ಹನುಮ ಜಯಂತಿ 2022: ಇಂದು ಹನುಮನ ಇಡೀ ವಿಗ್ರಹಕ್ಕೆ ಸಿಂಧೂರ ಲೇಪಿಸುವುದೇಕೆ?

Published : Apr 16, 2022, 09:43 AM IST
ಹನುಮ ಜಯಂತಿ 2022: ಇಂದು ಹನುಮನ ಇಡೀ ವಿಗ್ರಹಕ್ಕೆ ಸಿಂಧೂರ ಲೇಪಿಸುವುದೇಕೆ?

ಸಾರಾಂಶ

ರಾಮ ಭಕ್ತ ಹನುಮಂತನಲ್ಲಿ ಅಹಂಕಾರವಿಲ್ಲ, ಕೋಪವಿಲ್ಲ. ಬದಲಿಗೆ ಚಾರಿತ್ರ್ಯ, ಸಮರ್ಪಣಾ ಭಾವ ಮತ್ತು ಸಂಯಮವನ್ನು ಹೇರಳವಾಗಿ ಕಾಣಬಹುದು. ಹನುಮಂತ ಧೈರ್ಯ, ಶೌರ್ಯ, ಭಕ್ತಿ, ಬುದ್ಧಿವಂತಿಕೆ ಮತ್ತು ನಾಯಕತ್ವದ ಸಂಕೇತ ಕೂಡ. ಭಕ್ತಿ ಮತ್ತು ಉನ್ನತ ಆದರ್ಶಗಳಿಂದಾಗಿ ಮಾನವರೂ ದೈವತ್ವ ಪಡೆಯಬಹುದೆಂದು ತೋರಿಸಿದಾತ ಹನುಮಂತ.

ನಾಗೇಶ ಜಿ. ವೈದ್ಯ

ರಾಮಾಯಣ(Ramayan)ದಲ್ಲಿ ಪ್ರತಿಯೊಂದು ಪಾತ್ರವೂ ತನ್ನದೇ ಆದ ಗುಣಗಳಿಂದ ಗುರುತಿಸಲ್ಪಡುತ್ತದೆ. ಮಹಾನ್‌ ಯೋಗಿ, ತಪಸ್ವಿ, ರಾಮ ಭಕ್ತ ಹನುಮಂತ(Hanuman) ಸಾಟಿಯಿಲ್ಲದ ನಿಷ್ಠೆ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತಾನೆ. ಸಾಕ್ಷಾತ್‌ ವಿಷ್ಣು(Lord Vishnu)ವೇ ಶ್ರೀರಾಮನಾಗಿ ಧರೆಗಿಳಿದಾಗ ಸದಾ ಅವನೊಡನಿದ್ದು, ಸೇವೆ ಸಲ್ಲಿಸಲು ಶಿವನೇ ಹನುಮಂತನ ರೂಪದಲ್ಲಿ ಜನಿಸಿದನೆಂದು ಹೇಳಲಾಗುತ್ತದೆ. ಪುರಾಣಗಳು ಉಲ್ಲೇಖಿಸುವ ಏಳು ಚಿರಂಜೀವಿಗಳಲ್ಲಿ ಹನುಮಂತನೂ ಒಬ್ಬ.

