ಜೀವನದಲ್ಲಿ ಸುಖ-ಸಮೃದ್ಧಿಗಾಗಿ ದೇವರನ್ನು ಬೇಡುತ್ತೇವೆ. ಅವೆಲ್ಲವೂ ಇದ್ದರೆ ದೇವರ ಕೃಪೆ ನಮ್ಮ ಮೇಲಿದೆ ಎನ್ನುತ್ತೇವೆ. ಸದಾ ಸಂತೋಷದಿಂದ ಇರುವವರ ಮೇಲೆ ದೇವರ ಕೃಪೆ ಇದ್ದೇ ಇರುತ್ತದೆ. ಸಂಕ್ಷಿಪ್ತ ಗರುಡ ಪುರಾಣದಲ್ಲಿರುವ, ಆಚಾರ ಕಾಂಡದ ಪ್ರಕಾರ ದೇವರ ಕೃಪೆಗೆ ಪಾತ್ರರಾದರೆ ಕೆಲವೊಂದು ಸಂಕೇತಗಳು ಗೋಚರಿಸುತ್ತವೆ ಅವು ಯಾವುದೆಂದು ತಿಳಿಯೋಣ.
ಭಗವಂತನ ಕೃಪೆ ಸದಾ ಇರಲಿ ಎಂದು ಪ್ರತಿದಿನವೂ ಪೂಜೆ, ಧ್ಯಾನ ಮಾಡುತ್ತೇವೆ. ಕಷ್ಟ ಬಂದಾಗ ಪರಿಹರಿಸು ಎಂದು ಕೇಳಿಕೊಳ್ಳುತ್ತೇವೆ. ಸುಖ-ಸಂತೋಷ ದೊರೆತಾಗ ದೇವರ ದಯೆ ಎನ್ನತ್ತೇವೆ. ಹಾಗೆಯೇ ಜೀವನದ ಪ್ರತಿ ಹಂತದಲ್ಲೂ ಭಗವಂತನ ಆಶೀರ್ವಾದ ಇರಲೆಂದು ಆಶಿಸುತ್ತೇವೆ. ಎಷ್ಟೇ ಭಕ್ತಿಯಿಂದ ಪೂಜಿಸಿದರೂ ಕೆಲವೊಮ್ಮೆ ದೇವರು ದಯೆ ತೋರುತ್ತಿಲ್ಲ, ಕಷ್ಟಗಳು ಕೊನೆಯಾಗುತ್ತಿಲ್ಲ ಎಂದೆಲ್ಲಾ ಕೊರಗುತ್ತೇವೆ. ಆದರೆ ಪ್ರತಿಯೊಬ್ಬರ ಕರ್ಮಕ್ಕೆ ಅನುಸಾರವಾಗಿ ಫಲ ದೊರೆಯುತ್ತದೆ. ಕೆಲವು ಬಾರಿ ಅಂದುಕೊಳ್ಳದೇ ಇದ್ದಾಗ ಕಷ್ಟಗಳು ಕಳೆದು ಸುಖ ಬರುತ್ತದೆ. ಎಲ್ಲವೂ ಭಗವಂತನ ನಿರ್ಣಯ.
ಯಾವಾಗ, ಯಾರಿಗೆ, ಯಾವ ಸಮಯದಲ್ಲಿ ಯಾವುದು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಕಾಲ ಕೂಡಿಬರಬೇಕು ಎಂಬ ಮಾತಿನಂತೆ ಸಮಯ ಬಂದಾಗ ನೆಮ್ಮದಿ, ಸುಖ, ಸಂಪತ್ತು ಎಲ್ಲವೂ ಲಭಿಸುತ್ತದೆ. ಕೆಲವು ಬಾರಿ ದೇವರ ಕೃಪೆ ನಮ್ಮ ಮೇಲಾಗಿದೆ ಎಂದು ಕೆಲವು ಸಂಕೇತಗಳಿಂದ ತಿಳಿಯುತ್ತದೆ. ಕನಸಿನಲ್ಲಿ ವಿಶೇಷವಾದ ಕೆಲವು ವಸ್ತುಗಳು, ಘಟನೆಗಳು ಬಂದರೆ ಆಗ ದೇವರ ಕೃಪೆ ಆಗಿದೆ, ಅಂದುಕೊಂಡದ್ದು ಆಗುವ ಸಮಯ ಬಂದಿದೆ ಎಂದರ್ಥ. ಅಂತಹ ಕೆಲವು ಸಂಕೇತಗಳ ಬಗ್ಗೆ ತಿಳಿಯೋಣ.
