Mahavir Jayanti ಯಾವಾಗ? ಹಬ್ಬದ ವೈಶಿಷ್ಟ್ಯತೆ ಏನು?

By Suvarna News  |  First Published Apr 12, 2022, 6:03 PM IST

ಜೈನರಿಗೆ ಅತ್ಯಂತ ಪವಿತ್ರವಾದ ಮಹಾವೀರ ಜಯಂತಿ ಯಾವತ್ತಿದೆ, ಆಚರಣೆ ಹೇಗೆ, ಈ ದಿನದ ವಿಶೇಷವೇನು ಎಲ್ಲದರ ವಿವರ ಇಲ್ಲಿದೆ. 


ಭಗವಾನ್ ಮಹಾವೀರರ ಜನ್ಮದಿನದ ಸಲುವಾಗಿ ಮಹಾವೀರ ಜಯಂತಿ(Mahavir Jayanti)ಯನ್ನು ಆಚರಿಸಲಾಗುತ್ತದೆ. ಭಗವಾನ್ ಮಹಾವೀರ ಜೈನ ಧರ್ಮದ ಕೊನೆಯ ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಮಹಾವೀರ ಜಯಂತಿ ಜೈನ ಧರ್ಮ(‌Jainism)ದ ಪ್ರಮುಖ ಹಬ್ಬವಾಗಿದ್ದು, ಮಹಾವೀರ ಜಯಂತಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ.

ಮಹಾವೀರ ಜಯಂತಿ ದಿನಾಂಕ
ಈ ವರ್ಷ ಮಹಾವೀರ ಜಯಂತಿಯು ಏಪ್ರಿಲ್ 14ರಂದು, ಗುರುವಾರ ಆಚರಿಸಲಾಗುತ್ತದೆ. ಜೈನ ಸಮುದಾಯದ ಜನರು ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಮಹಾವೀರ ಜಯಂತಿ ಹಿನ್ನೆಲೆ(A Brief History)
ಬಿಹಾರದ ರಾಜಧಾನಿ ಪಾಟ್ನಾದಿಂದ ಕೆಲವೇ ಕಿಲೋಮೀಟರ್ ದೂರವಿರುವ ಈಗಿನ ಕುಂದಲಪುರದಲ್ಲಿ ಕ್ರಿಸ್ತ ಪೂರ್ವ 599ರಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿ ತಿಥಿಯಂದು ಮಹಾವೀರರ ಜನನವಾಯಿತು. ರಾಜನಾದ ಸಿದ್ಧಾರ್ಥ ಹಾಗೂ ರಾಣಿ ತ್ರಿಶಾಲ ಪುತ್ರನಾಗಿ ಜನಿಸಿದ ಮಹಾವೀರರ ಹುಟ್ಟು ಹೆಸರು ವರ್ಧಮಾನ್. 

Tap to resize

Latest Videos

ಶ್ವೇತಾಂಬರ ಸಮುದಾಯದ ನಂಬಿಕೆಯಂತೆ, ಮಹಾವೀರರ ತಾಯಿಗೆ 14 ಕನಸುಗಳು ಬಿದ್ದಿದ್ದವು. ಜ್ಯೋತಿಷಿಗಳು ವಿವರಿಸುವಂತೆ ಎಲ್ಲವುಗಳ ಅರ್ಥವೂ ವರ್ಧಮಾನ್ ಮುಂದೆ ಚಕ್ರವರ್ತಿಯಾಗುತ್ತಾನೆ ಇಲ್ಲವೇ ಸನ್ಯಾಸಿಯಾಗುತ್ತಾನೆ ಎಂಬುದೇ ಆಗಿತ್ತು. ಮಹಾವೀರರು ತಮ್ಮ 30ನೇ ವಯಸ್ಸಿಗೆ ಬಂದಾಗ, ಈ ಕನಸು ನನಸಾಗೇ ಬಿಟ್ಟಿತು. ಅವರು ಸತ್ಯವನ್ನು ಅರಸಿಕೊಂಡು ಕಿರೀಟವನ್ನೂ, ಸಾಮ್ರಾಜ್ಯವನ್ನೂ, ಕುಟುಂಬವನ್ನೂ ತೊರೆದು ನಡೆದರು. 12 ವರ್ಷಗಳ ಕಾಲ ಅಜ್ಞಾತರಾಗಿ ಬದುಕಿದ ಅವರು ಈ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನನ್ನೂ ಸಮಾನವಾಗಿ ಕಾಣುತ್ತಿದ್ದುದಲ್ಲದೆ, ಎಲ್ಲರಿಗೂ ಅಹಿಂಸೆಯ ಪಾಠ ಹೇಳಿದರು. ಇಂದ್ರಿಯಗಳನ್ನು ನಿಗ್ರಹಿಸುವಲ್ಲಿ ಅವರು ತೋರಿದ ಅಪ್ರತಿಮ ಸಾಮರ್ಥ್ಯಕ್ಕಾಗಿ 'ಮಹಾವೀರ' ಎಂಬ ಬಿರುದನ್ನು ಪಡೆದರು. ತಮ್ಮ 72ನೇ ವಯಸ್ಸಿನಲ್ಲಿ ಮಹಾವೀರರು ನಿರ್ವಾಣ ಹೊಂದಿದರು ಎನ್ನಲಾಗುತ್ತದೆ.