ಶಾಪಗ್ರಸ್ತ ತಾಯಿಯ ಪುತ್ರ
ಒಮ್ಮೆ ಮಹಾನ್‌ ಋಷಿ ಅಂಗೀರನು ಇಂದ್ರನನ್ನು ಭೇಟಿಯಾಗಲು ಹೋದಾಗ, ಅಲ್ಲಿ ಅಪ್ಸರೆಯ ನೃತ್ಯ ನಡೆಯುತ್ತಿತ್ತು. ಅದರಲ್ಲಿ ಆಸಕ್ತಿ ಇಲ್ಲದ ಋಷಿ, ಧ್ಯಾನದಲ್ಲಿ ಮುಳುಗಿದರು. ತನ್ನನ್ನು ಕಡೆಗಣಿಸಿದ್ದಕ್ಕೆ ಅಪ್ಸರೆಯು ಋಷಿಯನ್ನು ನಿಂದಿಸಿದಳು. ಕೋಪೋದ್ರಿಕ್ತನಾದ ಋಷಿ, ಆಕೆ ಭೂಮಿಯಲ್ಲಿ ವಾನರಳಾಗಿ ಜನಿಸಲು ಶಾಪ ನೀಡಿದ. ಆಕೆ ಕ್ಷಮೆ ಯಾಚಿಸಿದಾಗ, ಕರುಣೆ ತೋರಿದ ಅಂಗೀರ ಋಷಿ, ಭಗವಂತನೇ ಆಕೆಯ ಮಗನಾಗಿ ಹುಟ್ಟುತ್ತಾನೆ. ಅವಳನ್ನು ಅಜರಾಮರಳಾಗಿಸುತ್ತಾನೆ ಎಂದು ಆಶೀರ್ವದಿಸುತ್ತಾನೆ. ಶಾಪಗ್ರಸ್ತ ಅಪ್ಸರೆಯು ಕೋತಿಗಳ ರಾಜ ಕುಂಜರನ ಮಗಳು ಅಂಜನಿಯಾಗಿ ಹುಟ್ಟುತ್ತಾಳೆ. ಸುಮೇರು ಪರ್ವತದ ರಾಜನಾಗಿದ್ದ ಕೇಸರಿಯನ್ನು ಮದುವೆಯಾಗುತ್ತಾಳೆ. ಅವರಿಗೆ ಮಗನಾಗಿ, ಶಿವನ ಹನ್ನೊಂದನೇ ಅವತಾರವಾಗಿ ಚೈತ್ರ ಪೂರ್ಣಿಮೆಯಂದು ಜನಿಸಿದವನೇ ಹನುಮಂತ. ದಶರಥನ ಪುತ್ರಕಾಮೇಷ್ಠಿ ಯಜ್ಞದ ಫಲವಾಗಿ ದೊರೆತ ಪಾಯಸದ ಹನಿಯೊಂದನ್ನು ವಾಯುದೇವ ಗಾಳಿಯಲ್ಲಿ ತೂರಿಸಿ ತಂದು ಅಂಜನಾಗೆ ಕೊಟ್ಟಿದ್ದರಿಂದ ಆತ ವಾಯುಪುತ್ರನೆಂದೂ ಕರೆಯಲ್ಪಟ್ಟವ. ಹನುಮಂತನಲ್ಲಿ ಅಹಂಕಾರವಿಲ್ಲ, ಕೋಪವಿಲ್ಲ. ಬದಲಿಗೆ ಚಾರಿತ್ರ್ಯ, ಸಮರ್ಪಣಾ ಭಾವ ಮತ್ತು ಸಂಯಮವನ್ನು ಹೇರಳವಾಗಿ ಕಾಣಬಹುದು. ಹನುಮಂತ ಧೈರ್ಯ, ಶೌರ್ಯ, ಭಕ್ತಿ, ಬುದ್ಧಿವಂತಿಕೆ ಮತ್ತು ನಾಯಕತ್ವದ ಸಂಕೇತ ಕೂಡ. ಭಕ್ತಿ ಮತ್ತು ಉನ್ನತ ಆದರ್ಶಗಳಿಂದಾಗಿ ಮಾನವರೂ ದೈವತ್ವ ಪಡೆಯಬಹುದೆಂದು ತೋರಿಸಿದಾತ ಹನುಮಂತ.

