ಶಾಸ್ತ್ರ ಉಲ್ಲೇಖಿಸಿದ ಸ್ನಾನದ ವಿಧಗಳು ಮತ್ತು ವಿಧಾನ !

By Suvarna News  |  First Published Jul 22, 2020, 6:00 PM IST

ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಪ್ರತಿ ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಪ್ರಾತಃಕಾಲದಲ್ಲಿ ಎದ್ದು ಹಸ್ತವನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಪಠಿಸುವುದರಿಂದ ಆರಂಭಿಸಿ ರಾತ್ರಿ ಮಲಗುವ ಸಮಯದಲ್ಲಿ ರಾಮಸ್ಕಂದಮ್ ಹನುಮಂತಮ್ ಸ್ತೋತ್ರವನ್ನು ಹೇಳುವವರೆಗಿನ ಸರ್ವಕಾರ್ಯಗಳಿಗಿರುವ ವಿಶೇಷತೆ ಮತ್ತು ಲಾಭವನ್ನು ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ನಿತ್ಯಕಾರ್ಯವಾದ ಸ್ನಾನದ ಬಗ್ಗೆಯೂ ಹಲವಾರು ಮಹತ್ವದ ವಿಷಯಗಳಿವೆ. ಸ್ನಾನದ ಪ್ರಕಾರಗಳನ್ನು,ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.


ಸ್ನಾನದಿಂದ ಹಲವು ರೀತಿಯ ಲಾಭಗಳುಂಟು. ಸ್ವಾಸ್ಥ್ಯ ಸಂರಕ್ಷಣೆಗೆ, ಶರೀರ ಮತ್ತು ಶಾರೀರದ ನೆಮ್ಮದಿಗೆ, ಶುಚಿಯಾಗಿರಲು ಪ್ರತಿನಿತ್ಯ ಸ್ನಾನ ಮಾಡುತ್ತೇವೆ. ಧಾರ್ಮಿಕ ದೃಷ್ಟಿಯಿಂದ ಸಹ ಪ್ರತಿನಿತ್ಯ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಶುಭವೆಂದು ಹೇಳಲಾಗುತ್ತದೆ. ಹಾಗಾಗಿಯೇ ನಮ್ಮ ಹಿರಿಯರು, ಪುರಾಣದ ಕಾಲದಲ್ಲಿ ಋಷಿ ಮುನಿಗಳು, ವಿದ್ವಾಂಸರು ಪ್ರಾತಃಕಾಲದಲ್ಲಿ ಅಂದರೆ ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯೋದಯದ ಸಮಯಕ್ಕೆ ಸ್ನಾನ ಮಾಡುತ್ತಿದ್ದರೆಂಬುದನ್ನು ಕೇಳಿರುತ್ತೇವೆ.

ಶಾಸ್ತ್ರಗಳ ಅನುಸಾರ ಸೂರ್ಯೋದಯದ ಸಮಯದಲ್ಲಿ ಸ್ನಾನಮಾಡಿ ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಅನೇಕ ರೀತಿಯ ಲಾಭಗಳುಂಟಾಗುತ್ತದೆ. ಸಮಾಜದಲ್ಲಿ ಸ್ಥಾನ-ಮಾನ ವೃದ್ಧಿಸುವುದಲ್ಲದೇ, ತ್ವಚೆಯ ಕಾಂತಿಯನ್ನು ಸಹ ಹೆಚ್ಚಿಸುತ್ತದೆ. ಆ ಸಮಯದಲ್ಲಿ ಶುರುವಾದ ನಿತ್ಯದ ಕಾರ್ಯಗಳೆಲ್ಲಾ ಸುಗಮವಾಗಿ ಸಾಗುವುದಲ್ಲದೇ, ಮಾನಸಿಕ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯಕೊಡತಕ್ಕದ್ದಾಗಿ ಶಾಸ್ತ್ರ ಹೇಳುತ್ತದೆ.

ಇದನ್ನು ಓದಿ: ಪತಿಯ ಶ್ರೇಯೋಭಿವೃದ್ಧಿಗೆ ಮಾಡುವ ಭೀಮನ ಅಮವಾಸ್ಯೆ ಪೂಜೆ! 
  
