
ಎಲ್ಲಾ ಕ್ಷೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆ (AI) ಕಾಲಿಟ್ಟಾಗಿದೆ. ಸಣ್ಣಪುಟ್ಟ ಪ್ರಶ್ನೆಗೆ ತಲೆ ಖರ್ಚು ಮಾಡುವುದು ಏಕೆ ಎಂದು ಬಹುತೇಕ ಮಂದಿ ಎಐನಲ್ಲಿಯೇ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಚಿಕ್ಕಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೂ ಎಐನೇ ಪ್ರಪಂಚ ಎನ್ನುವಷ್ಟರ ಮಟ್ಟಿಗೆ ಇದರ ಹವಾ ಜೋರಾಗಿದೆ. ಇನ್ನು ಉದ್ಯೋಗ ಕ್ಷೇತ್ರಗಳಲ್ಲಿ ಇದಾಗಲೇ ಎಐ ಲಕ್ಷಾಂತರ ಉದ್ಯೋಗಗಳನ್ನು ಕಸಿದುಕೊಂಡಿದ್ದು, ಇದೀಗ ಎಐ ಸೀರಿಯಲ್ ಪ್ರಪಂಕ್ಕೂ ಕಾಲಿಟ್ಟಿದೆ! ಜೀ ಸಂಸ್ಥೆ ಹೀಗೊಂದು ಪ್ರಯೋಗಕ್ಕೆ ಮುಂದಾಗಿದೆ. ಇದನ್ನು ಪರಿಚಯಿಸುವುದರ ಹಿಂದೆ ಒಂದು ದೊಡ್ಡ ಉದ್ದೇಶ ಇದೆ.
ಕಿರುತೆರೆ ಧಾರಾವಾಹಿಗಳ ಪ್ರಪಂಚದಲ್ಲಿ ಮೊದಲ ಬಾರಿಗೆ ಎಐ ತಂತ್ರಜ್ಞಾನ ದಾಪುಗಾಲು ಇಡುವ ಮೂಲಕ ಹೊಸ ಹೆಜ್ಜೆಯನ್ನು ಇಡಲಾಗಿದೆ. ಸೀರಿಯಲ್ಗಳಲ್ಲಿ ಗೂಗಲ್ ಸರ್ಚ್‌ನ 'AI Mode' ಪರಿಚಯಿಸಲು 'ZEE' ಮತ್ತು 'Google Search' ಸಂಸ್ಥೆಗಳು ಕೈಜೋಡಿಸಿವೆ. ಮನರಂಜನೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಬೆಸೆಯುವ ಈ ವಿನೂತನ ಸಹಯೋಗವು, ಜೀ ಟಿವಿಯ ಹಿಂದಿನ ಸೀರಿಯಲ್ಗಳಾಗಿರುವ ‘ತುಮ್ ಸೆ ತುಮ್ ತಕ್’ ಹಾಗೂ ‘ಗಂಗಾ ಮಾಯಿ ಕಿ ಬೇಟಿಯಾನ್’ಗಳ ಮೂಲಕ ವೀಕ್ಷಕರನ್ನು ತಲುಪಲಿದ್ದು, ಇದು ಸಕ್ಸಸ್ ಆದರೆ ಮುಂದೆ ಎಲ್ಲಾ ಭಾಷೆಗಳ ಸೀರಿಯಲ್ಗಳಲ್ಲಿ ಇದು ಬರುವ ನಿರೀಕ್ಷೆ ಇದೆ.
ಅಷ್ಟಕ್ಕೂ ಇದನ್ನು ಪರಿಚಯಿಸುತ್ತಿರುವ ಹಿಂದಿನ ಉದ್ದೇಶ, ತಂತ್ರಜ್ಞಾನ ಹಾಗೂ ಮನರಂಜನಾ ಕ್ಷೇತ್ರವನ್ನು ಒಂದೆಡೆ ತರುವುದು ಎಂದಿದೆ ಸಂಸ್ಥೆ. ಗೂಗಲ್ ಜೊತೆ ಕೈಜೋಡಿಸಿರೋ ಜೀ ತನ್ನ ಜನಪ್ರಿಯ ಧಾರಾವಾಹಿಗಳ ಕಥಾಹಂದರದಲ್ಲೇ ಎಐ ಮೂಡ್ನ ಉಪಯೋಗ ಹಾಗೂ ಬಳಕೆ ಬಗ್ಗೆ ಹೇಳುತ್ತಿದೆ. ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಇದನ್ನು ಆರಂಭಿಸಲಾಗಿದ್ದು, ಸದ್ಯ ಎರಡು ಸೀರಿಯಲ್ಗಳಲ್ಲಿನ ಪಾತ್ರಗಳು ತಮ್ಮ ದಿನನಿತ್ಯದ ಸಮಸ್ಯೆಗಳು ಹಾಗೂ ನಿರ್ಧಾರಗಳಿಗೆ ಎಐ ಮೋಡ್ ಬಳಸಿ ಪರಿಹಾರ ಕಂಡುಕೊಳ್ಳುವುದನ್ನು ತೋರಿಸಲಾಗುತ್ತದೆ.
ಇದುವರೆಗಿನ ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಸಂಪೂರ್ಣ ಭಿನ್ನವಾಗಿರುವ ಈ ಉಪಕ್ರಮವು, ZEEನ ‘ದಿಲ್‌ಫ್ಲುನ್ಸರ್ ಮೊಮೆಂಟ್ಸ್’ (Dilfluencer Moments) ಪರಿಕಲ್ಪನೆಯಡಿಯಲ್ಲಿ ಮೂಡಿಬರುತ್ತಿದೆ. ಪಾತ್ರಗಳು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುವ ಗೊಂದಲಗಳು, ಸಂಕೀರ್ಣ ಪ್ರಶ್ನೆಗಳು ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭಗಳಲ್ಲಿ Google Searchನ AI Mode ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಕಥೆಯ ಸಹಜ ಹರಿವಿನಲ್ಲೇ ತೋರಿಸಲಾಗುತ್ತಿದ್ದು, ಇದು ಶೀಘ್ರದಲ್ಲಿಯೇ ಕನ್ನಡದ ಧಾರಾವಾಹಿಗಳಿಗೆ ಬಂದರೂ ಅಚ್ಚರಿಯೇನಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.