Hanuman Jayanti: ಇಂದು ಅಂಜನಾದ್ರಿ ಬೆಟ್ಟದಲ್ಲಿ ಬೈಭವದ ಹನುಮ ಜಯಂತಿ

ಹನುಮನ ಕುರಿತ ಕತೆಗಳು
ಹನುಮಂತನ ಭಕ್ತಿ, ಶಕ್ತಿ, ಜಾಣತನ, ಸಮರ್ಪಣೆಯನ್ನು ಸಾರುವ ಹಲವಾರು ಕತೆಗಳಿವೆ. ತನ್ನ ರಾಮನೇ ಕೃಷ್ಣನೆಂದು ಹನುಮಂತನಿಗೆ ಗೊತ್ತು. ತನ್ನ ಪ್ರಭು ಅರ್ಜುನನ ರಥದ ಸಾರಥಿಯಾಗಿ ಅವನನ್ನು ರಕ್ಷಿಸುವ ಹೊಣೆ ಹೊತ್ತರೆ ತಾನು ಸುಮ್ಮನಿರಲಾದೀತೇ? ಹನುಮಂತ ರಥದ ಧ್ವಜವನ್ನು ಹಿಡಿದು ಕುಳಿತ. ಅರ್ಜುನನತ್ತ ಬಾಣಗಳು ಬರುತ್ತಿದ್ದರೆ, ರಥವನ್ನು ಕೆಳಗೆ ಒತ್ತಿ ಬಿಡುತ್ತಿದ್ದ. ಇದರಿಂದ ವೈರಿಗಳ ಯಾವುದೇ ಬಾಣವೂ ಅರ್ಜುನನಿಗೆ ತಗುಲದಂತೆ ನೋಡಿಕೊಂಡ. ಯುದ್ಧ ಮುಗಿದು ಇಬ್ಬರೂ ಕೆಳಗಿಳಿಯುತ್ತಿದ್ದಂತೆ, ರಥಕ್ಕೆ ಬೆಂಕಿ ಹತ್ತಿಕೊಂಡು ಉರಿದುಹೋಯಿತು. ಅರ್ಜುನನು ಅಚ್ಚರಿಯಿಂದ ನೋಡುತ್ತಿರುವಾಗ, ರಥಕ್ಕೆ ತಗುಲಿದ್ದ ಶಸ್ತ್ರಾಸ್ತ್ರಗಳ ಪ್ರಭಾವವನ್ನು ಹನುಮಂತನು ಈವರೆಗೆ ತಡೆಹಿಡಿದು ರಥವನ್ನು ರಕ್ಷಿಸಿದ್ದ ಎಂದು ತಿಳಿಸಿದ ಕೃಷ್ಣ. ತನ್ನ ಪ್ರಭುವನ್ನು, ನಂಬಿದವರನ್ನು ಕಾಪಾಡುವುದು ತನ್ನ ಧರ್ಮವೆಂದು ಅರಿತಿದ್ದ ಹನುಮಂತ.

ಹನುಮನ ಸ್ಥಿತಪ್ರಜ್ಞೆ
ಮೇಘನಾದನ ಬಾಣದ ಏಟಿಗೆ ಪ್ರಜ್ಞಾಹೀನನಾದ ಲಕ್ಷ್ಮಣನ ಪ್ರಾಣ ರಕ್ಷಣೆಯ ಹೊಣೆ ಹನುಮಂತನ ಪಾಲಿಗೇ ಬರುತ್ತದೆ. ಸಂಜೀವಿನಿ ಮೂಲಿಕೆ ತರಲು ಹಿಮಾಲಯಕ್ಕೆ ಹಾರುತ್ತಾನೆ. ಅದನ್ನು ಸೂರ್ಯೋದಯಕ್ಕೆ ಮೊದಲೇ ತರಬೇಕಾದ ಹೊಣೆಗಾರಿಕೆಯಿದೆ. ಅಷ್ಟುಸಮಯವಿಲ್ಲವೆಂದು ಅರಿತ ಹನುಮಂತ, ತನ್ನ ದೇಹದ ಗಾತ್ರವನ್ನು ಸಾವಿರ ಪಟ್ಟು ವಿಸ್ತರಿಸಿಕೊಂಡು ಸೂರ್ಯನೇ ಕಾಣದಂತೆ ಮರೆಮಾಡುತ್ತಾನೆ. ಸೂರ್ಯ ತನ್ನ ಗುರುವೇ ಆದುದರಿಂದ ಅವನಲ್ಲಿ ಕ್ಷಮೆ ಯಾಚಿಸುತ್ತಾನೆ. ಅಷ್ಟಾದರೂ ಮೂಲಿಕೆ ಸಿಗದಿದ್ದಾಗ ವಿಚಲಿತನಾಗದೆ ಇಡೀ ಪರ್ವತವನ್ನೇ ಹೊತ್ತು ತರುತ್ತಾನೆ. ಇದು ಅವನ ಸ್ಥಿತಪ್ರಜ್ಞತೆಗೆ ಸಾಕ್ಷಿ.

