ಎಷ್ಟೊಂದು ಸುಲಭವಾಗಿ ಒಲಿಯುವವನು ಈ ಶಿವ!

By Suvarna News  |  First Published Mar 11, 2021, 1:16 PM IST

ಭಕ್ತರಿಗೆ ಸುಲಭವಾಗಿ ಒಲಿಯುವ ದೇವರು ಶಿವ. ಅವನನ್ನು ಒಲಿಸಲು ನೀರಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಪಣೆಯೂ ಸಾಕು. ಪ್ರದಕ್ಷಿಣೆ ಬಂದು ನಾಮಜಪ ಮಾಡಿದರೆ ಧಾರಾಳ. ಇಂಥ ಶಿವನು ಒಲಿಯುವ ಬಗೆ ಹೇಗೆ ಎಂಬ ಕತೆಗಳನ್ನು ಇಲ್ಲಿ ಕೇಳಿ. 


ಇರುವುದು ಸ್ಮಶಾನದಲ್ಲಿ. ಮೈಮೇಲೆ ಬಟ್ಟೆಯೇ ಇಲ್ಲ. ಹಾವುಗಳೇ ಅಭರಣ. ಭಿಕ್ಷೆ ಬೇಡಿದ ಕತೆ ಉಂಟು. ಆದರೂ ಭಕ್ತರಿಗೆ ಕೇಳಿದ್ದನ್ನು ಕೊಡಬಲ್ಲ ಮಹಾಮಹಿಮ ಎಂದು ಶಿವನನ್ನು ಭಕ್ತರು ಸ್ತೋತ್ರ ಮಾಡಿದ್ದಾರೆ. ಜಗದ ಕಷ್ಟಗಳನ್ನೆಲ್ಲ ತಾನೇ ಉಂಡು, ಭಕ್ತರಿಗೆ ಸುಖವನ್ನು ಕೊಡುವ ದೇವರು ಶಂಕರ. ಅವನ ಬಗ್ಗೆ ನಾನಾ ಕತೆಗಳಿವೆ. ಎಲ್ಲವೂ, ಅವನು ಭಕ್ತರಿಗೆ ಎಷ್ಟು ಸುಲಭವಾಗಿ ಒಲಿಯುವವನು ಎಂಬ ಬಗ್ಗೆಯೇ.


ಶಿವರಾತ್ರಿಯ ಹಿನ್ನೆಲೆಯಲ್ಲಿ ಉಮಾಪತಿಯು ಬೇಡನೊಬ್ಬನಿಗೆ ಒಲಿದ ಕತೆ ಇಲ್ಲಿದೆ.
ಕಾಡಿನ ಬೇಡನೊಬ್ಬ ಒಂದು ಹಗಲು ಬೇಟೆಗೆ ಹೊರಟ. ಅವನ ಕುಟುಂಬ, ಅವನೂ ಹಲವಾರು ದಿನಗಳಿಂದ ಬೇಟೆಯಿಲ್ಲದೆ ಹಸಿದಿದ್ದರು. ಬೇಡನೂ ಹಸಿದಿದ್ದ. ಎಷ್ಟು ದೂರ ನಡೆದರೂ ಬೇಟೆ ಸಿಗಲಿಲ್ಲ. ಹಸಿವಾಯಿತು, ಕಣ್ಣು ಕತ್ತಲೆ ಬಂತು. ಅಷ್ಟರಲ್ಲಿ ರಾತ್ರಿಯಾಯಿತು. ಮನೆಗೆ ಹಿಂದಿರುಗಲು ದಾರಿ ತಿಳಿಯಲಿಲ್ಲ. ಕಾಡುಪ್ರಾಣಿಗಳಿಗೆ ಸಿಗದಂತೆ ರಾತ್ರಿ ಕಳೆಯೋಣ ಎಂದು ಒಂದು ಮರವನ್ನು ಹತ್ತಿದ. ಗಾಢ ಕತ್ತಲಾಯಿತು. ನಿದ್ರೆ ಮಾಡುವಂತೆ ಇರಲಿಲ್ಲ. ಸಮಯ ಕಳೆಯಲು ಕೈಗೆ ಸಿಕ್ಕಿದ ಒಂದೊಂದೇ ಎಲೆಯನ್ನು ಕಿತ್ತು ಕಿತ್ತು ಕೆಳಗೆ ಹಾಕಲಾರಂಭಿಸಿದ. ಇಡೀ ರಾತ್ರಿ ಹಾಗೆ ಕಳೆದ. 

Latest Videos

undefined

ಪಂಚಾಂಗ: ಭಯ, ಕಂಪನವಿದ್ದವರು ಶಿವನ ಈ ಮಂತ್ರವನ್ನು 3 ಬಾರಿ ಪಠಿಸಿದರೆ ನಿವಾರಣೆಯಾಗುವುದು ...

