ಆದಿಪುರುಷ್ ಪ್ರಚಾರದ ವೇಳೆ ಪ್ರಭಾಸ್ 10 ಲಕ್ಷ ನೀಡಿದ ದೇವಸ್ಥಾನದ ವಿಶೇಷತೆ ಏನು?

By Suvarna NewsFirst Published May 20, 2023, 12:39 PM IST
Highlights

ಬಾಹುಬಲಿ ಖ್ಯಾತಿಯ ಹೀರೋ ಪ್ರಭಾಸ್ ಮುಂದಿನ ಬಹು ನಿರೀಕ್ಷಿತ ಪೌರಾಣಿಕ ಚಿತ್ರ ಆದಿಪುರುಷನಲ್ಲಿ ಭಗವಾನ್ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಜೂ.16ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಪ್ರಭಾಸ್ ಭದ್ರಾಚಲಂನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ 10 ಲಕ್ಷ ರೂ.ಗಳ ಕಾಣಿಕೆ ನೀಡಿದ್ದಾರೆ. ಈ ದೇವಾಲಯದ ವಿಶೇಷ ಎಂಥದ್ದು?

ಹೀರೋ ಪ್ರಭಾಸ್ ಮುಂದಿನ ಬಹು ನಿರೀಕ್ಷಿತ ಪೌರಾಣಿಕ ಅದ್ಭುತ ಕೃತಿಯಾದ ಆದಿಪುರುಷನಲ್ಲಿ ಭಗವಾನ್ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಜೂನ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 

ಏತನ್ಮಧ್ಯೆ, ಪ್ರಭಾಸ್ ಅವರ ಇತ್ತೀಚಿನ ಗೆಸ್ಚರ್ ಅವರ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿದೆ. ಪೂರ್ವ ತೆಲಂಗಾಣದ ಭದ್ರಾಚಲಂನ ಪವಿತ್ರ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನಕ್ಕೆ ನಟ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಪ್ರಭಾಸ್ ತಮ್ಮ ತಂದೆ ಉಪ್ಪಲಪತಿ ಸೂರ್ಯನಾರಾಯಣ ರಾಜು ಹೆಸರಿನಲ್ಲಿ ದೇಣಿಗೆ ನೀಡಿದ್ದಾರೆ. ಪ್ರಭಾಸ್ ಅವರ ಆಪ್ತ ಸ್ನೇಹಿತ ವಿಕ್ಕಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.

ಆದಿಪುರುಷ ಚಿತ್ರದಲ್ಲಿ ರಾಮನಾಗಿರುವ ಪ್ರಭಾಸ್ ದೇಣಿಗೆ ನೀಡಿದ ರಾಮ ದೇವಾಲಯದ ವಿಶೇಷತೆಯೇನು ನೋಡೋಣ. 

ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯ
ಭದ್ರಾಚಲಂನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇಗುಲವು ಗೋದಾವರಿ ನದಿಯ ಎಡದಂಡೆಯ ಮೇಲೆ ನೆಲೆಸಿರುವ ಭಗವಾನ್ ರಾಮನಿಗೆ ಅರ್ಪಿತವಾದ ದೇಶದ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಇದು ಹಿಂದೂಗಳ ಯಾತ್ರಾ ಸ್ಥಳವಾಗಿದೆ, ಇದು ಅತ್ಯಂತ ಶ್ರೀಮಂತ ಮತ್ತು ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದಕ್ಷಿಣ ಭಾರತದ ಶ್ರೇಷ್ಠ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ದೇವಾಲಯವನ್ನು 17 ನೇ ಶತಮಾನದಲ್ಲಿ ಭಕ್ತ ರಾಮದಾಸ್ ಎಂದು ಜನಪ್ರಿಯವಾಗಿದ್ದ ಸ್ಥಳೀಯ ತಹಶೀಲ್ದಾರ್ ಕಂಚಾರ್ಲ ಗೋಪಣ್ಣ ನಿರ್ಮಿಸಿದರು.