ಧರ್ಮ ಶಾಸ್ತ್ರಗಳಲ್ಲಿ ಸಮಯಕ್ಕನುಸಾರವಾಗಿ ಸ್ನಾನದ ಹಲವು ಪ್ರಕಾರಗಳನ್ನು ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಸ್ನಾನ ಮಾಡುವ ವಿಧಾನದ ಬಗ್ಗೆ ಹೇಳಲಾಗಿದೆ. ಶಾಸ್ತ್ರದ ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದಲ್ಲಿ ಶುಭಫಲಗಳು ಪ್ರಾಪ್ತವಾಗುತ್ತವೆ.

ಶಾಸ್ತ್ರ ಹೇಳುವ ಸ್ನಾನದ ವಿಧಾನ
ಪುರಾಣಗಳಲ್ಲಿ ಹೇಳಿರುವಂತೆ ನಿತ್ಯದ ಕಾರ್ಯಗಳಲ್ಲಿ ಪ್ರತಿಯೊಂದಕ್ಕೂ ಮಂತ್ರವಿದೆ. ಆ ಮಂತ್ರಗಳನ್ನು ಹೇಳಿಕೊಂಡು ಕೆಲಸವನ್ನು ಮಾಡಬೇಕೆನ್ನುತ್ತದೆ ಶಾಸ್ತ್ರ. ಹಾಗಾಗಿ ಸ್ನಾನ ಮಾಡುವ ಸಮಯದಲ್ಲೂ ಮಂತ್ರಗಳನ್ನು ಪಠಿಸುವುದು ಶುಭದಾಯಕವಾಗಿದೆ.

ಸ್ನಾನದ ಸಮಯದಲ್ಲಿ ಹೇಳಬೇಕಾದ ಮಂತ್ರ ಮತ್ತು ಮಹತ್ವ

ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ/ ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು//
ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಮತ್ತು ಕಾವೇರಿ ಇವು ಪವಿತ್ರವಾದ ನದಿಗಳು. ಈ ನದಿಗಳನ್ನು ಸ್ನಾನದ ನೀರಿಗೆ ಆಹ್ವಾನಿಸುವುದು. ಈ ನೀರನ್ನು ಪವಿತ್ರಗೊಳಿಸೆಂದು ಕೇಳಿಕೊಳ್ಳುವುದು ಇದರ ಅರ್ಥ. ನಾರದ ಪುರಾಣದಲ್ಲಿ ಇದರ ಉಲ್ಲೇಖವಿದೆ.

ಸ್ನಾನ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ ಮೊದಲು ಗಮನದಲ್ಲಿಡಬೇಕಾದ ಅಂಶವೆಂದರೆ, ನೀರು ಹಾಕಿಕೊಳ್ಳುವಾಗ ತಲೆಗೆ ಮೊದಲು ನೀರು ಹಾಕಿಕೊಳ್ಳಬೇಕು ಆನಂತರ ಪೂರ್ತಿ ಶರೀರವನ್ನು ಒದ್ದೆ ಮಾಡಿಕೊಳ್ಳಬೇಕು, ಹಾಗೇ ಮಾಡದೇ ಇದ್ದರೆ ಅದು ಶಾಸ್ತ್ರ ಸಮ್ಮತವಲ್ಲವೆಂದು ಹೇಳಲಾಗುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ, ಅದೇನೆಂದರೆ  ತಲೆಗೆ ಮೊದಲು ನೀರು ಹಾಕಿಕೊಳ್ಳುವುದರಿಂದ ದೇಹದ ಉಷ್ಣತೆ ತಲೆಯಿಂದ ಇಳಿದು ಪಾದದಿಂದ ಹೊರಹೋಗುತ್ತದೆ. ಇದರಿಂದ ಶರೀರದ ಉಷ್ಣತೆಯು ಕಡಿಮೆಯಾಗಿ ದೇಹವು ತಂಪಾಗುತ್ತದೆ.

ಇದನ್ನು ಓದಿ: ಈ ಐದು ರಾಶಿಯವರ ಹೆಂಡತಿಯರು ಅದೃಷ್ಟವಂತರು..! 

