ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿದ ತಾಯಿ ಕಾವೇರಿ
ಮುಗಿಲು ಮುಟ್ಟಿದ ಹರ್ಷೋದ್ಘಾರ
ತೀರ್ಥಸ್ಥಾನ ಮಾಡಿ ಪುನೀತರಾದ ಭಕ್ತರು
ವಿಘ್ನೇಶ್ ಎಂ. ಭೂತನಕಾಡು
‘ಕಾವೇರಿ ಮಾತಾ... ಜೈ ಜೈ ಮಾತಾ’ ಎಂದು ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ಕನ್ನಡ ನಾಡಿನ ಜೀವ ನದಿ ಕಾವೇರಿ ತವರು ತಲಕಾವೇರಿಯಲ್ಲಿ ಸೋಮವಾರ ರಾತ್ರಿ ನಿಗದಿಗಿಂತ ಒಂದು ನಿಮಿಷ ತಡವಾಗಿ ಅಂದರೆ 7ಗಂಟೆ 22 ನಿಮಿಷಕ್ಕೆ ಮೇಷ ಲಗ್ನದಲ್ಲಿ ತಾಯಿ ಕಾವೇರಿ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದಳು.
undefined
ಮುಖ್ಯ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ 16 ಅರ್ಚಕರ ತಂಡ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಂತೆ ತಾಯಿ ಕಾವೇರಿ ಪವಿತ್ರ ಬ್ರಹ್ಮ ಕುಂಡಿಕೆಯಿಂದ ಉಕ್ಕಿದಳು. ಈ ಸಂದರ್ಭ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥೋದ್ಭವ ಘಟಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಿಂದಿಗೆ ಹಿಡಿದು ತಲಕಾವೇರಿಯ ಕಲ್ಯಾಣಿಗೆ ಇಳಿದು ಪವಿತ್ರ ಕುಂಡಿಕೆಯಿಂದ ತೀರ್ಥ ಸಂಗ್ರಹಿಸಿ ಪುನೀತರಾದರು.
ಕಳೆದ ಎರಡು ವರ್ಷ ಕೊರೋನಾದಿಂದಾಗಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಆದರೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಲಕಾವೇರಿಯಲ್ಲಿ ಸೇರಿದ್ದರು. ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಗೆ ಚಿನ್ನ, ಬೆಳ್ಳಿ ಹಾಗೂ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ತಲಕಾವೇರಿ, ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಮೈಸೂರು, ಮಂಡ್ಯ ಸೇರಿದಂತೆ ತಮಿಳುನಾಡು ಹಾಗೂ ಕೇರಳ ರಾಜ್ಯದ ಭಕ್ತರು ತಲಕಾವೇರಿ ತೀರ್ಥೋದ್ಭವದಲ್ಲಿ ಪಾಲ್ಗೊಂಡು ಕಾವೇರಿಯ ಕೃಪೆಗೆ ಪಾತ್ರರಾದರು.
ಕೊಳಕ್ಕೆ ಧುಮುಕಿದ ಭಕ್ತರು
ತೀರ್ಥೋದ್ಭವದ ವೇಳೆ ಕೊಳಕ್ಕೆ ಭಕ್ತರು ಧುಮುಕಿದರು. ಈ ಸಂದರ್ಭ ಮುಖ್ಯ ಅರ್ಚಕರು ಆರತಿ ಮಾಡಿ ಮೂರು ಬಾರಿ ಬೊಗಸೆಯಲ್ಲಿ ನೀರನ್ನು ತೆಗೆದು ಮೇಲಿನಿಂದ ಬಿಡುತ್ತಿದ್ದಂತೆ ತೀರ್ಥೋದ್ಭವವಾಯಿತು. ಭಕ್ತರು ಪೊಲೀಸರನ್ನು ಲೆಕ್ಕಿಸದೆ ಕೊಳಕ್ಕೆ ಧುಮುಕಿ ಕಾವೇರಿ ಮಾತೆಯ ದರ್ಶನ ಪಡೆದರು. ಕುಂಡಿಕೆಯ ಮುಂಭಾಗದಲ್ಲಿರುವ ಕೊಳದೊಳಗೆ ಯಾರೂ ಧುಮುಕದ ಹಾಗೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆದರೆ ತೀರ್ಥೋದ್ಭವವಾಗುತ್ತಿದ್ದಂತೆ ನೂರಾರು ಭಕ್ತರು ಕೊಳಕ್ಕೆ ಧುಮುಕಿ ತೀರ್ಥ ಸ್ನಾನ ಮಾಡಿದರು.
ತೀರ್ಥೋದ್ಭವ ಆಗುತ್ತಿದ್ದಂತೆ ಸ್ವಯಂ ಸೇವಕರು ಭಕ್ತರಿಗೆ ತೀರ್ಥ ವಿತರಣೆ ಮಾಡಿದರು. ಜಿಲ್ಲೆ ಸೇರಿದಂತೆ ಹಲವು ಕಡೆಗಳಿಗೆ ತೀರ್ಥ ವಿತರಿಸಲು ಕಾವೇರಿ ಪ್ರತಿಮೆಯ ಅಲಂಕೃತ ಮಂಟಪದ ವಾಹನಗಳಲ್ಲಿ ಸಾವಿರಾರು ಲೀಟರ್ ತೀರ್ಥ ಕೊಂಡೊಯ್ದರು.
ಸಾಂಸ್ಕೃತಿಕ ಕಾರ್ಯಕ್ರಮ
ತೀರ್ಥೋದ್ಭವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪೊನ್ನಂಪೇಟೆಯ ನಿಸರ್ಗ ಕಲಾ ತಂಡದಿಂದ ಭಕ್ತಿಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಕನ್ನಡ ಸಾಹಿತ್ಯ ಪರಿಷತ್ ಗೀತಾ ಗಾಯನ ಆಯೋಜಿಸಿತ್ತು.