ಹೆಜ್ಜೆ ಹೆಜ್ಜೆಗೂ ಜ್ಯೋತಿಷಿ ಸಲಹೆ ಕೇಳೋ ಡಿಕೆಶಿ ಶನಿವಾರವೇಕೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ?

ದಂಡಕಾರಣ್ಯ
ರಾಮಾಯಣ ಕತೆ ಬಲ್ಲವರೆಲ್ಲರಿಗೂ ದಂಡಕಾರಣ್ಯದ ಬಗ್ಗೆ ತಿಳಿದೇ ಇದೆ. ಅಲ್ಲಿ ರಾಮನು ತನ್ನ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ವನವಾಸವನ್ನು ಕಳೆದಿದ್ದಾನೆ. ಅವರಿದ್ದ ಪರ್ಣಕುಟೀರ(ಪ್ರಸಿದ್ಧ ಚಿನ್ನದ ಜಿಂಕೆಗೆ ಸಂಪರ್ಕ ಹೊಂದಿದ ಸ್ಥಳ ಮತ್ತು ಸೀತೆಯನ್ನು ರಾವಣನಿಂದ ಅಪಹರಿಸಿದ ಸ್ಥಳ.) ಕೂಡಾ ಈ ಸ್ಥಳದ ಸಮೀಪದಲ್ಲಿಯೇ ಇತ್ತೆಂದು ನಂಬಲಾಗಿದೆ. ಆ ದಂಡಕಾರಣ್ಯ ಬೆಟ್ಟವಿದ್ದ ಜಾಗವೇ ಭದ್ರಗಿರಿ. ಭದ್ರಗಿರಿಯು ಮೇರು ಮತ್ತು ಮೇನಕೆಯ ಪುತ್ರನಾಗಿದ್ದು, ಈ ಪರ್ವತದ ಕಾರಣದಿಂದ ಸ್ಥಳಕ್ಕೆ ಭದ್ರಾಚಲಂ ಹೆಸರು ಬಂದಿದೆ. ದಕ್ಷಿಣ ದಿಕ್ಕಿಗೆ ಹರಿಯುವ ಪವಿತ್ರವಾದ ಗೋದಾವರಿಯಿಂದ ಈ ಬೆಟ್ಟ ಸುತ್ತುವರಿದಿದೆ. ರಾಮಾವತಾರದ ನಂತರ, ಭಗವಾನ್ ಶ್ರೀರಾಮಚಂದ್ರ ಮೂರ್ತಿಯ ಕೃಪೆಗಾಗಿ ಪ್ರಾರ್ಥಿಸುತ್ತಾ ಯುಗಗಳ ಮೂಲಕ ತನ್ನ ತಪಸ್ಸನ್ನು ಮುಂದುವರೆಸಿದ ತನ್ನ ಭಕ್ತ ಭದ್ರನಿಗೆ ಮಾಡಿದ ವಾಗ್ದಾನವನ್ನು ಪೂರೈಸಲು ಭಗವಾನ್ ಮಹಾವಿಷ್ಣು ಮತ್ತೆ ರಾಮನಾಗಿ ಕಾಣಿಸಿಕೊಂಡದ್ದು ಈ ಮಂದಿರದ ಸ್ಥಳದಲ್ಲಿ ಎಂದು ನಂಬಲಾಗಿದೆ. 

