ಸೌಂದರ್ಯವು ನೋಡುವವರ ಕಣ್ಣಿನಲ್ಲಿದೆ ಎಂಬ ಮಾತು ಅಕ್ಷರಶಃ ನಿಜ. ವಿಶ್ವಸುಂದರಿ ಕಿರೀಟ ಪಡೆದವಳ ಬಗ್ಗೆ ಇಡೀ ಜಗತ್ತಿನಲ್ಲಿ ಒಂದೇ ಅಭಿಪ್ರಾಯ ಬರುವುದಿಲ್ಲ. ಜಗತ್ತಿನ ಯಾವ ಭಾಗದಲ್ಲಿ ಸೌಂದರ್ಯದ ಯಾವ ವಿಷಯವನ್ನು ಅನಾಕರ್ಷಕ ಎಂದು ಪರಿಗಣಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ.
ಹಾಲಿವುಡ್‌ನಲ್ಲಿ ಮೀರಿಸುವವರಿಲ್ಲದ ಚೆಲುವೆ ಎಂದು ಎನಿಸಿಕೊಂಡವಳು ಆಫ್ರಿಕನ್ನರ ಕಣ್ಣಿಗೆ ಬಿಳಿಜಿರಳೆಯಂತೆ ಕಾಣಿಸಬಹುದು, ಕೆಲವರಿಗೆ ಬ್ಲಾಂಡ್ ಹೇರ್ ಮಾತ್ರ ಸೌಂದರ್ಯದ ಪ್ರತೀಕ ಎನಿಸಿದರೆ, ಕಪ್ಪಲ್ಲದ ಕೂದಲು ಯೌವನವನ್ನು ತೋರುವುದೇ ಇಲ್ಲ ಎಂದು ಮತ್ತೆ ಕೆಲವರಿಗೆ ಅನಿಸಬಹುದು. ಸ್ಥಳ, ಸಂಸ್ಕೃತಿ, ಸಮುದಾಯ ಬದಲಾದಂತೆಲ್ಲ ಸೌಂದರ್ಯದ ವ್ಯಾಖ್ಯಾನವೂ ಬದಲಾಗುತ್ತದೆ.
ಸೌಂದರ್ಯವು ನೋಡುವವರ ಕಣ್ಣಿನಲ್ಲಿದೆ ಎಂಬ ಮಾತು ಅಕ್ಷರಶಃ ನಿಜ. ವಿಶ್ವಸುಂದರಿ ಕಿರೀಟ ಪಡೆದವಳ ಬಗ್ಗೆ ಇಡೀ ಜಗತ್ತಿನಲ್ಲಿ ಒಂದೇ ಅಭಿಪ್ರಾಯ ಬರುವುದಿಲ್ಲ. ಪ್ರತಿಯೊಬ್ಬರೂ ಸೌಂದರ್ಯ ಗ್ರಹಿಸುವ ಮಾನದಂಡದ ಮೇಲೆ ಅವರ ಸಂಸ್ಕೃತಿ, ಸಂಸ್ಕಾರ, ಇಷ್ಟಕಷ್ಟಗಳು, ನೋಡಿದ್ದು, ಓದಿದ್ದು ಎಲ್ಲವೂ ಪರಿಣಾಮ ಬೀರಿರುತ್ತವೆ. ಜಗತ್ತಿನ ಯಾವ ಭಾಗದಲ್ಲಿ ಸೌಂದರ್ಯದ ಯಾವ ವಿಷಯವನ್ನು ಅನಾಕರ್ಷಕ ಎಂದು ಪರಿಗಣಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ.
undefined
ಮೇಕಪ್
ಫ್ರ್ಯಾನ್ಸ್‌ನಲ್ಲಿ ಮೇಕಪ್ ಇಲ್ಲದೆಯೂ ಕಂಫರ್ಟ್ ಆಗಿ ಎಲ್ಲರೂ ಓಡಾಡಬಹುದು. ಏಕೆಂದರೆ ಫ್ರೆಂಚರಿಗೆ ಮೇಕಪ್ ಇಷ್ಟವಿಲ್ಲ. ಮೇಕಪ್ಪನ್ನು ಅವರು ಅನಾಕರ್ಷಕ ಎಂದು ಬಗೆಯುತ್ತಾರೆ. ನೈಸರ್ಗಿಕವಾಗಿ ಪಡೆದ ಸೌಂದರ್ಯವನ್ನಷ್ಟೇ ಮನ್ನಣೆಗೆ ತೆಗೆದುಕೊಳ್ಳುವ ಗುಣ ಅವರದು. ಅವರೇನಿದ್ದರೂ, ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಒಪ್ಪುವ ಕೇಶವಿನ್ಯಾಸ ಹಾಗೂ ಬಟ್ಟೆಯ ಬಗ್ಗೆ ಮಾತ್ರ ಯೋಚಿಸುತ್ತಾರೆ. ನಾವು ನಾವಾಗಿರಬೇಕೇ ಹೊರತು, ನಮ್ಮ ಬೆಟರ್ ವರ್ಶನ್ ಹೇಗಿರುತ್ತದೆ ಎಂದು ತೋರಿಸುವುದಲ್ಲ ಎಂಬ ನಂಬಿಕೆ ಅವರದು.
