ಆಷಾಢ ಶುಕ್ರವಾರ ಹೀಗ್ ಮಾಡಿದರೆ ಮನೆಯಲ್ಲಿ ಐಶ್ವರ್ಯ ತುಂಬಿ ತುಳುಕುತ್ತೆ

By Suvarna News  |  First Published Jun 26, 2020, 6:29 PM IST

ಆಷಾಢ ಮಾಸದಲ್ಲಿ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವುದು ಶ್ರೇಯಸ್ಕರ. ಈ ಸಮಯದಲ್ಲಿ ಲಕ್ಷ್ಮಿಪೂಜೆ ಮಾಡುವುದರಿಂದ ನಿಮ್ಮ ಮನದ ಅಭೀಷ್ಟಗಳೆಲ್ಲ ಈಡೇರುತ್ತವೆ. ಪೂಜೆ ಹೇಗೆ ಮಾಡಬೇಕು ಗೊತ್ತೆ?


ಆಷಾಢ ಮಾಸದಲ್ಲಿ ಮೋಡ ಕವಿದು ಸದಾ ಮಳೆ ಸುರಿಯುತ್ತಾ ಇರುತ್ತದೆ. ಒಂದು ಬಗೆಯ ಮಂಕು ಕವಿದ ವಾತಾವರಣ ಇರುತ್ತದೆ. ಹೀಗಾಗಿ ಆ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಇದು ಪೂರ್ತಿ ನಿಜವಲ್ಲ. ಆಷಾಢ ಮಾಸದಲ್ಲಿ ಮದುವೆ ಮುಂಜಿ ಮುಂತಾದವುಗಳನ್ನು ಮಾಡುವುದಿಲ್ಲವಾದರೂ, ಮನೆದೇವರ ಹಾಗೂ ಲಕ್ಷ್ಮಿದೇವಿಯ ಪೂಜೆಯನ್ನು ಈ ಸಮಯದಲ್ಲಿಯೇ ಮಾಡಬೇಕು. ಅದೇ ಶ್ರೇಯಸ್ಕರ.

ಈ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ದರಿದ್ರತನ, ಸಾಲಭಾದೆ ಹಾಗೂ ಇತರೆ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಅದರಲ್ಲೂ ಸೋಮವಾರಗಳು ಹಾಗೂ ಶುಕ್ರವಾರಗಳು ಈ ಪೂಜೆಯನ್ನು ಮಾಡಲು ಪ್ರಶಸ್ತ. ಆಷಾಢ ಮಾಸದ ಶುಕ್ರವಾರವನ್ನು ಆಡಿ ಶುಕ್ರವಾರ ಎನ್ನುತ್ತೇವೆ. ಈ ಸಂದರ್ಭದಲ್ಲಿ ಲಕ್ಷ್ಮಿ ಆರಾಧನೆ ಮಾಡಿದರೆ ತೊಂದರೆ ತಾಪತ್ರಯಗಳು ದೂರವಾಗುತ್ತವೆ. ಈ ಸಂದರ್ಭದಲ್ಲಿ ಎಲ್ಲ ದೇವಸ್ಥಾನಗಳ ಹೆಬ್ಬಾಗಿಲು ಅಥವಾ ಬಾಗಿಲಲ್ಲಿ ಗಜಲಕ್ಷ್ಮಿ ಪ್ರತಿಷ್ಠಾಪಿಸಿರುವುದನ್ನು ಕಾಣುತ್ತೇವೆ.