ಬ್ರಾಹ್ಮೀ ಮುಹೂರ್ತದಲ್ಲಿ ಎಚ್ಚರಾದರೆ
ಬ್ರಾಹ್ಮೀ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಪುಣ್ಯ ಪ್ರಾಪ್ತಿ ಪ್ರಶಸ್ತ ಸಮಯವದು ಎಂದು ಶಾಸ್ತ್ರ ಉಲ್ಲೇಖಿಸುತ್ತದೆ. ಹಾಗೆಯೇ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ನಿದ್ದೆಯಿಂದ ಎಚ್ಚರಾಗುವುದು ಶುಭವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೇವಾನು ದೇವತೆಗಳು ಜಾಗೃತರಾಗಿರುತ್ತಾರೆ, ಇಂತಹ ಸಮಯದಲ್ಲಿ ನಿದ್ದೆಯಿಂದ ಎಚ್ಚರಾದರೆ ದೇವರ ಕೃಪೆಯಾಗಿದೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!
ಕನಸಿನಲ್ಲಿ ದೇವರ ದರ್ಶನವಾದರೆ...
ಕನಸಿನಲ್ಲಿ ದೇವರ ದರ್ಶನವಾದರೆ ಅದು ಶುಭ ಸಂಕೇತವೆಂದು ಸ್ವಪ್ನಶಾಸ್ತ್ರದಲ್ಲಿ ಹೇಳುತ್ತಾರೆ. ದೇವರ ಕೃಪೆಯಾದವರಿಗೆ ಕನಸಿನಲ್ಲಿ ದರ್ಶನ ಸಿಗುತ್ತದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಒಳಿತಾಗುವ ಸಂಕೇತ ಇದಾಗಿದೆ.
ಆಕಾಶದಲ್ಲಿ ಹಾರುತ್ತಿರುವಂತೆ ಸ್ವಪ್ನ ಬಿದ್ದರೆ
ಆಕಾಶದಲ್ಲಿ ತೇಲಾಡುತ್ತಿರುವಂತೆ ಅಥವಾ ಹಾರುತ್ತಿವಂತೆ ಕನಸು ಬಿದ್ದರೆ ಶುಭ. ದೇವರ ಒಲವು ನಿಮ್ಮ ಮೇಲಾದರೆ ಈ ರೀತಿಯ ಕನಸು ಬೀಳುವುದಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ.
ಮನಸ್ಸು ಉಲ್ಲಸಿತವಾದರೆ
ಕೆಲವು ಬಾರಿ ಕಾರಣವಿಲ್ಲದೆ ಬೇಸರವಾಗುತ್ತದೆ, ಹಾಗೇ ಕಾರಣವಿಲ್ಲದೆಯೇ ಖುಷಿಯೂ ಆಗುತ್ತದೆ. ಯಾವುದೇ ಕಾರಣವಿಲ್ಲದೆ ಖುಷಿಯಾಗುತ್ತಿದ್ದರೆ, ನಿಮ್ಮ ಮೇಲೆ ದೇವರ ದಯೆಯಿದೆ ಮತ್ತು ಸದ್ಯದಲ್ಲಿಯೇ ಏನೋ ಒಳ್ಳೆಯದಾಗುತ್ತದೆ ಎಂಬುದರ ಸೂಚನೆಯಾಗಿರುತ್ತದೆ.
ಇದನ್ನು ಓದಿ: ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಸಂಪತ್ತು ಲಭಿಸಿದರೆ
ನಿಮಗೆ ಅರಿವಿಲ್ಲದೆಯೇ ಸಂಪತ್ತು ಲಭಿಸಿದರೆ, ಅದರ ಬಗ್ಗೆ ಯೋಚಿಸಿಯೇ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಧನಕನಕಗಳು ಸಿಕ್ಕು ಒಳ್ಳೆಯದಾದರೆ ದೇವರ ಒಲವು ನಿಮ್ಮ ಮೇಲಾಗಿದೆ ಎಂದರ್ಥ. ಕಷ್ಟಗಳೆಲ್ಲ ಕರಗಿ ಸುಖ-ಸಂತೋಷ ಮತ್ತು ನೆಮ್ಮದಿ ನಿಮ್ಮದಾಗಿರುತ್ತದೆ.
