Live Life: 30 ವರ್ಷ ತುಂಬೋಕೆ ಮುಂಚೆ ನೀವು ಇದನ್ನೆಲ್ಲ ಮಾಡಿಬಿಡಿ!

By Suvarna NewsFirst Published Jan 7, 2022, 6:41 PM IST
Highlights

ಮೂವತ್ತು ವರ್ಷ ಎಂಬುದು ಬಾಳಿನಲ್ಲಿ ಒಂದು ಮಹತ್ವದ ಕಾಲಘಟ್ಟ. ನಿಮಗೆ ಮೂವತ್ತು ತುಂಬೋಕೆ ಮೊದಲೇ ಈ ಕೆಲವು ಸಂಗತಿಗಳನ್ನು ಈಡೇರಿಸಿಕೊಂಡುಬಿಡಿ.

ಮೂವತ್ತು (Thirties) ಎಂಬುದು ನೀವು ಪರಿಪೂರ್ಣ ಮನುಷ್ಯರಾಗುವತ್ತ ಮೊದಲ ಹೆಜ್ಜೆ. ಅಲ್ಲಿಂದಾಚೆಗೆ ನಿಮ್ಮ ಜವಾಬ್ದಾರಿಗಳೆಲ್ಲ ಆರಂಭವಾಗುತ್ತವೆ. ಹೊಸ ಉದ್ಯೋಗ, ಹೊಸ ಮನೆ, ಮದುವೆ ಎಂದೆಲ್ಲಾ ಹೊಣೆಗಾರಿಕೆಗಳು ಹೆಗಲೇರುತ್ತವೆ. ಇದುವರೆಗೂ ನೀವು ದುಡಿದದ್ದು ಕುಟುಂಬದ, ಸಮಾಜದ ಆಸ್ತಿಯಾಗುತ್ತಾ ಹೋಗುತ್ತದೆ. ಅದಕ್ಕೂ ಮೊದಲೇ ಈಡೇರಿಸಿಕೊಳ್ಳಬೇಕಾದ ಹಲವು ಕನಸುಗಳು ನಿಮ್ಮದಾಗಿರಬಹುದು. ಅವನ್ನು ನನಸಾಗಿಸಿಕೊಳ್ಳಲು ಇದು ಪ್ರಶಸ್ತ ಸಮಯ. 2022ರಲ್ಲಿ ಅಂಥ ಒಂದು ಅಥವಾ ಎರಡು ಚಟುವಟಿಕೆಯನ್ನಾದರೂ ಮಾಡಿ. ಅದು ಯಾವುದು ಗೊತ್ತೆ?

1. ಜಗತ್ತಿನ ಯಾವುದಾದರೂ ಒಂದು ನೈಸರ್ಗಿಕ ಅಥವಾ ಮಾನವ ನಿರ್ಮಿತ ಅದ್ಭುತವನ್ನು (wonder) ನೋಡಿ. ಯಾವುದು ಅದ್ಭುತ, ಯಾಕೆ ಅದನ್ನು ಹಾಗೆ ಕರೆಯುತ್ತಾರೆ, ಅದು ಮನುಕುಲಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನೆಲ್ಲಾ ತಿಳಿಯುವುದು ತುಂಬ ರೋಚಕವಾಗಿರುತ್ತದೆ.

2. ಒಂದು ಪರ್ವತವನ್ನು ಏರಿ (Mountaineering). ಅದು ಹಿಮಾಲಯದಲ್ಲಾದರೂ ಇರಬಹುದು, ಪಶ್ಚಿಮ ಘಟ್ಟಗಳಲ್ಲಾದರೂ ಇರಬಹುದು. ಅದೊಂದು ಬೇರೆಯದೇ ಆದ ಅನುಭವ. ಪರ್ವತ ಏರಲು ಮೈಯಲ್ಲಿ ಸಾಕಷ್ಟು ಶಕ್ತಿ, ಕಸುವು, ಕನಸು, ದೃಢ ನಿರ್ಧಾರ, ಛಲ ಎಲ್ಲವೂ ಇರಬೇಕು. ನೀವು ಅದೆಲ್ಲವನ್ನೂ ಬೆಳೆಸಿಕೊಳ್ಳುತ್ತೀರಿ.

