ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥವು ಉಳಿದೆಲ್ಲಾ ವೀರರ ರಥಗಳಿಗಿಂತಲೂ ವಿಶೇಷವಾಗಿತ್ತು ಮತ್ತು ವಿಭಿನ್ನವಾಗಿತ್ತು. ಮತ್ತು ಅದು ಕುರುಕ್ಷೇತ್ರ ಯುದ್ಧ ಮುಗಿದ ಮರುಕ್ಷಣದಲ್ಲಿಯೇ ಸುಟ್ಟು ಭಸ್ಮವಾಯಿತು! ಇದರ ಹಿಂದಿರುವ ವಿಚಿತ್ರ ಕಥೆಯನ್ನು ಓದಿ ತಿಳಿಯಿರಿ.
ಮಹಾಭಾರತದಲ್ಲಿ 18 ದಿನಗಳ ಕಾಲ ನಡೆದ ಕುರುಕ್ಷೇತ್ರದಲ್ಲಿ ಮಹಾಯುದ್ಧ ನಡೆಯಿತು. ಈ ಯುದ್ಧದಲ್ಲಿ ಮಹಾನ್ ಪಾತ್ರ ವಹಿಸಿದ ಒಂದು ರಥವಿದೆ. ಅದು ಭೂಮಿಯಷ್ಟೇ ತೂಕವಿತ್ತು. ಅದು ಬೇರ್ಯಾವುದೂ ಅಲ್ಲ, ಕೃಷ್ಣ ಸಾರಥ್ಯ ವಹಿಸಿದ ಹಾಗೂ ಅರ್ಜುನ ಸಮರಗೈದ ರಥ. ಪಾಂಡವರು- ಕೌರವರ ಎರಡೂ ಕಡೆಯ ಅನೇಕ ಯೋಧರು ತಮ್ಮ ರಥಗಳ ಮೇಲಿದ್ದು ಹೋರಾಡುತ್ತಿದ್ದರು. ಆದರೆ ಅರ್ಜುನನ ರಥವು ಉಳಿದೆಲ್ಲಾ ರಥಗಳಿಗಿಂತಲೂ ವಿಶೇಷವಾಗಿತ್ತು ಮತ್ತು ವಿಭಿನ್ನವಾಗಿತ್ತು. ಮತ್ತು ಅದು ಕುರುಕ್ಷೇತ್ರ ಯುದ್ಧ ಮುಗಿದ ಮರುಕ್ಷಣದಲ್ಲಿಯೇ ಸುಟ್ಟು ಭಸ್ಮವಾಯಿತು!
ಹಾಗಾದರೆ ಈ ರಥ ಯಾಕೆ ವಿಶೇಷ ಮತ್ತು ಅದು ಯುದ್ಧ ಮುಗಿದ ಕೂಡಲೇ ಭಸ್ಮವಾಗಿದ್ದೇಕೆ ಎಂಬುದನ್ನು ತಿಳಿಯೋಣ.
ಅರ್ಜುನನ ರಥದ ಧ್ವಜದಲ್ಲಿ ಭಗವಾನ್ ಹನುಮಂತನು ಕುಳಿತಿದ್ದನು. ಯುದ್ಧದ ಮೊದಲು, ಶ್ರೀ ಕೃಷ್ಣನೇ ಅರ್ಜುನನಿಗೆ ಹನುಮಂತನನ್ನು ಪ್ರಾರ್ಥಿಸಿ ತನ್ನ ರಥದ ಧ್ವಜವನ್ನು ಹನುಮನಿಗೆ ಅರ್ಪಿಸಿ ನಂತರ ರಥಕ್ಕೆ ಕಟ್ಟುವಂತೆ ಸಲಹೆಯನ್ನು ನೀಡಿದ್ದ. ಮಹಾಭಾರತ ಯುದ್ಧದ ಸಮಯದಲ್ಲಿ, ಅರ್ಜುನ ತನ್ನ ಅಜ್ಜ ಭೀಷ್ಮ ಮತ್ತು ಕರ್ಣ ಸೇರಿದಂತೆ ಅನೇಕ ಯೋಧರೊಂದಿಗೆ ಹೋರಾಡಿದ. ಆದರೆ ಅರ್ಜುನನ ರಥಕ್ಕೆ ಯಾವುದೇ ರೀತಿಯ ಹಾನಿಯಾಗಿರಲಿಲ್ಲ.
ಪಾಂಡವರು ಮಹಾಭಾರತ ಯುದ್ಧವನ್ನು ಗೆದ್ದ ಬಳಿಕ, ಮೊದಲು ರಥದಿಂದ ಇಳಿ ಎಂದು ಅರ್ಜುನನಿಗೆ ಕೃಷ್ಣ ಹೇಳಿದ. ಮೊದಲು ಅರ್ಜುನ ಇಳಿದ, ನಂತರ ಕೃಷ್ಣನಿಳಿದ. ಕೂಡಲೇ ರಥವು ಬೆಂಕಿಯಿಂದ ಧಗಧಗಿಸಿ ನಾಶವಾಯಿತು. ರಥ ಹಾಗೆ ಸುಟ್ಟು ಹೋಗಲು ಕಾರಣವೇನು ಎಂದು ಕೃಷ್ಣನಲ್ಲಿ ಅರ್ಜುನ ಕೇಳಿದ.
