ಮನೆಯೇ ಮಂತ್ರಾಲಯ ಎಂಬ ಮಾತಿದೆ. ಎಲ್ಲರಿಗೂ ಸ್ವಂತ ಸೂರಿನ ಕನಸು ಇದ್ದೇ ಇರುತ್ತದೆ. ಹೊಸ ಮನೆಗಳು ಹೀಗೇ ಇರಬೇಕು ಎಂಬ ಕಲ್ಪನೆಯೂ ಇರುತ್ತದೆ. ಮನೆ ಕಟ್ಟಿಸುವವರು ತಮಗೆ ಬೇಕಾದ ಶೈಲಿಯಲ್ಲಿ ಕಟ್ಟಿಸಿಕೊಳ್ಳುತ್ತಾರೆ. ಆಸ್ತಿಕರಾದವರು ವಾಸ್ತುವಿನ ಮೊರೆ ಹೋಗುತ್ತಾರೆ. ಹೀಗೆ ಮನೆ ಕಟ್ಟಿಸಿಕೊಳ್ಳುವವರು ಒಂದೆಡೆಯಾದರೆ, ಕಟ್ಟಿದ ಮನೆಯನ್ನು ಕೊಳ್ಳುವವರು ಹಲವರಿದ್ದಾರೆ. ಅವರಲ್ಲೂ ಬಹುತೇಕರು ವಾಸ್ತುವನ್ನು ಗಮನಿಸಿಯೇ ಮನೆಗಳನ್ನು ಕೊಳ್ಳುತ್ತಾರೆ. ಹಾಗಾದರೆ, ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಯಲ್ಲಿ ಏನಿರಬೇಕು? ಏನಿರಬಾರದು? ಯಾವುದು ಇದ್ದರೆ ಒಳಿತು? ಯಾವುದಿದ್ದರೆ ಕೆಡುಕು ಎಂಬ ಬಗ್ಗೆ ತಿಳಿಯೋಣ…
ಮನೆ ಕಟ್ಟುವುದು ಅಥವಾ ಖರೀದಿಸುವುದೆಂದರೆ ಸುಲಭದ ಕೆಲಸವಲ್ಲ, ಅದಕ್ಕೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕ. ಮನೆ ಖರೀದಿ ಮಾಡುವಾಗ ಹಣ ಎಷ್ಟು ಎನ್ನುವುದೊಂದೇ ಮುಖ್ಯವಲ್ಲ. ಮನೆಯ ಜಾಗ, ಮುಖ್ಯದ್ವಾರ, ಪೂಜಾ ಗೃಹ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಜಾಗೃತಿ ವಹಿಸಿ ಮನೆ ಆಯ್ಕೆ ಮಾಡಿಕೊಳ್ಳಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಖರೀದಿಸುವಾಗ ಅದಕ್ಕೆ ಸಂಬಂಧಪಡುವ ಹಲವಾರು ಸಂಗತಿಗಳ ಬಗ್ಗೆ ಗಮನ ಹರಿಸಬೇಕು. ಬಾಳಿ ಬದುಕಬೇಕಾದ ಮನೆಯಲ್ಲಿ ಎಲ್ಲವೂ ಸರಿಹೊಂದುವಂತೆ ಇದೆಯೇ ಇಲ್ಲವೇ ಎನ್ನುವುದು ಮುಖ್ಯ ಅಂಶವಾಗುತ್ತದೆ.