ಮನಸ್ಸಿನಲ್ಲಿ ಅಂದುಕೊಂಡ ಕೆಲಸ ತಕ್ಷಣದಲ್ಲಿ ನೇರವೇರಿದರೆ
ದೇವರ ಬಳಿ ಮನಸ್ಸಿನಲ್ಲಿ ನಮ್ಮ ಇಚ್ಛೆಯನ್ನು ಹೇಳಿಕೊಳ್ಳತ್ತೇವೆ, ನಡೆಸಿಕೊಡೆಂದು ಬೇಡುತ್ತೇವೆ. ಹಾಗೆಯೇ ಯಾವುದೋ ಕೆಲಸ ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮನದಲ್ಲಿ ಅಂದುಕೊಳ್ಳುತ್ತೇವೆ. ಆ ಕೆಲಸ ತಕ್ಷಣದಲ್ಲಿಯೇ ಆಗಿರುತ್ತದೆ, ಹೇಗೆಂದು ಊಹಿಸಿಕೊಳ್ಳುವುದೂ ಆಗುವುದಿಲ್ಲ. ಅದರ ಅರ್ಥ ದೇವರು ಕೇಳಿಕೊಂಡಿದ್ದನ್ನು ಈಡೇರಿಸಿದ್ದಾನೆ, ನಮ್ಮ ಮೇಲೆ ಕೃಪೆ ತೋರಿದಾಗ ಇಂತಹ ಘಟನೆಗಳು ಜರುಗುತ್ತವೆ ಎಂದರ್ಥ.
ಸದಾ ಸ್ವಾಸ್ಥ್ಯ ಚೆನ್ನಾಗಿದ್ದರೆ
ಆರೋಗ್ಯವೇ ಭಾಗ್ಯ ಎನ್ನುತ್ತೇವೆ. ಆರೋಗ್ಯ ಯಾವಾಗಲೂ ಚೆನ್ನಾಗಿದ್ದರೆ ಅಂಥವರು ಭಾಗ್ಯಶಾಲಿಗಳಾಗಿರುತ್ತಾರೆ. ಅವರ ಮೇಲೆ ದೇವರ ಕೃಪೆಯಾಗಿರುತ್ತದೆ. ಇದು ದೇವರು ಪ್ರಸನ್ನನಾಗಿದ್ದಾನೆ ಎಂಬುದರ ಸಂಕೇತವನ್ನು ಸೂಚಿಸುತ್ತದೆ.
ಇದನ್ನು ಓದಿ: ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!
ಬಯಸಿದ ಸಂತಾನ ಹೊಂದಿದ್ದರೆ
ಕಲಿಯುಗದಲ್ಲಿ ಹಲವು ಜನರು ಸಂತಾನಕ್ಕಾಗಿ ಹಾತೊರೆಯುತ್ತಾರೆ, ಸಮಸ್ಯೆಗಳನ್ನು ಎದುರಿಸುತ್ತಾರೆ, ಪೂಜೆ, ಅನುಷ್ಠಾನಗಳನ್ನು ಮಾಡಿ ಹರಕೆ ಹೊತ್ತುಕೊಳ್ಳುತ್ತಾರೆ. ಆದರೆ ಕೆಲವರಿಗೆ ಬಯಸಿದ ಸಂತಾನ ಯಾವುದೇ ಅಡ್ಡಿ-ಆತಂಕಗಳಿಲ್ಲದೇ ಸುಸೂತ್ರವಾಗಿ ಲಭಿಸುತ್ತದೆ. ಅದು ದೇವರ ಕೃಪೆ ಇದ್ದರೆ ಮಾತ್ರ ಸಾಧ್ಯ. ಅಂಥವರು ದೇವರ ಕೃಪೆಗೆ ಪಾತ್ರರಾಗಿರುತ್ತಾರೆ.