
ಮಹಿಳೆ ಮುಖದ ಆಕರ್ಷಕ ಅಂಗಗಳಲ್ಲಿ ತುಟಿ ಕೂಡ ಒಂದು. ಸುಂದರ ಕೆಂಪು ಬಣ್ಣದ ತುಟಿ ಎಲ್ಲರನ್ನು ಆಕರ್ಷಿಸುತ್ತದೆ. ತುಟಿಯನ್ನು ಮತ್ತಷ್ಟು ಆಕರ್ಷಕಗೊಳಿಸಲು ಅದಕ್ಕೆ ಮಹಿಳೆಯರು ಬಣ್ಣ ಹಚ್ಚಿಕೊಳ್ತಾರೆ. ಸೌಂದರ್ಯ ವರ್ದಕ ಎಂಬ ವಿಷ್ಯ ಬಂದಾಗ ಅಲ್ಲಿ ಲಿಪ್ಸ್ಟಿಕ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ, ಬಣ್ಣ ಬಣ್ಣದ ಲಿಪ್ಸ್ಟಿಕ್ ಲಭ್ಯವಿದೆ. ನಿಮಗೆ 50 ರೂಪಾಯಿಯಿಂದ ಹಿಡಿದು 5000 ರೂಪಾಯಿವರೆಗಿನ ಲಿಪ್ಸ್ಟಿಕ್ ಲಭ್ಯವಿದೆ. ಎಲ್ಲವೂ ತುಟಿಯ ಸೌಂದರ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತವೆ. ಪ್ರತಿ ದಿನ ಇಲ್ಲವೆ ವಾರಕ್ಕೊಮ್ಮೆ ಲಿಪ್ಸ್ಟಿಕ್ ಹಚ್ಚಿಕೊಳ್ಳುವ ನಮಗೆ ಅಥವಾ ಲಿಪ್ಸ್ಟಿಕ್ ಹಚ್ಚಿಕೊಂಡ ಮಹಿಳೆ ತುಟಿಯನ್ನು ದಿಟ್ಟಿಸಿ ನೋಡುವ ಪುರುಷರಿಗೆ ಈ ಲಿಪ್ಸ್ಟಿಕ್ ಇತಿಹಾಸ ಗೊತ್ತಿದ್ದಂತಿಲ್ಲ. ಈ ಲಿಪ್ಸ್ಟಿಕ್ ಯಾವಾಗ ಹುಟ್ಟಿಕೊಂಡಿತು ಎಂಬುದನ್ನು ನಾವಿಂದು ಹೇಳ್ತೆವೆ.
ಕಾಮಸೂತ್ರ (Kamasutra) ದಲ್ಲಿ ತುಟಿ (Lip) ಬಣ್ಣದ ವರ್ಣನೆ : ಯಸ್, ಮಹರ್ಷಿ ವಾತ್ಸ್ಯಾಯನ ರಚಿಸಿದ ಕಾಮಸೂತ್ರವು ಪೌರಾಣಿಕ ಕಾವ್ಯ. ಇದ್ರಲ್ಲಿ ಮೇಣ (wax) ಮತ್ತು ಹಣ್ಣಿನ ರಸವನ್ನು ತುಟಿಗಳನ್ನು ಚಿತ್ರಿಸಲು ಬಳಸಲಾಗುತ್ತಿತ್ತು ಎನ್ನುವ ವಿವರವಿದೆ. ಆ ಕಾಲದಲ್ಲೂ ಮಹಿಳೆಯರು ತುಟಿ ಸೌಂದರ್ಯಕ್ಕೆ ಮಹತ್ವ ನೀಡುತ್ತಿದ್ದರು ಎಂದಾಯ್ತು.
ತುಟಿ ಬಣ್ಣಕ್ಕೆ ಬಳಸಲಾಗ್ತಿತ್ತು ರತ್ನ : ಸುಮೇರಿಯನ್ ಸಮಾಜವು ಪ್ರವರ್ಧಮಾನಕ್ಕೆ ಬಂದಾಗ ಮಹಿಳೆಯರು ತುಟಿಯ ಬಣ್ಣಕ್ಕೆ ಮಹತ್ವ ನೀಡಿದ್ದರಂತೆ. ತುಟಿಗೆ ಹೊಳಪು ನೀಡಲು ಪಾಲಿಶ್ ಮಾಡಿದ ರತ್ನವನ್ನು ಹಚ್ಚುತ್ತಿದ್ದರಂತೆ. ಕೆಲವೆಡೆ ಹಣ್ಣಿನ ರಸ, ಹೂ ಬಳಸುತ್ತಿದ್ದರು ಎನ್ನಲಾಗಿದೆ.