ಅಂದು ನಿಜಕ್ಕೂ ಶಿವರಾತ್ರಿ ಆಗಿತ್ತು.  ಅವನು ಶಿವರಾತ್ರಿಯ ಜಾಗರಣೆ ಮಾಡಿದ್ದ. ಅವನು ಹತ್ತಿದ ಮರ ಬಿಲ್ವ ಆಗಿತ್ತು. ಅವನು ಕಿತ್ತು ಕೆಳಗೆ ಹಾಕುತ್ತಿದ್ದ ಎಲೆಗಳು ಕೆಳಗಿದ್ದ ಒಂದು ಶಿವಲಿಂಗದ ಮೇಲೆ ಹೋಗಿ ಬೀಳುತ್ತದ್ದವು. ಹೀಗೆ ಅವನಿಗೇ ಅರಿಯದಂತೆ ಅವನು ಇಡೀ ರಾತ್ರಿ ಉಪವಾಸವಿದ್ದು, ಶಿವನಿಗೆ ಬಿಲ್ವಾರ್ಚನೆ ಮಾಡಿದ್ದ. ಅದರಿಂದ ಅವನಿಗೆ ಅಪಾರ ಪುಣ್ಯಫಲ ಪ್ರಾಪ್ತವಾಗಿತ್ತು. ಅವನು ತೀರಿಕೊಂಡ ನಂತರ ಅವನನ್ನೂ ಅವನ ಕುಟುಂಬವನ್ನೂ ಮುಕ್ತಿಗೆ ಒಯ್ಯಲಾಯಿತು. ಪ್ರಾಣಿಗಳನ್ನು ಕೊಂದು ಜೀವನ ಮಾಡುತ್ತಿದ್ದ ಬೇಡ ಸ್ವರ್ಗ ಪಡೆದದ್ದು ಹೀಗೆ. ಶಿವನ ಬಗ್ಗೆ ಏನೂ ತಿಳಿಯದ ವ್ಯಕ್ತಿಯೂ ತನ್ನ ಆಚರಣೆಯಿಂದಾಗಿ ಶಿವನನ್ನೇ ಹೊಂದಿದ ಎನ್ನುತ್ತದೆ ಶಿವರಾತ್ರಿಯ ಕಥೆ.


ಇನ್ನೊಂದು ಕತೆ ರಾವಣನದು. ಇವನು ಕೈಲಾಸವಾಸಿಯ ಕುರಿತು ಘೋರ ತಪಸ್ಸು ಮಾಡಿದ. ಈಶ್ವರನು ಭಕ್ತನ ಭಕ್ತಿಗೆ ಒಲಿದು ಠಣ್ಣನೆ ಪ್ರತ್ಯಕ್ಷನಾದ. ಜೊತೆಗೇ ಪಾರ್ವತಿಯೂ ಇದ್ದಳು. ತಪಸ್ಸು ಮಾಡಿದರೇನು, ಒಳಗಿರುವ ಕಲ್ಮಷಗಳು ಹೋಗುತ್ತವೆಯೇ? ಪಾಪಿ ರಾವಣ, ಸುಂದರಿ ಉಮೆಯನ್ನು ನೋಡಿ, ಅವಳನ್ನೇ ತನಗೆ ಕೊಡು ಎಂದು ಕೇಳಿದ. ಶಿವ ಅಲ್ಲೇ ರಾವಣನ ತಲೆ ಕತ್ತರಿಸಬಹುದಿತ್ತು. ಆದರೆ ತಪಸ್ಸಿನ ಫಲ ವ್ಯರ್ಥ ಮಾಡಲು ಶಿವ ಒಪ್ಪಲಿಲ್ಲ. ಪಾರ್ವತಿಯನ್ನೇ ಕಳಿಸಿಕೊಟ್ಟ. ಆಮೇಲೆ ಪಾರ್ವತಿಯನ್ನು ರಾವಣನ ಕೈಯಿಂದ ಕಾಪಾಡಲು ಗಣಪತಿಯೇ ಬರಬೇಕಾಯಿತು. ಅವನು ಕಪ್ಪೆಯೊಂದರಿಂದ ಪಾರ್ವತಿಯ ರೂಪಿನ ಸುಂದರಿಯನ್ನು ಸೃಷ್ಟಿಸಿ, ಆಕೆಯನ್ನು ರಾವಣ ಕಣ್ ಮುಚ್ಚಿ ಒಡೆಯುವಷ್ಟರಲ್ಲಿ ಪಾರ್ವತಿಗೆ ರಿಪ್ಲೇಸ್ ಮಾಡಿ, ಪಾರ್ವತಿಯನ್ನು ಕೈಲಾಸಕ್ಕೆ ಕರೆದೊಯ್ದ. ಕಪ್ಪೆಯಿಂದ ಜನಿಸಿದವಳು ಮಂಡೋದರಿಯಾದಳು. ರಾವಣ ಆಕೆಯನ್ನೇ ಗೌರಿಯೆಂದು ಭ್ರಮಿಸಿದ. 

