚೂರು, 1 ಚಿಟಿಕಿ ಪಚಕರ್ಪೂರ ಏಲಕ್ಕಿ ಹಾಕಿ ಹಾಲು ಹಾಕುವುದರಿಂದ ಮೇಲೆ ಸಕ್ಕರೆ ಹಾಕಿ ಕುದಿಸಿ ಕೆಳಗಿಡಬೇಕು. ನಂತರ ಆರಿದ ಮೇಲೆ ಹಾಲು ಬಿಡಬೇಕು.
ಇದೂ ಸಾಮಾನ್ಯ ಹಬ್ಬದ ದಿನ ಬೇಗ ಆಗಬೇಕಾದ ಪಾಯಸ. ಮೈಗೂ ಒಳ್ಳೆಯದು. ಹುಷಾರು ತಪ್ಪಿದಾಗ ಸೀಮೆ ಅಕ್ಕಿ ಗಂಜಿಯನ್ನು ಸೇವನೆ ಮಾಡುತ್ತಾರೆ. ಹಬ್ಬದ ದಿನ ಮಾಡಿದರೆ ಅದು ಪಾಯಸವಾಗುತ್ತೆ. ಅಷ್ಟೆವ್ಯತ್ಯಾಸ ಮೈಗೂ ಒಳ್ಳೆಯದು.