ಟ್ರಿಡೆಷನಲ್ ಡ್ರೆಸ್ಸಲ್ಲೂ ಕನ್ನಡತಿಯ ವರೂಧಿನಿ ಎಷ್ಚು ಚೆಂದ ಕಾಣಿಸ್ತಾರೋ ನೋಡಿ!
ಲಿಪ್ಸ್ಟಿಕ್ ಬಳಸ್ತಿದ್ದ ಕ್ಲಿಯೋಪಾತ್ರ : ಕ್ಲಿಯೋಪಾತ್ರ ಬಗ್ಗೆ ಅನೇಕರಿಗೆ ತಿಳಿದಿದೆ. ಕ್ಲಿಯೋಪಾತ್ರ ಯುಗದಲ್ಲಿಯೇ ಜನರು ಲಿಪ್ಸ್ಟಿಕ್ ಬಳಸ್ತಿದ್ದರಂತೆ. ಕ್ಲಿಯೋಪಾತ್ರ ಕೂಡ ತುಟಿಗೆ ಬಣ್ಣ ಹಚ್ಚುತ್ತಿದ್ದರಂತೆ. 5000 ವರ್ಷಗಳ ಹಿಂದೆ ಕ್ಲಿಯೋಪಾತ್ರ ಮತ್ತು ಆ ಕಾಲದ ಈಜಿಪ್ಟಿನ ಮಹಿಳೆಯರು ಕೀಟಗಳನ್ನು ಕೊಂದು ಅವುಗಳನ್ನು ಪುಡಿಮಾಡಿ ಪೇಸ್ಟ್ ಮಾಡಲು ಬಳಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ಪಾದರಸವನ್ನು ಕೂಡ ಅವರು ಬಳಸುತ್ತಿದ್ದರು ಎನ್ನುವ ಉಲ್ಲೇಖವಿದೆ.
ಹಾರ್ಡ್ ಲಿಪ್ಸ್ಟಿಕ್ ಇತಿಹಾಸ : 9 ನೇ ಶತಮಾನದ ಅರಬ್ ವಿಜ್ಞಾನಿ ಅಬುಲ್ಕಾಸಿಸ್ ಹಾರ್ಡ್ ಲಿಪ್ಸ್ಟಿಕ್ ಸಂಶೋಧಕ ಎನ್ನಲಾಗಿದೆ. ಸುಗಂಧ ದ್ರವ್ಯವನ್ನು ಬಳಸಿ ಅವರು ಅಚ್ಚಿನಲ್ಲಿ ಇದನ್ನು ಒತ್ತಲು ಪ್ರಯತ್ನಿಸಿದ್ದರು ಎನ್ನಲಾಗುತ್ತದೆ.
ಲಿಪ್ಸ್ಟಿಕ್ ಬಳಸುವವರಿಗಿತ್ತು ಈ ಹೆಸರು : ಲಿಪ್ಸ್ಟಿಕ್ ಬಳಸುವವರನ್ನು ಮಾಟಗಾತಿ ಎಂದು ಕರೆಯಲಾಗುತ್ತಿತ್ತು. ಕ್ಯಾಥೊಲಿಕ್ ಮತ್ತು ಇಸ್ಲಾಂ ಧರ್ಮದಂತಹ ಕೆಲವು ಮೂಲಭೂತವಾದಿ ಧರ್ಮದವರು, ಲಿಪ್ಸ್ಟಿಕ್ ಬಳಸಿದ ಮಹಿಳೆಯನ್ನು ಮಾಟಗಾತಿ ಎನ್ನುತ್ತಿದ್ದರು. ಅದನ್ನು ದೆವ್ವದ ಜೊತೆ ಹೋಲಿಕೆ ಮಾಡಲಾಗ್ತಿತ್ತು. ಅಷ್ಟೇ ಅಲ್ಲ ವೇಶ್ಯೆಯರ ಜೊತೆ ಕೂಡ ಸಂಬಂಧ ಕಲ್ಪಿಸಲಾಗಿತ್ತು.