ಮನೆಯಲ್ಲಿ ಯಾವ ಪ್ರಾಣಿಯ ಫೋಟೋ ಎಲ್ಲಿಟ್ಟರೆ ಒಳ್ಳೇದು? ...

ಸಣ್ಣ ಮಕ್ಕಳಿಗೆ ಬಲು ಬೇಗ ಒಲಿಯುವವನು ಶಿವ. ಕೋಳೂರ ಕೊಡಗೂಸು ಮುಂತಾದ ಕತೆಗಳು ಇದನ್ನೇ ಹೇಳುತ್ತವೆ ಅಲ್ಲವಾ? ಮಾರ್ಕಂಡೇಯನ ಕತೆಯೂ ಹೀಗೇ. ಮಾರ್ಕಂಡೇಯನ ಆಯುಸ್ಸು ಏಳು ವರ್ಷಗಳು ಎಂದು ಬರೆಯಲ್ಪಟ್ಟಿತ್ತು. ಅವನ ತಂದೆ ಮೃಕಂಡು ಮುನಿಗಳು ಮಗನನ್ನು ಮಹಾ ಶಿವಭಕ್ತನನ್ನಾಗಿ ಬೆಳೆಸಿದರರು. ಆರು ಮುಗಿದು ಏಳು ತುಂಬುವ ಹೊತ್ತಿಗೆ, ತಂದೆ ಮಗನಿಗೆ ನಿನ್ನ ಆಯುಸ್ಸು ಮುಗಿಯಿತು ಮಗನೇ ಎಂದರು. ಮಾರ್ಕಂಡೇಯ ಶಿವದೇಗುಲಕ್ಕೆ ಹೋಗಿ ಶಿವಲಿಂಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತುಬಿಟ್ಟ. ಬಾಯಿಯಲ್ಲಿ ಶಿವನ ಸಹಸ್ರನಾಮ. ಅಷ್ಟರಲ್ಲಿ ಯಮದೂತರು ಬಂದರು. ನಿನ್ನ ಆಯುಸ್ಸು ಮುಗಿಯಿತು, ಹೊರಗೆ ಬಾ ಎಂದರು. ಶಿವಗುಡಿಯ ಒಳಗೆ ಬರಲು ಅವರಿಗೂ ಸಾಧ್ಯವಿಲ್ಲ. ಮಾರ್ಕಂಡೇಯ ಬರಲಿಲ್ಲ. ಲಿಂಗವನ್ನು ಅಪ್ಪಿಕೊಂಡು ಕುಳಿತ. ನಂತರ ಯಮನೇ ಬಂದ. ಅಷ್ಟರಲ್ಲಿ ಮಾರ್ಕಂಡೇಯನನ್ನು ರಕ್ಷಿಸಲು ನಂದಿ ಸಹಿತ ಶಿವನ ಗಣಗಳೆಲ್ಲ ಬಂದುಬಿಟ್ಟರು. ಶಿವನ ಗಣಗಳಿಗೂ ಯಮನಿಗೂ ಭಯಂಕರ ಯುದ್ಧವಾಯಿತು. ಜಗತ್ತೇ ಗಡಗಡ ನಡುಗಿತು. ಕಡೆಗೆ ಶಿವ ಪ್ರತ್ಯಕ್ಷವಾಗಿ, ಸಾಕು ಹೋಗಿನ್ನು ಎಂದು ಯಮನಿಗೆ ಗದರಿದ. ನೀನು  ಚಿರಂಜೀವಿ ಎಂದು ಮಾರ್ಕಂಡೇಯನಿಗೆ ವರವಿತ್ತ.
ಶಿವನ ಇಂಥ ಕತೆಗಳು ಅಸಂಖ್ಯ. ಶಿವರಾತ್ರಿಯಂದು ಶಿವನನ್ನು ನೆನೆಯೋಣ ಬನ್ನಿ. 

ಲಕ್ಷ್ಮಿಯನ್ನು ಮಾತ್ರವಲ್ಲ, ಲಕ್ಷ್ಮಿ ಜೊತೆಗೆ ಈ ದೇವರನ್ನೂ ಪೂಜಿಸಬೇಕು ಗೊತ್ತೆ? ...

 

click me!