ಸಣ್ಣ ಫಿಗರ್
ತೆಳ್ಳಗಿನ ಬಳಕುವ ದೇಹವಿದ್ದರೆ ಅದೇ ಅಲ್ಟಿಮೇಟ್ ಸೌಂದರ್ಯ ಎಂದು ಪಾಶ್ಚಾತ್ಯ ಜಗತ್ತು ನಂಬಿದೆ. ಆದರೆ ಇದೇನು ಸೌಂದರ್ಯದ ಯೂನಿವರ್ಸಲ್ ಮಾನದಂಡವಲ್ಲ. ಆಫ್ರಿಕಾದ ಹಲವು ಪುರುಷರಿಗೆ ದಪ್ಪಗಿನ ಮಹಿಳೆಯರು ಹೆಚ್ಚು ಆಕರ್ಷಕವೆನಿಸುತ್ತಾರೆ. ತೆಳ್ಳಗಿನ ಫಿಗರ್ ಹೊಂದಿರುವವರು ಅನಾರೋಗ್ಯಪೀಡಿತರಂತೆ ಕಾಣುತ್ತಾರೆ. ಅವರು ತಾವು ತಮ್ಮ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ತೋರಿಸಲು, ಪತ್ನಿ ದಪ್ಪಗಿರಬೇಕೆಂದು ಬಯಸುತ್ತಾರೆ, ಅಷ್ಟೇ ಅಲ್ಲ, ದಪ್ಪಗಿನ ಹುಡುಗಿಯರು ಮಕ್ಕಳನ್ನು ಹೆರುವ ಸಾಮರ್ಥ್ಯ ಸೂಚಕದಂತೆ ಭಾವಿಸುತ್ತಾರೆ. ಹಾಗಾಗಿಯೇ ಆಫ್ರಿಕಾದಲ್ಲಿ ಒಬೆಸಿಟಿ ಹೆಚ್ಚಿರಲು ಅವರ ಸೌಂದರ್ಯದ ಮಾನದಂಡವೂ ಕಾರಣ.
ಜಮೈಕಾದಲ್ಲಿ ಮೈಮೇಲೆ ಮಾಂಸವಿರದಿದ್ದರೆ ಅದು ನಿಮ್ಮ ಅಸ್ಥಿತ್ವವನ್ನು, ನಿಮ್ಮ ಬೆಳವಣಿಗೆಯನ್ನು, ಆಸ್ತಿಯನ್ನೇ ಕಡೆಗಣಿಸದಂತೆ ಎಂದು ನಂಬುತ್ತಾರೆ. ಹಾಗಾಗಿ ಜಮೈಕನ್ ಮಹಿಳೆಯರು ತಮ್ಮ ಬ್ಯಾಕ್ ಗಾತ್ರ ಹೆಚ್ಚಿಸಿಕೊಳ್ಳಲು ಚಿಕನ್ ಪಿಲ್ಸ್ ಕೂಡಾ ಸೇವಿಸುತ್ತಾರೆ.
ಇದೇ ಸಂಪೂರ್ಣ ಉಲ್ಟಾ ಕೇಸ್ ಮಾಡಿ ನೋಡಿದರೆ ಅದು ಅಮೆರಿಕ. ಹೌದು, ಅಮೆರಿಕದಲ್ಲಿ ತೆಳ್ಳಗಿನ ಫಿಗರ್ ಹೆಚ್ಚು ಆಕರ್ಷಕ, ಸೌಂದರ್ಯ, ಶ್ರೀಮಂತಿಕೆಯ ಪ್ರತೀಕವಾಗಿ ಕಾಣುತ್ತದೆ.