ಸ್ನಾನದ ಪ್ರಕಾರಗಳು

Tap to resize

Latest Videos

ದೇವ ಸ್ನಾನ
ಸೂರ್ಯೋದಯದ ನಂತರ ಸ್ನಾನ ಮಾಡುವವರೇ ಹೆಚ್ಚು. ಶಾಸ್ತ್ರ ಹೇಳುವಂತೆ ಸೂರ್ಯೋದಯವಾದ ಸಮಯದಲ್ಲಿ ನದಿಯಲ್ಲಿ ಅಥವಾ ಮಂತ್ರ ಪಠಣದೊಂದಿಗೆ ಮಾಡುವ ಸ್ನಾನವೇ ದೇವ ಸ್ನಾನ.

ಬ್ರಹ್ಮ ಸ್ನಾನ
ಪ್ರಾತಃಕಾಲದ ನಾಲ್ಕರಿಂದ ಐದು ಗಂಟೆಯೊಳಗಿನ ಸಮಯವನ್ನು ಬ್ರಾಹ್ಮೀ ಮುಹೂರ್ತವೆನ್ನುತ್ತಾರೆ. ಈ ಸಮಯದಲ್ಲಿ ಭಗವಂತನನ್ನು ಧ್ಯಾನಿಸುತ್ತಾ ಮಾಡುವ ಸ್ನಾನವೇ ಬ್ರಹ್ಮ ಸ್ನಾನ. ಬ್ರಾಹ್ಮೀ ಮೂಹೂರ್ತದಲ್ಲಿ ಮಾಡುವ ಸ್ನಾನದಿಂದ ಇಷ್ಟದೇವರ ವಿಶೇಷವಾದ ಕೃಪೆ ಪ್ರಾಪ್ತವಾಗುವುದಲ್ಲದೇ, ಕಷ್ಟಗಳೆಲ್ಲಾ ನಿವಾರಣೆಯಾಗುತ್ತವೆ.

ಋಷಿ ಸ್ನಾನ
ಬೆಳಗಿನ ಸಮಯದಲ್ಲಿ ಇನ್ನೂ ಆಕಾಶದಲ್ಲಿ ನಕ್ಷತ್ರಗಳು ಕಾಣುತ್ತಿರುವ ಕಾಲದಲ್ಲಿ ಮಾಡುವ ಸ್ನಾನವನ್ನು ಋಷಿ ಸ್ನಾನವೆಂದು ಹೇಳುತ್ತಾರೆ. ಸೂರ್ಯೋದಕ್ಕೆ ಮೊದಲು ಈ ಸ್ನಾನವನ್ನು ಮಾಡಲಾಗುತ್ತದೆ. ಇದನ್ನು ಮಾನವ ಸ್ನಾನವೆಂದು ಸಹ ಕರೆಯುತ್ತಾರೆ. ಸೂರ್ಯೋದಕ್ಕೂ ಮೊದಲು ಮಾಡುವ ಸ್ನಾನವನ್ನೇ ಸರ್ವಶ್ರೇಷ್ಠ ಸ್ನಾನವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ದಾನವ ಸ್ನಾನ
ಸೂರ್ಯೋದಯದ ನಂತರ ಆಹಾರಾದಿಗಳನ್ನು ಸೇವಿಸಿದ ನಂತರ ಮಾಡುವ ಸ್ನಾನವೇ ದಾನವ ಸ್ನಾನ. ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ, ಯಾವುದೇ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದಕ್ಕಿಂತ ಮೊದಲು ಸ್ನಾನ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ. 

ಇದನ್ನು ಓದಿ: ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು? 

ದೇವ ಸ್ನಾನ, ಋಷಿ ಸ್ನಾನ ಅಥವಾ ಬ್ರಹ್ಮ ಸ್ನಾನಗಳನ್ನೇ ಮಾಡುವುದು ಉತ್ತಮ ಮತ್ತು ಸರ್ವಶ್ರೇಷ್ಠವೆಂದು ಶಾಸ್ತ್ರ ಹೇಳುತ್ತದೆ. ಮುಖ್ಯವಾಗಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಗ್ರಹಣಗಳು ಮತ್ತು ಇತರೇ ಅಶೌಚ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ದಿನ ಸಂಜೆ ಮತ್ತು ರಾತ್ರಿ ಸ್ನಾನವು ನಿಷಿದ್ಧವಾಗಿದೆ. 

click me!