Latest Videos

undefined

ಮನೆಯಲ್ಲಿ ಲಕ್ಷ್ಮಿ ನೆಲೆಸಲು ಹೀಗ್ ಮಾಡಿ

ಕೆಲವರಿಗೆ ಬಡತನ. ತುಂಬಾ ಕಷ್ಟ ಪಡುತ್ತಿರುತ್ತಾರೆ, ಎಷ್ಟೇ ಕಷ್ಟ ಪಟ್ಟರೂ ಹಣ ಕೈಯ್ಯಲ್ಲಿ ನಿಲ್ಲುತ್ತಿರುವುದಿಲ್ಲ. ಸಾಲ ಮಾಡುವುದು, ಬಡ್ಡಿ ಕಟ್ಟುವುದು, ಸಾಲ ತೀರಿಸದೆ ಕೊರಗುವುದು, ಈ ಮೂಲಕ ರೋಗವನ್ನು ಆವಾಹನೆ ಮಾಡಿಕೊಳ್ಳುತ್ತಾರೆ. ಇದೆಲ್ಲದಕ್ಕೆ ಆಷಾಢ ಶುಕ್ರವಾರದ ವ್ರತದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. 

ಆಷಾಢ ಶುಕ್ರವಾರದ ದಿನ ಪ್ರಾತಃ ಕಾಲದಲ್ಲಿ ಎದ್ದು, ಸ್ನಾನ ಮಾಡಿ ಶುಭ್ರವಾಗಿ, ಶ್ವೇತವಸ್ತ್ರ ಧರಿಸಿ, ಬ್ರಾಹ್ಮೀ ಲಗ್ನದಲ್ಲಿ ಅಂದರೆ, ಬೆಳಗ್ಗೆ 4.30ರಿಂದ 5.20 ಗಂಟೆಯೊಳಗೆ ಮನೆಯಲ್ಲಿ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕಲಶ ಸ್ಥಾಪನೆ ಮಾಡಬೇಕು. ಕಲಶ ಸ್ಥಾಪನೆ ಮಾಡಿ, ಪದ್ಮ ಪ್ರಿಯೆ, ಪದ್ಮಿನಿ, ಪದ್ಮ ಹಸ್ತೆ, ಪದ್ಮಾಲಯೆ, ಪದ್ಮದಲಾಯತಾಕ್ಷೆ, ವಿಶ್ವಪ್ರಿಯೆ, ವಿಶ್ವಮನೋನುಕೂಲೆ, ತದ್ಪಾದ ಪದ್ಮಂ ವಹಿ ಸನ್ನಿಧತ್ವ ಎಂದು ಹೇಳಬೇಕು. ಈ ಮೂಲಕ ಪದ್ಮಾಸನ ಹಾಕಿ ಕುಳಿತಿರುವ ಮಹಾಲಕ್ಷ್ಮಿಯನ್ನು ಆಹ್ವಾನಿಸಬೇಕು. ಅಷ್ಟ ದಳವನ್ನಿಟ್ಟು ಅದರ ಮೇಲೆ ಶ್ರೀಚಕ್ರವನ್ನಿಟ್ಟು ಕಲಶ ಸ್ಥಾಪನೆ ಮಾಡಿ, ವ್ಯವಸ್ಥಿತವಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು.


ಪ್ರಾಣ ಪ್ರತಿಷ್ಠಾಪನೆ ಮಾಡಬೇಕಾದರೆ, ಪೂಜೆ, ವ್ರತ, ಹೋಮ, ಹವನಗಳನ್ನು ಮಾಡುವ ಸಮಯದಲ್ಲಿ ವೇದಗಳನ್ನು ಹೇಳುವಂತೆ ಲಕ್ಷ್ಮೀ ಪೂಜೆ ಸಂದರ್ಭದಲ್ಲಿಯೂ ಹೇಳಬೇಕು. ಪದನ್ಯಾಸ, ಕರನ್ಯಾಸ ಪ್ರಾಣ ಪ್ರತಿಷ್ಠಾಪನೆಗಳನ್ನು ಶೋಡಶ ಉಪಚಾರಗಳ ಮೂಲಕ ವ್ಯವಸ್ಥಿತವಾಗಿ ಭಕ್ತಿಯಿಂದ ಪ್ರಾರ್ಥನೆ ಮಾಡಿ, ಪ್ರಾಣ ಪ್ರತಿಷ್ಠಾಪನೆ ಮಾಡಬೇಕು. ಹೆಸರುಬೇಳೆ ಕೋಸಂಬರಿ ಅಥವಾ ಸಜ್ಜಿಗೆಯನ್ನು ಮಾಡಿ ನೈವೇದ್ಯ ಮಾಡಬೇಕು. ಶುಕ್ರವಾರ ಸಂಜೆ 8 ಜನ ಸುಮಂಗಲಿಯರನ್ನು ಕರೆದು ವ್ಯವಸ್ಥಿತವಾಗಿ ಅವರಿಗೆ ಅರಶಿಣ, ಕುಂಕುಮ ಕೊಡುವ ಕೆಲಸವನ್ನು ಮಾಡಿ. ಆಗ ಮಹಾಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗಬಹುದು.