Vastu: ವಾಸಕ್ಕೆ ಅತ್ಯಂತ ಶುಭ ಈ ದಿಕ್ಕು, ಇಲ್ಲಿ ಹಣವಿಟ್ಟರೆ ಹೆಚ್ಚುವುದು ಅಂತಸ್ತು

ಮಹಾವೀರ ಜಯಂತಿಯನ್ನು ಹೇಗೆ ಆಚರಿಸಲಾಗುತ್ತದೆ?
ಮಹಾವೀರ ಜಯಂತಿಯ ಪವಿತ್ರ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಂತಿ ಸೌಹಾರ್ದತೆಯ ಪಾಠ ಸಾರಲು ಹಾಗೂ ಮಹಾವೀರರ ಬೋಢನೆಗಳ ಬಗ್ಗೆ ಅರಿವು ಮೂಡಿಸಲು ಈ ದಿನ ಜೈನ ಸಮುದಾಯವು ಭಗವಾನ್ ಮಹಾವೀರರ ವಿಗ್ರಹದೊಂದಿಗೆ ಮೆರವಣಿಗೆ ನಡೆಸುತ್ತದೆ ಮತ್ತು ಧಾರ್ಮಿಕ ಹಾಡುಗಳನ್ನು ಹಾಡಲಾಗುತ್ತದೆ. ಭಗವಾನ್ ಮಹಾವೀರರನ್ನು ಈ ಸಮುದಾಯವು ಗೌರವಿಸುತ್ತದೆ ಮತ್ತು ಪೂಜಿಸುತ್ತದೆ. ಭಗವಾನ್ ಮಹಾವೀರನ ವಿಗ್ರಹದ ಪ್ರದರ್ಶನವು ಹಬ್ಬದ ಪ್ರಮುಖ ಆಚರಣೆಯಾಗಿದೆ. ಹಬ್ಬದ ದಿನ ಜೈನರು ಮಹಾವೀರನ ಪ್ರತಿಮೆಯನ್ನು ಸುಗಂಧ ತೈಲದಿಂದ ತೊಳೆಯುತ್ತಾರೆ. ಇದು ಭಗವಂತನ ಪರಿಶುದ್ಧತೆಯ ಸೂಚಕವಾಗಿ ನಡೆಸುವ ಆಚರಣೆಯಾಗಿದೆ. 

ಇದರೊಂದಿಗೆ ಭಾರತ ಮತ್ತು ಜಗತ್ತಿನಾದ್ಯಂತ ಭಕ್ತರು ಮಹಾವೀರ ಜಯಂತಿಯ ದಿನ ಜೈನ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಜೈನ ಧರ್ಮದ ಸಮುದಾಯಕ್ಕೆ ಸಂಪರ್ಕವಿರುವ ಪುರಾತನ ಪುರಾತನ ತಾಣಗಳಿಗೆ ಭೇಟಿ ನೀಡುತ್ತಾರೆ. ಅನೇಕ ಜೈನರು ದೇವಾಲಯಗಳಿಗೆ ಹಣ ಅಥವಾ ಆಹಾರವನ್ನು ನೀಡುತ್ತಾರೆ. 

Jupiter Transit 2022: ಈ ರಾಶಿಗಳಿಗೆ ಗುರುಬಲ ಬರೋಕೆ ಇನ್ನೊಂದೇ ದಿನ!

ಭಗವಾನ್ ಮಹಾವೀರರ ಬೋಧನೆಗಳು
ಸರ್ವ ಜನರೂ ಸದಾ ಅಹಿಂಸೆ ಪಾಲನೆ ಮಾಡಬೇಕು.
ಏನೇ ಸಂದರ್ಭ ಬಂದರೂ ಸತ್ಯವನ್ನೇ ಹೇಳಬೇಕು. 
ಪ್ರತಿ ವಿಷಯಗಳಲ್ಲೂ ಪ್ರಾಮಾಣಿಕತೆ ತೋರಿ.
ಬ್ರಹ್ಮಚರ್ಯ (ಶುದ್ಧತೆ) ಪಾಲನೆ ಉತ್ತಮ.
ಭೌತಿಕ ವಸ್ತುಗಳ ಮೋಹದಿಂದ ದೂರ ಉಳಿಯಿರಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!