Hanuman Jayanti 2022: ಪಂಚಮುಖಿ ಆಂಜನೇಯನನ್ನು ಹೀಗೆ ಪೂಜಿಸಿ, 5 ಇಷ್ಟಾರ್ಥ ಈಡೇರಿಸಿಕೊಳ್ಳಿ

ಹನುಮಂತ ಜ್ಞಾನದಾಹಿ. ವೇದಗಳನ್ನು ಕಲಿಯುವ ಹಂಬಲ. ತನ್ನ ಗುರು ಸೂರ್ಯನಲ್ಲಿ ಇದನ್ನು ಹೇಳಿಕೊಳ್ಳುತ್ತಾನೆ. ತಾನು ದಿನವಿಡೀ ಚಲಿಸುತ್ತಿರುವುದರಿಂದ ಇದು ಅಸಂಭವ ಎನ್ನುತ್ತಾನೆ ಸೂರ್ಯ. ಜಿದ್ದು ಬಿಡದ ಹನುಮಂತ ತಾನೂ ಅವನೊಂದಿಗೆ ತಿರುಗುವುದಾಗಿ ಹೇಳಿ ಒಪ್ಪಿಸುತ್ತಾನೆ. ದಿನವೂ ಸೂರ್ಯನೊಂದಿಗೆ ಸುತ್ತುತ್ತ, ನಾಲ್ಕೂ ವೇದಗಳನ್ನು ಕಲಿಯುತ್ತಾನೆ. ವಿದ್ಯಾಭ್ಯಾಸ ಮುಗಿದು ಗುರುದಕ್ಷಿಣೆ ಅರ್ಪಿಸುವ ಹೊತ್ತಿನಲ್ಲಿ ಸೂರ್ಯ ತನ್ನ ಮಗ ಸುಗ್ರೀವನ ಬಗ್ಗೆ ತಿಳಿಸಿ, ಹನುಮಂತನು ಕಿಷ್ಕಿಂದೆಗೆ ಹೋಗಿ ಅವನಿಗೆ ಸಹಾಯ ಮಾಡಲು ಹೇಳುತ್ತಾನೆ. ಒಪ್ಪಿದ ಹನುಮಂತ ಗುರುವಿನ ಅಣತಿಯಂತೆ ಸುಗ್ರೀವನೊಡನೆ ಸ್ನೇಹ ಬೆಳೆಸಿ, ಅವನನ್ನು ರಾಮನ ಸಹಾಯದಿಂದ ರಕ್ಷಿಸುತ್ತಾನೆ.

ಶ್ರೀರಾಮನ ಆರಾಧಕ
ರಾಮನು ಭೂಲೋಕ ತ್ಯಜಿಸುವ ಹೊತ್ತು. ಅಯೋಧ್ಯೆಯನ್ನು ಪ್ರವೇಶಿಸದಂತೆ ಯಮನನ್ನು ತಡೆಯುತ್ತಾನೆ ಹನುಮಂತ. ತನ್ನ ಮೇಲಿನ ಪ್ರೀತಿಯಿಂದ ಹನುಮಂತ ಎಂದಿಗೂ ಯಮನಿಗೆ ಪ್ರವೇಶ ನೀಡುವುದಿಲ್ಲವೆಂದು ರಾಮನಿಗೂ ಗೊತ್ತು. ಹಾಗೆಂದೇ ಆತ ತನ್ನ ಉಂಗುರವನ್ನು ನೆಲದ ಬಿರುಕಿನಲ್ಲಿ ಬೀಳಿಸುತ್ತಾನೆ. ತಕ್ಷಣ ಅದನ್ನು ಹುಡುಕುವುದರಲ್ಲಿ ಮಗ್ನನಾಗುತ್ತಾನೆ ಹನುಮಂತ. ಆತ ಅದನ್ನು ಹುಡುಕುತ್ತ ಪಾತಾಳವನ್ನು ತಲುಪುತ್ತಾನೆ. ಅಲ್ಲಿದ್ದ ಉಂಗುರಗಳ ರಾಶಿಯ ಹುಡುಕಾಟದಲ್ಲಿ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ರಾಮನ ಲೀಲೆ ಅರಿಯದ ಆತ ತನ್ನ ಸ್ವಾಮಿಯನ್ನು ಒಬ್ಬಂಟಿಯಾಗಿ ಇಷ್ಟುದೀರ್ಘ ಕಾಲ ಬಿಟ್ಟುಬಂದ ಬಗ್ಗೆ ಚಿಂತಿಸುತ್ತಾನೆ. ಇದು ಹನುಮ, ಶ್ರೀರಾಮನಲ್ಲಿ ಇಟ್ಟಿದ್ದ ಭಕ್ತಿ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ.