ರಾಣಿ ಎಲಿಜಬೆತ್ ಮೇಕ್ಅಪ್ ನಲ್ಲಿ ಲಿಪ್ಸ್ಟಿಕ್ : ಯಾವಾಗ ರಾಣಿ ಎಲಿಜಬೆತ್ ಲಿಪ್ಸ್ಟಿಕ್ ಬಳಕೆ ಶುರು ಮಾಡಿದ್ರೋ ಆಗ ಅದ್ರ ಅರ್ಥ ಬದಲಾಯ್ತು. ಬ್ರಿಟನ್ನ ರಾಣಿ ಎಲಿಜಬೆತ್ I ಮೇಕ್ಅಪ್ ಗಾಗಿ ಬಿಳಿ ಸುಣ್ಣ ಮತ್ತು ಪಾದರಸ ಬಳಸಿದರು. ಅವರ ಮುಖದ ಮೇಲೆ ಅನೇಕ ಗಾಯಗಳಿದ್ದು, ಅದನ್ನು ಮುಚ್ಚಿಡಲು ಸುಣ್ಣ ಹಚ್ಚುತ್ತಿದ್ದರಂತೆ. ಹಾಗೆಯೇ ತುಟಿಗಳಿಗೆ ಪಾದರಸ ಬಳಸುತ್ತಿದ್ದರು ಎನ್ನಲಾಗಿದೆ.
Beauty Tips : ಲಿಪ್ ಬಾಮ್ ಅನ್ನು ಹೀಗೂ ಬಳಸಿ ನೋಡಿ
ಆಧುನಿಕ ಲಿಪ್ಸ್ಟಿಕ್ ಇತಿಹಾಸ : 1884 ರಲ್ಲಿ ಫ್ರೆಂಚ್ ಸುಗಂಧ ಕಂಪನಿ ಗುಲೇರಿಯನ್ ಲಿಪ್ಸ್ಟಿಕ್ ಅನ್ನು ವಾಣಿಜ್ಯಿಕವಾಗಿ ಮಾರಾಟ ಮಾಡಿದ ಮೊದಲ ಕಂಪನಿಯಾಗಿದೆ. ಇದರಲ್ಲಿ ಜೇನು ಮೇಣ, ಕ್ಯಾಸ್ಟರ್ ಆಯಿಲ್ ಮತ್ತು ಜಿಂಕೆ ಕೊಬ್ಬನ್ನು ಬಳಸಲಾಗಿತ್ತು. ಅದನ್ನು ರೇಷ್ಮೆ ಕಾಗದದಲ್ಲಿ ಸುತ್ತಿ ಮಾರಾಟ ಮಾಡಲಾಯ್ತು. 1915 ರಲ್ಲಿ ಮೊರಿಸ್ ಲೆವಿ ಸಿಲಿಂಡರಾಕಾರದ ಕೊಳವೆಗಳಲ್ಲಿ ಲಿಪ್ಸ್ಟಿಕ್ ಮಾರಾಟ ಶುರು ಮಾಡಿದ್ರು. 1920 ರ ಹೊತ್ತಿಗೆ, ಲಿಪ್ಸ್ಟಿಕ್ ಮಹಿಳೆಯರ ಮೇಕಪ್ ನ ಒಂದು ಭಾಗವಾಯ್ತು. 1923 ರಲ್ಲಿ ಜೇಮ್ಸ್ ಬ್ರೂಸ್ ಮೇಸನ್ ಜೂನಿಯರ್ ತಿರುಗುವ ಸಿಲಿಂಡರ್ ನಲ್ಲಿ ಲಿಪ್ಸ್ಟಿಕ್ ಹಾಕಿದ್ರು. ಅಲ್ಲಿಂದ ಆಧುನಿಕ ಲಿಪ್ಸ್ಟಿಕ್ ತಯಾರಿ ಶುರುವಾಯ್ತು. ಇದ್ರ ನಂತ್ರ ಲಿಪ್ಸ್ಟಿಕ್ ಗೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರವಾಗಿದೆ. ಮಾರುಕಟ್ಟೆಯಲ್ಲಿ ನಾನಾ ಲಿಪ್ಸ್ಟಿಕ್ ಲಭ್ಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.