
ಮುಂಬೈ: ಬಾಲಿವುಡ್‌ನ ಪ್ರಸಿದ್ಧ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯನ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಕೇಂದ್ರೀಯ ತನಿಖಾ ದಳದ (CBI) ಹಿರಿಯ ಅಧಿಕಾರಿಯೊಬ್ಬರಿಗೆ ವಹಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
28 ವರ್ಷದ ಉಡುಪಿ ಮೂಲದ ದಿಶಾ ಸಾಲಿಯನ್, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 8, 2020 ರಂದು ಮುಂಬೈನ ಮಲಾಡ್‌ನಲ್ಲಿರುವ ಕಟ್ಟಡವೊಂದರಿಂದ ಬಿದ್ದು ದಿಶಾ ನಿಗೂಢವಾಗಿ ಮೃತಪಟ್ಟಿದ್ದರು. ಇದಾಗಿ ಕೆಲವೇ ದಿನಗಳಲ್ಲಿ, ಅಂದರೆ ಜೂನ್ 14, 2020 ರಂದು 34 ವರ್ಷದ ನಟ ಸುಶಾಂತ್ ಸಿಂಗ್ ಕೂಡ ಬಾಂದ್ರಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ತಮ್ಮ ವಕೀಲ ನಿಲೇಶ್ ಓಜಾ ಅವರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಮಗಳ ಸಾವು ಅನುಮಾನಾಸ್ಪದ ಸಂದರ್ಭಗಳಿಂದ ಕೂಡಿದೆ ಎಂದು ವಾದಿಸಿದ್ದರು. ಇದೊಂದು ಕೊ*ಲೆ ಪ್ರಕರಣವಾಗಿದ್ದು, ತಮಗೆ ಸಂಪೂರ್ಣ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಈ ಪ್ರಕರಣದಲ್ಲಿ ತನಿಖೆ ಮತ್ತು ಎಫ್‌ಐಆರ್ (FIR) ದಾಖಲಿಸಲು ಹೈಕೋರ್ಟ್‌ಗೆ ಸಂಪೂರ್ಣ ಅಧಿಕಾರವಿದೆ ಎಂದು ವಕೀಲರು ಪ್ರತಿಪಾದಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ವಿ. ಕೊತ್ವಾಲ್ ಮತ್ತು ಆರ್.ಆರ್. ಭೋನ್ಸಾಲೆ ಅವರಿದ್ದ ಪೀಠವು ಶುಕ್ರವಾರ ತಮ್ಮ ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿದೆ.
ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ. ಸಿಬಿಐ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಿ ತನಿಖೆ ನಡೆಸಬೇಕು. ಬಲವಾದ ಅನುಮಾನಗಳು ಹಾಗೂ ಸೂಕ್ತ ಸಾಕ್ಷ್ಯಗಳು ಸಿಗದ ಹೊರತು ಯಾರನ್ನೂ ಬಂಧಿಸಬಾರದು. ಒಂದು ವೇಳೆ ತನಿಖೆಯಲ್ಲಿ ಯಾವುದೇ ಕೊಲೆಯ ಸಾಕ್ಷ್ಯಾಧಾರಗಳು ದೊರೆಯದಿದ್ದಲ್ಲಿ, ಸಿಆರ್‌ಪಿಸಿ/ಬಿಎನ್‌ಎಸ್‌ಎಸ್ (BNSS) ನಿಯಮಾವಳಿಗಳ ಪ್ರಕಾರ ಸಾರಾಂಶ ವರದಿಯನ್ನು ಸಲ್ಲಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕುಟುಂಬಸ್ಥರು ದಿಶಾ ಅವರದ್ದು ಕೊ*ಲೆ ಎಂದು ಆರೋಪಿಸಿದ್ದರೂ ಮತ್ತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರೂ ಮುಂಬೈ ಪೊಲೀಸರು ಈವರೆಗೆ ಎಫ್‌ಐಆರ್ (FIR) ಏಕೆ ದಾಖಲಿಸಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತ್ತು ಎಂದು ಸತೀಶ್ ಸಾಲಿಯನ್ ಪರ ವಕೀಲ ನೀಲೇಶ್ ಓಜಾ ತಿಳಿಸಿದ್ದಾರೆ. ಪ್ರಕರಣದ ಕುರಿತು ಮರುತನಿಖೆ ನಡೆಸಿ ಹೊಸದಾಗಿ ಎಫ್‌ಐಆರ್ ನೋಂದಾಯಿಸಲು ಹೈಕೋರ್ಟ್ ನೀಡಿದ ಈ ಆದೇಶವು, ದಿಶಾ ಸಾಲಿಯನ್ ಅವರ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆಯನ್ನು ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.