Hanuman Jayanti 2022: ನಿಮ್ಮ ನೆಂಟರಿಷ್ಟರಿಗೆ ಹೀಗೆ ಶುಭಾಶಯ ಹೇಳಿ..

ಮಹಾನ್‌ ವಿದ್ವಾಂಸ
ಶ್ರೀರಾಮನ ಮೊದಲ ಭೇಟಿಯಲ್ಲೇ ಹನುಮಂತ, ಅವನ ಮಾತು ಮತ್ತು ನಡವಳಿಕೆಯಿಂದ ಆಕರ್ಷಿತನಾದ. ಅಂದೇ ತನ್ನ ಪ್ರಭುವಾಗಿ ಸ್ವೀಕರಿಸಿಬಿಟ್ಟ. ರಾಮನ ಸೇವೆಗೆ ತನ್ನ ಜೀವವನ್ನು ಮುಡಿಪಾಗಿಟ್ಟ. ಹನುಮಂತ ಮಹಾನ್‌ ವಿದ್ವಾಂಸರಲ್ಲಿ ಒಬ್ಬ. ರಾಮಚರಿತ ಮಾನಸದಲ್ಲಿ ಆತನನ್ನು ‘ಅತುಲಿತ ಬಲಧಾಮ’ ಮತ್ತು ‘ಜ್ಞಾನಿನಾಮಗ್ರಗಣ್ಯಂ’ ಎಂದು ಬಣ್ಣಿಸಲಾಗಿದೆ. ಹನುಮಂತನಿಗೆ ಭಯವೆಂಬುದೇ ಇರಲಿಲ್ಲ. ನಕಾರಾತ್ಮಕ ಭಾವನೆಗಳೂ ಇರಲಿಲ್ಲ. ಒಬ್ಬಂಟಿಯಾಗಿ ಲಂಕೆಗೆ ಹಾರುವುದಿರಲಿ, ಅಲ್ಲಿ ಅವರಿಂದ ಬಂಧಿಸಲ್ಪಡುವುದಿರಲಿ, ರಾಕ್ಷಸರ ನಡುವೆ ಸೀತೆಯನ್ನು ಭೇಟಿ ಮಾಡುವುದಿರಲಿ, ಇಡೀ ನಗರವನ್ನು ಸುಡುವುದಿರಲಿ, ಧೈರ್ಯದಿಂದ, ಸಂಯಮದಿಂದ ನಿಭಾಯಿಸಿದ. ಬುದ್ಧಿವಂತಿಕೆಯನ್ನು ಮೆರೆದ.

ಭಕ್ತಿಯಲ್ಲಂತೂ ಹನುಮಂತನನ್ನು ಮೀರಿಸುವವರಿಲ್ಲ. ಒಮ್ಮೆ ಸೀತೆ ಕೊಟ್ಟಹಾರದಲ್ಲಿನ ಒಂದೊಂದು ಮಣಿಯನ್ನೂ ತುಂಡು ಮಾಡಿ ಎಸೆದ. ಅವನ ಸಹಚರರು ಬೆರಗಾಗಿ ಕಾರಣ ಕೇಳಿದಾಗ, ‘ಈ ಮಣಿಗಳಲ್ಲಿ ನನ್ನ ರಾಮನೂ ಇಲ್ಲ, ಮಾತೆ ಸೀತೆಯೂ ಇಲ್ಲ’ ಎಂದ. ಅದಕ್ಕೆ ಅವರೆಲ್ಲ ರಾಮ ನಿನ್ನೊಳಗಿದ್ದಾನೆಯೇ ಎಂದು ಅಪಹಾಸ್ಯ ಮಾಡಿದರು. ಕ್ಷಣದಲ್ಲೇ ತನ್ನ ಎದೆಯನ್ನೇ ಬಗೆದು, ಅದರಲ್ಲಿ ರಾಮ, ಸೀತೆಯ ದರ್ಶನ ಮಾಡಿಸಿದ. ತನ್ನ ಉಸಿರಲ್ಲೂ ರಾಮನನ್ನೇ ಭಜಿಸುತ್ತಿದ್ದ ಮಹಾ ಭಕ್ತ ಹನುಮಂತ.