Business Ideas: ಸಣ್ಣ ಪಟ್ಟಣದಲ್ಲಿ ವ್ಯಾಪಾರ ಶುರು ಮಾಡಿ, ಕೈ ತುಂಬಾ ಗಳಿಸಿ

3. ಒಂದು ಸೋಲೋ ಟ್ರಿಪ್ ಮಾಡಿ. ಸೋಲೋ ಟ್ರಿಪ್ (Solo Trip) ಎಂದರೆ ಏಕಾಂಗಿಯಾಗಿ ಪ್ರವಾಸ ಮಾಡುವುದು. ಟಿಕೆಟ್ ಬುಕ್ ಮಾಡುವುದರಿಂದ ಹಿಡಿದು ಎಲ್ಲವನ್ನೂ ನೀವೇ ಮಾಡಲು ಕಲಿಸುತ್ತದೆ. ಇದು ನಿಮ್ಮ ಅನುಭವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಅನಿರೀಕ್ಷಿತಗಳನ್ನು ಮುಖಾಮುಖಿಯಾಗುವಿಕೆಗಳನ್ನು ಕಲಿಸುತ್ತದೆ.

4. ಹೂಡಿಕೆ ಮಾಡಿ (Investment). ನಿಮ್ಮ ದುಡಿಮೆಯಿಂದ ಬಂದ ಹಣದಲ್ಲಿ ಒಂದು ಭಾಗವನ್ನು ಈಗಿನಿಂದಲೇ ಸೇವಿಂಗ್ಸ್ ಮಾಡುವುದಕ್ಕೆ ಶುರುಮಾಡಿ. ಜಾಣತನದಿಂದ ಹೂಡಿಕೆ ಮಾಡಿ. ಆಗ ನಿಮ್ಮ ವೃದ್ಧಾಪ್ಯದ ಚಿಂತೆ ನಿಮಗೆ ಇರುವುದಿಲ್ಲ.

5. ಒಂದು ವಾದ್ಯ ಕಲಿಯಿರಿ (Instrument). ಇದೀಗ ನಿಮ್ಮ ಹೊಸ ಕಲಿಕೆಯ ಉತ್ಸಾಹಕ್ಕೆ ಉಣಿಸು ನೀಡಲು ಸಮಯ. ಇಪ್ಪತ್ತರವರೆಗೂ ಶಿಕ್ಷಣ ಹಾಗೂ ಅದರ ನಂತರ ಉದ್ಯೋಗದ ಹುಡುಕಾಟದಲ್ಲಿ ಸುಸ್ತಾಗಿರುತ್ತೀರಿ. ಇದೀಗ ಸ್ವಲ್ಪ ಬಿಡುವಾಗಿ ನಿಮಗೆ ಸಿಗುವ ಸಮಯ ನಿಮ್ಮ ಕನಸಿನ ಒಂದು ಇನ್‌ಸ್ಟ್ರುಮೆಂಟ್ ಕಲಿಕೆಗೆ ಮೀಸಲಾಗಲಿ.

6. ಒಂದು ಹಚ್ಚೆ (Tattoo) ಹಾಕಿಸಿಕೊಳ್ಳಿ. ಇದು ನಿಮ್ಮ ಜೀವಮಾನದುದ್ದಕ್ಕೂ ಉಳಿಯುತ್ತದೆ. ನಿಮ್ಮ ಇಂದಿನ ಕೆಚ್ಚು ರೊಚ್ಚು ಆಸೆ ಆಕಾಂಕ್ಷೆ ಪ್ರಣಯ ಸಿಟ್ಟು ಇತ್ಯಾದಿಗಳನ್ನೆಲ್ಲ ನೀವು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಮಾಡುತ್ತದೆ. ಇದು ನಿಮ್ಮ ಧೈರ್ಯ, ಸಹನೆ, ನೋವುಣ್ಣುವ ಸಾಮರ್ಥ್ಯದ ಪ್ರಶ್ನೆಯೂ ಹೌದು.

