ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಇಲ್ಲಿನ ತಿಮ್ಮಪ್ಪನ ದೇಗುಲಕ್ಕೆ ದೇಶದ ನಾನಾ ಭಾಗಗಳಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು ಭಾರೀ ಜನದಟ್ಟಣೆ ನಿರ್ಮಾಣವಾಗಿದೆ.
ತಿರುಪತಿ: ಮಕ್ಕಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಇಲ್ಲಿನ ತಿಮ್ಮಪ್ಪನ ದೇಗುಲಕ್ಕೆ ದೇಶದ ನಾನಾ ಭಾಗಗಳಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದು ಭಾರೀ ಜನದಟ್ಟಣೆ ನಿರ್ಮಾಣವಾಗಿದೆ. ಕಳೆದ 2-3 ದಿನಗಳಿಂದ ಕನಿಷ್ಠ 30 ಗಂಟೆಗಳ ಕಾಲ ಸರದಿಯಲ್ಲಿ ಕಾದ ಬಳಿಕವೇ ದೇವರ ದರ್ಶನಕ್ಕೆ ಅವಕಾಶ ಲಭ್ಯವಾಗುತ್ತಿದೆ. ಬುಧವಾರ ಒಂದೇ ದಿನ 79,207 ಭಕ್ತಾದಿಗಳು ದೇವರ ದರ್ಶನ ಪಡೆದಿದ್ದು ಒಟ್ಟು 3.19 ಕೋಟಿ ರು. ದೇಣಿಗೆ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ.
ತಿರುಪತಿಯಲ್ಲಿ ಭಾರಿ ಭದ್ರತಾ ಲೋಪ: ದೇಗುಲದ ವಿಡಿಯೋ ವೈರಲ್
ಕೆಲ ದಿನಗಳ ಹಿಂದೆ ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಭಾರಿ ಭದ್ರತಾ ವೈಫಲ್ಯ (security lapse) ಉಂಟಾಗಿತ್ತು. ನಿಷೇಧದ ಹೊರತಾಗಿಯೂ ದೇವಸ್ಥಾನದ ಒಳಗೆ ಮೊಬೈಲ್ ತೆಗೆದುಕೊಂಡು ಹೋದ ಭಕ್ತನೊಬ್ಬ ದೇಗುಲದ ಗೋಪುರ ಹಾಗೂ ಇತರ ಭಾಗಗಳನ್ನು ಚಿತ್ರೀಕರಿಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
ಡಿಕೆಶಿ ಸಿಎಂ ಆಗಲೆಂದು ಹರಕೆ: ತಿರುಪತಿಯಿಂದ ಲಾಡು ತಂದ ಅಭಿಮಾನಿ !
ಚಿನ್ನದ ಲೇಪಿತ ಆನಂದ ನಿಲಯಂ (ಗೋಪುರ) (Ananda Nilayam) ಹಾಗೂ ವಿಮಾನ ಪ್ರಕಾರಂ (ಗರ್ಭಗುಡಿಗೆ ಸುತ್ತಲಿನ ಭಾಗ) ಭಾಗಗಳನ್ನು ಚಿತ್ರೀಕರಿಸಲಾಗಿದೆ. ಇದರ ಬೆನ್ನಲ್ಲೇ ದೇವಸ್ಥಾನ ಮಂಡಳಿಯು ಘಟನೆ ಕುರಿತು ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ಹಂತದಲ್ಲಿ ಭದ್ರತಾ ಲೋಪವನ್ನು ತಡೆಗಟ್ಟುವಲ್ಲಿ ವಿಫಲವಾದ ಕಾರಣ ದೇವಸ್ಥಾನದ ಭದ್ರತಾ ವಿಭಾಗವು ತನಿಖೆ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.
ದೇವಸ್ಥಾನದ ಒಳಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು(Electronic) ನಿಷೇಧಿಸಲಾಗಿದೆ. ಆದರೂ ವಿಡಿಯೋ ಚಿತ್ರೀಕರಿಸಿರುವ ಅಪರಿಚಿತ ಭಕ್ತಾದಿ, ಭದ್ರತಾ ಸಿಬ್ಬಂದಿಯನ್ನು ದಾಟಿ ಹೇಗೆ ಮೊಬೈಲ್ ಅಥವಾ ಕ್ಯಾಮರಾ ಕೊಂಡೊಯ್ದು ವಿಡಿಯೋ ಮಾಡಿದ್ದಾನೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಭಾನುವಾರ ತಿರುಮಲದಲ್ಲಿ ಸುರಿದ ಧಾರಾಕಾರ ಮಳೆಯಿಂದ 2 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದೇ ವೇಳೆ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ತಿರುಪತಿ ಹುಂಡಿ ಸಂಗ್ರಹದಲ್ಲಿ ತೀವ್ರ ಕುಸಿತ: ತಿಮ್ಮಪ್ಪ ದೇಗುಲಕ್ಕೆ ಹೋಗೋ ಭಕ್ತರ ಸಂಖ್ಯೆಯೇ ಕಡಿಮೆಯಾಯ್ತಾ?
ಪತ್ತೆಗೆ ಕ್ರಮ:
ಮಾಹಿತಿ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಮೊದಲು ಜಾಲತಾಣದಲ್ಲಿ ವೀಡಿಯೋ ಎಲ್ಲಿ ಮತ್ತು ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿಯ (TTD) ಮುಖ್ಯ ಭದ್ರತಾ ಅಧಿಕಾರಿ ಡಿ ನರಸಿಂಹ ಕಿಶೋರ್ (Narasimha Kishore) ತಿಳಿಸಿದ್ದಾರೆ. ಅಲ್ಲದೇ ದೇವಾಲಯದ ಒಳಾಂಗಣ ಹಾಗೂ ಹೊರಾಂಗಣ ಭಾಗಗಳಲ್ಲಿ ಅಳವಡಿಸಲಾದ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.
ಕಳವಳ:
ಇನ್ನು ಭಧ್ರತಾ ವೈಫಲ್ಯದ ಕುರಿತು ಕಳವಳ ವ್ಯಕ್ತಪಡಿಸಿರುವ ಮಾಜಿ ಟಿಟಿಡಿ ಸದಸ್ಯ ಹಾಗೂ ಬಿಜೆಪಿ ನಾಯಕ ಗಿ ಭಾನು ಪ್ರಕಾಶ್ ರೆಡ್ಡಿ, ‘ಭದ್ರತಾ ವ್ಯವಸ್ಥೆಯನ್ನು ನವೀಕರಿಸಲು ಟಿಟಿಡಿಯು ಪ್ರತಿವರ್ಷ ಕೋಟ್ಯಂತರ ರು.ಗಳನ್ನು ವ್ಯಯಿಸುತ್ತಿದ್ದರೂ ಇಂತಹ ಘಟನೆ ನಡೆದಿರುವುದು ಆಘಾತಕಾರಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.