ಚಿರಂಜೀವಿ ಜಯಂತಿ
ಹನುಮಂತ ಚಿರಂಜೀವಿ. ದ್ವಾಪರ ಯುಗದಲ್ಲಿ ಮಹಾಭಾರತದ ಯುದ್ಧದುದ್ದಕ್ಕೂ ಅವನು ಅರ್ಜುನನ ರಥದ ಮೇಲೆ ಧ್ವಜದ ಹಿಡಿದು ಕುಳಿತಿದ್ದ. ಕಲಿಯುಗದಲ್ಲಿ ರಾಮಚರಿತ ಮಾನಸ ರಚಿಸಿದ ತುಳಸಿದಾಸರು ಹನುಮಂತನನ್ನು ಕಂಡಿದ್ದನ್ನು ಉಲ್ಲೇಖಿಸಿದ್ದಾರೆ. ಮಾತ್ರವಲ್ಲ, ಅವನ ಮೂಲಕ ತಾನು ಶ್ರೀರಾಮನನ್ನು ಕಂಡಿದ್ದಾಗಿ ಹೇಳಿಕೊಂಡಿದ್ದಾರೆ. ಶಕ್ತಿವಂತ ಹನುಮಂತನಿಗೂ ರಾಮನ ಹಾಗೆ ತನ್ನ ಭಕ್ತರ ಮೇಲೆ ಅಪಾರ ಕರುಣೆ. ಹನುಮಂತನನ್ನು ಭಜಿಸುವುದರಿಂದ ಎಲ್ಲ ಸಂಕಟಗಳಿಂದ ಮುಕ್ತಿ ದೊರಕುತ್ತದೆ ಎಂಬ ಪ್ರತೀತಿ ಇದೆ.

Hanuman Jayanti 2022: ರಾಶಿಯನುಸಾರ ಹನುಮಗೆ ನೀವು ಈ ನೈವೇದ್ಯ ನೀಡಿದರೆ ಉತ್ತಮ

ಸೀತೆ ತನ್ನ ಹಣೆಗೆ ಸಿಂಧೂರ ಹಚ್ಚುವುದು ಪತಿ ಶ್ರೀರಾಮನ ದೀರ್ಘಾಯುಷ್ಯಕ್ಕಾಗಿ ಎಂದು ಅವಳಿಂದಲೇ ತಿಳಿದಮೇಲೆ, ತನ್ನ ಪ್ರಭುವಿಗಾಗಿ ಇಡೀ ಮೈಯನ್ನು ಸಿಂಧೂರದಿಂದ ಬಳಿದುಕೊಂಡಿದ್ದ ಹನುಮಂತ! ಹಾಗಾಗಿ, ಸಿಂಧೂರವೆಂದರೆ ಹನುಮಂತನಿಗೆ ತುಂಬ ಪ್ರೀತಿ. ಹನುಮ ಜಯಂತಿಯಂದು ಹನುಮನ ಇಡೀ ವಿಗ್ರಹಕ್ಕೆ ಸಿಂಧೂರ ಲೇಪಿಸಿ ಪೂಜಿಸಲಾಗುತ್ತದೆ. ತುಳಸೀದಾಸರು ರಚಿಸಿದ ಹನುಮಂತನ ಲೀಲೆಯನ್ನು ಸಾರುವ ಹನುಮಾನ್‌ ಚಾಲೀಸ್‌ ಅನ್ನು ದಿನವಿಡೀ ಪಠಿಸಲಾಗುತ್ತದೆ. ನಿಸ್ವಾರ್ಥ ಸೇವೆಯಿಂದ ಭಕ್ತನೂ ಆಗಬಹುದು, ದೇವರೂ ಆಗಬಹುದು ಎಂದು ತೋರಿರುವ ಹನುಮನ ಜಯಂತಿಯಂದು, ಪೂಜೆಯ ಜೊತೆಗೆ ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಈ ಆಚರಣೆಗೆ ವಿಶೇಷ ಅರ್ಥ ನೀಡಬಹುದು.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