ಕರ್ವ್ಸ್ ಇಲ್ಲದಿರುವುದು
ವೆನೆಜುವೆಲಾದಲ್ಲಿ ಕರ್ವ್ಸ್ ಇಲ್ಲದ ಮಹಿಳೆ ಅತಿ ಅನಾಕರ್ಷಕ ಎಂದು ಭಾವಿಸುತ್ತಾರೆ. ಸಣ್ಣ ಸೊಂಟ, ದೊಡ್ಡ ಎದೆ ಹಾಗೂ ನಿತಂಬಗಳು ಅಲ್ಲಿನ ಆಕರ್ಷಣೆಯ ಮಾನದಂಡ. ಹಾಗಾಗಿ, ವೆನಿಜುವೆಲಾದ ಮಹಿಳೆಯರು ಈ ಬಾಡಿ ಟೈಪ್ ಹೊಂದುವ ಕಸರತ್ತಿನಲ್ಲಿ ತೊಡಗಿದ್ದಾರೆ. ಇದು ಅಲ್ಲಿನ ಮಹಿಳೆಯರಲ್ಲಿ ಈಟಿಂಗ್ ಡಿಸಾರ್ಡರ್ಸ್, ಖಿನ್ನತೆ, ಕೀಳರಿಮೆ ಸೇರಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಗಿಡ್ಡವಾದ ಕತ್ತು
ಥಾಯ್ಲೆಂಡ್, ಬರ್ಮಾದ ಕೆಲ ಪ್ರದೇಶಗಳ ಜನರಿಗೆ ಗಿಡ್ಡ ಕತ್ತು ಕುರೂಪದಂತೆ ಕಾಣುತ್ತದೆ. ಆಭರಣ ಧರಿಸದ ಉದ್ದನೆಯ ಕತ್ತು ಅಲ್ಲಿ ಆಕರ್ಷಕ ಎನಿಸಿದೆ. ಅಲ್ಲಿನ ಮಹಿಳೆಯರು ಕತ್ತನ್ನು ಉದ್ದ ಮಾಡಿಕೊಳ್ಳಲು ರಿಂಗ್‌ಗಳನ್ನು ಹಾಕಿಕೊಳ್ಳುವುದು ಸೇರಿದಂತೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ.
ಟ್ಯಾಟೂವಿಲ್ಲದ ಮುಖ
ಮುಖಕ್ಕೆ ಟ್ಯಾಟೂ ಹಾಕಿಸಿಕೊಳ್ಳುವುದು ವೈಲ್ಡ್, ಬಿಂದಾಸ್, ರೌಡಿಸಂನ ಲಕ್ಷಣ ನೀಡುತ್ತದೆ ಎಂದು ಅಮೆರಿಕದಲ್ಲಿ ಪರಿಗಣಿಸುತ್ತಾರೆ. ಆದರೆ, ನ್ಯೂಜಿಲ್ಯಾಂಡ್‌ನ ಮಾವೋರಿ ಜನರಿಗೆ ಮುಖದಲ್ಲಿ ಟ್ಯಾಟೂವಿಲ್ಲದವರು ಚೆಂದವೇ ಅಲ್ಲ ಎನಿಸುತ್ತದೆ. ಈ ಜನಾಂಗದಲ್ಲಿ ಮುಖಕ್ಕೆ ಟ್ಯಾಟೂ ಹಾಕಿಸಿಕೊಳ್ಳುವುದು ಮಹಿಳೆಯರಿಗೊಂದು ಮೈಲಿಗಲ್ಲಿದ್ದಂತೆ. ಗಲ್ಲಕ್ಕೆ ಟ್ಯಾಟೂ ಹಾಕಿಸಿಕೊಂಡರಷ್ಟೇ ಸುಂದರಿ ಎಂಬುದು ಅವರ ಮಾನದಂಡ.
ಅತಿಯಾಗಿ ಬಿಳುಚಿದ ಮುಖ
ಚೀನಾದಲ್ಲಿ ಅತಿಯಾಗಿ ಬಿಳುಚಿದ ಮುಖವೇ ಪರ್ಫೆಕ್ಟ್ ಎಂದುಕೊಳ್ಳುತ್ತಾರೆ. ಆದರೆ, ಹಲವು ಅಮೆರಿಕನ್ನರಿಗೆ ಟ್ಯಾನ್ ಆದ ಮುಖ ಹೆಚ್ಚು ಆಕರ್ಷಕವೆನಿಸುತ್ತದೆ. ಅತಿಯಾಗಿ ಬಿಳುಚಿದ ಮುಖ ಅನಾಕರ್ಷಕವೆನಿಸುತ್ತದೆ. ಅಲ್ಲಿ ಟ್ಯಾನ್ ಹೊಂದಲು ಬೀಚ್ ಬಳಿ ಹೋಗಿ ಮಲಗುತ್ತಾರೆ. ಟ್ಯಾನಿಂಗ್ ಸಲೂನ್‌ಗಳು ಕೂಡಾ ಇವೆ. ಮುಖದಲ್ಲಿ ಟ್ಯಾನ್ ಇದೆ ಎಂದರೆ ಅಂಥವರಲ್ಲಿ ಬೀಚ್‌ಗೆ ಹೋಗಿ ರಿಲ್ಯಾಕ್ಸ್ ಮಾಡಲು ಸಮಯ, ಹಣ, ಆರೋಗ್ಯದ ಯೋಚನೆಗಳಿವೆ ಎಂದು ಭಾವಿಸಲಾಗುತ್ತದೆ. ಹಾಗಾಗಿ, ಟ್ಯಾನ್ ಆಕರ್ಷಕವೆನಿಸುತ್ತದೆ.