ದಿಕ್ಕುಗಳ ಬಗ್ಗೆ ಗಮನ ಹರಿಸಬೇಕು. ಯಾವ ಯಾವ ದಿಕ್ಕಿನಲ್ಲಿ ಯಾವುದನ್ನು ಇಡಬೇಕು ಮತ್ತು ಯಾವ ದಿಕ್ಕಿನಲ್ಲಿ ಏನೇನು ಇರಬೇಕು ಎನ್ನುವ ಬಗ್ಗೆಯೂ ಚಿಂತನೆ ಮಾಡಬೇಕು. ಗೊತ್ತಿಲ್ಲದಿದ್ದ ಪಕ್ಷದಲ್ಲಿ ತಿಳಿದವರ ಸಲಹೆ ಪಡೆದು ಮನೆ ಖರೀದಿಯಂತ ದೊಡ್ಡ ಕೆಲಸಕ್ಕೆ ಅಡಿ ಇಡಬೇಕು. ಮನೆ ಖರೀದಿಸುವವರು ಗಮನವಿಡಬೇಕಾದ ಕೆಲವು ಮಹತ್ವಪೂರ್ಣ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮಮೇಲಾಗಿದೆ ಎಂದರ್ಥ!
ಮುಖ್ಯ ದ್ವಾರ ಯಾವ ದಿಕ್ಕಲ್ಲಿರಬೇಕು?
ಮನೆಯ ಮುಖ್ಯದ್ವಾರವನ್ನು ಯಾವ ದಿಕ್ಕಲ್ಲಾದರೂ ಕಟ್ಟಿದರೆ ಆಗದು. ಅದು ಮುಖ್ಯವಾಗಿ ಪೂರ್ವ, ಉತ್ತರ ಇಲ್ಲವೇ ಈಶಾನ್ಯ ಭಾಗದಲ್ಲಿದ್ದರೆ ಮಾತ್ರ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೀಗಾಗಿ ಬಾಗಿಲು ಅಳವಡಿಸುವಾಗ ದಿಕ್ಕುಗಳನ್ನು ಸರಿಯಾಗಿ ಅರಿತಿರಬೇಕು ಎನ್ನಲಾಗುತ್ತದೆ.
ಸೂರ್ಯನ ರಶ್ಮಿಗೆ ಪ್ರವೇಶವಿರಬೇಕು
ಹೊಸ ಮನೆಯನ್ನು ಖರೀದಿಸುವಾಗ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸೂರ್ಯನ ಕಿರಣ ಮನೆಯೊಳಗೆ ಬೀಳುತ್ತಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯನ ಬೆಳಕು ಮನೆಗೆ ಬಿದ್ದರೆ ಅಂತಹ ಮನೆಯವರ ಆರೋಗ್ಯ ಚೆನ್ನಾಗಿರುತ್ತದೆ. ಯಾವ ಮನೆಗೆ ಸೂರ್ಯನ ಬೆಳಕು ಸ್ಪರ್ಶವಾಗುವುದಿಲ್ಲವೋ ಅಂಥವರ ಮನೆಯ ಸದಸ್ಯರಿಗೆ ಯಾವುದಾದರೂ ಒಂದು ಅನಾರೋಗ್ಯ ಕಾಡುತ್ತಲೇ ಇರುತ್ತದೆ.
ಗಾಳಿಯು ಚೆನ್ನಾಗಿ ಬರುವಂತಿರಬೇಕು
ಮನೆ ಎಂದ ಮೇಲೆ ಸೂರ್ಯನ ರಶ್ಮಿ ಹೇಗೆ ತಾಕುತ್ತಿರಬೇಕೋ ಹಾಗೆಯೇ ಗಾಳಿಯೂ ಸಹ ಎಲ್ಲೆಡೆ ಪಸರಿಸುತ್ತಿರಬೇಕು. ಮನೆಯ ಮೂಲೆ ಮೂಲೆಯಲ್ಲಿ ಗಾಳಿಯ ಪ್ರವೇಶ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಮನೆಯ ನಾಲ್ಕು ಕಡೆಗಳಲ್ಲಿ ಗಾಳಿಯ ಸಂಚಾರ ಸರಾಗವಾಗಿರಬೇಕು. ಸ್ವಚ್ಛವಾದ ಗಾಳಿ ಮನೆಯ ತುಂಬ ಪಸರಿಸಿದಾಗ ಮನೆಮಂದಿಯಲ್ಲಿ ಉಲ್ಲಾಸ ಮನೆಮಾಡಿರುತ್ತದೆ.
ಇದನ್ನು ಓದಿ: ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!