ಪಂಚಾಂಗ: ಆಷಾಢ ಮಾಸ ಎಂದು ಮೂಗು ಮುರಿಯಬೇಡಿ, ಇದಕ್ಕೂ ಇದೆ ಧಾರ್ಮಿಕ ಮಹತ್ವ..! ...

ಲಕ್ಷ್ಮೀದೇವಿಯು ಶ್ರೀಮನ್ನಾರಾಯಣನ ಮನದನ್ನೆ. ಆಕೆಯನ್ನು ಭಜಿಸುವುದರಿಂದ ಮಹಾವಿಷ್ಣು ಕೂಡ ಸಂಪ್ರೀತನಾಗುತ್ತಾನೆ. ಕರಾವಳಿಯಲ್ಲಿ ಗೌಡ ಸಾರಸ್ವತರ ಮನೆಗಳಲ್ಲಿ ಹೆಣ್ಣು ಮಕ್ಕಳು ಈ ಸಿರಿದೇವಿಯ ಪೂಜೆಯನ್ನು ಭಕ್ತಿ ಪ್ರೀತಿಗಳಿಂದ ಪ್ರಮುಖವಾಗಿ ಮಾಡುತ್ತಾರೆ. ಈ ಸಮುದಾಯದವರು ಎಲ್ಲ ಕ್ಷೇತ್ರಗಳಲ್ಲಿ ಹೆಸರು ಹಾಗೂ ಹಣ ಮಾಡಿರುವುದನ್ನು ನೀವು ಗಮನಿಸಬಹುದು. ಇದೆಲ್ಲವೂ ಲಕ್ಷ್ಮಿದೇವಿಯ ಪೂಜೆಯ ಫಲವೇ ಎಂದರೆ ತಪ್ಪಾಗಲಾರದು. 

ದಿನ ಭವಿಷ್ಯ: ಈ ರಾಶಿಯವರು ವ್ಯಸನಕ್ಕೆ ಬಲಿಯಾಗಬೇಡಿ! 
ಹಾಗೆಯೇ ದೇವಿ ಅಥವಾ ಶಕ್ತಿಯ ಆರಾಧನೆ ಇರುವ ದೇವಸಸ್ಥಾನಗಳಲ್ಲಿ ಈ ಮಾಸ ವಿಶೇಷ. ಉದಾರಣೆಗೆ ಮೈಸೂರಿನ ಚಾಮುಂಡಿ ದೇವಾಲಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಮುಂತಾದ ಕಡೆಗಳೆಲ್ಲ ಶಕ್ತಿ ಆರಾಧನೆಗೆ ಹೆಸರುವಾಸಿ, ಇಲ್ಲಿ ಆಷಾಢ ಶುಕ್ರವಾರಗಳಂದು ವಿಶೇಷ ಪೂಜೆ ನೆರವೇರುತ್ತದೆ. ಅಂದು ಅಲ್ಲಿ ದರ್ಶನ ಪಡೆಯುವದು ಕೂಡ ಪುಣ್ಯಕಾರ್ಯ.

ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮಮೇಲಾಗಿದೆ ಎಂದರ್ಥ! 

click me!