ಅದೇ ಚೈನಾ, ಭಾರತ, ಕೊರಿಯಾಗಳಲ್ಲಿ ಟ್ಯಾನ್ ಅನಾಕರ್ಷಕವೆನಿಸುತ್ತದೆ. ಇಲ್ಲಿ ಹೀಗೆ ಟ್ಯಾನ್ ಆಗಿದೆ ಎಂದರೆ ಅವರು ಬಡವರಾಗಿದ್ದು, ಬಿಸಿಲಲ್ಲಿ ಕೆಲಸ ಮಾಡುವುದನ್ನು ಸೂಚಿಸುತ್ತದೆ. ಹಾಗಾಗಿ ಇಲ್ಲಿ ಬಿಳಿಯ ಚರ್ಮ ಪಡೆಯಲು, ಟ್ಯಾನ್ ತೆಗೆಸಲು ಮಹಿಳೆಯರು ಒದ್ದಾಡುತ್ತಾರೆ.
ಮೂಗು
ಇರಾನಿನಲ್ಲಿ ನ್ಯಾಚುರಲ್ ಆಗಿ ಬಂದ ಮೂಗು ಹೇಗೇ ಇರಲಿ ಅದು ಅನಾಕರ್ಷಕವೇ. ಇಲ್ಲಿನ ಮಹಿಳೆಯರೆಲ್ಲರೂ ಮೂಗಿಗೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲಷ್ಟೇ ಅಲ್ಲ, ಹಾಗೆ ಮಾಡಿಸಿದ ನಂತರ ಮೂಗಿನ ಮೇಲೆ ಬ್ಯಾಂಡೇಜ್ ಹಾಕಿಕೊಂಡ ಫೋಟೋ ಹಾಕಿಕೊಂಡು ಪ್ರದರ್ಶಿಸುತ್ತಾರೆ. ಇದಕ್ಕೆ ಕಾರಣ, ಇದು ಅವರ ಕುಟುಂಬ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ, ಸರ್ಜರಿ ಮಾಡಿಸುವಷ್ಟು ಶ್ರೀಮಂತಿಕೆ ಇದೆ ಎಂಬುದನ್ನು ಸೂಚಿಸುತ್ತದೆ. ಇದು ಅವರಿಗೆ ಉತ್ತಮ ಸಂಗಾತಿಯನ್ನು ಆಕರ್ಷಿಸುವ ಮಾರ್ಗ. ಹಾಗಾಗಿ, ಜಗತ್ತಿನಲ್ಲೇ ಅತಿ ಹೆಚ್ಚು ನೋಸ್ ಸರ್ಜರಿ ನಡೆಯುವುದು ಇರಾನಿನಲ್ಲಿ.
ಇಥಿಯೋಪಿಯಾದಲ್ಲಿ ಕಲೆಗಳಿಲ್ಲದ, ಸ್ಮೂತ್ ಮುಖ ಅನಾಕರ್ಷಣೀಯ ಎನಿಸಿದರೆ, ಥೈಲ್ಯಾಂಡ್‌ನಲ್ಲಿ ಕೆಟ್ಟ ನಡತೆಯಿಂದ ಯುವತಿ ಆಕರ್ಷಣೆ ಕಳೆದುಕೊಳ್ಳುತ್ತಾಳೆ. ಬದಲಿಗೆ ಆಕೆ ಉತ್ತಮಳಾಗಿದ್ದಲ್ಲಿ, ಸೌಂದರ್ಯ ಹೇಗೇ ಇರಲಿ- ಅವಳನ್ನು ಸುಂದರಿ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲೆಡೆ ನೇರವಾದ ಹಲ್ಲುಗಳನ್ನು ಸೌಂದರ್ಯ ಎಂದು ಪರಿಗಣಿಸಿದರೆ, ಜಪಾನಿನಲ್ಲಿ ಎಕ್ಸ್ಟ್ರಾ ಹಲ್ಲುಗಳಿದ್ದು, ಓರೆಕೋರೆಯಾಗಿರುವ ಹಲ್ಲುಗಳೇ ಆಕರ್ಷಕ ಎನಿಸುತ್ತವೆ. ನೀವೇನಾದರೂ ನಿಮ್ಮ ಸೌಂದರ್ಯದ ಕುರಿತು ಕೀಳರಿಮೆ ಹೊಂದಿದ್ದಲ್ಲಿ, ತಪ್ಪು ನಿಮ್ಮ ಸೌಂದರ್ಯದ್ದಲ್ಲ, ನೀವು ತಪ್ಪಾದ ದೇಶದಲ್ಲಿ ಜನಿಸಿದ್ದೀರಷ್ಟೇ...