ಆಗ ಶ್ರೀಕೃಷ್ಣನೆಂದ- ಅರ್ಜುನಾ, ಯುದ್ಧದಲ್ಲಿ ಭೀಷ್ಮ ಪಿತಾಮ, ದ್ರೋಣಾಚಾರ್ಯ ಮತ್ತು ಕರ್ಣ ಮುಂತಾದವರು ಎಷ್ಟೋ ಮಂತ್ರಾಸ್ತ್ರಗಳನ್ನು ಈ ರಥದ ಮೇಲೆ ಪ್ರಯೋಗಿಸಿದ್ದಾರೆ. ಅಂದೇ ಈ ರಥವು ನಾಶವಾಗಿದೆ. ಆದರೆ ಇಂದಿನವರೆಗೂ ನಾನು ಅದನ್ನು ಭಸ್ಮವಾಗದಂತೆ ತಡೆಹಿಡಿದಿದ್ದೆ. ಜೊತೆಗೆ ಹನುಮಾನ್ ಕೂಡ ರಥದಲ್ಲಿದ್ದ. ಈ ರಥವು ನನ್ನ ಸಂಕಲ್ಪದಿಂದಾಗಿ ಓಡುತ್ತಿತ್ತು. ಈಗ ಈ ರಥದ ಕೆಲಸ ಪೂರ್ಣಗೊಂಡಿದೆ. ಅದಕ್ಕಾಗಿಯೇ ನಾನು ಈ ರಥವನ್ನು ಬಿಟ್ಟುಬಿಟ್ಟೆ. ಇದೇ ರಥ ಸುಡಲು ಮುಖ್ಯ ಕಾರಣ- ಎಂದ.
ಈ ರಥವನ್ನು ಕೃಷ್ಣಾರ್ಜುನರಿಗೆ ನೀಡಿದವನು ಅಗ್ನಿದೇವ. ಅಗ್ನಿದೇವನಿಗೆ ಅದು ಬಂದುದು ವರುಣದೇವನಿಂದ. ಹಿಂದೆ ಖಾಂಡವವನ ದಹನ ಕಾಲದಲ್ಲಿ ಕೃಷ್ಣಾರ್ಜುನರಿಂದ ನೆರವು ಪಡೆದ ಅಗ್ನಿದೇವ, ಅದಕ್ಕೆ ಕೃತಜ್ಞತೆಯಾಗಿ ಈ ರಥವನ್ನು ಇವರಿಗೆ ನೀಡಿದ್ದ. ಈ ರಥದಲ್ಲಿ ಭೂಮಿ ತೂಕದ ಗಾಂಡಿವ ಧನುಸ್ಸು ಕೂಡ ಇತ್ತು. ಇದನ್ನು ಅರ್ಜುನ ಹೂವಿನಷ್ಟೇ ಹಗುರವಾಗಿ ಎತ್ತಿ ಬಾಣ ಹೂಡಿ ಯುದ್ಧ ಮಾಡುತ್ತಿದ್ದ. ಈ ರಥದಲ್ಲಿ ತ್ರಿಮೂರ್ತಿಗಳ ಶಕ್ತಿ ಕೂಡ ಇತ್ತು. ಶೇಷನಾಗ ಕೂಡ ಇದ್ದ.
Indian Mythology: ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಮಾತ್ರ ಏಕೆ ಪೂಜೆ ಸಲ್ಲಿಸುವುದಿಲ್ಲ?
ರಥ ಸುಟ್ಟುಹೋದ ಬಳಿಕ ಇದರಲ್ಲಿದ್ದ ಶೇಷನಾಗನು ಪಾತಾಳ ಲೋಕಕ್ಕೆ ಹೊರಟು ಹೋದ. ರಥದ ಧ್ವಜವನ್ನು ಹಿಡಿದು ಕುಳಿತ ಹನುಮಂತನು ಕೂಡ ಕೆಳಗಳಿದು ಬಂದು ಕೃಷ್ಣನಿಗೆ ಕೈಮುಗಿದು ಗಂಧಮಾದನ ಪರ್ವತದತ್ತ ಹೊರಟುಹೋದ.
ಕೊನೆಗೂ ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆದ್ದರು. ಬೃಹತ್ ಕೌರವ ಸೇನೆಯ ವಿರುದ್ಧ ಹೋರಾಡಲು ಪಾಂಡವರಿಗೆ ಸಹಾಯ ಮಾಡಿದ ಅಂಶಗಳಲ್ಲಿ ಅರ್ಜುನನ ರಥವೂ ಕೂಡ ಒಂದು. ಅರ್ಜುನನ ರಥ ಮತ್ತು ಶ್ರೀಕೃಷ್ಣನಿಲ್ಲದಿದ್ದರೆ, ಅರ್ಜುನ ಯುದ್ಧದಲ್ಲಿ ಸೋಲನ್ನು ಅನುಭವಿಸಬೇಕಾಗಿತ್ತು. ಕೇವಲ ಅರ್ಜುನ ಮಾತ್ರವಲ್ಲ, ಪಾಂಡವರೆಲ್ಲ ನಾಶವಾಗುತ್ತಿದ್ದರು. ಅರ್ಜುನನ ರಥಕ್ಕಿದ್ದ ಕೃಷ್ಣನ ಶಕ್ತಿ, ಹನುಮನ ಆಶೀರ್ವಾದ, ಶೇಷನಾಗನ ಧೈರ್ಯ ಇವೆಲ್ಲವೂ ರಥಕ್ಕೆ ಅದ್ಬುತವಾದ ಶಕ್ತಿಯನ್ನು ನೀಡಿದ್ದವು.
Indian Mythology: ಮಹಾಭಾರತದಲ್ಲಿ ಕರ್ಣನಿಗೆಷ್ಟು ಮಕ್ಕಳು? ಅವರು ಏನಾದರು?