Feel free: ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

7. ಫುಲ್ ಬಾಡಿ ಚೆಕಪ್‌ (Body Check up) ಮಾಡಿಸಿಕೊಳ್ಳಿ. ನಿಮ್ಮ ದೇಹ ಎಷ್ಟು ಸದೃಢವಾಗಿದೆ, ನಿಮ್ಮ ದೇಹದ ಒಳಗೆ ಏನಾಗುತ್ತಿದೆ ಎಂಬುದನ್ನೆಲ್ಲ ಅರ್ಥ ಮಾಡಿಕೊಳ್ಳೋಕೆ ಒಮ್ಮೆ ಫುಲ್ ಬಾಡಿ ಚೆಕಪ್ ಮಾಡಿಸಿ. ಇದರಿಂದ ಇನ್ನಷ್ಟು ಹುಮ್ಮಸ್ಸು ನಿಮ್ಮದಾಗಬಹುದು.

8. ದುಬಾರಿ ಗಿಫ್ಟ್ (Gift) ಕೊಟ್ಟುಕೊಳ್ಳಿ. ನಿಮಗೆ ನೀವೇ ನೀವು ಕನಸಿದ ಒಂದು ದುಬಾರಿ ಗಿಫ್ಟ್ ಕೊಟ್ಟುಕೊಳ್ಳುವುದು ತುಂಬಾ ಅರ್ಥಪೂರ್ಣ ಸಂಗತಿಯಾಗಬಹುದು. ನೀವು ಏನೇನೋ ಬೇಕೆಂದು ಬಾಳಿನುದ್ದಕ್ಕೂ ಹಂಬಲಿಸಿರುತ್ತೀರಿ. ಅದನ್ನು ನನಸು ಮಾಡಿಕೊಳ್ಳೋಕೆ ಇದು ಸಮಯ. ಅದಕ್ಕಾಗಿ ಸೇವ್ ಮಾಡಿ, ಬಳಸಿ.

9. ಹೊಸ ರುಚಿ (New Cuisene) ಸವಿಯಿರಿ. ಯಾವ್ಯಾವುದೋ ಭಯಗಳಿಂದ ಹೊಸ ಅಡುಗೆಗಳನ್ನು ಸವಿಯಲು ಹಿಂದೇಟು ಹಾಕುತ್ತಿರುತ್ತೀರಿ. ಅದನ್ನೆಲ್ಲ ಬಿಟ್ಟು ಹೊಸದೊಂದು ವಿಶೇಷ ಡಿಶ್, ಬೇರೊಂದೇ ಊರಿನ ಸವಿ, ರುಚಿಯ ಟೇಸ್ಟ್ ಮಾಡಿ. ಯಾರಿಗೆ ಗೊತ್ತು, ಅದು ನಿಮ್ಮ ಜೀವಮಾನದ ಅತ್ಯಂತ ರುಚಿಕರ ತಿನಿಸಾಗಿರಬಹುದು.

10. ಭಾಷೆಯೇ ಗೊತ್ತಿಲ್ಲದ ಊರಿಗೆ ಪ್ರಯಾಣ ಮಾಡಿ. ನೀವು ಹೊಸ ಭಾಷೆಯೊಂದನ್ನು ಕಲಿಯಬೇಕು (learning new Language) ಅಂತ ಆಗಾಗ ಅಂದುಕೊಳ್ಳುತ್ತಿರಬಹುದು. ಆದರೆ ಅದನ್ನು ಪ್ರಯತ್ನಿಸುವವರು ಅಪರೂಪ. ಆದರೆ ನಿಮಗೆ ಸ್ವಲ್ಪವೂ ತಿಳಿಯದ ಭಾಷೆಯ ಊರಿಗೆ ಪ್ರಯಾಣಿಸಿದರೆ ಅಲ್ಲಿ ಹೇಗೆ ಮ್ಯಾನೇಜ್ ಮಾಡುತ್ತೀರಿ ಎಂಬುದು ಬೇರೆಯದೇ ರೋಮಾಂಚಕ ಅನುಭವ.

click me!