Mythology: ಅಗಸ್ತ್ಯರ ಮೇಲೆ ಮುನಿದು ನದಿಯಾಗಿ ಭೋರ್ಗರೆದ ಕಾವೇರಿ!
ಒಂದು ತಿಂಗಳು ಅನ್ನಸಂತರ್ಪಣೆ...
ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಕಾಲ ತಲಕಾವೇರಿಯಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ತೀರ್ಥೋದ್ಭವದ ದಿನದಂದೇ ನಾನಾ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಕೊಡಗು ಏಕೀಕರಣ ರಂಗದಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಅನ್ನ, ಸಾಂಬಾರ್, ಪಾಯಸ ಇತ್ತು.
ಭಾಗಮಂಡಲದಿಂದ ಮೆರವಣಿಗೆ
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ರುದ್ರಾಭಿಷೇಕ, ಸರ್ವ ಸೇವೆ, ಶಾಂತಿಪೂಜೆ, ಸುಬ್ರಮಣ್ಯ ಸ್ವಾಮಿಗೆ ತುಲಾಭಾರ, ಸತ್ಯನಾರಾಯಣ ಪೂಜೆ, ಭಗಂಡೇಶ್ವರ ದೇವರಿಗೆ ವಿಶೇಷ ಅಲಂಕಾರ, ಗಣಪತಿ ದೇವರಿಗೆ ಬೆಣ್ಣೆ ಅಲಂಕಾರ ಮಾಡಲಾಯಿತು. ಭಾಗಮಂಡಲದಲ್ಲಿ ಕೂಡ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಿಂದ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿವ ತಲಕಾವೇರಿಯವರೆಗೂ ಮೆರವಣಿಗೆ ಮೂಲಕ ಪಾದಯಾತ್ರೆ ನಡೆಸಿದರು. ಮಹಿಳೆಯರು ದೀಪ ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ಜಗತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಈ ಗ್ರಹಣ; ಇಲ್ಲಿದೆ ಕಾರಣ
ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ...
ತೀರ್ಥೋದ್ಭವದ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದ ಆಗಮಿಸುವ ಭಕ್ತರು ಭಾಗಮಂಡಲದ ಸುಜ್ಯೋತಿ, ಕನ್ನಿಕೆ ಹಾಗೂ ಕಾವೇರಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ಪೂರ್ವಜರಿಗೆ ಪಿಂಡ ಪ್ರದಾನ ಮಾಡಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ಕೇಶಮುಂಡನ ಕಡಿಮೆ..
ಪ್ರತಿ ವರ್ಷ ತೀರ್ಥೋದ್ಭವದ ಸಂದರ್ಭದಲ್ಲಿ 500ಕ್ಕೂ ಅಧಿಕ ಮಂದಿ ಕೇಶಮುಂಡನ ಮಾಡುತ್ತಿದ್ದರು. ಆದರೆ ಈ ಬಾರಿ ಸೋಮವಾರ ಸಂಜೆ ವರೆಗೆ 200 ಮಂದಿ ಮಾತ್ರ ಮಾಡಿಸಿಕೊಂಡಿದ್ದಾರೆ. ಪಿಂಡ ಪ್ರದಾನ ಹಾಗೂ ಪುಣ್ಯ ಸ್ನಾನ ಮಾಡಿದವರ ಸಂಖ್ಯೆ ಕೂಡ ಕಡಿಮೆ ಎನ್ನುತ್ತಾರೆ ಅರ್ಚಕರು. ದೇವಾಲಯ ಸಮೀಪದಲ್ಲಿ ಹಲವು ಅಂಗಡಿ ಮಳಿಗೆಗಳು ತೆರೆದಿದ್ದರೂ ಕೂಡ ಸಂಜೆ ವೇಳೆಗೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಅಷ್ಟೇ ಅಲ್ಲದೆ, ತೀರ್ಥೋದ್ಭವದ ದಿನದಂದು ಭಾಗಮಂಡಲದ ತ್ರಿವೇಣಿ ಸಂಗಮದ ಸಮೀಪದಲ್ಲಿ ಮಕ್ಕಳು ಸೇರಿದಂತೆ ವೃದ್ಧರು ಭಿಕ್ಷಾಟನೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ದೇವಾಲಯಕ್ಕೆ ಆಗಮಿಸಿದ ಭಕ್ತರು ಅಕ್ಕಿ ಹಾಗೂ ಹಣ ನೀಡಿ ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಿಕ್ಷಾಟನೆಯಲ್ಲಿ ತೊಡಗಿದ್ದರು.
Zodiac Compatibility: ಈ ರಾಶಿಗಳೆರ್ಡು ಮದ್ವೆಯಾದ್ರೆ ಹೊಂದಾಣಿಕೆ ಸಾಧ್ಯವೇ ಇಲ್ಲ!
ಕೆಸರುಮಯ ಭಾಗಮಂಡಲ...
ಭಾಗಮಂಡಲದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಕೆಸರುಮಯ ವಾತಾವರಣ ಕಂಡುಬಂತು. ದೇವಾಲಯದ ಸಮೀಪದಲ್ಲೇ ರಸ್ತೆಗಳು ಗುಂಡಿಬಿದ್ದಿದ್ದು, ಕೆಸರು ತುಂಬಿಕೊಂಡಿತ್ತು. ಭಾರಿ ಮಳೆಯಾದ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದ ನೀರು ಕೆಸರಿನ ಬಣ್ಣಕ್ಕೆ ತಿರುಗಿತ್ತು.