ರಾಮಚಂದ್ರನ ಅನನ್ಯ ರೂಪ
ಇಲ್ಲಿ ಭದ್ರನು ನಿಂತು ತಪಸ್ಸು ಮಾಡಿದ ಕಲ್ಲಿನಿಂದಲೇ ಶ್ರೀ ರಾಮಚಂದ್ರ ಮೂರ್ತಿಯ ವಿಗ್ರಹವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಭಗವಂತನ ಚಿತ್ರವು ಅನನ್ಯವಾಗಿದೆ- ಅವನು ಶಂಕು, ಚಕ್ರ, ಧನಸ್ಸು ಮತ್ತು ಬಾಣಗಳನ್ನು ಹಿಡಿದಿರುವ ನಾಲ್ಕು ತೋಳುಗಳನ್ನು ಹೊಂದಿದ್ದಾನೆ. ಆತನಿಗೆ ಎಡಭಾಗದಲ್ಲಿ ಸೀತಾದೇವಿ ಮತ್ತು ಬಲಭಾಗದಲ್ಲಿ ಲಕ್ಷ್ಮಣ ಇದ್ದಾರೆ. ಇಲ್ಲಿ ದಶಾವತಾರ ಮತ್ತು ಹನುಮಂತನಿಗೆ ಸಮರ್ಪಿತವಾದ ದೇವಾಲಯಗಳಿವೆ.

ಬೇಸಿಗೆ ರಜೆ ಎಫೆಕ್ಟ್‌: ತಿರುಪತಿಯಲ್ಲಿ 30 ಗಂಟೆ ಭಾರೀ ಸರದಿ

ರಾಮದಾಸ್, ಕಬೀರ್‌ದಾಸ್
ಸಂತರಾದ ರಾಮದಾಸ್ ಮತ್ತು ಕಬೀರದಾಸ್ ಈ ದೇವಾಲಯದೊಂದಿಗೆ ಸಂಬಂಧ ಹೊಂದಿದ್ದಾರೆ. ದೇವಸ್ಥಾನ ಕಟ್ಟಲು ಆದಾಯದ ಹಣವನ್ನು ಬಳಸಿದ್ದಕ್ಕಾಗಿ ಮುಸ್ಲಿಂ ದೊರೆ ರಾಮದಾಸ್ ಅವರನ್ನು ಜೈಲಿಗೆ ಹಾಕಿದರು. ನಂತರ ರಾಮ ಮತ್ತು ಲಕ್ಷ್ಮಣ ಮಾರುವೇಷದಲ್ಲಿ ಆಸ್ಥಾನದ ನ್ಯಾಯಾಲಯದಲ್ಲಿ ಕಾಣಿಸಿಕೊಂಡು ಸಂಪೂರ್ಣ ಹಣವನ್ನು ಚಿನ್ನದ ನಾಣ್ಯಗಳಲ್ಲಿ ಪಾವತಿಸಿದರು. ರಾಜನು ರಾಮದಾಸರ ಹಿರಿಮೆಯನ್ನು ಅರಿತು ಅವರನ್ನು ಮುಕ್ತಗೊಳಿಸಿದನು.

ಹಾಗೆಯೇ ಒಮ್ಮೆ ಹುಟ್ಟು ಮುಸಲ್ಮಾನನಾದ ಕಬೀರರು ದೇಗುಲಕ್ಕೆ ಪೂಜೆಗೆ ಬಂದರು. ಆದರೆ ಅರ್ಚಕರು ಅವರಿಗೆ ಪ್ರವೇಶ ನಿರಾಕರಿಸಿದರು. ಗರ್ಭಗುಡಿಯಲ್ಲಿದ್ದ ಚಿತ್ರಗಳೂ ಒಮ್ಮೆಲೇ ಮಾಯವಾದವು. ಈ ವೇಳೆ ಉಪಸ್ಥಿತರಿದ್ದ ರಾಮದಾಸ್ ಅವರು ಅರ್ಚಕರಲ್ಲಿ ಮನವಿ ಮಾಡಿ ಕಬೀರರನ್ನು ಒಳಗೆ ಬಿಡುತ್ತಿದ್ದಂತೆ ಮತ್ತೆ ಮೂರ್ತಿಗಳು ಕಾಣಿಸಿಕೊಂಡವು. ರಾಮದಾಸರು ಕಬೀರದಾಸರ ಭಕ್ತರಾದರು.

click me!