ಮುಖ್ಯ ದ್ವಾರದ ಬಾಗಿಲು ಕಪ್ಪಿದ್ದರೆ ಕಷ್ಟ
ಕಪ್ಪು ಯಾವಾಗಲೂ ಆಕರ್ಷಕ, ಸುಂದರ. ನಮ್ಮ ಶ್ರೀಕೃಷ್ಣನ ಬಣ್ಣವೂ ಕಪ್ಪೇ. ಹಾಗಂತ ಎಲ್ಲ ಕಡೆಯೂ ಕಪ್ಪು ಶ್ರೇಷ್ಠ ಎಂದು ಹೇಳಲಾಗದು. ಅದರಲ್ಲೂ ನಾವು ವಾಸವಾಗಿರುವ ಮನೆಯ ಮುಖ್ಯ ದ್ವಾರ ಕಪ್ಪು ಬಣ್ಣದ್ದಾಗಿರಬಾರದು ಎಂದು ಹೇಳುತ್ತದೆ ವಾಸ್ತು ಶಾಸ್ತ್ರ. ಒಂದು ವೇಳೆ ಈ ದ್ವಾರದ ಬಾಗಿಲಿನ ಬಣ್ಣ ಕಪ್ಪಿದ್ದರೆ ನೀವೇ ಸ್ವತಃ ಸಂಕಷ್ಟವನ್ನು ಮನೆಗೆ ಆಹ್ವಾನಿಸಿದಂತಾಗುತ್ತದೆ. ಕೆಟ್ಟ ಶಕ್ತಿಗಳು ಮನೆಯೊಳಗೆ ಆರಾಮವಾಗಿ ಪ್ರವೇಶ ಮಾಡುತ್ತದೆ.
ಶುದ್ಧೀಕರಣ ಮಾಡಿಯೇ ಗೃಹಪ್ರವೇಶ ಮಾಡಿ
ನೀವು ಹೊಸ ಮನೆಯನ್ನು ಖರೀದಿ ಮಾಡಿದ್ದಾಗಿದ್ದರೆ, ಅದರ ಪ್ರವೇಶಕ್ಕೆ ಮುನ್ನ ಶುದ್ಧೀಕರಣ ಮಾಡಬೇಕು. ಶುದ್ಧೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಗೃಹಪ್ರವೇಶ ಮಾಡಬೇಕು. ಹೀಗೆ ಮಾಡಿದಲ್ಲಿ ನಿಮಗೆ ಭಾಗ್ಯ ಲಭಿಸುತ್ತದೆ.
ಕಲಶ ಇಟ್ಟರೆ ತಗ್ಗಲಿದೆ ವಾಸ್ತುದೋಷ
ಖರೀದಿ ಮಾಡಿದ ಸಮಯದಲ್ಲಿ ಮನೆಯೊಳಗೆ ಕಲಶ ಇಟ್ಟು, ಅದರೊಳಗೆ ಹಾಲು, ಜೇನು ತುಪ್ಪ ಅಥವಾ ನೀರನ್ನು ತುಂಬಿಡಬೇಕು. ಇದರಿಂದ ವಾಸ್ತುದೋಷಗಳಿದ್ದರೆ ಅದರ ಪ್ರಭಾವ ತಗ್ಗಲಿದೆ.
ಇದನ್ನು ಓದಿ: ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಸತ್ಯನಾರಾಯಣ ಪೂಜೆ ಮಾಡಿಸಿ
ಗೃಹಪ್ರವೇಶದ ವೇಳೆ ಒಂದು ಸತ್ಯನಾರಾಯಣ ಕಥೆ ಇಲ್ಲವೇ ಯಾವುದಾದರೂ ಒಂದು ಪೂಜೆಯನ್ನು ಮಾಡಿಸಿಕೊಂಡರೆ ಅದು ನಿಮಗೂ ಹಾಗೂ ನಿಮ್ಮ ಅಭಿವೃದ್ಧಿಗೂ ಅನುಕೂಲವಾಗುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.